
ಏಪ್ರಿಲ್‌ನ ಹಿಮಬಿಂದು ಅಕ್ಟೋಬರ್‌ನಲ್ಲಿ
Team Udayavani, Oct 6, 2017, 11:16 AM IST

ಇದು ಮುದುಕರ ಚಿತ್ರವಲ್ಲ!
ಹಾಗಂತ ಸ್ಪಷ್ಟಪಡಿಸಿದರು ಹಿರಿಯ ನಟ ದತ್ತಣ್ಣ. ಬಹುಶಃ ಅವರು ಹಾಗೆ ಹೇಳದಿದ್ದರೆ, ಎದುರಿಗಿದ್ದ ಮಂದಿ, ಇದೊಂದು ಮುದುಕರ ಚಿತ್ರ ಎಂದು ಅಂದುಕೊಳ್ಳುವ ಸಾಧ್ಯತೆ ಇತ್ತು. ಏಕೆಂದರೆ, ವೇದಿಕೆ ಮೇಲೆ ಇದ್ದವರಲ್ಲಿ ಹೆಚ್ಚಿನವರು ಹಿರಿಯರೇ. ದತ್ತಣ್ಣ, “ಸಿದ್ಲಿಂಗು’ ಶ್ರೀಧರ್, ಬಾಬು ಹಿರಣ್ಣಯ್ಯ, ಎಚ್.ಜಿ. ಸೋಮಶೇಖರ್ ರಾವ್ ಹೀಗೆ ಹಿರಿಯರ ಸಂಖ್ಯೆ ದೊಡ್ಡದಾಗಿತ್ತು. ಇಷ್ಟೆಲ್ಲಾ ಜನ ಒಂದೇ ಚಿತ್ರದಲ್ಲಿ ನಟಿಸಿದ್ದಾರೆಂದರೆ, ಅದು ಮುದುಕರ ಚಿತ್ರ ಎಂದು ಜನ ನಂಬುವ ಅಪಾಯವಿದೆ ಎಂಬ ಸಂಶಯ ದತ್ತಣ್ಣರಿಗೆ ಬಂದಿರಲಿಕ್ಕೆ ಸಾಕು. ಹಾಗಾಗಿ “ಏಪ್ರಿಲ್‌ನ ಹಿಮಬಿಂದು’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕೊನೆಯಲ್ಲಿ ಮಾತಾಡಿದರೂ, ಇದೇ ವಾಕ್ಯದೊಂದಿಗೆ ಮಾತು ಶುರು ಮಾಡಿದರು.
“ಇದು ಮುದುಕರ ಚಿತ್ರವಲ್ಲ. ಹುಡುಗರ ಚಿತ್ರ. ಹಾಗಾಗಿ ಹಿಂದೆ ಕೂತಿರುವ ಮೂವರು ಹುಡುಗರನ್ನು ಮುಂದೆ ಕೂರಿಸಬೇಕಿತ್ತು. ಇದು ಯುವಕರಿಗೆ ಸಂಬಂಧಿಸಿದ ಸಂಗತಿಗಳನ್ನು ಪ್ರತಿಪಾದಿಸುವ ಚಿತ್ರ. ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಪರಿಹಾರ ಸಿಗುತ್ತೆ ಅಂತಾರಲ್ಲ, ಆ ಹಿನ್ನೆಲೆಯ ಕಥೆ ಇದು. ಹಂಚಿಕೊಳ್ಳದಿದ್ದರೆ, ಸಮಸ್ಯೆಗಳಿಗೆ ಉತ್ತರ ಸಿಗುವುದಿಲ್ಲ. ಕಷ್ಟಗಳು ಬೆಳೆಯುತ್ತಲೇ ಹೋಗುತ್ತವೆ. ಇದು ಆ ಹುಡುಗರಿಗೆ ಗೊತ್ತಿರುವುದಿಲ್ಲ. ಕಾರಣ ಅನುಭವದ ಕೊರತೆ. ಹಾಗಾಗಿ ಮೂರು ಜನಕ್ಕೆ ಮೂರು ವಿಭಿನ್ನ ಸಮಸ್ಯೆಗಳು. ಆಗ ನಾವು ಎದುರಾಗುತ್ತೇವೆ. ನಾವು ಬದಕುವ ರೀತಿ ನೋಡಿ, ನಾವೂ ಹೀಗಿಯೇ ಇರಬಹುದಲ್ವಾ ಎಂದು ಅನಿಸೋಕೆ ಶುರುವಾಗುತ್ತದೆ. ಹಾಗಂತ ಈ ಚಿತ್ರದಲ್ಲಿ ಸಂದೇಶವಾಗಲೀ, ಬೋಧನೆಯಾಗಲೀ ಇರುವುದಿಲ್ಲ. ನಮ್ಮನ್ನು ನೋಡಿ ಅವರೇ ಕಲಿತುಕೊಳ್ಳುತ್ತಾರೆ.
ಯಾವುದನ್ನೂ ಹೇರದೆ, ಬದುಕಿನ ಪಾಠವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರಾದ ಶಿವು ಮತ್ತು ಜಗನ್. ಇಲ್ಲಿ ಕಥೆಯಷ್ಟೇ ಅಲ್ಲ, ನಿರೂಪಣೆ ಸಹ ಬಹಳ ಚೆನ್ನಾಗಿದೆ’ ಎಂದು ಮೆಚ್ಚಿಕೊಂಡರು ದತ್ತಣ್ಣ. ಇನ್ನು ಶ್ರೀಧರ್ ಮಾತನಾಡಿ, ಇದು ಬಾಲ್ಯ ಸ್ನೇಹಿತರ ಕುರಿತಾದ ಚಿತ್ರ ಎಂದರು. “ಇದು ಬಾಲ್ಯ ಸ್ನೇಹಿತರ ಚಿತ್ರ. ನಾವೆಲ್ಲಾ ಬಾಲ್ಯ ಸ್ನೇಹಿತರಂತೇ ಖುಷಿಖುಷಿಯಾಗಿ ನಟನೆ ಮಾಡಿ ಬಂದಿದ್ದೇವೆ. ಚಿತ್ರದಲ್ಲಿ ಸ್ನೇಹದ ಪ್ರಾಮುಖ್ಯತೆ ಇದೆ. ಎಷ್ಟೇ ದೊಡ್ಡವರಾದರೂ ಬಾಲ್ಯ ಹುಡುಕುತ್ತೀವಿ. ಬಾಲ್ಯ ಸ್ನೇಹಿತರ ಜೊತೆಗೆ ಎಷ್ಟು ಖುಷಿಯಾಗಿರುತ್ತೀವಿ ಅಂತ ಈ ಚಿತ್ರದ ಕಥೆ ಹೇಳುತ್ತೇವೆ’ ಎಂದರು ಶ್ರೀಧರ್.
“ಏಪ್ರಿಲ್‌ನ ಹಿಮಬಿಂದು’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಶಿವು ಮತ್ತು ಜಗನ್ ಜೊತೆಯಾಗಿ ನಿರ್ಮಿಸಿ-ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ದತ್ತಣ್ಣ, “ಸಿದ್ಲಿಂಗು’ ಶ್ರೀಧರ್, ಬಾಬು ಹಿರಣ್ಣಯ್ಯ, ಎಚ್.ಜಿ. ಸೋಮಶೇಖರ್ ರಾವ್, “ಪಾ ಪ ಪಾಂಡು’ ಚಿದಾನಂದ್, ಸಚಿನ್, ಗಣೇಶ್, ಚಂದನ ರಾಘವೇಂದ್ರ ಮುಂತಾದವರು ನಟಿಸಿದ್ದಾರೆ. ಇನ್ನು ಚಿತ್ರಕ್ಕೆ ಬಿ.ಜೆ. ಭರತ್ ಸಂಗೀತ ಸಂಯೋಜಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
