ಆಸೀಸ್‌ ಗೆಲುವು; ಸರಣಿ ಮುನ್ನಡೆ

Team Udayavani, Sep 9, 2019, 12:53 AM IST

ಮ್ಯಾಂಚೆಸ್ಟರ್‌: ಆ್ಯಶಸ್‌ ಸರಣಿಯ ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯವನ್ನು ಆಸ್ಟ್ರೇಲಿಯ 185 ರನ್ನುಗಳಿಂದ ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಗೆಲುವಿಗೆ 383 ರನ್‌ ಗುರಿ ಪಡೆದ ಇಂಗ್ಲೆಂಡ್‌ ಪಂದ್ಯದ ಕೊನೆಯ ದಿನವಾದ ರವಿವಾರ 197 ರನ್ನಿಗೆ ಆಲೌಟ್‌ ಆಯಿತು.

ಇದಕ್ಕೂ ಮುನ್ನ ಆಸ್ಟ್ರೇಲಿಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯವನ್ನು 251 ರನ್ನುಗಳಿಂದ ಜಯಿಸಿತ್ತು. ಬಳಿಕ ಇಂಗ್ಲೆಂಡ್‌ ಲೀಡ್ಸ್‌ನಲ್ಲಿ ಆಡಲಾದ 3ನೇ ಪಂದ್ಯವನ್ನು ಒಂದು ವಿಕೆಟ್‌ನಿಂದ ರೋಚಕವಾಗಿ ಗೆದ್ದಿತ್ತು. ಸರಣಿಯ ಅಂತಿಮ ಟೆಸ್ಟ್‌ ಸೆ. 12ರಿಂದ ಓವಲ್‌ನಲ್ಲಿ ಆರಂಭವಾಗಲಿದೆ.

ವೇಗಿ ಪ್ಯಾಟ್‌ ಕಮಿನ್ಸ್‌ ದಾಳಿಗೆ ಸಿಲುಕಿದ ಇಂಗ್ಲೆಂಡ್‌ ರನ್‌ ಖಾತೆ ತೆರೆಯುವ ಮೊದಲೇ 2 ವಿಕೆಟ್‌ ಉರುಳಿಸಿಕೊಂಡು ಆತಂಕಕ್ಕೆ ಸಿಲುಕಿತ್ತು. ಬಳಿಕ 138 ರನ್ನಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು. 7ನೇ ವಿಕೆಟಿಗೆ ಜತೆಗೂಡಿದ ಜಾಸ್‌ ಬಟ್ಲರ್‌ ಮತ್ತು ಕ್ರೆಗ್‌ ಓವರ್ಟನ್‌ ತಂಡದ ಸೋಲು ತಪ್ಪಿಸಲು ಹೋರಾಟವನ್ನೇನೋ ಜಾರಿಯಲ್ಲಿರಿಸಿದರು. ಆದರೆ ಸ್ಕೋರ್‌ 172ಕ್ಕೆ ಏರಿದಾಗ ಬಟ್ಲರ್‌ ಅವರನ್ನು ಬೌಲ್ಡ್‌ ಮಾಡಿದ ಹ್ಯಾಝಲ್‌ವುಡ್‌ ಆಸ್ಟ್ರೇಲಿಯದ ಗೆಲುವಿನ ಆಸೆಯನ್ನು ಚಿಗುರಿಸಿದರು. ಬಟ್ಲರ್‌ ಗಳಿಕೆ 111 ಎಸೆತಗಳಿಂದ 34 ರನ್‌.

4ನೇ ದಿನದ ಕೊನೆಯಲ್ಲಿ ಆರಂಭಕಾರ ರೋರಿ ಬರ್ನ್ಸ್ ಮತ್ತು ನಾಯಕ ಜೋ ರೂಟ್‌ ರನ್‌ ಗಳಿಸದೆ ನಿರ್ಗಮಿಸಿದ್ದು ಇಂಗ್ಲೆಂಡಿಗೆ ದುಬಾರಿಯಾಗಿ ಪರಿಣಮಿಸಿತು. ಬಳಿಕ ಜೋ ಡೆನ್ಲಿ (53) ಮತ್ತು ಜಾಸನ್‌ ರಾಯ್‌ (31) 64 ರನ್‌ ಜತೆಯಾಟ ನಡೆಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ