ಮನೆಯಂಗಳದ ಬೆಳೆ ಸುವರ್ಣ ಗೆಡ್ಡೆ

Team Udayavani, Sep 15, 2019, 5:42 AM IST

ಮನೆ ಅಂಗಳ, ಹೊಲ, ತೋಟಗಳ ಬದಿಯಲ್ಲಿ ಉಪಬೆಳೆಯಾಗಿ ಹೆಚ್ಚು ಶ್ರಮವಿಲ್ಲದೆ ಸುವರ್ಣ ಗೆಡ್ಡೆಯನ್ನು ಕೃಷಿ ಮಾಡಬಹುದು. ಇದು ಒಂದು ಬಗೆಯ ತರಕಾರಿಯಾಗಿದ್ದು, ಇತ್ತೀಚೆಗೆ ವಾಣಿಜ್ಯ ಬೆಳೆಯಾಗಿಯೂ ಪ್ರಸಿದ್ಧಿ ಹೊಂದುತ್ತಿದೆ. ಭೂಮಿಯೊಳಗೆ ಹುದುಗಿ ಬೆಳೆಯುವ ಈ ಗೆಡ್ಡೆ ವಾರ್ಷಿಕ ಬೆಳೆ. ತಿಳಿಹಸುರು – ಬಿಳಿ ಮಚ್ಚೆಗಳಿಂದ ಕೂಡಿದ ಎಲೆಯ ತೊಟ್ಟು ಸ್ವಲ್ಪ ದಪ್ಪಗಿರುತ್ತದೆ.

ಇತರ ಬೆಳೆಗಳಿಗೆ ಹೋಲಿಸಿದರೆ ಇದಕ್ಕೆ ಆರೈಕೆ ಕಡಿಮೆ ಸಾಕು. ನೀರು, ಹಟ್ಟಿ ಗೊಬ್ಬರ, ಸುಡುಮಣ್ಣು, ತರಗೆಲೆ, ಮನೆಯಂಗಳದಲ್ಲಿರುವ ಕಸ, ಬೂದಿ ಗೊಬ್ಬರವನ್ನು ಬಳಸಿ ಸುಲಭವಾಗಿ ಬೆಳೆಯಬಹುದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚುತ್ತಿದೆ.

ಚಿಕ್ಕ ಮರದಂತೆ ಕಾಣುವ ಎಲೆಯು 3 ಕವಲೊಡೆದು ಮತ್ತೆ ಕವಲಾಗಿ ಚದುರಿ ಸೊಂಪಾಗಿ ಬೆಳೆಯುತ್ತದೆ. ವಾರ್ಷಿಕವಾಗಿ ಹೂ ಬಿಡುವುದಾದರೂ ಪ್ರತಿವರ್ಷ ಹೂ ಬಿಡಬೇಕೆಂದು ನಿಯಮವೇನಿಲ್ಲ. ಹೂವು ತಿಳಿಗೆಂಪು, ಬಿಳಿ, ಮಧ್ಯೆ ಗಾಢ ಕೆಂಪಿನ ಬಣ್ಣವನ್ನು ಹೊಂದಿರುತ್ತದೆ. ಹೂವು ಸಾಕಷ್ಟು ದೊಡ್ಡ ಗಾತ್ರ ಹೊಂದಿದ್ದು, ಸುಮಾರು 5 ದಿನಗಳ ಕಾಲ ಬಾಡದೆ ಉಳಿಯುವುದು. ಹೂವು ಅರಳಿದ ಕೆಲವು ಗಂಟೆಗಳ ಕಾಲ ಕೊಳೆತ ಮಾಂಸದ ದುರ್ವಾಸನೆ ಸೂಸುತ್ತದೆ.

ಕೃಷಿ ಹೇಗೆ
ಸುವರ್ಣ ಗೆಡ್ಡೆಯ ಮೊಳಕೆ ಬರುವಂತ ಭಾಗವನ್ನು ಕತ್ತರಿಸಿ ತೆಗೆದು ಸಗಣಿ ನೀರಿನಲ್ಲಿ ಮುಳುಗಿಸಿ ಸ್ವಲ್ಪ ತರಗೆಲೆಯನ್ನು ಹರಡಿ ಅದರಲ್ಲಿ ಇರಿಸಬೇಕು. ಅದಕ್ಕೆ ಚೆನ್ನಾಗಿ ನೀರು ಚಿಮುಕಿಸಿ ಸೋಗೆ ಅಥವಾ ಒಣಗಿದ ಬಾಳೆಕೈಗಳಿಂದ ಮುಚ್ಚಿ. ಬಳಿಕ ಎರಡು ದಿನಗಳಿಗೊಮ್ಮೆ ಅಡಿಕೆ ಸಿಪ್ಪೆ ಅಥವಾ ತರಗೆಲೆಗಳಿಗೆ ಬೆಂಕಿ ಕೊಟ್ಟು ಹೊಗೆ ಹಾಕಬೇಕು. ಸುಮಾರು ಹದಿನೈದರಿಂದ ಇಪ್ಪತೈದು ದಿನಗಳಲ್ಲಿ ಗಿಡ ಚೆನ್ನಾಗಿ ಮೊಳಕೆ ಬರುತ್ತದೆ.

ಸುಮಾರು ಎರಡು ಅಡಿ ಆಳ, ಅಗಲದ (ಸ್ಥಳಾವಕಾಶಕ್ಕೆ ಅನುಗುಣವಾಗಿ ಉದ್ದ) ಸಾಲುಗಳನ್ನು ಮಾಡಿ. ಅದಕ್ಕೆ ತರಗೆಲೆ ಅಥವಾ ಅಡಿಕೆ ಸಿಪ್ಪೆ ಹಾಕಿ ಬೆಂಕಿ ಹಚ್ಚಿ ಸಾಲಿನೊಳಗಿನ ಮಣ್ಣನ್ನು ಸುಡಬೇಕು. ಬಳಿಕ ಮಣ್ಣು ಮಿಶ್ರ ಮಾಡಿ ಮೊಳಕೆ ಬಂದ ಸುವರ್ಣ ಗೆಡ್ಡೆಯನ್ನು ಸಗಣಿ ನೀರಿನಲ್ಲಿ ಮುಳುಗಿಸಿ ಮೂರು ಅಡಿಗಳಿಗೊಂದರಂತೆ ಮೊಳಕೆ ಭಾಗವನ್ನು ಮಾತ್ರ ಮೇಲೆ ಬಿಟ್ಟು ಹೂಳಬೇಕು. ಮೇಲಿನಿಂದ ತರಗಲೆ ಅಥವಾ ಅಡಿಕೆ ಸಿಪ್ಪೆ ಹರಡುವುದು ತೇವಾಂಶ ಉಳಿಯಲು ಸಹಕಾರಿ. ಪ್ರತಿ 2 ತಿಂಗಳಿಗೊಮ್ಮೆ ಸ್ವಲ್ಪ ಸ್ವಲ್ಪವೇ ಹಟ್ಟಿ ಗೊಬ್ಬರ, ಮಣ್ಣು, ಸೊಪ್ಪು ಹಾಕಿ, ಮಳೆಗಾಲವಲ್ಲದಿದ್ದರೆ 2 ದಿನಗಳಿಗೊಮ್ಮೆ ಸ್ವಲ್ಪ ನೀರುಣಿಸಬೇಕು. ಗೆಡ್ಡೆ ಬೆಳೆಯುತ್ತಿದ್ದಂತೆ ಗಿಡ ಹಣ್ಣಾಗಿ ಒಣಗುವುದು. ಕಳೆ ಹುಲ್ಲು ಬರದಂತೆ ಎಚ್ಚರಿಕೆ ವಹಿಸಿದರೆ ಕೇವಲ 6 ತಿಂಗಳುಗಳಲ್ಲಿ ಸುಮಾರು 6-10 ಕೆ.ಜಿ. ತೂಕದ ಸುವರ್ಣ ಗೆಡ್ಡೆ ಲಭಿಸುವುದು. ಕೆ.ಜಿ.ಗೆ 40ರಿಂದ 50 ರೂಪಾಯಿಯವರೆಗೂ ಮಾರುಕಟ್ಟೆ ದರವಿದ್ದು, ಉತ್ತಮ ಆದಾಯ ತರುವ ತರಕಾರಿ ಇದು. ಶಿಲೀಂಧ್ರ ಹಾಗೂ ಲಾಡಿಹುಳುಗಳ ರೋಗಗಳನ್ನು ಹೊರತುಪಡಿಸಿದರೆ ಹೆಚ್ಚಿನ ರೋಗಬಾಧೆ ಇರುವುದಿಲ್ಲ. ಇದಕ್ಕೆ ಜೀವಾಮೃತವನ್ನು ಔಷಧವಾಗಿ ಬಳಸಬಹುದು.

ತಳಿ
ಊರಿನ ತಳಿಯಲ್ಲದೆ ತಿರುವನಂತಪುರದ ಸಿಟಿಆರ್‌ಐ ಅಭಿ ವೃದ್ಧಿಪಡಿಸಿದ “ಶ್ರೀಪದ್ಮ’ ಮತ್ತು ಹೈದರಾಬಾದ್‌ನ ಅಪಾವುನಲ್ಲಿ ಅಭಿವೃದ್ಧಿ ಪಡಿಸಿದ “ಗಜೇಂದ್ರ’ ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ತೇವಾಂಶದಿಂದ ಕೂಡಿದ ಉಷ್ಣಪ್ರದೇಶದ ಬೆಳೆ ಇದಾಗಿದೆ. ಕೆಂಪು, ಕಪ್ಪು, ನೀರು ಇಂಗಿ ಹೋಗುವ ಮಣ್ಣು ಇದಕ್ಕೆ ಸೂಕ್ತ.

ಉಪಯೋಗ
ಈ ಗೆಡ್ಡೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದ್ದು, ಹೇರಳ ಪೌಷ್ಟಿಕಾಂಶಗಳನ್ನು ಹೊಂದಿದೆ. ಸರಿಯಾಗಿ ಬೇಯಿಸಿ ಪದಾರ್ಥ ಮಾಡಿದರೆ ತುರಿಕೆ ಇರುವುದಿಲ್ಲ. ಔಷಧೀಯ ಗುಣಗಳು ಅತ್ಯಧಿಕ ಪ್ರಮಾಣದಲ್ಲಿವೆ. ಇದರಲ್ಲಿ ಅಧಿಕ ನಾರಿನಂಶವಿರುವುದರಿಂದ ದೇಹದ ತೂಕ ಇಳಿಸಲು ಸಹಕರಿಸಿ, ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಿಸುತ್ತದೆ. ಮಲಬದ್ಧತೆ ಸಮಸ್ಯೆ ನಿವಾರಿಸಿ, ಮೂಲವ್ಯಾಧಿ ತಡೆಯಲು ಪೂರಕ. ಮಹಿಳೆಯರಲ್ಲಿ ಹಾರ್ಮೋನು ಗಳನ್ನು ಸಮ ತೋಲನದಲ್ಲಿರಿಸಿ ಋತುಬಂಧದ ತೊಂದರೆಗಳನ್ನು ತಡೆಯಲು, ರಕ್ತ ಹೆಪ್ಪು ಗಟ್ಟು ವುದನ್ನು ನಿಯಂತ್ರಿಸಲು ವಿಟಮಿನ್‌ “ಬಿ6′ ಸಹಾಯ ಮಾಡುತ್ತದೆ. ಮಧು ಮೇಹಿಗಳಿಗೂ ಉತ್ತಮ. ತಂಪು ನೀಡುವ ಗುಣ ಹೊಂದಿದ್ದು, ರಕ್ತದೊತ್ತಡವನ್ನು ಕಡಿಮೆ ಗೊಳಿಸುತ್ತದೆ. ಆದರೆ ಆಸ್ತಮಾ, ಸೈನಸ್‌ ಮತ್ತು ಶೀತ ದೇಹ ಪ್ರಕೃತಿಯವರು ಇದರ ಸೇವನೆ ಅಷ್ಟೊಂದು ಸಂಮಜಸವಲ್ಲ.

-  ಗಣೇಶ ಕುಳಮರ್ವ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ