ದೇಣಿಗೆ ‘ಭಯೋತ್ಪಾದನೆ’ಗೆ ಬಳಕೆಯಾದರೆ, ಕಾನೂನು ಕ್ರಮ ಕೈಗೊಳ್ಳಲೇಬೇಕಲ್ಲವೇ?
Team Udayavani, Feb 18, 2020, 1:31 AM IST
ಹೊಸದಿಲ್ಲಿ: ‘ಪ್ರಾರ್ಥನಾ ಸ್ಥಳಗಳಲ್ಲಿ ದೇವರಿಗೆಂದು ಏನನ್ನಾದರೂ ಅರ್ಪಣೆ ಮಾಡುವುದು ಧಾರ್ಮಿಕ ಪದ್ಧತಿಯೇ ಆಗಿದ್ದರೂ, ಆ ದೇಣಿಗೆಯ ಹಣವನ್ನು ‘ಭಯೋತ್ಪಾದನೆ’ ಅಥವಾ “ಕ್ಯಾಸಿನೋ ಗಳನ್ನು ನಡೆಸಲು’ ಬಳಸಲಾಗುತ್ತಿದೆ ಎಂದಾದರೆ, ಅದನ್ನು ನಿಯಂತ್ರಿಸುವ ಅಧಿಕಾರ ಕಾನೂನಿಗಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರವೇಶ, ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ ಹಾಗೂ ಮಹಿಳೆಯರ ಮೇಲಿನ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ 9 ಮಂದಿ ನ್ಯಾಯಮೂರ್ತಿಗಳ ವಿಸ್ತೃತ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಧಾರ್ಮಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ನ್ಯಾಯಾಂಗದ ಅಧಿಕಾರದ ಕುರಿತು ಪ್ರಸ್ತಾಪಿಸಿದ ನ್ಯಾಯಪೀಠ, ಪ್ರಾರ್ಥನಾ ಮಂದಿರಗಳಲ್ಲಿ ನೀಡುವ ದೇಣಿಗೆ ಕೂಡ ಧಾರ್ಮಿಕ ವಿಚಾರವೇ ಆಗಿರುತ್ತದೆ. ಹಾಗಂತ, ಆ ದೇಣಿಗೆಯನ್ನು ಭಯೋತ್ಪಾದನೆಗೆ ಬಳಸಿದರೆ, ಆಗ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲೇಬೇಕಾಗುತ್ತದೆ ಎಂದು ಹೇಳಿದೆ.
ಜತೆಗೆ, “ಮಾನವನನ್ನು ಬಲಿ ಕೊಡುವ ಪದ್ಧತಿ’ ಮತ್ತು ‘ಸತಿ’ಯಂತಹ ಹಳೆಯ ಪದ್ಧತಿಗಳು ಈಗ ಕಾನೂನಿನಡಿ ಕೊಲೆ ಎಂದು ಪರಿಗಣಿಸಲ್ಪಡುತ್ತದೆ. ಅವುಗಳಿಗೆ “ಅಗತ್ಯ ಧಾರ್ಮಿಕ ಆಚರಣೆಗಳು’ ಎಂಬ ಕಾರಣ ಹೇಳಿ ವಿನಾಯ್ತಿ ನೀಡಲಾಗದು. ಅಲ್ಲದೆ, ಧಾರ್ಮಿಕ ಆಚರಣೆ ಗಳು ಕೂಡ ಸುಧಾರಣೆಗೆ ಅರ್ಹವಾಗುತ್ತವೆ ಎಂದಿದೆ.
ಇದೇ ವೇಳೆ, ಒಬ್ಬ ವ್ಯಕ್ತಿಯು ಇನ್ನೊಂದು ಧರ್ಮದ ನಂಬಿಕೆಗಳನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದೇ ಎಂಬ ವಿಚಾರದ ಬಗ್ಗೆಯೂ ಪರಿಶೀಲನೆ ನಡೆಸುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ.