ಹಾವು ಹಿಡಿಯಲು ಅಮೆರಿಕಕ್ಕೆ ತಮಿಳ್ನಾಡು ತಂಡ
Team Udayavani, Jan 28, 2017, 3:45 AM IST
ವಾಷಿಂಗ್ಟನ್: ಒಂದು ಕಾಲದಲ್ಲಿ ಭಾರತವನ್ನು ಹಾವಾಡಿಗರ ನಾಡು ಎಂದು ಪಾಶ್ಚಾತ್ಯರು ಹಾಸ್ಯ ಮಾಡಿದ್ದರು. ಇದೀಗ ಹಾವುಗಳ ಕಾಟದಿಂದ ಬಚಾವಾಗಲು ಇದೇ “ಹಾವಾಡಿಗರ ನಾಡಿಗೆ’ ಶರಣಾಗಬೇಕಾದ ದುಸ್ಥಿತಿ ಎದುರಾಗಿದೆ! ಅಮೆರಿಕದ ಫ್ಲೋರಿಡಾದಲ್ಲೀಗ ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಹೆಬ್ಟಾವುಗಳ ಕಾಟ. ಅದರಿಂದ ಬಚಾವಾಗದಿದ್ದರೆ ಅಲ್ಲಿನ ವೈವಿಧ್ಯಮಯ ಪ್ರಾಣಸಂಕುಲವೇ ನಾಶವಾಗುವ ದುಸ್ಥಿತಿ ಎದುರಾಗಿದೆ. ಆದ್ದರಿಂದ ಫ್ಲೋರಿಡಾದ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗ ತಮಿಳುನಾಡಿನಿಂದ ಇಬ್ಬರು ಹೆಬ್ಟಾವು ಹಿಡಿಯುವವರನ್ನು ಕರೆಸಿಕೊಂಡಿದೆ!
ತಮಿಳುನಾಡಿನ ಇರುಳ ಬುಡಕಟ್ಟಿಗೆ ಸೇರಿದವರಾದ ಮಾಸಿ ಸದೈಯನ್ ಮತ್ತು ವಡಿವೇಲ್ ಗೋಪಾಲ್ ಅಮೆರಿಕಕ್ಕೆ ತೆರಳಿದ್ದಾರೆ. ಅವರೊಂದಿಗೆ ಇಬ್ಬರು ಭಾಷಾಂತಕಾರರು ಇದ್ದಾರೆ. ಹೆಬ್ಟಾವನ್ನು ಪತ್ತೆ ಮಾಡಬಲ್ಲ ಈ ನಾಲ್ವರ ಗುಂಪಿಗೆ ನೀಡುತ್ತಿರುವ ಹಣ 44 ಲಕ್ಷ ರೂ.! ಫೆಬ್ರವರಿ ಪೂರ್ತಿ ಈ ಇಬ್ಬರು ಫ್ಲೋರಿಡಾದ ಕೀ ಲಾರ್ಗೋದಲ್ಲಿದ್ದು ಹೆಬ್ಟಾವನ್ನು ಪತ್ತೆ ಹಚ್ಚಲಿದ್ದಾರೆ. ಅಚ್ಚರಿಯೆಂದರೆ ಈಗಾಗಲೇ 13 ಹೆಬ್ಟಾವನ್ನು ಹಿಡಿದುಬಿಟ್ಟಿದ್ದಾರೆ