ಸೋಲನ್ನೇ ಸೋಲಿಸಿ ಬಿಡಿ

Team Udayavani, Nov 11, 2019, 5:08 AM IST

ಜೀವನ ಎನ್ನುವುದು ನಿಂತ ನೀರಲ್ಲ. ಸದಾ ಚಲಿಸುತ್ತಿರುವುದೇ ಅದರ ರೀತಿ. ಈ ವೇಗದ ಓಟದಲ್ಲಿ ನಾವು ಇತರರಿಗೆ ಮಾದರಿಯಾಗಲು ಸಾಧನೆಯ ಶಿಖರ ಏರಬೇಕು. ಇಗುರಿ ಸಾಧಿಸಬೇಕು.

ಆತ ಎಂಜಿನಿಯರಿಂಗ್‌ ವಿದ್ಯಾರ್ಥಿ. 4ನೇ ಸೆಮ್‌ನಲ್ಲಿ ಫೇಲ್‌ ಆಗಿದ್ದ. ಅದೇ ಚಿಂತೆಯಲ್ಲಿ ಹಾಸ್ಟೆಲ್‌ ಬಾಲ್ಕನಿಯಲ್ಲಿ ಕುಳಿತಿದ್ದ. ಗೆಲುವಿನ ಸಂಭ್ರಮಕ್ಕೆ ನೂರಾರು ಜನ ಸೇರಿದರೆ ಸೋಲಿಗೆ ಯಾರೂ ಇರುವುದಿಲ್ಲ ಎನ್ನುವುದು ಅವನ ಪಾಲಿಗೆ ಸತ್ಯವಾಗಿತ್ತು. ಅವಮಾನ, ಹತಾಶೆಯಿಂದ ಅದೆಷ್ಟೋ ಹೊತ್ತು ಕೂತಿದ್ದ. ಇದ್ದಕ್ಕಿದ್ದಂತೆ ಅವನ ದೃಷ್ಟಿ ನೆಲದ ಮೇಲೆ ಬಿತ್ತು. ಒಂದಷ್ಟು ಇರುವೆ ಗುಂಪು ಸೇರಿರುವುದು ಕಂಡಿತು. ತಮ್ಮ ದೇಹಕ್ಕಿಂತ ಅನೇಕ ಪಟ್ಟು ದೊಡ್ಡ ಆಹಾರ ಚೂರುಗಳನ್ನು ಇರುವೆಗಳು ಹೊತ್ತುಕೊಂಡು ಹೋಗುತ್ತಿದ್ದವು. ಕೆಲವೊಮ್ಮೆ ಎಡವಿ ಬೀಳುತ್ತಿದ್ದವು. ಆದರೂ ಛಲ ಬಿಡದೆ ಸಾಗಿಸುತ್ತಿದ್ದವು. ಆದನ್ನೇ ನೋಡುತ್ತಿದ್ದ ಅವನ ಮನದಲ್ಲೂ ಕೆಲವು ನಿರ್ಧಾರ ಗಟ್ಟಿಯಾಗತೊಡಗಿದವು. ಅವುಗಳಂತೆ ನಾನೂ ಯಾಕೆ ಶ್ರಮಿಸಬಾರದು?’ ಎಂದುಕೊಂಡ.

ಅಂದಿನಿಂದ ಅವನ ದಿನಚರಿಯೇ ಬದಲಾಯಿತು. ಅಂದಿನ ಪಾಠ ಅಂದೇ ಮನನ ಮಾಡುತ್ತಿದ್ದ. ಜತೆಗೆ ಉದ್ಯೋಗಕ್ಕೆ ಆವಶ್ಯಕ ವಾದ ಕೌಶಲವನ್ನೂ ಕರಗತಮಾಡಿಕೊಳ್ಳತೊಡಗಿದ. ಪರಿಣಾಮ ಒಳ್ಳೆಯ ಅಂಕಗಳೊಂದಿಗೆ ಎಂಜಿನಿಯರಿಂಗ್‌ ಮುಗಿಸುವುದರ ಜತೆಗೆ ಕ್ಯಾಂಪಸ್‌ನಲ್ಲಿ ಆಯ್ಕೆಯಾಗಿ ಉತ್ತಮ ಉದ್ಯೋಗವನ್ನೂ ಪಡೆದ. ಇದಕ್ಕಿಂತ ಭಿನ್ನವಾಗೇನೂ ಇಲ್ಲ ನಮ್ಮ ಸ್ಥಿತಿ. ಜೀವನದಲ್ಲಿ ಎದುರಾಗುವ ಚಿಕ್ಕ ಚಿಕ್ಕ ಸೋಲಿಗೂ ಕುಗ್ಗಿ ಬಿಡುತ್ತೇವೆ. ಹತಾಶೆಯಿಂದ ತಲೆ ಮೇಲೆ ಕೈ ಹೊತ್ತು ಕೂತು ಬಿಡುತ್ತೇವೆ. ಸೋಲು ತಾತ್ಕಾಲಿಕ, ಇದರಿಂದ ಅನುಭವದ ದೊರೆದಂತಾಯಿತು ಎಂದು ಧನಾತ್ಮಕವಾಗಿ ಚಿಂತಿಸುವವರೇ ಅಪರೂಪ. ಸೋಲಿಗೆ ಕುಗ್ಗದೆ ಪರಿಶ್ರಮ, ಏಕಾಗ್ರತೆಯಿಂದ ಶ್ರಮಿಸಿದರೆ ಗೆಲುವು ನಮ್ಮದೇ.

ಸೋಲು-ಗೆಲುವಿಗಿಂತ
ಪ್ರಯತ್ನ ಮುಖ್ಯ
ಯಾವುದೇ ಕೆಲಸವಾದರೂ ಪ್ರಯತ್ನಕ್ಕಿಂತ ಮೊದಲೇ “ನನ್ನಿಂದ ಸಾಧ್ಯವಿಲ್ಲ’ಎಂದು ಚಿಂತಿಸುವುದು ಪಲಾಯನವಾದದ ಲಕ್ಷಣ. ಕಲಾಕೃತಿ ಆರಂಭವಾಗುವುದೇ ಒಂದು ಚಿಕ್ಕ ಚುಕ್ಕಿಯಿಂದ, ದೇವರ ಗುಡಿಯಲ್ಲಿನ ವಿಗ್ರಹ ಲಕ್ಷಾಂತರ ಮಂದಿಯ ನಂಬಿಕೆಯ ಪ್ರತೀಕವಾಗಿದ್ದು ಸಾವಿರಾರು ಉಳಿ ಪೆಟ್ಟು ತಿಂದರೂ ನೋವು ಸಹಿಸಿಕೊಂಡಿದ್ದರಿಂದಲೇ. ಆದ್ದರಿಂದ ಸೋಲು ಬಂದರೆ ಎದೆಗುಂದಬೇಡಿ. ಮುಂದಿನ ಬಾರಿ ಅದನ್ನೇ ಸೋಲಿಸಿ. ಕಠಿನ ಪರಿಶ್ರಮ ಪಟ್ಟು ಸೋತರೆ ಕೊನೆಗೆ ಪ್ರಯತ್ನ ಪಟ್ಟೆ ಎನ್ನುವ ಸಮಧಾನವಾದರೂ ಉಳಿದಿರುತ್ತದೆ. ಇಲ್ಲದಿದ್ದರೆ ಕೈ ಕಟ್ಟಿ ಕುಳಿತು ಅವಕಾಶ ಮುಗಿದ ಮೇಲೆ “ಛೇ ನಾನೂ ಪ್ರಯತ್ನಿಸಬಹುದಿತ್ತು’ ಎಂದುಕೊಳ್ಳಬೇಕಷ್ಟೇ.

-  ರಮೇಶ್‌ ಬಳ್ಳಮೂಲೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ