ಗ್ಯಾಸ್ಟ್ರೊ ಈಸೊಫೇಜಿಯಲ್‌ ರಿಫ್ಲೆಕ್ಸ್‌ ಕಾಯಿಲೆ

Team Udayavani, Aug 11, 2019, 5:00 AM IST

ಗ್ಯಾಸ್ಟ್ರೊಈಸೊಫೇಜಿಯಲ್‌ ರಿಫ್ಲೆಕ್ಸ್‌ ಡಿಸೀಸ್‌ ಅಥವಾ ಸಂಕ್ಷಿಪ್ತವಾಗಿ ಗೆರ್ಡ್‌ (GERD) ಎಂಬುದಾಗಿ ವೈದ್ಯಕೀಯ ಪರಿಭಾಷೆಯಲ್ಲಿ ಕರೆಯಲ್ಪಡುವ ಎದೆಯುರಿ ಜನಸಾಮಾನ್ಯರಲ್ಲಿ ಒಂದು ಸಾಮಾನ್ಯ ಅನಾರೋಗ್ಯ. ಜಠರದಲ್ಲಿರುವ ಆಮ್ಲವು ಅನ್ನನಾಳಕ್ಕೆ ನುಗ್ಗುವುದರಿಂದಾಗಿ ಅನ್ನನಾಳಕ್ಕೆ ಉಂಟಾಗುವ ಘಾಸಿ ಮತ್ತು /ಅಥವಾ ಘಾಸಿಯ ಚಿಹ್ನೆಗಳೇ ಗೆರ್ಡ್‌ ಅಥವಾ ಎದೆಯುರಿ. ಆಧುನೀಕರಣ, ಜೀವನಶೈಲಿ ಮತ್ತು ಆಹಾರ ಶೈಲಿಯಲ್ಲಿ ಬದಲಾವಣೆಗಳಿಂದಾಗಿ ಭಾರತ ಸಹಿತ ಏಶ್ಯಾದಲ್ಲಿ ಎದೆಯುರಿ ಹೆಚ್ಚುತ್ತಿರುವ ಸಾಧ್ಯತೆಯಿದೆ.

ಸಾಮಾನ್ಯವಲ್ಲದ ಚಿಹ್ನೆಗಳು
ಧ್ವನಿ ಬದಲಾವಣೆ:
ಎದೆಯುರಿಯು ಧ್ವನಿಪೆಟ್ಟಿಗೆ ಮತ್ತು ಧ್ವನಿತಂತುಗಳು ಊದಿಕೊಳ್ಳುವುದಕ್ಕೆ ಕಾರಣವಾಗಬಹುದು. ಎದೆಯುರಿಯ ಆಮ್ಲದಿಂದಾಗಿ ಹೀಗಾಗುತ್ತದೆ. ಇದರಿಂದ ಧ್ವನಿ ಒಡಕಾಗಬಹುದು. ಆದ್ದರಿಂದ ಒಡಕು, ದೊರಗು ಧ್ವನಿ ಹೊಂದಿರುವ ರೋಗಿಗಳಲ್ಲಿ ಎದೆಯುರಿಯನ್ನು ಶಂಕಿಸಬಹುದಾಗಿದೆ.

ಅಸ್ತಮಾ: ಎದೆಯುರಿಯಿಂದ ಮೇಲೆಬಂದ ಆಮ್ಲವು ಶ್ವಾಸಕೋಶಗಳೊಳಕ್ಕೆ ಸೇರಿ ಉಸಿರಾಟ ನಡೆಸಲು ಕಷ್ಟವಾಗಬಹುದು. ಇದು ರಾತ್ರಿಯಲ್ಲಿ ಉಂಟಾಗುವುದು ಹೆಚ್ಚು. ಈ ಉಸಿರಾಟ ಸಂಕಷ್ಟ ಆಗಾಗ ಉಂಟಾಗುತ್ತಿದ್ದರೆ; ಅದರಲ್ಲೂ ಅಕಾಲದಲ್ಲಿ ಮತ್ತು ಕೌಟುಂಬಿಕವಾಗಿ ಯಾರಿಗೂ ಅಸ್ತಮಾ ಇಲ್ಲದಿದ್ದರೆ, ನಿಮ್ಮ ಗ್ಯಾಸ್ಟ್ರೊ ಎಂಟರಾಲಜಿ ತಜ್ಞ ವೈದ್ಯರನ್ನು ಭೇಟಿ ಮಾಡಿ ಎಂಡೊಸ್ಕೊಪಿ ಮತ್ತು 24-ಎಚ್‌ ಪಿಎಚ್‌-ಮೆಟ್ರಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಇದರಿಂದ ಉಸಿರಾಟ ಸಮಸ್ಯೆ ಎದೆಯುರಿಗೆ ಸಂಬಂಧಿಸಿದ್ದು ಹೌದೇ ಅಲ್ಲವೇ ಎಂಬುದು ಸ್ಪಷ್ಟವಾಗುತ್ತದೆ.

ಕೆಮ್ಮು: ಎದೆಯುರಿಯು ದೀರ್ಘ‌ಕಾಲಿಕ ಕೆಮ್ಮು ಮತ್ತು ಫಾರಿಂಜೈಟಿಸ್‌ಗೆ ಕಾರಣವಾಗಬಹುದು. ಅಂತಹ ರೋಗಿಗಳು ಎದೆಯುರಿಯನ್ನು ಅಜೀರ್ಣ ಎಂದು ತಪ್ಪಾಗಿ ತಿಳಿದುಕೊಂಡು ಇಎನ್‌ಟಿ ತಜ್ಞರನ್ನು ಭೇಟಿಯಾಗಬಹುದು; ಎದೆಯುರಿಯು ಪತ್ತೆಯಾಗದೆ ಉಳಿಯಬಹುದು.

ಎದೆಯುರಿಯಿಂದ ಬಳಲುತ್ತಿರುವ ರೋಗಿಗಳು ಎದೆಯಲ್ಲಿ ಅನನುಕೂಲ ಅಥವಾ ಉರಿಯ ಅನುಭವದ ಬಗ್ಗೆ ದೂರುತ್ತಾರೆ. ಈ ಉರಿ ಅಥವಾ ಅನನುಕೂಲ ಹೊಟ್ಟೆಯ ಮೇಲ್ಭಾಗದಿಂದ ಆರಂಭವಾಗಿ ಕುತ್ತಿಗೆಯವರೆಗೆ ಹರಡಬಹುದಾಗಿದೆ. ಜತೆಗೆ ಎದೆಯ ಮಧ್ಯಭಾಗದಲ್ಲಿ ಉರಿ ಮತ್ತು ಹೊಟ್ಟೆಯೊಳಗಿಂದ ಆಹಾರದ ತುಣುಕುಗಳು ಮತ್ತು ಒಂದು ಗುಟುಕು ಆಮ್ಲಿàಯ ದ್ರವವು ಬಾಯಿಗೆ ಬರಬಹುದು. ಸಮರ್ಪಕವಾದ ಚಿಕಿತ್ಸೆ ನೀಡದೆ ಇದ್ದರೆ ಎದೆಯುರಿಯು ಅನ್ನನಾಳ ಸಂಕುಚನಗೊಳ್ಳಲು (ಪೆಪ್ಟಿಕ್‌ ಸ್ಟ್ರಿಕ್ಚರ್) ಅಥವಾ ಬೆರೆಟ್ಸ್‌ ಮೆಟಾಪ್ಲಾಸಿಯಾ ಎಂಬ ಸ್ಥಿತಿಗೆ ಕಾರಣವಾಗಬಹುದು. ಇದಕ್ಕೆ ಚಿಕಿತ್ಸೆ ನೀಡದೆ ಇದ್ದರೆ ಅಪರೂಪಕ್ಕೆ ಈಸೊಫೇಜಿಯಲ್‌ ಕ್ಯಾನ್ಸರ್‌ ಉಂಟು ಮಾಡಬಹುದು.

ಎದೆಯುರಿಯನ್ನು ಉಂಟು ಮಾಡಬಹುದಾದ ಅಪಾಯಾಂಶಗಳು
ಎದೆಯುರಿಯು ಉಂಟಾಗುವುದಕ್ಕೆ ಅಥವಾ ಹೆಚ್ಚುವುದಕ್ಕೆ ಜೀವನಶೈಲಿ, ಪರಿಸರ ಮತ್ತಿತರ ಹಲವು ಕಾರಣಗಳಿರುತ್ತವೆ.

ಟ್ರಾನ್ಸಿಯೆಂಟ್‌ ಲೋವರ್‌ ಈಸೊಫೇಜಿಯಲ್‌ ಸ್ಪಿಂಕ್ಟರ್‌ ರಿಲ್ಯಾಕ್ಸೇಶನ್‌: ಲೋವರ್‌ ಈಸೊಫೇಜಿಯಲ್‌ ವಾಲ್‌Ì ಅಥವಾ ಸ್ಪಿಂಕ್ಟರ್‌ ಆಗಾಗ ತೆರೆದುಕೊಳ್ಳುವುದು (ಚಿತ್ರ 1ರಲ್ಲಿ ಎಲ್‌ಇಎಸ್‌ ಭಾಗ). ಇದರಿಂದ ಹೊಟ್ಟೆಯಲ್ಲಿರುವ ಆಮ್ಲವು ಅನ್ನನಾಳಕ್ಕೆ ನುಗ್ಗುತ್ತದೆ. ಸಾಫ್ಟ್ ಡ್ರಿಂಕ್‌ಗಳು, ಕೊಬ್ಬು ಹೆಚ್ಚಿರುವ ಆಹಾರವನ್ನು ಕಂಠಮಟ್ಟ ತಿನ್ನುವುದು ಮತ್ತು ಗರ್ಭಿಣಿಯಾಗಿರುವುದು ಈ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಅನ್ನನಾಳದ ವಾಲ್‌ ದುರ್ಬಲವಾಗಿರುವುದು: ಎದೆಯುರಿ ಹೊಂದಿರುವ ಕೆಲವು ರೋಗಿಗಳು ಈ ತೊಂದರೆಯನ್ನು ಹೊಂದಿರುತ್ತಾರೆ. ಧೂಮಪಾನವು ಈ ವಾಲ್ವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ.

ಹಯಾಟಸ್‌ ಹರ್ನಿಯಾ: ಹೊಟ್ಟೆಯ ಮೇಲ್ಭಾಗವು ಎದೆಯ ಭಾಗಕ್ಕೆ ನುಗ್ಗುವುದು. ಈ ಸ್ಥಿತಿಯು ಹೊಟ್ಟೆಯ ಆಮ್ಲವು ಅನ್ನನಾಳವನ್ನು ಪ್ರವೇಶಿಸುವುದನ್ನು ತಡೆಯುವ ವಾಲ್ವನ್ನು ದುರ್ಬಲಗೊಳಿಸುತ್ತದೆ .

ಜಠರ ಖಾಲಿಯಾಗುವುದು ವಿಳಂಬ: ಜಠರವು ಖಾಲಿಯಾಗಲು ವಿಫ‌ಲವಾಗುವ ಮೂಲಕ ಹೊಟ್ಟೆ ಹೆಚ್ಚು ಕಾಲ ತುಂಬಿದ್ದರೆ ಆಗ ಎದೆಯುರಿ ಹೆಚ್ಚುತ್ತದೆ. ಕೆಲವು ಔಷಧಗಳು, ತುಂಬಾ ಎಣ್ಣೆಜಿಡ್ಡಿನ ಆಹಾರವನ್ನು ಅತಿಯಾಗಿ ಸೇವಿಸುವುದರಿಂದ ಜಠರ ಖಾಲಿಯಾಗುವುದು ನಿಧಾನವಾಗುತ್ತದೆ.

ಈಸೊಫೇಜಿಯಲ್‌ ಆಮ್ಲ ತೆರವಾಗುವುದು: ಈಸೊಫೇಜಿಯಲ್‌ ಚಲನೆಯು ಮೇಲ್ಗಡೆಗೆ ನುಗ್ಗಿದ ಆಮ್ಲವನ್ನು ಮರಳಿ ಜಠರಕ್ಕೆ ತಳ್ಳುತ್ತದೆ. ಪ್ರತ್ಯಾಮ್ಲವಿರುವ ಜೊಲ್ಲಿನಿಂದ ಅದು ತಟಸ್ಥವಾಗುತ್ತದೆ. ಆದ್ದರಿಂದ ನಿದ್ದೆಯ ಸಮಯದಲ್ಲಿ ಆಗುವಂತೆ ಜೊಲ್ಲು ಉತ್ಪಾದನೆ ಕಡಿಮೆಯಾಗುವುದು ಕೂಡ.

ಡಾ| ಗಣೇಶ್‌ ಭಟ್‌
ಪ್ರೊಫೆಸರ್‌, ಮುಖ್ಯಸ್ಥರು, ಯುನಿಟ್‌ಐಐ
ಗ್ಯಾಸ್ಟ್ರೋಎಂಟರಾಲಜಿ ವಿಭಾಗ,
ಕೆಎಂಸಿ, ಮಣಿಪಾಲ.

ಮುಂದುವರಿಯುವುದು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ