“ಅಪ್ಪಾ ನನ್ನ ಕೈ ಹಿಡಿ’ ಮಗಳ ಮಾತು ಅವನ ಕಣ್ಣು ತೋಯಿಸಿತು

Team Udayavani, Jan 27, 2020, 5:42 AM IST

ನಂಬಿಕೆ ಎನ್ನುವುದು ಬೆಲೆ ಕಟ್ಟಲಾಗದ, ಕಟ್ಟ ಬಾರದ ಅನನ್ಯ ಅನುಭೂತಿ. ಗೆದ್ದಾಗ ನಮ್ಮನ್ನು ಶತ್ರುವಾದರೂ ಅಭಿನಂದಿಸಬಹುದು. ಆದರೆ ನಾವು ಸೋತಾಗ, ಎಡವಿ ಬಿದ್ದಾಗ ನಮ್ಮನ್ನು ಸಂತೈಸುವವರು, ಧೈರ್ಯ ತುಂಬುವವರು ಪ್ರೀತಿ ಪಾತ್ರರು, ನಮ್ಮ ಮೇಲೆ ವಿಶ್ವಾಸವಿರಿಸಿಕೊಂಡವರು ಮಾತ್ರ. ನ‌ಂಬಿಕೆ ಗಳಿಸುವುದು ಮುಖ್ಯವಲ್ಲ, ಅದನ್ನು ಉಳಿಸಿಕೊಳ್ಳುವುದು ಮುಖ್ಯ ಎನ್ನುತ್ತಾರೆ ಹಿರಿಯರು. ಒಮ್ಮೆ ನಂಬಿಕೆ ಕಳೆದುಕೊಂಡರೆ ಮತ್ತೆ ಗಳಿಸುವುದು ಕಷ್ಟ. ಆದ್ದರಿಂದ ಸಂಬಂಧಗಳ ನಡುವೆ ನಂಬಿಕೆಯ ಸೇತುವೆ ಕುಸಿಯದಂತೆ ನೋಡಿಕೊಳ್ಳಿ.

ನಾಳೆ ಎಂದರೆ ಭರವಸೆ
ಇಂದು ಕಷ್ಟಪಟ್ಟರೆ ನಾಳೆ ಮಕ್ಕಳು ಸುಖವಾಗಿರುತ್ತಾರೆ ಎನ್ನುವ ನಂಬಿಕೆಯೇ ಕಾರ್ಮಿಕನ ತೋಳಿಗೆ ಶಕ್ತಿ ತುಂಬುತ್ತದೆ. ಇವತ್ತು ಶ್ರದ್ಧೆಯಿಂದ ಓದಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದರೆ ಭವಿಷ್ಯ ಉಜ್ವಲವಾಗುತ್ತದೆ ಎನ್ನುವ ವಿದ್ಯಾರ್ಥಿಯ ವಿಶ್ವಾಸವೇ ಅವನ ದಾರಿಗೆ ಬೆಳಕಾಗುತ್ತದೆ. ಅಪ್ಪ-ಅಮ್ಮ ನನ್ನ ಮೇಲೆ ವಿಶ್ವಾಸವಿರಿಸಿದ್ದಾರೆ. ಅದಕ್ಕೆ ಧಕ್ಕೆ ಬಾರದಂತೆ ಕಾರ್ಯ ನಿರ್ವಹಿಸಬೇಕು ಎನ್ನುವ ಯುವಕನ ಜಾಗೃತ ಮನಸ್ಸೇ ಅವನು ತಪ್ಪು ದಾರಿಯಲ್ಲಿ ನಡೆಯದಂತೆ ಕಾಪಾಡುತ್ತದೆ.

ವಿಶ್ವಾಸದಿಂದ ಬಾಂಧವ್ಯ ವೃದ್ಧಿಸುತ್ತದೆ, ಸಂಬಂಧದ ಮೌಲ್ಯ ಹೆಚ್ಚುತ್ತದೆ. ಎಲ್ಲವನ್ನೂ ಕಳೆದುಕೊಂಡ ವ್ಯಕ್ತಿಯ ಬಳಿ ತೆರಳಿ ಅವನ ಕೈಯನ್ನೊಮ್ಮೆ ಮೃದುವಾಗಿ ಅದುಮಿ ನಿನ್ನ ಜತೆ ನಾನಿದ್ದೇನೆ ಎನ್ನುವ ನಂಬಿಕೆ ಮೂಡಿಸಿದರೆ ಸಾಕು ಮತ್ತೆ ಅವನು ಪುಟಿದೇಳುತ್ತಾನೆ. ಬದುಕಬೇಕು, ಸಾಧಿಸಿ ತೋರಿಸಬೇಕು ಎನ್ನುವ ಛಲ ಮೂಡಲು ಅವನಲ್ಲಿ ಚಿಕ್ಕ ಭರವಸೆ ಇರಿಸಿದರೆ ಸಾಕು. ಇದು ನಂಬಿಕೆಗಿರುವ ಶಕ್ತಿ.
ಜೀವನ ಪರ್ಯಂತ ಕಾಡುವ ಪಾಪಪ್ರಜ್ಞೆ ನಂಬಿಕೆ ದ್ರೋಹ ಎನ್ನುವುದು ಜೀವನ ಪರ್ಯಂತ ಕಾಡುವ ಪಾಪಪ್ರಜ್ಞೆ . ಇಬ್ಬರಲ್ಲೂ ಅದು ಕೊನೆಯವರೆಗೂ ಗುಪ್ತಗಾಮಿನಿಯಂತೆ ಹರಿಯುತ್ತಿರುತ್ತದೆ. ಯಾಕೆ ಹೀಗೆ ಮಾಡಿದ/ಮಾಡಿದಳು, ಹಾಗೆ ಮಾಡಬಾರದಿತ್ತು ಎನ್ನುವ ಭಾವ ಇಬ್ಬರಲ್ಲೂ ಮೂಡದೇ ಇರದು.

ಅಪ್ಪ-ಮಗಳ ಕಥೆ
ಮಳೆಗಾಲದ ಸಮಯ. ಬಿಡದೇ ಸುರಿಯುವ ಕುಂಭದ್ರೋಣ ಮಳೆ. ಹಳ್ಳ, ಕೆರೆ, ನದಿ ಎಲ್ಲ ತುಂಬಿ ಹರಿಯುತ್ತಿತ್ತು. ಎಂಟರ ಹರೆಯದ ಮಗಳನ್ನು ಶಾಲೆಯಿಂದ ಕರೆದುಕೊಂಡು ಹೋಗಲು ಅಪ್ಪ ಬಂದಿದ್ದ. ತಾನು ಒದ್ದೆಯಾದರೂ ಮಗಳಿಗೆ ನೀರು ಸೋಕದಂತೆ ಎಚ್ಚರ ವಹಿಸುತ್ತ ನಡೆಯುತ್ತಿದ್ದ ಅಪ್ಪ. ಮನೆ ತಲುಪಬೇಕಾದರೆ ಆ ಹಳ್ಳ ದಾಟಬೇಕಿತ್ತು. ಹಳ್ಳದಲ್ಲಾದರೋ ಕೆಂಪು ನೀರಿನ ಪ್ರವಾಹವೇ ಹರಿಯುತ್ತಿತ್ತು. ಅದಕ್ಕೆ ಅಡ್ಡಲಾಗಿದ್ದದ್ದು ನಾಲ್ಕೈದು ಅಡಿಕೆ ಮರ ಅಡ್ಡ ಹಾಕಿದ ಸೇತುವೆ.

ನೀರಿನ ಸೆಳೆತ ಕಂಡು ಮಗಳಿಗೆ ಅಂಜಿಕೆಯಾಯಾಯಿತು. ಬೇರೆ ಮಾರ್ಗವಿರಲಿಲ್ಲ. ಅನಿವಾರ್ಯವಾಗಿ ಆ ಸೇತುವೆ ದಾಟಲೇ ಬೇಕಿತ್ತು. ಮಗಳ ಭಯ ನೋಡಿ ಅಪ್ಪನಿಗೆ ಕಳವಳವಾಯಿತು. “ಹೆದರಬೇಡ ಪುಟ್ಟಿ. ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೋ’ ಎಂದು ಧೈರ್ಯ ತುಂಬಿದ. ಅದಕ್ಕೆ ಮಗಳು, “ನಾನು ನಿನ್ನ ಕೈ ಹಿಡಿಯುವುದಲ್ಲ, ನೀನು ನನ್ನ ಕೈ ಹಿಡಿ’ ಎಂದಳು. ಅಪ್ಪನಿಗೆ ಕುತೂಹಲ ತಡೆಯಲಾಗಲಿಲ್ಲ, “ನಾನು ನಿನ್ನ ಕೈ ಹಿಡಿಯುವುದಕ್ಕೂ, ನೀನು ನನ್ನ ಕೈ ಹಿಡಿಯುವುದಕ್ಕೂ ಏನು ವ್ಯತ್ಯಾಸ?’ ಎಂದು ಕೇಳಿದ.

ಮಗಳು ವಿವರಿಸಿದಳು, “ನೋಡು, ನಾನು ನಿನ್ನ ಕೈ ಹಿಡಿದರೆ ಯಾವುದಾದರೂ ಅಪಾಯ ಬಂದರೆ ಕೈ ಬಿಟ್ಟು ಹೋಗಬಹುದು. ಆದರೆ ನೀನು ಹಾಗಲ್ಲ. ಯಾವುದೇ ಪರಿಸ್ಥಿತಿ ಬರಲಿ, ಎಷ್ಟೇ ದೊಡ್ಡ ಪ್ರವಾಹ ಎದುರಾಗಲೀ ನನ್ನ ಕೈ ಬಿಡಲ್ಲ’ ಎಂದಾಗ ಅಪ್ಪನ ಕಣ್ಣಲ್ಲಿ ನೀರ ಪಸೆ. ಬಾಚಿ ಮಗಳನ್ನು ತಬ್ಬಿಕೊಂಡ.

ನಂಬಿಕೆಗಿದೆ ಅದ್ಭುತ ಶಕ್ತಿ
ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಯಲ್ಲಿ ಗುಣಮುಖನಾಗುವ ಬಗ್ಗೆ ಭರವಸೆ ಮೂಡಿಸಿದರೆ ಸಾಕು. ಆ ನಂಬಿಕೆಯಲ್ಲೇ ಅವನ ಅರ್ಧದಷ್ಟು ಕಾಯಿಲೆ ಹೊರಟು ಹೋಗಿರುತ್ತದೆ. ಹತಾಶನಾಗಿ ಕುಸಿದು ಕುಳಿತವನಲ್ಲಿ ಧನಾತ್ಮಕ ಚಿಂತನೆ ತುಂಬಿ, ನಿನ್ನಿಂದ ಸಾಧ್ಯ ಎನ್ನುವ ನಂಬಿಕೆ ಹುಟ್ಟಿಸಿ ನೋಡಿ. ಮುಂದೊಂದು ದಿನ ಅವನು ಗೆಲುವಿನ ದಡ ಮುಟ್ಟುತ್ತಾನೆ. ಯೋಚಿಸಿ ನೋಡಿ ವಿಶ್ವಾಸ, ಪರಸ್ಪರ ನಂಬಿಕೆ ಇಲ್ಲದಿದ್ದರೆ ಏನಾಗುತ್ತಿತ್ತು? ಖಂಡಿತಾ ಸಂಬಂಧಗಳಿಗೆ ಬೆಲೆ, ಮೌಲ್ಯಗಳೇ ಇರುತ್ತಿರಲಿಲ್ಲ.

ಮೊದಲು ನಿನ್ನನ್ನೇ ನಂಬು
ಇತರರು ನಮ್ಮನ್ನು ನಂಬುವುದಕ್ಕಿಂತ ಮೊದಲು ನಮ್ಮ ಬಗ್ಗೆ ನಮಗೇ ನಂಬಿಕೆ ಇರಬೇಕಾದುದು ಮುಖ್ಯ. ಕುಂಬಾರ ಮರದ ರೆಂಬೆ ಮೇಲೆ ಕುಳಿತ ಕಾಗೆಯನ್ನು ನೋಡಿ ಅಳಿಲೊಂದು ಪ್ರಶ್ನಿಸಿತು, “ಕೊಂಬೆ ಮುರಿಯುತ್ತದೆ ಎನ್ನುವ ಭಯವಿಲ್ಲವೆ?’. ಅದಕ್ಕೆ ಕಾಗೆ, “ನಾನು ರೆಂಬೆಯನ್ನು ನಂಬಿ ಕುಳಿತಿಲ್ಲ. ನನ್ನ ರೆಕ್ಕೆಯನ್ನು ನಂಬಿ ಕುಳಿತಿದ್ದೇನೆ. ಅಕಸ್ಮಾತ್‌ ರೆಂಬೆ ಮುರಿದರೆ ಹಾರಾಡಬಲ್ಲೆ ಎನ್ನುವ ವಿಶ್ವಾಸವಿದೆ’ ಎಂದು ಉತ್ತರಿಸಿತು. ಇದು ನಮ್ಮಲ್ಲಿರಬೇಕದ ಗುಣ. ನಮ್ಮ ಮೇಲೆ ನಮಗೆ ವಿಶ್ವಾಸವಿದ್ದರೆ ಯಾರ ಗುಂಗಲ್ಲೂ ಇರಬೇಕಾಗಿಲ್ಲ.

- ರಮೇಶ್‌ ಬಳ್ಳಮೂಲೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮನದ ಮೂಲೆಯಲ್ಲಿ ಇಡಿಸೂಡಿ ಹಿಡಿದ ಕೈಯೊಂದು ಮನೆಯ ಮೂಲೆಮೂಲೆಗಳನ್ನು ಸ್ವತ್ಛಗೊಳಿಸುತ್ತಿರುವಂತೆ ಭಾಸವಾದಾಗ ಒಂದು ಕ್ಷಣ ಯೋಚನೆಯಲ್ಲೇ ಮುಳುಗಿ ಹೋಯ್ತು ಮನ....

  • ವಿವಿಧ ರೀತಿಯ ಜೈವಿಕ ಗೊಬ್ಬರಗಳು ಸೂಕ್ಷ್ಮಜೀವಿಗಳಿಂದ ತಯಾರು ಮಾಡಿದ ಗೊಬ್ಬರಗಳಿಗೆ ಜೈವಿಕ ಗೊಬ್ಬರವೆನ್ನುತ್ತಾರೆ. ಇದರಲ್ಲಿ ಅನೇಕ ವಿಧಗಳಿವೆ. ಸಾರಜನಕ...

  • ಭಾರತದ ಗೋಪರಂಪರೆಯಲ್ಲೂ ಹೈನುಗಾರಿಕೆ ತಳಿಗಳಲ್ಲಿ ಗೀರ್‌ ವಿಶಿಷ್ಟ ಸ್ಥಾನ. ಭಾರತೀಯ ಪರಂಪರೆಯಲ್ಲಿ ಹೆಚ್ಚು ಹಾಲು ಕೊಡುವ ತಳಿಗಳಲ್ಲಿ ಇದು ಎರಡನೆಯದು. ಗುಜರಾತಿನ...

  • ಬೆಳೆಗಾರರು ಅಡಿಕೆ ಮತ್ತು ತೆಂಗು ಬೆಳೆಗಳ ಮಧ್ಯೆ ಕೊಕ್ಕೋ ಬೆಳೆದು ಯಶಸ್ವಿಯಾಗಿದ್ದರು. ಆದರೆ ಕೊಕ್ಕೋ ಬೆಳೆಯುವ ಪ್ರಮಾಣವನ್ನು ಹೆಚ್ಚಿಸಿ ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ...

  • ಶೀತವಲಯದ ಪ್ರದೇಶಗಳಲ್ಲಿ ಪ್ರಮುಖವಾಗಿ ಬೆಳೆಯುವ ಹೂಕೋಸು ಮತ್ತು ಕ್ಯಾಬೇಜ್‌ ಬೆಳೆಯನ್ನು ಬಾಳಿಲದ ಮನೆ ಅಂಗಳದಲ್ಲಿ ಬೆಳೆಯುವ ಪ್ರಯೋಗದಲ್ಲಿ ಗೃಹಿಣಿಯೊಬ್ಬರು...

ಹೊಸ ಸೇರ್ಪಡೆ