ಕ್ಯಾಪ್ಟನ್‌ ಕೊಹ್ಲಿ ಈಗ ತುಸು ನಿರಾಳ

Team Udayavani, Apr 15, 2019, 9:43 AM IST

ಮೊಹಾಲಿ: ಕೊನೆಗೂ ಆರ್‌ಸಿಬಿ ಈ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ. ಕ್ಯಾಪ್ಟನ್‌ ಕೊಹ್ಲಿ ತುಸು ನಿರಾಳರಾಗಿದ್ದಾರೆ. ಆರ್‌ಸಿಬಿ ಅಭಿಮಾನಿಗಳಿಗೂ ಸಮಾಧಾನವಾಗಿದೆ. ಅಕಸ್ಮಾತ್‌ ಶನಿವಾರ ರಾತ್ರಿ ಪಂಜಾಬ್‌ ವಿರುದ್ಧ ಸೋತದ್ದಿದ್ದರೆ ಬೆಂಗಳೂರು ತಂಡ ಕೂಟದಿಂದ ಬಹುತೇಕ ನಿರ್ಗಮಿಸುತ್ತಿತ್ತು.

“ಈ ಜಯದಿಂದ ತುಸು ನಿರಾಳವಾಗಿದೆ, ಎಲ್ಲರಿಗೂ ಸಮಾಧಾನವಾಗಿದೆ. ಕೆಲವು ಪಂದ್ಯಗಳಲ್ಲಿ ನಮಗೆ ಅದೃಷ್ಟ ಕೈಹಿಡಿದಿರಲಿಲ್ಲ. ಪ್ರತಿ ಪಂದ್ಯದಲ್ಲೂ ಅದೃಷ್ಟ ಕೈಕೊಟ್ಟಿತು ಎಂದರ್ಥವಲ್ಲ. ಆದರೆ ಒಂದೆರಡು ಪಂದ್ಯಗಳಲ್ಲಿ ನಾವು ಗೆಲುವಿನ ಸಮೀಪ ಸುಳಿದಿದ್ದೆವು. ಸತತ ಸೋಲಿನ ಬಳಿಕ ನಮ್ಮ ಹುಡುಗರಲ್ಲಿ ಗೆಲುವಿನ ತುಡಿತವಿತ್ತು. ಇಂದು ಇದು ಸಾಕಾರಗೊಂಡಿದೆ’ ಎಂದು ವಿರಾಟ್‌ ಕೊಹ್ಲಿ ಹೇಳಿದರು.

ಮೊಹಾಲಿಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 4 ವಿಕೆಟಿಗೆ 173 ರನ್‌ ಗಳಿಸಿದರೆ, ಆರ್‌ಸಿಬಿ 19.2 ಓವರ್‌ಗಳಲ್ಲಿ ಕೇವಲ 2 ವಿಕೆಟಿಗೆ 174 ರನ್‌ ಬಾರಿಸಿ ಮೊದಲ ಗೆಲುವಿನ ಸಂಭ್ರಮ ಆಚರಿಸಿತು. ಕೊಹ್ಲಿ 67, ಎಬಿಡಿ ಅಜೇಯ 59, ಸ್ಟೋಯಿನಿಸ್‌ ಔಟಾಗದೆ 28 ರನ್‌ ಹೊಡೆದು ಜಯವನ್ನು ಸಾರಿದರು.

“ಮೊಹಾಲಿ ಟ್ರ್ಯಾಕ್‌ನಲ್ಲಿ ಬ್ಯಾಟಿಂಗ್‌ ಸುಲಭವಿತ್ತು. 190 ರನ್‌ ತನಕವೂ ಸಾಗುವ ಅವಕಾಶವಿತ್ತು. ಆದರೆ ಪಂಜಾಬನ್ನು ನಾವು 170ರ ಗಡಿಯಲ್ಲಿ ತಡೆದು ನಿಲ್ಲಿಸಿದೆವು. ಪಂದ್ಯದ ನಡು ಅವಧಿಯ 8 ಓವರ್‌ಗಳಲ್ಲಿ 4 ವಿಕೆಟ್‌ ಉರುಳಿಸಿ 60 ರನ್ನಷ್ಟೇ ಬಿಟ್ಟುಕೊಟ್ಟದ್ದು ನಿಜಕ್ಕೂ ಉತ್ತಮ ಪ್ರಯತ್ನ’ ಎಂದು ಕೊಹ್ಲಿ ಹೇಳಿದರು.

ಕಾಯುತ್ತಲೇ ಇದ್ದೆವು: ಎಬಿಡಿ
“ಇಂಥದೊಂದು ಸಮಯಕ್ಕಾಗಿ ನಾವೆಲ್ಲ ಬಹಳ ಸಮಯದಿಂದ ಕಾಯುತ್ತಲೇ ಇದ್ದೆವು. ಈಗ ಬಹಳ ಸಂತೋಷವಾಗಿದೆ. ಇದು ಸರಿಯಾದ ದಿಕ್ಕಿನತ್ತ ನಾವಿರಿಸಿದ ಸಣ್ಣ ಹೆಜ್ಜೆ. ಈಗ ನಾವಿರುವ ಸ್ಥಿತಿಯಲ್ಲಿ ಇದು ಬಹಳ ದೊಡ್ಡ ಹೆಜ್ಜೆಯೇ ಆಗಿದೆ’ ಎಂಬುದು ಪಂದ್ಯಶ್ರೇಷ್ಠ ಡಿ ವಿಲಿಯರ್ ಹೇಳಿಕೆ. ಅವರ ಅಜೇಯ 59 ರನ್‌ 38 ಎಸೆತಗಳಲ್ಲಿ ಬಂತು. 5 ಬೌಂಡರಿ ಜತೆಗೆ ಆರ್‌ಸಿಬಿಯ ಎರಡೂ ಸಿಕ್ಸರ್‌ಗಳನ್ನು ಅವರು ಸಿಡಿಸಿದರು.

ಕೊಹ್ಲಿಯದು ಕಪ್ತಾನನ ಆಟ. 53 ಎಸೆತಗಳಿಂದ ಸರ್ವಾಧಿಕ 67 ರನ್‌ ಹೊಡೆದರು (8 ಬೌಂಡರಿ). ಕೊಹ್ಲಿ-ಎಬಿಡಿ 2ನೇ ವಿಕೆಟಿಗೆ 85 ರನ್‌ ಒಟ್ಟುಗೂಡಿಸಿ ಗೆಲುವನ್ನು ಸುಲಭಗೊಳಿಸಿದರು. ಗಾಯಾಳು ನಥನ್‌ ಕೋಲ್ಟರ್‌ ನೈಲ್‌ ಬದಲು ತನ್ನದೇ ನಾಡಿನ ವೇಗಿ ಡೇಲ್‌ ಸ್ಟೇನ್‌ ಅವರನ್ನು ಸೇರಿಸಿಕೊಂಡದ್ದಕ್ಕೂ ಎಬಿಡಿ ಖುಷಿ ವ್ಯಕ್ತಪಡಿಸಿದರು. “ಇದೊಂದು ದಿಟ್ಟ ನಿರ್ಧಾರ. ಡೇಲ್‌ ಸಾಮರ್ಥ್ಯ ಏನೆಂಬುದು ಎಲ್ಲರಿಗೂ ಗೊತ್ತು…’ ಎಂದು ಎಬಿಡಿ ಹೇಳಿದರು.

ಕೊಹ್ಲಿಗೆ ದಂಡ
ಶನಿವಾರ ರಾತ್ರಿಯ ಐಪಿಎಲ್‌ ಪಂದ್ಯದಲ್ಲಿ ಓವರ್‌ ಗತಿಯನ್ನು ಕಾಯ್ದುಕೊಳ್ಳಲು ವಿಫ‌ಲರಾದ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಪ್ರಸಕ್ತ ಋತುವಿನಲ್ಲಿ ಆರ್‌ಸಿಬಿ ಇದೇ ಮೊದಲ ಬಾರಿಗೆ ನಿಧಾನ ಗತಿಯ ಓವರ್‌ ನಡೆಸಿದ್ದರಿಂದ ತಂಡದ ನಾಯಕನಿಗೆ ಈ ದಂಡ ವಿಧಿಸಲಾಗಿದೆ ಎಂದು ಐಪಿಎಲ್‌ ಪ್ರಕಟನೆ ತಿಳಿಸಿದೆ. ಆರ್‌ಸಿಬಿ ತನ್ನ 20 ಓವರ್‌ ಬೌಲಿಂಗ್‌ ಕೋಟಾ ಮುಗಿಸುವಾಗ ರಾತ್ರಿ 9.45 ದಾಟಿತ್ತು. ಇದಕ್ಕೂ ಮುನ್ನ ಇದೇ ಋತುವಿನಲ್ಲಿ ಮುಂಬೈ ನಾಯಕ ರೋಹಿತ್‌ ಶರ್ಮ ಮತ್ತು ರಾಜಸ್ಥಾನ್‌ ನಾಯಕ ಅಜಿಂಕ್ಯ ರಹಾನೆ ಅವರಿಗೂ ಇದೇ ಕಾರಣಕ್ಕಾಗಿ ಇಷ್ಟೇ ಮೊತ್ತದ ದಂಡ ವಿಧಿಸಲಾಗಿತ್ತು.

ಮೈದಾನಕ್ಕೆ ನುಗ್ಗಿದ ಕೊಹ್ಲಿ ಫ್ಯಾನ್‌
ಆರ್‌ಸಿಬಿ ಚೇಸಿಂಗ್‌ ವೇಳೆ ಕ್ರಿಕೆಟ್‌ ಅಭಿಮಾನಿಯೊಬ್ಬ ಮೈದಾನಕ್ಕೆ ಹಾರಿ ವಿರಾಟ್‌ ಕೊಹ್ಲಿ ಅವರನ್ನು ತಬ್ಬಿಕೊಂಡ ಘಟನೆ ಮೊಹಾಲಿ ಪಂದ್ಯದ ವೇಳೆ ಸಂಭವಿಸಿದೆ. ಆಗ ಕೊಹ್ಲಿ ಬ್ಯಾಟಿಂಗ್‌ ನಡೆಸುತ್ತಿದ್ದರು. ಬಳಿಕ ಭದ್ರತಾ ಸಿಬಂದಿ ಆ ಅಭಿಮಾನಿ ವೀಕ್ಷಕನನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ