ಜಾಗತಿಕ ಆರ್ಥಿಕ ಸ್ನೇಹಿ ಭಾರತದಲ್ಲಿ ಹೂಡಿಕೆಗೆ ಬನ್ನಿ

Team Udayavani, Nov 15, 2019, 1:19 AM IST

ಬ್ರೆಜಿಲ್‌: ಭಾರತ ವಿಶ್ವದಲ್ಲೇ ಅತ್ಯಂತ ಮುಕ್ತ ಹಾಗೂ ಬಂಡವಾಳ ಹೂಡಿಕೆ ಸ್ನೇಹಿಯಾಗಿದ್ದು, ನಮ್ಮ ದೇಶದಲ್ಲಿ ಹೂಡಿಕೆ ಮಾಡಿ ನಿರ್ಬಂಧ ರಹಿತ ಸೇವೆ ಹಾಗೂ ಅಸಂಖ್ಯ ಅವಕಾಶಗಳ ಸದುಪಯೋಗ ಪಡೆಯಿರಿ… ಇದು ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಉದ್ದಿಮೆ ಶೃಂಗದ ಸಮಾರೋಪದಲ್ಲಿ ಐದು ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಆಹ್ವಾನ.

ಜಾಗತಿಕವಾಗಿ ಭಾರತವು ಆರ್ಥಿಕ ಸ್ನೇಹಿ ರಾಷ್ಟ್ರವಾಗಿದೆ. ನಮ್ಮಲ್ಲಿ ರಾಜಕೀಯ ಸ್ಥಿರತೆ, ನಿರೀಕ್ಷಿತ ಕಾರ್ಯ ನೀತಿ, ಸುಧಾರಣೆ ವ್ಯಾಪಾರ ಸ್ನೇಹಿ ವಾತಾವರಣ ಇದೆ. 2024ರ ವೇಳೆಗೆ 5 ಲಕ್ಷಕೋಟಿ ಡಾಲರ್‌ ಆರ್ಥಿಕತೆ ಹೊಂದುವ ಗುರಿ ಹೊಂದಿದೆ. ಮೂಲಭೂತ ಸೌಲಭ್ಯಕ್ಕಾಗಿಯೇ 1.5 ಲಕ್ಷಕೋಟಿ ಡಾಲರ್‌ ಅಗತ್ಯವಿದೆ. ನಮ್ಮ ದೇಶವನ್ನು ಮತ್ತಷ್ಟು ಸದೃಢವಾಗಿ ಕಟ್ಟಲು ಹಾಗೂ ಬೆಳೆಸಲು ನಮ್ಮಲ್ಲಿ ಹೂಡಿಕೆ ಮಾಡಿ ಎಂದು ಮನವಿ ಮಾಡಿದರು.

ವಿಶ್ವದ ಶೇ.50 ಆರ್ಥಿಕತೆಯನ್ನು ಬ್ರಿಕ್ಸ್‌ ದೇಶಗಳು (ಬ್ರೆಜಿಲ್‌, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಹೊಂದಿವೆ. ಜಾಗತಿಕ ಹಿಂಜರಿತದ ನಡುವೆ, ಆರ್ಥಿಕ ಅಭಿವೃದ್ಧಿ, ಬಡತನ ನಿರ್ಮೂಲನೆ, ತಂತ್ರಜ್ಞಾನ ಹಾಗೂ ನಾವೀನ್ಯತೆಯಲ್ಲಿ ಅಗಾಧವಾಗಿ ಬೆಳೆಯುತ್ತಿವೆ ಎಂದಿದ್ದಾರೆ.

ಆರ್ಥಿಕತೆಗೆ ಭಯೋತ್ಪಾದನೆ ಹೊಡೆತ: ಭಯೋತ್ಪಾದ ನೆಯಿಂದ ವಿಶ್ವ ಆರ್ಥಿಕತೆಗೆ ಒಂದು ಲಕ್ಷ ಕೋಟಿ ಡಾಲರ್‌ ನಷ್ಟ ಸಂಭವಿಸುತ್ತಿದೆ. ಅಭಿವೃದ್ಧಿ, ಶಾಂತಿ, ಅಭ್ಯುದಯಕ್ಕೆ ಭಯೋತ್ಪಾದನೆ ಭಾರೀ ಅಡ್ಡಿ ಉಂಟುಮಾಡುತ್ತಿದೆ. ಉಗ್ರವಾದದಿಂದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಶೇ.1.5ರಷ್ಟು ಆರ್ಥಿಕ ನಷ್ಟವಾಗುತ್ತಿದೆ ಎಂದು ಮೋದಿ ಆತಂಕ ವ್ಯಕ್ತಪಡಿಸಿದರು. ವೀಸಾರಹಿತವಾಗಿ ಭಾರತೀಯರು ಬ್ರೆಜಿಲ್‌ ಪ್ರವೇಶಿಸಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ಬ್ರೆಜಿಲ್‌ ಅಧ್ಯಕ್ಷ ಬೋಲ್ಸೊನಾರೋ ಅವರಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ