ಅಮೆರಿಕದಲ್ಲಿ ಅಜ್ಞಾತವಾಸ

Team Udayavani, Sep 8, 2019, 5:45 AM IST

ಅಮೆರಿಕದಲ್ಲಿ ನಾವಿದ್ದ ಮನೆಗೆ ಅಡುಗೆ ಮಾಡಲು ಸಾಕಷ್ಟು ದೂರದ ತನ್ನ ಮನೆಯಿಂದ ಬರುತ್ತಿದ್ದ ಮಧುಬೆನ್‌ ಎಂಬ ಗುಜರಾಥಿ ಹೆಂಗಸು ಪ್ರತಿದಿನ ತಾನು ನಡೆದುಕೊಂಡೇ ಬರುವುದು ಎಂದಾಗ ನಮಗೆ ಆಶ್ಚರ್ಯವಾಗಿತ್ತು. ಎಲ್ಲರಿಗೂ ಗೊತ್ತಿದ್ದಂತೆ ಅಮೆರಿಕದಲ್ಲಿ ಕಾರುಗಳಲ್ಲೇ ಹೆಚ್ಚಿನವರ ಪಯಣ. ನ್ಯೂಯಾರ್ಕ್‌ ನಗರಕ್ಕೆ ಸಮೀಪದ ಆ ಜಾಗದಲ್ಲಿ ಖಾಸಗಿ ಬಸ್ಸುಗಳ ಓಡಾಟವೂ ಸ್ವಲ್ಪ ಇತ್ತಲ್ಲದೆ, ಟಿಕೆಟ್ ದರವೂ ಅಮೆರಿಕದ ದೃಷ್ಟಿಯಲ್ಲಿ ಕಡಿಮೆಯೇ. ಹೀಗಿರುವಾಗ ಇವಳ್ಯಾಕೆ ಅಷ್ಟು ದೂರ ನಡೆದುಕೊಡು ಬರುವ ಪ್ರಯಾಸ ಮಾಡುತ್ತಿದ್ದಾಳೆಂದು ಅರ್ಥವಾಗಿರಲಿಲ್ಲ.

ನಮ್ಮೊಂದಿಗೆ ಸ್ವಲ್ಪ ಸಲುಗೆ ಬೆಳೆದ ಮೇಲಷ್ಟೇ ಅವಳ ಅಮೆರಿಕ ವಾಸದ ನಿಜ ಪರಿಸ್ಥಿತಿಯ ಅರಿವಾದದ್ದು. ಯಾವುದೇ ರೀತಿಯ ಪರವಾನಿಗೆ ಇಲ್ಲದೆ ಅಮೆರಿಕದ ಒಳಗೆ ನುಸುಳಿ ಬಂದ ಅಥವಾ ತಾತ್ಕಾಲಿಕ ಪ್ರವಾಸೀ ಪರವಾನಿಗೆಯಲ್ಲಿ ಬಂದು ಇಲ್ಲಿಯ ಪ್ರಜೆಗಳೊಂದಿಗೆ ಲೀನವಾಗಿ ಹೋದ ಲಕ್ಷಾಂತರ ಜನರಲ್ಲಿ ಮಧುಬೆನ್‌ ಕೂಡ ಒಬ್ಬಳು. ‘ಆಂಟೀ…’ ಎಂದು ಏರು ಸ್ವರದಲ್ಲಿ ಕರೆಯುತ್ತ, ‘ಕೇಮ್‌ ಚೋ ಆಂಟೀ… ಇಂಡಿಯಾಸೆ ಕಭೀ ಆಯೆ’ ಎಂದು ಗುಜರಾತಿ ಮಿಶ್ರಿತ ಹಿಂದಿಯಲ್ಲಿ ಸಂಭಾಷಿಸುತ್ತಿದ್ದ ಮಧುಬೆನ್ನಳಿಗೆ- ಹದಿನೈದು ವರ್ಷಗಳಿಗೂ ಮಿಕ್ಕಿ ಅಮೆರಿಕದಲ್ಲಿದ್ದರೂ ಇಂಗ್ಲಿಷ್‌ ಮಾತನಾಡಲು ಬರುತ್ತಿರಲಿಲ್ಲ.

ಅಷ್ಟು ವರ್ಷಗಳಲ್ಲೂ ಯಾವುದೇ ಸರಕಾರೀ ಅಧಿಕಾರಿಗಳ ಕಣ್ಣಿಗೆ ಬೀಳದೆ, ಬಿದ್ದರೂ ತಕ್ಕ ಉಪಾಯಗಳಿಂದ ತಪ್ಪಿಸಿ ಓಡಾಡಿಕೊಂಡು ಹೊಟ್ಟೆಪಾಡು ನಡೆಸುತ್ತ ಇಲಿಯಂತೆ ಅಜ್ಞಾತವಾಸ ಮಾಡಿಕೊಂಡಿದ್ದಾಳೆಂದು ತಿಳಿದು ಹೀಗೂ ಉಂಟೇ ಎಂದೆನಿಸಿತ್ತು. ಸಾರ್ವಜನಿಕ ಬಸ್ಸಿನಲ್ಲಿ ಪಯಣಿಸಿದರೆ ಒಂದಲ್ಲ ಒಂದು ಕಾರಣಕ್ಕೆ ತನ್ನ ಗುಟ್ಟುಬಯಲಾದೀತೆಂಬ ಹೆದರಿಕೆಯಿಂದಲೇ ಅವಳು ನಡೆದುಕೊಂಡು ಬರುತ್ತಿದ್ದುದೆಂದು ಆಗ ತಿಳಿಯಿತು.

ಹೀಗೆ ಭೂಗತವಾಗಿ ಅಮೆರಿಕದಲ್ಲಿ ಜೀವನ ನಡೆಸುವವರು ಅದೆಷ್ಟೋ ವರ್ಷಗಳ ಅನುಭವದಿಂದ, ತಾವು ಏನೆಲ್ಲ ಮಾಡಬಹುದು, ಏನೇನು ಜಾಗ್ರತೆ ವಹಿಸಬೇಕು, ಸಿಕ್ಕಿಬಿದ್ದರೆ ಯಾರನ್ನು ಹಿಡಿಯಬೇಕು, ಏನು ಪರಿಹಾರ- ಹೀಗೆ ಎಲ್ಲದಕ್ಕೂ ತಮ್ಮ ಸೂತ್ರಗಳನ್ನು ರಚಿಸಿಕೊಂಡಿರುತ್ತಾರೆ. ತಮಗೆ ಯಾವ ಅನ್ಯಾಯವಾದರೂ ಪೊಲೀಸ್‌ ಖಾತೆಯ ಸಹಾಯವೊಂದನ್ನು ಕೋರಬಾರದು ಎಂಬುದು ಅಜ್ಞಾತವಾಸಿಗಳಲ್ಲಿ ಅತಿ ಹೆಡ್ಡರಿಗೂ ಗೊತ್ತು. ಸರಕಾರ ಒದಗಿಸುವ ಯಾವುದೇ ಸವಲತ್ತುಗಳಿಗೆ ಇವರು ಪಾತ್ರರಲ್ಲ. ತಪ್ಪಿ ಅದಕ್ಕೆ ಕೈ ಒಡ್ಡಿದರೆ ಅಮೆರಿಕದ ಋಣ ಮುಗಿಯಿತೆಂದೇ ಲೆಕ್ಕ. ಅಂದರೆ, ಇಂಥ ಕಡೆಗಳಲ್ಲಿ ಪ್ರಜೆಗಳ ಸೋಶಿಯಲ್ ಸೆಕ್ಯೂರಿಟಿ ಸಂಖ್ಯೆಯನ್ನು (ನಮ್ಮ ಆಧಾರ್‌ ಕಾರ್ಡಿನಂತೆ) ಕೇಳುವುದು ಸಾಮಾನ್ಯ; ಅದಿಲ್ಲವೆಂದು ತಿಳಿದಾಗ ಗಡಿಪಾರು ಖಂಡಿತ.

ಮಗಳ ಮದುವೆಯೂ ಆಯಿತು !

ಭಾರತೀಯ ಕಿರಾಣಿ ಅಂಗಡಿಯೊಂದರಲ್ಲಿ ಸಾಮಾನು ಎತ್ತಿಡುವ ಕೆಲಸಕ್ಕೆ ಹೋಗುತ್ತಿದ್ದ ಅವಳ ಗಂಡನಿಗೋ ಸದಾ ಅಸೌಖ್ಯ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದರೆ ‘ಜ್ಞಾತ’ವಾಗಿ ಬಿಡುವ ಅಪಾಯದಿಂದಾಗಿ ಶುಶ್ರೂಷೆಯೇ ಆತಂಕವನ್ನು ಸೃಷ್ಟಿಸುವ ವಿಚಿತ್ರ ಸನ್ನಿವೇಶದಲ್ಲಿದ್ದ. ಇಬ್ಬರು ಮಕ್ಕಳು ಗುಜರಾತಿನ ಅಹ್ಮದಾಬಾದಿನ ಹತ್ತಿರದ ಊರಿನಲ್ಲಿ ಕೂಡುಕುಟುಂಬದೊಂದಿಗೆ ಬೆಳೆಯುತ್ತಿದ್ದರು. ಇಲ್ಲಿ ಅಮೆರಿಕದಲ್ಲಿ ಮೈಮುರಿದು ಸಂಪಾದಿಸಿದ ಹಣದ ಸಿಂಹಪಾಲು ಭಾರತಕ್ಕೆ ಹೋಗುತ್ತಿತ್ತು. ತಾನು ಕಳಿಸುವ ಹಣದಿಂದಾಗಿ ಮಕ್ಕಳ ಬದುಕು ಸುಖವಾಗಿರುವುದನ್ನು ಕಲ್ಪಿಸಿಕೊಂಡು ಅವಳಿಲ್ಲಿ ಖುಶಿಪಡುತ್ತಿರುತ್ತಾಳೆ. ವಿಡಿಯೋ ಕಾಲ್ ಬಂದ ಹೊಸತರಲ್ಲಿ ಒಮ್ಮೆ ಮಕ್ಕಳೊಡನೆ ಮಾತನಾಡುವ ಹಂಬಲ ವ್ಯಕ್ತಪಡಿಸಿದ್ದಳು. ಮೊದಲ ಸಲ ಫೋನ್‌ ಮಾಡಿದಾಗ 18-20 ವರ್ಷದ, ಬೆಳೆದು ನಿಂತ ಮಕ್ಕಳನ್ನು ನೋಡಿ, ಅವಳ ಬಾಯಿ ಕಟ್ಟಿ , ಮುಜುಗರದಿಂದ ಹೆಚ್ಚು ಮಾತನಾಡಲಾಗಿರಲಿಲ್ಲ.

ಈಗ ನಾಲ್ಕು ವರ್ಷಗಳ ಕೆಳಗೆ ಮಗಳ ಮದುವೆಯಾದುದನ್ನು ಹೇಳುವಾಗ ಹರ್ಷದಿಂದ ಅವಳ ಮುಖ ಅರಳಿತ್ತು. ಮದುವೆಗೆ ಹೋಗಲಿಕ್ಕಾಗದ ಬೇಸರವಿದ್ದರೂ, ಅದಕ್ಕೋಸ್ಕರ ಎರಡು ವರ್ಷಗಳಿಂದ ಹೇಗೆ ಹಣ ಕೂಡಿಸಿದೆ, ಅದರಿಂದಾಗಿ ಮದುವೆ ಎಷ್ಟು ಭರ್ಜರಿಯಾಗಿ ಜರಗಿತು ಎಂದು ಹೆಮ್ಮೆಯಿಂದ ವಿವರಿಸಿದ್ದಳು.

ಕಳೆದ ಸಲ ಬಂದಾಗ ಮಧುಬೆನ್ನಳ ಒತ್ತಾಯಕ್ಕೆ ಒಂದು ಮಧ್ಯಾಹ್ನ ಅವಳ ಮನೆಗೆ ಭೇಟಿ ಕೊಟ್ಟೆವು. ಕೆಳಗೆ ಅಂಗಡಿಗಳ ಸಾಲು, ಅಂಗಡಿಗಳ ನಡುವೆ ಅಗಲಕಿರಿದಾದ ಮೆಟ್ಟಿಲುಗಳನ್ನು ಹತ್ತಿಹೋದರೆ ಎರಡು ಕೋಣೆಗಳ ಮನೆ. ಹೊರಕೋಣೆಯ ಒಂದು ಬದಿಯಲ್ಲಿ ಅಡುಗೆಯ ಕಟ್ಟೆ. ಮನೆಯ ಒಪ್ಪ-ಓರಣ ನೋಡಿ ಬೆರಗಾದೆವು. ಎಂಟು ಚದರಡಿಯ ಒಳಕೋಣೆಯೊಳಗೆ ಇಣುಕಿದಾಗ ಅಲ್ಲಿ ಒಂದಷ್ಟು ಜನ ಸಾಲಾಗಿ, ನೆಲದ ಮೇಲೆ ಹಾಸಿಗೆ ಹಾಕಿ ಮಲಗಿದ್ದು ಕಣ್ಣಿಗೆ ಬಿತ್ತು.

‘ಹಗಲು ಹೊತ್ತಿನ ಬಾಡಿಗೆದಾರರು, ಎಂದು ನಿದ್ದೆಯಲ್ಲಿದ್ದ ವ್ಯಕ್ತಿಗಳ ಕಿರುಪರಿಚಯ ಮಾಡಿಕೊಟ್ಟಳು, ‘ರಾತ್ರಿಯಾಗುತ್ತಲೇ ಎದ್ದು ಕೆಲಸಕ್ಕೆ ಹೋಗುತ್ತಾರೆ’ ಎಂದಳು.

‘ಅಂದರೆ, ರಾತ್ರಿ ಬಾಡಿಗೆದಾರರು ಬೇರೆಯೇ ಇದ್ದಾರೆಯೇ?’ ಎಂದು ಕೇಳಿದಾಗ, ‘ಹೌದು ಅವರು ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವವರು,’ ಎಂದು ಸ್ಪಷ್ಟೀಕರಿಸಿದಳು. ತಾನೇ ಬಾಡಿಗೆಯಲ್ಲಿದ್ದೂ ಆ ಬಾಡಿಗೆಯ ಖರ್ಚಿನಲ್ಲೊಂದು ಆದಾಯ ಹುಟ್ಟಿಸಿಕೊಂಡಿದ್ದಳು.

ಮಗಳ ಮದುವೆಯ ಆಲ್ಬಮ್‌

ಮಗಳ ಮದುವೆಯ ಅಮೂಲ್ಯವಾದ ಆಲ್ಬಮ್‌ ಹೊರಬಂತು. ಮದುಮಕ್ಕಳ ವಿವಿಧ ಭಂಗಿಗಳನ್ನು ನೋಡಿದ್ದಾಯಿತು, ಒಬ್ಬೊಬ್ಬರದಾಗಿ ಮನೆಯವರೆಲ್ಲರ ಪರಿಚಯವೂ ಆಯ್ತು. ಮತ್ತೆ ನಮಗೊಂದು ಆಶ್ಚರ್ಯ ಕಾದಿತ್ತು. ಮದುಮಕ್ಕಳೊಟ್ಟಿಗೆ ನಿಂತ ಮಧುಬೆನ್‌ ದಂಪತಿಗಳು! ನವದಂಪತಿಗಳ ಹಿಂದೆ ನಿಂತು ತಮ್ಮ ಕೈಗಳನ್ನು ಅವರ ಮೇಲೆ ಚಾಚಿ ಹರಸುವ ಆತ್ಮೀಯ ಪೋಟೋ. ಮದುವೆಗೆ ಹೋಗಲಿಲ್ಲವೆಂದು ಪರಿತಪ್ಪಿಸುತ್ತಿದ್ದುದು ನೆನಪಿತ್ತು. ಹೋದರೆ ಇಮಿಗ್ರೇಶನ್‌ ಅಧಿಕಾರಿಗಳ ಕೈಗೆ ತಮ್ಮನ್ನು ತಾವೇ ಒಪ್ಪಿಸಿಕೊಂಡಂತಾಗಿ ಕಾರಾಗೃಹದ ದಾರಿ ಹಿಡಿಯಬೇಕಾಗುತ್ತಿತ್ತೆಂಬುದೂ ತಿಳಿದಿತ್ತು.

‘ಅವರೇ ಇಲ್ಲಿಗೆ ಬಂದರೇ ಅಥವಾ ನೀವೇ….?’ ಎಂದು ಪ್ರಶ್ನಿಸಿದಾಗ, ‘ಅವರೂ ಬಂದಿಲ್ಲ, ನಾವೂ ಹೋಗಿಲ್ಲ, ಇದು ಫೋಟೋಗ್ರಾಫ‌ರನ ಕೈಚಳಕವಷ್ಟೇ’ ಎಂದು ಮಧುಬೆನ್‌ ನೆಗಾಡಿದಾಗ, ಗೊತ್ತಿದ್ದೂ ಎಂಥ ಬೆಪ್ಪು ಪ್ರಶ್ನೆ ಕೇಳಿದೆವಲ್ಲ ಎಂದು ನಾವೇ ಪರಿತಪಿಸುವ ಹಾಗಾಯ್ತು.

– ಮಿತ್ರಾ ವೆಂಕಟ್ರಾಜ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಳೆ ನಿಂತ ಮೇಲೂ ಮರದಿಂದ ತೊಟ್ಟಿಕ್ಕುವ ಹನಿಗಳ ಹಾಗೆ ಬಿಸಿಲನಾಡಿನ ಸಮ್ಮೇಳನ ಮುಗಿದ ಮೇಲೂ ಸವಿಕ್ಷಣಗಳು ಮತ್ತೆ ಮತ್ತೆ ಮನಸ್ಸಿಗೆ ಬರುತ್ತಿವೆ. ಫೆಬ್ರವರಿ 5 ರಿಂದ...

  • ಸಿಂಗಾಪುರದಲ್ಲಿ ಪ್ರತಿವರ್ಷ ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಬರುವ ಚೀನೀಯರ ಹೊಸ ವರ್ಷದ ಯಾವ ಸಂಭ್ರಮಾಚರಣೆಗಳೂ ಹೊರಜಗತ್ತಿಗೆ ಕಾಣದೆ ಜನರೆಲ್ಲ...

  • ಅದೊಂದು ಚಿಕ್ಕ ಊರು. ಹೆಸರು ಹೆಸರೂರು. ಅದರ ಬಗ್ಗೆ ಕೇಳಿದವರಿಲ್ಲ, ಅದನ್ನು ನೋಡಿದವರಿಲ್ಲ. ಅಂಥ ಊರೊಂದು ಇದೆ ಎಂದೇ ಯಾರಿಗೂ ತಿಳಿದಿರಲಿಲ್ಲ. ಒಮ್ಮೆ ಹೀಗಾಯಿತು....

  • ಇತ್ತೀಚೆ ನೋಬೆಲ್‌ ಪ್ರಶಸ್ತಿ ವಿಜೇತ ಅಭಿಜಿತ್‌ ಬ್ಯಾನರ್ಜಿ ಮಾತುಕತೆಯೊಂದರಲ್ಲಿ ತಾನು ಭಾರತದಲ್ಲೇ ಇದ್ದಿದ್ದರೆ ಈ ಪ್ರಶಸ್ತಿ ಸಿಗುತ್ತಿರಲಿಲ್ಲವೆಂಬ ಮಾತು...

  • ಮುಂಬಯಿಯ ಕಾಲಾಘೋಡ ಉತ್ಸವವು ಈಗಷ್ಟೇ ಮುಗಿಯಿತು. ಪ್ರತಿ ಫೆಬ್ರವರಿ ಎರಡನೆಯ ವಾರದಲ್ಲಿ ಜರಗುವ ಈ ಕಲಾ ಉತ್ಸವವು ಕಳೆದ ಇಪ್ಪತ್ತು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ....

ಹೊಸ ಸೇರ್ಪಡೆ