ಮತ್ತೆ ಶೋಭಿಸುತ್ತಿದೆ ಕೇದಾರನಾಥ

Team Udayavani, Sep 8, 2019, 5:30 AM IST

ಕೇದಾರನಾಥ ಸಾವಿರಾರು ಆಸ್ತಿಕರ ಶ್ರದ್ಧಾ ಕೇಂದ್ರ, ಹಿಮಾಲಯದ ಗರ್ಭದಲ್ಲಿರುವ ಈ ತಾಣ ಸ್ವಯಂ ಪರಶಿವನ ಆವಾಸ ಸ್ಥಾನ, ದ್ವಾದಶಜೋತಿರ್ಲಿಂಗಗಳಲ್ಲಿ ಕೇದಾರನಾಥ ಮಾತ್ರ ಹಿಮಾಲಯದಲ್ಲಿರುವುದರಿಂದ ಇಲ್ಲಿನ ಶಿವಲಿಂಗದ ದರ್ಶನ ಮಾತ್ರದಿಂದ ಆತ್ಮ ಅಂತರ್ಮುಖೀಯಾಗುವುದು ಅನ್ನುವುದು ಶ್ರದ್ಧಾಳುಗಳ ನಂಬಿಕೆ. ಇದೇ ಕಾರಣಕ್ಕೆ ಅತ್ಯಂತ ದುರ್ಗಮ ದಾರಿ, ಮತ್ತು ಮೈಕೊರೆವ ಚಳಿಯ ನಡುವೆಯೂ ಲಕ್ಷಾಂತರ ಭಕ್ತಾದಿಗಳು ಕೇದಾರನಾಥನ ದರ್ಶನ ಪಡೆದು ಪುನೀತರಾಗುತ್ತಾರೆ. ಕೇವಲ ಧಾರ್ಮಿಕವಾಗಿ ಮಾತ್ರವಲ್ಲ ಭೌಗೋಳಿಕವಾಗಿ 14,000 ಅಡಿ ಎತ್ತರದಲ್ಲಿರುವ ಕೇದಾರನಾಥ ಮನುಷ್ಯನನ್ನು ಮಂತ್ರಮುಗ್ಧವಾಗಿಸುವ ರುದ್ರರಮಣೀಯ ತಾಣ. ಹಿಮಚ್ಛಾದಿತ ಶಿಖರಗಳ ನಡುವೆ, ಮಂದಾಕಿನಿ ನದಿಯ ತಟದಲ್ಲಿರುವ ಕೇದಾರಪುರಿಯ ಗರಿಮೆಯನ್ನು ವರ್ಣಿಸಲು ಪದಗಳೇ ಸಾಲದು.

ತ್ರಿಕೋನಾಕಾರದಲ್ಲಿರುವ ಕೇದಾರನಾಥ ಮಂದಿರದ ಗರ್ಭಗೃಹದಲ್ಲಿ ಶಿವಲಿಂಗವಿದ್ದರೆ ಹೊರಾಂಗಣದ ಗೋಡೆಯಲ್ಲಿ ದ್ರೌಪದಿ ಸಹಿತ ಪಂಚಪಾಂಡವರ ವಿಗ್ರಹ ಪೂಜಿಸಲ್ಪಡುತ್ತದೆ. ಈಗಿನ ನಯನ ಮನೋಹರ ಶಿಲಾಮಯ ಮಂದಿರವನ್ನು ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದರಂತೆ.

ಕೇದಾರನಾಥವನ್ನು ನಡುಗಿಸಿದ 2013ರ ಭೀಕರ ಜಲಪ್ರಳಯ 2013ರ‌ಲ್ಲಿ ಕೇದಾರನಾಥದಲ್ಲಾದ ಜಲಪ್ರಳಯ ಮಂದಿರವನ್ನು ಹೊರತುಪಡಿಸಿ ಇಡಿಯ ಕೇದಾರಪುರಿಯನ್ನು ಆಪೋಶನ ತೆಗೆದುಕೊಂಡು ಬಿಟ್ಟಿತ್ತು. ಸಾವಿರಾರು ವ್ಯಕ್ತಿಗಳು ಪ್ರಾಣಕಳೆದುಕೊಂಡಿದ್ದರು, ನೂರಾರು ಮನೆ ಕಟ್ಟಡಗಳು ತರಗೆಲೆಯಂತೆ ಧರೆಗುರುಳಿದ್ದವು. ಒಟ್ಟಾರೆ ಅಂದಿನ ಮಂದಾಕಿನಿಯ ರೌದ್ರಾವತಾರಕ್ಕೆ ಇಡೀ ಉತ್ತರಾಖಂಡ ರಾಜ್ಯವೇ ತತ್ತರಿಸಿತ್ತು

ಈ ಜಲ ಪ್ರಳಯದ ನಂತರ 14000 ಅಡಿ ಎತ್ತರದ ದುರ್ಗಮ ಪ್ರದೇಶದಲ್ಲಿರುವ ಕೇದಾರಪುರಿಯನ್ನು ಪುನರ್ನಿರ್ಮಾಣ ಮಾಡುವುದು ಸವಾಲಿನ ಕೆಲಸವಾಗಿತ್ತು. ಅಲ್ಲದೆ, ಆರು ತಿಂಗಳು ಈ ಪ್ರದೇಶ ಮಂಜಿನಿಂದ ಮುಚ್ಚಿಹೋಗುವುದರಿಂದ ಈ ಅವಧಿಯಲ್ಲಿ ಕೆಲಸ ಮಾಡುವುದು ಅಸಾಧ್ಯವಾಗಿತ್ತು. ಅದಲ್ಲದೆ ಕೇದಾರನಾಥಕ್ಕೆ ಒಂದು ಇಟ್ಟಿಗೆಯನ್ನು, ಒಂದು ಚೀಲ ಸಿಮೆಂಟನ್ನು ಕೂಡ ಕತ್ತೆಯ ಮೂಲಕ ಅಥವಾ ತಲೆಯ ಮೇಲೆ ಹೊತ್ತುಕೊಂಡೇ 16 ಕಿ. ಮೀ. ಸಾಗಿಸಬೇಕು. ಮಾತ್ರವಲ್ಲ, ಇಲ್ಲಿ ದೊಡ್ಡದೊಡ್ಡ ನಿರ್ಮಾಣದ ಯಂತ್ರಗಳನ್ನು ಬಳಸುವುದು ಕೂಡಾ ಅಸಾಧ್ಯ. ಹೆಚ್ಚಿನ ನಿರ್ಮಾಣ ಕಾರ್ಯಗಳು ಮಾನವ ಶ್ರಮದ ಮೂಲಕವೇ ನಡೆಯಬೇಕಾಗಿತ್ತು.

ಕೇದಾರನಾಥ ಪುನನಿರ್ಮಾಣ
ಹಿಮಾಲಯದ ಪರಿಸರ ಸೂಕ್ಷ್ಮತೆ ಮತ್ತು ಭವಿಷ್ಯದಲ್ಲಿ ಸಂಭವಿಸಬಹುದಾದ ಪ್ರವಾಹ- ಭೂಕುಸಿತಗಳನ್ನು ಗಮನದಲ್ಲಿರಿಸಿ ಕೇದಾರನಾಥದ ಪುನರ್ನಿರ್ಮಾಣ ಮಾಡುವುದು ಅನಿವಾರ್ಯವಾಗಿತ್ತು. ಅದರಂತೆ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಕೇದಾರನಾಥ ಪುನರ್ನಿರ್ಮಾಣದ ಮಾಸ್ಟರ್‌ ಪ್ಲ್ಯಾನ್‌ ಸಿದ್ಧವಾಗಿತ್ತು.ಆ ಮಹಾನ್‌ ಕಾರ್ಯವನ್ನು ನೆಹರು ಇನ್ಸ್‌ಟಿಟ್ಯೂಟ್‌ ಆಫ್ ಮೌಂಟೇನೇರಿಯಂಗೆ ವಹಿಸಲಾಗಿತ್ತು.

ಮೊದಲ ಹಂತವಾಗಿ,ಕೇದಾರನಾಥ ದೇವಸ್ಥಾನದ ಸುತ್ತ ಆವರಿಸಿಕೊಂಡಿದ್ದ ವಾಣಿಜ್ಯ ಮತ್ತು ವಸತಿ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಕೇದಾರನಾಥಕ್ಕಿಂತ ಎರಡು ಕಿ. ಮೀ. ಮೊದಲೇ ಬೇಸ್‌ ಕ್ಯಾಂಪ್‌ ನಿರ್ಮಿಸಿ ಭಕ್ತರಿಗೆ ವಸತಿ ವ್ಯವಸ್ಥೆ ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಯಿತು. ಕೇದಾರನಾಥ ದೇವಳದ ಸುತ್ತ ಮೂರು ಸ್ತರದ ಕಾಂಕ್ರೀಟ್‌ ಗೋಡೆಗಳನ್ನು ನಿರ್ಮಿಸಲಾಗಿದ್ದು ಭವಿಷ್ಯದಲ್ಲಿ ಹಿಮಾಲಯದ ಪರ್ವತಗಳಿಂದ ಪ್ರವಾಹ ಬಂದಲ್ಲಿ ಸೂಕ್ತ ರೀತಿಯಲ್ಲಿ ನೀರು ದೇವಾಲಯದತ್ತ ಸಾಗದೆ ಕಣಿವೆಗೆ ಹರಿದು ಹೋಗಲು ಬೇಕಾದಂಥ ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನದ ಹಿಂಬದಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ನಿಷಿದ್ಧವಾಗಿದೆ. 2013ರ ಪ್ರವಾಹದಲ್ಲಿ ಮಡಿದವರ ನೆನಪಿಗಾಗಿ ಒಂದು ಸ್ಮತಿ ಉದ್ಯಾನವನಕ್ಕೆ ಮೀಸಲಿರಿಸಲಾಗಿದೆ. ಮಂದಾಕಿನಿ ನದಿಯ ಸುತ್ತ ಘಾಟ್‌ಗಳನ್ನು ನಿರ್ಮಾಣ ಮಾಡಲಾಗಿದ್ದು ಇಲ್ಲಿ ಭಕ್ತರಿಗೆ ಧಾರ್ಮಿಕ ವಿಧಿವಿಧಾನಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಂದಾಕಿನಿ ಸಂಗಮದಲ್ಲಿ ಒಂದು ಬೃಹತ್‌ ವೃತ್ತವನ್ನು ನಿರ್ಮಿಸಲಾಗಿದೆ. ಇಲ್ಲಿಂದ ಸುಮಾರು 900 ಅಡಿ ದೂರದಲ್ಲಿ ಕಣ್ಣಿಗೆ ಕಾಣುವ ಭವ್ಯವಾದ ಮಂದಿರ, ಕಠಿಣ ಚಾರಣದ ಮೂಲಕ ಆಗಮಿಸುವ ಭಕ್ತಾದಿಗಳಲ್ಲಿ ನವ ಉತ್ಸಾಹವನ್ನು ಮೂಡಿಸುತ್ತದೆ. ಸಂಗಮದಿಂದ ಮಂದಿರದ ತನಕ ಅಗಲವಾದ ಮೆಟ್ಟಲುಗಳ ವ್ಯವಸ್ಥೆ ಮಾಡಲಾಗಿದೆ. ಎರಡೂ ಕಡೆ ಎಲ…ಇಡಿ ದೀಪ ಮತ್ತು ಆಸನಗಳ ವ್ಯವಸ್ಥೆ ಇದೆ. ಮೆಟ್ಟಲುಗಳ ಆಸುಪಾಸಿನಲ್ಲಿ ಧ್ಯಾನಕೇಂದ್ರ, ಯಾಗಶಾಲೆ, ಮ್ಯೂಸಿಯಮ್‌, ಪೂಜಾ ಸಾಮಾಗ್ರಿಗಳ ಮಳಿಗೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ.

ಚಾರ್‌ಧಾಮ್‌ ಯಾತ್ರೆಗೆ ಹೊಸದಿಕ್ಕು ನೀಡಲಿರುವ ಚಾರ್‌ಧಾಮ್‌ ಎಕ್ಸ್‌ಪ್ರೆಸ್‌ ವೇ ಕೇದಾರನಾಥ ಸೇರಿದಂತೆ ಗಂಗೋತ್ರಿ, ಯಮುನೋತ್ರಿ, ಬದರೀನಾಥದ ರಸ್ತೆಗಳು ಆರು ತಿಂಗಳು ಹಿಮಪಾತದಿಂದ ಮುಚ್ಚಿದ್ದರೆ, ಮಳೆಗಾಲದಲ್ಲಿ ಭೂಕುಸಿತದಿಂದ ಪ್ರಯಾಣದಲ್ಲಿ ಅಡಚಣೆಯಾಗುತ್ತದೆ. ಪ್ರಸ್ತುತ ಇರುವ ರಸ್ತೆಗಳು ಕಡಿದಾಗಿದ್ದು ಪ್ರಯಾಣಕ್ಕೆ ತಗಲುವ ಸಮಯ ಸಾಮಾನ್ಯಕ್ಕಿಂತ ದುಪ್ಪಟಾಗಿರುತ್ತದೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ಸುಮಾರು 12 ಸಾವಿರ ಕೋಟಿ ವೆಚ್ಚದಲ್ಲಿ ಚಾರ್‌ಧಾಮ್‌ ಮಹಾಮಾರ್ಗ್‌ ವಿಕಾಸ್‌ ಪರಿಯೋಜನ ಎಂಬ ಯೋಜನೆಯಡಿ ನಾಲ್ಕೂ ಧಾಮಗಳನ್ನು ಸಂಪರ್ಕಿಸುವ ಸರ್ವಋತು ದ್ವಿಪಥ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು ಭವಿಷ್ಯದಲ್ಲಿ ಈ ರಸ್ತೆಯ ಮೂಲಕ ವರ್ಷವಿಡೀ ಯಾತ್ರೆ ಕೈಗೊಳ್ಳಬಹುದು ಮಾತ್ರವಲ್ಲ , ಅತೀ ಕಡಿಮೆ ಸಮಯದಲ್ಲಿ ಭಾರತೀಯ ಸೇನೆಯು ಗಡಿಭಾಗವನ್ನು ತಲುಪಲು ಸಹಾಯವಾಗಬಲ್ಲುದು. ಈ ರಸ್ತೆ ಉತ್ತರಖಂಡದ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಹೊಸ ದಿಕ್ಕು ನೀಡಲಿದೆ.

ಪರಿಸರ ಪ್ರಜ್ಞೆಯ ಜೊತೆ ನಿಯಂತ್ರಿತ ಅಭಿವೃದ್ಧಿಯಾಗಲಿ ನೂರಾರು ಜೀವನದಿಗಳಿಗೆ ತವರುಮನೆಯಾಗಿರುವ ಹಿಮಾಲಯದ ಪ್ರದೇಶಗಳಲ್ಲಿ ಮೂಲ ಸೌಕರ್ಯ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿ ಅಲ್ಲಿನ ಧಾರಣಾ ಸಾಮರ್ಥ್ಯದ ಅಧ್ಯಯನದ ಮೇಲೆ ನಡೆಯಬೇಕಾಗಿರುವುದು ಅತ್ಯಂತ ಆವಶ್ಯಕ.

-ವಿಕ್ರಮ್‌ ನಾಯಕ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೊನ್ನೆ ಮೊನ್ನೆ ಕೇರಳದ ಚಲನಚಿತ್ರ ನಟಿ ಮಂಜು ವಾರಿಯರ್‌ತಂಡ ಇದೇ ಛತ್ರುವಿನಲ್ಲಿ ಪ್ರವಾಹಕ್ಕೆ ಸಿಕ್ಕಿ ಸೆಟಲೈಟ್‌ ಫೋನಿನ ಮೂಲಕ ಅವರನ್ನು ರಕ್ಷಿಸಲಾಯಿತು ಎಂಬ...

  • ದೇವರು ಪ್ರಾಣಿಗಳನ್ನೆಲ್ಲ ಸೃಷ್ಟಿಸಿದ ಬಳಿಕ ಅವುಗಳ ಸಭೆ ಕರೆದ. ""ನಾನು ತುಂಬ ಶ್ರಮವಹಿಸಿ ಬೇರೆ ಬೇರೆ ವಿಧದ ಪ್ರಾಣಿಗಳನ್ನು ಸೃಷ್ಟಿಸಿದ್ದೇನೆ. ನಿಮಗಾಗಿ ಎಲ್ಲ...

  • (ಈ ಕತೆಯಲ್ಲಿ ವರ್ಷಕಾಲದ ಭೀಕರ ಚಿತ್ರಣವಿದೆ. ಇದು ಕತೆಯ ಪೂರ್ಣಪಾಠವಲ್ಲ.) ಸಿಡಿಲು ಗುಡುಗು, ಮಿಂಚು, ಗಾಳಿ, ಮಳೆ- ಇವುಗಳಿಂದ ರಾತ್ರಿ ಹುಚ್ಚೆದ್ದ ಭೈರವಿಯಾಗಿತ್ತು....

  • ಹೊಸ ಅಂಕಣ... ಪ್ರತಿದಿನ ಬೆಳಗ್ಗೆ ಏಳರ ಹೊತ್ತಿಗೆ 70 ಜನ ಕೂರಬಹುದಾದ ಎಟಿಆರ್‌ ವಿಮಾನವೊಂದು ಬೆಂಗಳೂರಿನಿಂದ ಕೊಚ್ಚಿನ್‌ ಮಾರ್ಗವಾಗಿ ಲಕ್ಷದ್ವೀಪ ಸಮೂಹದ ಅಗತ್ತಿ...

  • ತಿರುಗಾಟ ಜಗತ್ತಿನಾದ್ಯಂತ ಹೆಚ್ಚುತ್ತಿದೆ. ಸಹಜವಾಗಿ ನಮಗಾಗುವ ವೈವಿಧ್ಯಮಯ ಅನುಭವಗಳೂ ವಿಸ್ತೃತವಾಗುತ್ತವೆ. ಬಹುಶಃ "ದೇಶ ಸುತ್ತು ಕೋಶ ಓದು' ಎಂಬ ಗಾದೆ ನಮಗೆ ಅರ್ಥ...

ಹೊಸ ಸೇರ್ಪಡೆ

  • ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ...

  • ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿರುವ ಭಾರೀ ದಂಡ ಪ್ರಮಾಣವನ್ನು ತಗ್ಗಿಸಲು ರಾಜ್ಯ ಸರಕಾರ ಮುಂದಾಗಿದ್ದರೂ ಕಾಯ್ದೆಯಲ್ಲಿ ನಾಲ್ಕೆ „ದು ಪ್ರಕರಣಗಳನ್ನು...

  • ಹೊಸದಿಲ್ಲಿ: ಕರ್ನಾಟಕದ 17 ಅನರ್ಹ ಶಾಸಕರ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಲ್ಲಿದ್ದ, ಕರ್ನಾಟಕ ಮೂಲದ ನ್ಯಾ| ಮೋಹನ ಎಂ....

  • ಚಾಂಗ್‌ಝು (ಚೀನ): ಭಾರತದ ಮಿಕ್ಸೆಡ್‌ ಡಬಲ್ಸ್‌ ತಾರೆಯರಾದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಅಶ್ವಿ‌ನಿ ಪೊನ್ನಪ್ಪ ಅವರು ಚೀನ ಓಪನ್‌ ಬ್ಯಾಡ್ಮಿಂಟನ್‌...

  • ನವದೆಹಲಿ: ಏರ್‌ಸೆಲ್‌- ಮ್ಯಾಕ್ಸಿಸ್‌ ಡೀಲ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು ಹಾಗೂ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಎಲ್ಲ ಕೇಸುಗಳನ್ನೂ ನ್ಯಾಯಾಧೀಶ...