ಗಜರಾಜನ ಸಂದರ್ಶನ

Team Udayavani, Oct 3, 2019, 10:09 AM IST

ಬಹಳ ಹಿಂದೆ ಒಂದು ಕಾಡಿನಲ್ಲಿ ಆನೆ, ಕಾಡಿನ ರಾಜನಾಗಿತ್ತು. ಅದು ಪ್ರಜೆಗಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿತ್ತು. ಒಂದು ದಿನ ಆನೆಗೆ ಕೆರೆ ನದಿ ಹಳ್ಳಗಳಿಗೂ ಒಬ್ಬ ರಾಜನನ್ನು ನೇಮಿಸಬೇಕೆಂಬ ಯೋಚನೆ ಬಂತು. ಮಳೆಗಾಲ ಪ್ರಾರಂಭವಾಗುವ ಮುನ್ಸೂಚನೆ ಕೊಡಲು ಯಾರಾದರೂ ಒಬ್ಬರು ಜವಾಬ್ದಾರಿಯುತ ವ್ಯಕ್ತಿ ಬೇಕು. ಮಳೆಯ ಮುನ್ಸೂಚನೆ ಸಿಕ್ಕರೆ ಕಾಡಿನ ಪ್ರಾಣಿಗಳು ಮುಂಚಿತವಾಗಿ ರಕ್ಷಣೆ ಪಡೆಯಲು ಸಹಾಯವಾಗುತ್ತದೆ ಎನ್ನುವುದು ಗಜರಾಜನ ಅಭಿಪ್ರಾಯವಾಗಿತ್ತು. ಅದು ತನ್ನ ಸೇವಕ ಹುಂಜವನ್ನು ಕರೆದು “ನದಿ, ಕೆರೆ, ಹಳ್ಳಗಳ ಉಸ್ತುವಾರಿ ನೋಡಿಕೊಳ್ಳುವ ಜಲರಾಜನಾಗಲು ಆರ್ಹತೆಯಿರುವವರು ನಾಳೆ ಬೆಳಗ್ಗೆ ಅರಮನೆಯ ಮುಂದಿನ ಅಂಗಳದ ಹತ್ತಿರ ಜಮಾಯಿಸಬೇಕೆಂದು ಡಂಗುರ ಹೊಡೆಸಿ’ ಎಂದು ಆಜ್ಞಾಪಿಸಿತು.

ಮಾರನೇ ದಿನ ಅರಮನೆಯ ಮುಂದೆ ಕಾಡಿನ ಎಲ್ಲಾ ಪ್ರಾಣಿಗಳು ಜಲರಾಜನಾಗಲು ನಾಮುಂದು ತಾಮುಂದು ಎಂದು ಜಮಾಯಿಸಿದ್ದವು. ಗಜರಾಜ ಮೊದಲು ಬೆಕ್ಕಿನ ಬಳಿ ಬಂದಿತು “ನಿನಗೆ ನೀರೆಂದರೆ ಭಯ. ಮಳೆ ಬಂದರೆ ಸಾಕು ಬೆಚ್ಚಗಿನ ಜಾಗವನ್ನು ಹುಡುಕಿಕೊಂಡು ಓಡುತ್ತೀಯಾ. ಹಾಗಾಗಿ ನಿನಗೆ ಜಲರಾಜನಾಗುವ ಅರ್ಹತೆ ಇಲ್ಲ!’ ಎಂದಿತು.

ನಂತರ ಮಂಗನ ಬಳಿ ಬಂದ ಆನೆ, “ನೀನು ಯಾವಾಗಲೂ ಆಟದಲ್ಲೇ ಮುಳುಗಿರುತ್ತೀಯಾ, ನಿನಗೆ ಮರೆವೂ ಸ್ವಲ್ಪ ಜಾಸ್ತಿ, ನಿನ್ನ ಆಟದಲ್ಲಿ ಮೈಮರೆತು ನಿನ್ನ ಕರ್ತವ್ಯವನ್ನು ಮರೆಯಬಹುದೆಂಬ ಭಯ ನನಗೆ. ಹಾಗಾಗಿ ನೀನು ಸಹ ಈ ಸ್ಥಾನಕ್ಕೆ ಹೊಂದುವುದಿಲ್ಲ.’ ಎಂದಿತು. ಈ ರೀತಿ ಅನೇಕ ಪ್ರಾಣಿಗಳನ್ನು ಹಿಂದಕ್ಕೆ ಕಳಿಸಿತು. ಕೊನೆಗೆ ಉಳಿದದ್ದು ಮಿಡತೆ ಮತ್ತು ಕಪ್ಪೆ ಮಾತ್ರ. ಅವೆರಡನ್ನೂ ನೋಡಿದ ಗಜರಾಜ “ನೀವಿಬ್ಬರೂ ಈ ಕೆಲಸವನ್ನು ಚೆನ್ನಾಗಿ ಮಾಡಬಲ್ಲಿರಿ ಎಂಬುದರಲ್ಲಿ ಎರಡು ಮಾತಿಲ್ಲ! ಆದರೆ ನಿಮ್ಮಿಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂದು ತೋಚುತ್ತಿಲ್ಲ!’ ಎಂದಿತು. ಆಗ ಸೇವಕ ಹುಂಜ “ಇವರಿಬ್ಬರಿಗೂ ಓಟದ ಸ್ಪರ್ಧೆ ಏರ್ಪಡಿಸೋಣ’ ಎಂದು ಸಲಹೆ ನೀಡಿತು. ಗಜರಾಜ ಸಮ್ಮತಿಸಿದ.

ಓಟದ ಸ್ಪರ್ಧೆ ಪ್ರಾರಂಭವಾಯಿತು. ಮಿಡತೆ ಮತ್ತು ಕಪ್ಪೆ ಎರಡೂ ವೇಗದಿಂದ ಓಡತೊಡಗಿದವು. ದಾರಿ ಬದಿ ಒಂದು ಹೊಳೆ ಸಿಕ್ಕಿತು. ದೂರದಲ್ಲೆಲ್ಲೋ ಮಳೆಯಾಗಿದ್ದರಿಂದ ಹೊಳೆಯಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರುತ್ತಿತ್ತು. ಕಪ್ಪೆ ಗಕ್ಕನೆ ನಿಂತು ಬಿಟ್ಟಿತು. ಹೊಳೆಯಲ್ಲಿ ಪ್ರವಾಹ ಬಂದರೆ ಕಾಡಿಗೆ ನೀರು ನುಗ್ಗುವುದೆಂದು ಗಾಬರಿಯಾಯಿತು. ಅದು ಕೂಡಲೆ ಓಟವನ್ನು ನಿಲ್ಲಿಸಿ ವಿಷಯ ಮುಟ್ಟಿಸಲು ಹಿಂದಕ್ಕೆ ಬಂದುಬಿಟ್ಟಿತು. ಆದರೆ ಮಿಡತೆ ಇದೇ ಸರಿಯಾದ ಅವಕಾಶವೆಂದು ಮುಂದೋಡಿ ಮೊದಲ ಸ್ಥಾನ ಬಂದಿತು. ಆದರೆ ಗಜರಾಜ “ಸ್ಪರ್ಧೆಯನ್ನು ಲೆಕ್ಕಿಸದೆ ಅಪಾಯದ ಮುನ್ಸೂಚನೆಯನ್ನು ತಿಳಿಸಲು ಬಂದ ಕಪ್ಪೆಯೇ ಕಾಡಿನ ಜಲರಾಜ’ ಎಂದು ಘೋಷಿಸಿತು. ಪ್ರಾಣಿಗಳೆಲ್ಲವೂ ಚಪ್ಪಾಳೆ ತಟ್ಟಿದವು.

– ಪುರುಷೋತ್ತಮ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಂದರ ಪರ್ವತ ಸಾಲಿನಲ್ಲಿದ್ದ ಬುಡದ ಬಂಡೆಗಳ ನಡುವೆ ಹತ್ತಾರು ಕರಡಿಗಳು ವಾಸವಾಗಿದ್ದವು. ಒಂದು ದಿನ ತನ್ನ ಪರಿವಾರದೊಂದಿಗೆ ಹೊರಟ ಮರಿ ಕರಡಿ ಆಕಸ್ಮಿಕವಾಗಿ ಗುಂಪಿನಿಂದ...

  • ಕಳೆದ ವರ್ಷ ಹವಾಯಿಯಲ್ಲಿ ಸ್ಫೋಟಿಸಿದ ಜ್ವಾಲಾಮುಖೀಯಿಂದ ಅಚ್ಚರಿಯ ಬೆಳವಣಿಗೆಗಳು ಘಟಿಸಿದ್ದವು. ಲಾವಾ ರಸ ಚಿಮ್ಮಿ ದಾರಿಯಲ್ಲಿ ಸಿಕ್ಕದ್ದೆಲ್ಲವನ್ನೂ ಆಹುತಿ...

  • ವಿಜ್ಞಾನಿಗಳು, ಕ್ರಿಯಾಶೀಲ ವ್ಯಕ್ತಿಗಳು ವಿಭಿನ್ನ ಸ್ವಭಾವವನ್ನು ಹೊಂದಿರುತ್ತಾರೆ ಎಂಬ ಮಾತಿದೆ. ಐನ್‌ಸ್ಟಿನ್‌ ಅದಕ್ಕೆ ಹೊರತಾಗಿರಲಿಲ್ಲ. ಆದರೆ ಒಂದು ದಿನ...

  • ಜಾದೂಗಾರ ಇಸ್ಪೀಟ್‌ ಕಾರ್ಡ್‌ ಪ್ಯಾಕಿನಿಂದ ಹತ್ತು ಕಾರ್ಡುಗಳನ್ನು ಎಣಿಸಿ ತೆಗೆಯುತ್ತಾನೆ. ಹತ್ತು ಜನ ಪ್ರೇಕ್ಷಕರನ್ನು ಆರಿಸಿಕೊಂಡು ಆ ಕಾರ್ಡುಗಳನ್ನು ತೋರಿಸಿ...

  • ಚಿಂದಿ ಆಯುತ್ತಿದ್ದ ಪಚ್ಚಿಗೆ ಜಾದೂ ವಿಮಾನ ಸಿಕ್ಕಿತ್ತು. ಅದು ಅವನನ್ನು ಎಲ್ಲೆಲ್ಲಿಗೆ ಕೊಂಡೊಯ್ಯಿತು ಗೊತ್ತಾ? ಚಿಂದಿ ಆಯುವ ಬಾಲಕ ಪಚ್ಚಿ ಒಂದು ಶಾಲೆಯ ಗೇಟಿನ...

ಹೊಸ ಸೇರ್ಪಡೆ