ಇವೆಂಟ್‌ ಮ್ಯಾನೇಜರ್‌ ಅಸಲಿ ಶೋ ಮ್ಯಾನ್‌

ಉದ್ಯೋಗ ಮಾರ್ಗದರ್ಶಿ

Team Udayavani, May 7, 2019, 10:29 AM IST

ಹಿಂದೆಲ್ಲ ಮನೆಯಲ್ಲಿ ಯಾವುದೇ ಸಮಾರಂಭ ನಡೆಯಲಿ, ನೆಂಟರಿಷ್ಟರು, ಊರು-ಮನೆಯವರು ಒಟ್ಟಾಗಿ ಸೇರಿ ಅದನ್ನು ಚಂದಗಾಣಿಸುತ್ತಿದ್ದರು. ಆದರೆ, ಈಗ ತಮ್ಮದೇ ಮದುವೆಗೆ ಒಂದು ವಾರ ರಜೆ ಹಾಕುವಷ್ಟು ಬ್ಯುಸಿಯಾಗಿದ್ದಾರೆ ಜನರು. ಚಿಂತೆಯಿಲ್ಲ. ಯಾಕಂದ್ರೆ, ಹಿಂದೆ ಬಂಧು ಬಳಗದವರು ಮಾಡುತ್ತಿದ್ದ ಕೆಲಸವನ್ನು ಈಗ ಇವೆಂಟ್‌ ಮ್ಯಾನೇಜರ್‌ಗಳು ನೋಡಿಕೊಳ್ಳುತ್ತಾರೆ…

ಸಂಭ್ರಮಾಚರಣೆಗಳು ಮತ್ತು ಸಮಾರಂಭಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳು. ಅವು ನಮ್ಮ ಜೀವನಪ್ರೀತಿಯ ದ್ಯೋತಕ. ಹುಟ್ಟುಹಬ್ಬದ ಆಚರಣೆ, ಸಾಮಾಜಿಕ ಕೂಟಗಳು, ಜೀವನದ ಸ್ಮರಣೀಯ ಕ್ಷಣಗಳಾದ ನಿಶ್ಚಿತಾರ್ಥ, ಮದುವೆ… ಇವೆಲ್ಲ ವೈಯಕ್ತಿಕ ನೆಲೆಯಲ್ಲಾದರೆ, ಅದರಾಚೆಗಿನ ಖುಷಿಯ ಕ್ಷಣಗಳಾದ ಕಾಲೇಜು ವಾರ್ಷಿಕೋತ್ಸವ, ಸ್ಫರ್ಧೆಗಳು, ಕ್ರೀಡಾಕೂಟಗಳು, ಸಾಂಸ್ಥಿಕ ಚೌಕಟ್ಟಿನ ವಾರ್ಷಿಕ ಸಭೆಗಳು, ಪ್ರದರ್ಶನಗಳು, ಮಾರಾಟ ಮೇಳಗಳು, ಸಮ್ಮೇಳನಗಳು, ಉತ್ಪನ್ನ ಪರಿಚಯ ಮತ್ತು ಬ್ರಾಂಡ್‌ ಅಭಿವೃದ್ಧಿ ಕಾರ್ಯಕ್ರಮಗಳು, ಫ್ಯಾಷನ್‌ ಶೋಗಳು, ಪ್ರತಿಭಾ ಶೋಧದ ಪ್ರದರ್ಶನಗಳು, ಪ್ರಚಾರ ಪ್ರದರ್ಶನಗಳು, ಧಾರ್ಮಿಕ ಕಾರ್ಯಕ್ರಮಗಳು ಇತ್ಯಾದಿ ಇತ್ಯಾದಿಗಳೂ ನಮ್ಮ ಜೀವನದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ.

ಇಂಥ ಸಂಭ್ರಮಾಚರಣೆಗಳು ನಾಲ್ಕು ಜನ ಮೆಚ್ಚುವಂತೆ ನಡೆಯಬೇಡವೆ?
ಹಾಗಾಗಿಯೇ, ಕಾರ್ಯಕ್ರಮಗಳನ್ನು ನಡೆಸಲು ವೃತ್ತಿಪರರ ಸಹಾಯವನ್ನು ಪಡೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಸಮಾರಂಭವೊಂದು ಸಾಂಗವಾಗಿ ನಡೆಯಲು ಎಷ್ಟು ಶ್ರಮ ವಹಿಸಬೇಕೋ, ಆ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವವರೇ ಇವೆಂಟ್‌ ಮ್ಯಾನೇಜರ್‌ಗಳು! ಇವೆಂಟ್‌ ಮ್ಯಾನೇಜ್‌ಮೆಂಟ್‌ ಎಂಬುದು ಬಹುಮುಖ ಪ್ರತಿಭೆಯನ್ನು ಬೇಡುವ ವೃತ್ತಿ. ಕಾರ್ಯಕ್ರಮದಲ್ಲಿ ಯಾವ ಲೋಪವೂ ಆಗದಂತೆ ನೋಡಿಕೊಳ್ಳುವುದು ಇವೆಂಟ್‌ ಮ್ಯಾನೇಜರ್‌ನ ಜವಾಬ್ದಾರಿ.

ಅವಶ್ಯ ಕೌಶಲಗಳು
ಸಾರ್ವಜನಿಕ ಸಂಪರ್ಕ: ಜನರೊಂದಿಗೆ ನಿಮ್ಮ ಸಂಪರ್ಕ ಎಷ್ಟು ಚೆನ್ನಾಗಿರುತ್ತದೋ, ನಿಮ್ಮ ಬೆಳವಣಿಗೆಗೆ ಅಷ್ಟು ಒಳ್ಳೆಯದು. ಗ್ರಾಹಕರು, ಏಜೆಂಟರು, ಇತರ ವೃತ್ತಿಪರರೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿರುವುದು ಅಗತ್ಯ.

ಸೃಜನಶೀಲತೆ: ಪ್ರತಿಯೊಂದು ಸಮಾರಂಭವೂ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ಹಾಗಾಗಿ, ಪ್ರತಿಬಾರಿಯೂ ವಿಭಿನ್ನವಾಗಿ ಕಾರ್ಯಕ್ರಮ ನಿರ್ವಹಣೆ ಮಾಡುವ ಅಗತ್ಯವಿರುತ್ತದೆ.

ಮಾರಾಟ ಕೌಶಲ: ಎಲ್ಲ ಕ್ಷೇತ್ರಗಳಲ್ಲಿರುವಂತೆ ಇವೆಂಟ್‌ ಮ್ಯಾನೇಜ್‌ಮೆಂಟ್‌ನಲ್ಲೂ ಸ್ಪರ್ಧೆ ಇರುತ್ತದೆ. ನಿಮ್ಮ ಕೆಲಸವನ್ನು ಜನರಿಗೆ ತಲುಪಿಸಿ, ಆ ಮೂಲಕ ನಿಮಗೆ ನೀವೇ ಮಾರ್ಕೆಟ್‌ ಸೃಷ್ಟಿಸಿಕೊಳ್ಳಬೇಕು.

ವಿಶ್ಲೇಷಣಾ ಸಾಮರ್ಥ್ಯ: ಎಲ್ಲ ಬಗೆಯ ಸಮಸ್ಯೆಗಳನ್ನೂ ಪರಿಹರಿಸಬಲ್ಲ ಬುದ್ಧಿವಂತಿಕೆಯ ಜೊತೆಗೆ, ಎದುರಾಗಬಹುದಾದ ಸಮಸ್ಯೆಗಳನ್ನು ಕಲ್ಪಿಸಿಕೊಂಡು ಅದಕ್ಕೆ ಸಿದ್ಧರಾಗಿರುವ ದೂರದೃಷ್ಟಿತ್ವವೂ ಅಗತ್ಯ.

ಯೋಜನಾ ಕೌಶಲ: ಸಮಾರಂಭವನ್ನು ಆಯೋಜಿಸುವ, ಬೇರೆ ಬೇರೆ ಕಾರ್ಯಗಳಿಗೆ ನಿಯೋಜಿಸಿದ ತಂಡಗಳ ನಡುವೆ ಸಮನ್ವಯ ಸಾಧಿಸಿ ಕಾರ್ಯಕ್ರಮ ಸುಲಲಿತವಾಗಿ ನಡೆಯುವಂತೆ ಯೋಜಿಸುವ ಸಾಮರ್ಥ್ಯ ಇರಬೇಕು.

ನಿರ್ವಹಣಾ ಕೌಶಲ: ಸಮಯ, ಒತ್ತಡ, ಕೈಕೆಳಗೆ ಕೆಲಸ ಮಾಡುವವರು, ಗ್ರಾಹಕರು, ಬಜೆಟ್‌ ಮುಂತಾದ ಪರಿಸ್ಥಿತಿಗಳನ್ನು ಸರಿಯಾಗಿ ನಿರ್ವಹಿಸುವ ಕೌಶಲವನ್ನು ಹೊಂದಿರಬೇಕು.

ಈ ಮಾತು ನೆನಪಿರಲಿ…
– ನಿಮ್ಮ ಕಾರ್ಯವು ಜನಸಂಪರ್ಕದ ನಡುವೆಯೇ ನಡೆಯುವುದರಿಂದ ಸಂವಹನಾ ಕೌಶಲ ಅತ್ಯುತ್ತಮವಾಗಿರಬೇಕು

– ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯನ್ನು ಸೇರಲು ಒಂದು ಪದವಿ ಸಾಕಾದರೂ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್‌, ಪ್ರವಾಸೋದ್ಯಮ ನಿರ್ವಹಣೆ, ಸಾರ್ವಜನಿಕ ಸಂಪರ್ಕ, ಮಾನವ ಸಂಪನ್ಮೂಲ ಹಾಗೂ ಸಂಬಂಧಗಳ ನಿರ್ವಹಣೆ, ಮಾರುಕಟ್ಟೆ ತಂತ್ರಗಾರಿಕೆ ಇವುಗಳಲ್ಲಿನ ತರಬೇತಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತವೆ.

– ಈ ವಿಷಯಕ್ಕೆ ಸಂಬಂಧಿಸಿದ ನಿಮ್ಮೆಲ್ಲ ಸೃಜನಶೀಲ ಕಾರ್ಯಗಳ ಮತ್ತು ಯೋಜನ ಕೌಶಲಗಳನ್ನು ಬಿಂಬಿಸುವ ದಾಖಲೆಯನ್ನು ಕಾಪಿಡಿ, ಇದು ನಿಮ್ಮ ಆಯ್ಕೆಯಲ್ಲಿ ಸಹಾಯ ಮಾಡುತ್ತದೆ.

– ಅತಿ ಅವಶ್ಯವಲ್ಲದಿದ್ದರೂ ಹೆಸರಾಂತ ಇವೆಂಟ್‌ ಮ್ಯಾನೇಜ್ ಮೆಂಟ್ಟ್‌ ಸಂಸ್ಥೆಯಲ್ಲಿ ಇಂಟರ್ನ್ಶಿಪ್‌ ಅಪೇಕ್ಷಣೀಯ.

ಉದ್ಯೋಗ ಲಭ್ಯತೆ
ಇಳಿಮುಖವಾಗಿರುವ ಆರ್ಥಿಕ ಪರಿಸ್ಥಿತಿಯಲ್ಲಿಯೂ ನಾಗಾಲೋಟದಲ್ಲಿ ಬೆಳೆಯುತ್ತಿರುವ ಕ್ಷೇತ್ರವಿದು. ದಿನವೂ ಒಂದಿಲ್ಲೊಂದು ಕಡೆ, ಒಂದಿಲ್ಲೊಂದು ಸಮಾರಂಭ ನಡೆಯುತ್ತಲೇ ಇರುತ್ತದೆ ಮತ್ತು ಅವುಗಳನ್ನು ನಿರ್ವಹಿಸಲು ಜನರಲ್ಲಿ ಸಮಯದ ಕೊರತೆಯೂ ಇದೆ. ಹಾಗಾಗಿ, ಇವೆಂಟ್‌ ಮ್ಯಾನೇಜರ್‌ಗಳ ಬೊಗಸೆಯಲ್ಲಿ ಕೆಲಸವಿದ್ದೇ ಇರುತ್ತದೆ. ಈ ಕ್ಷೇತ್ರದಲ್ಲಿ ಛಾಪು ಮೂಡಿಸಬೇಕು ಅಂದುಕೊಂಡವರಿಗೆ ಖಂಡಿತವಾಗಿಯೂ ಇಲ್ಲಿ ಸಾಕಷ್ಟು ಹಾದಿಗಳಿವೆ. ಮೊದಲು, ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ಅಥವಾ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಾಧ್ಯಮವನ್ನು ಸೇರಬಹುದು. ನಿಮ್ಮ ಅನುಭವದ ಖಜಾನೆ ತುಂಬುತ್ತಿದ್ದಂತೆ ಸ್ವತಂತ್ರವಾಗಿ ನಿಮ್ಮದೇ ಉದ್ದಿಮೆಯನ್ನೂ ಸ್ಥಾಪಿಸಿಕೊಳ್ಳಬಹುದು.

— ಕಲ್ಗುಂಡಿ ನವೀನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • 76 ದಿನಗಳಲ್ಲಿ 23 ಸಾವಿರ ಕಿ.ಮೀ. ಕ್ರಮಿಸಿ, 21 ದೇಶಗಳನ್ನು ನೋಡಿಬಂದ ಈ ಜೋಡಿಗೆ, ಬೈಕ್‌ ರೈಡಿಂಗೇ ಜೀವ. ಮಂಡ್ಯದ ಮಂಜುನಾಥ್‌, ಬೆಂಗಳೂರಿನ ರಿಚರ್ಡ್‌ ಹೇಳುವ ಅನುಭವದ ಕತೆಯೇ...

  • ದಿನಾಲೂ ಕಾಲೇಜಿಗೆ ತಡವಾಗಿ ಬರುತ್ತಿದ್ದ ನಾನು, ಅಂದು ಬೇಗ ಬಂದುಬಿಟ್ಟೆ. ಆ ಬೆಳಗಿನ ತಂಪು ವಾತಾವರಣದಲ್ಲಿ, ಕಾಲೇಜಿನ ಸೌಂದರ್ಯವನ್ನು ಸವಿಯುತ್ತಾ ಕಾರಿಡಾರ್‌ನಲ್ಲಿ...

  • ನಾಟಕ ಪ್ರದರ್ಶನಕ್ಕೆ ಆ ಪುಸ್ತಕ ಬೇಕೇ ಬೇಕಿತ್ತು. ಯಾಕೆಂದರೆ, ಒಂದಿಬ್ಬರು ಮಕ್ಕಳು ನಡುನಡುವೆ ತಮ್ಮ ಡೈಲಾಗ್‌ ಮರೆಯುತ್ತಿದ್ದರು. ಆಗ ನಾನು ವೇದಿಕೆಯ ಹಿಂಭಾಗದಲ್ಲಿ...

  • ವ್ಯಾವಹಾರಿಕ ಜಗತ್ತಿನ ಎರಡು ಪ್ರಮುಖ ಹಾಗೂ ಆಸಕ್ತಿದಾಯಕ ಕ್ಷೇತ್ರಗಳೆಂದರೆ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌. ಇವು ಬಹಳ ಪ್ರಭಾವಶಾಲಿ ಕ್ಷೇತ್ರಗಳೂ ಹೌದು. ಕಂಪೆನಿಯ...

  • ಜಾನ್‌ ಆಬರ್‌ನೆತಿ, 18ನೇ ಶತಮಾನದಲ್ಲಿದ್ದ ಪ್ರಸಿದ್ಧ ಬ್ರಿಟಿಷ್‌ ವೈದ್ಯ. ಸರ್ಜನ್‌ ಆಗಿ, ವೈದ್ಯ ಶಿಕ್ಷಕನಾಗಿ ಆಬರ್‌ನೆತಿ ಹೆಸರು ಮಾಡಿದ್ದ. ವೈದ್ಯನಾಗಿ ಅವನದು...

ಹೊಸ ಸೇರ್ಪಡೆ