ಸುಪ್ತಸ್ವರ ವ್ಯಕ್ತಭಾವ 


Team Udayavani, Feb 25, 2018, 8:15 AM IST

s-11.jpg

ಸಂಗೀತ ಹಾಡುವುದಕ್ಕೆ ಪ್ರತಿಭೆ ಬೇಕು; 
ಸಂಗೀತ ಕೇಳುವುದಕ್ಕೆ ಸಂಸ್ಕಾರ ಸಾಕು !

ಯಾವುದೋ ದೇಶದಲ್ಲಿ ಒಬ್ಬ ದೊರೆ ಇದ್ದನಂತೆ. ಸಂಗೀತ ಎಂದರೆ ತೊಲ ಎಷ್ಟು ಎಂದು ಕೇಳುವ ಗುಂಪಿನವನು. ಆದರೆ ರಸಿಕ, ಕಲಾಭಿಮಾನಿ ಎಂದೆನ್ನಿಸಿಕೊಳ್ಳಬೇಕೆಂಬ ಹಂಬಲ. ಬಂದ ಸಂಗೀತ ವಿದ್ವಾಂಸರುಗಳನ್ನೆಲ್ಲ ಹಾಡಿಸುತ್ತಿದ್ದ, ಗೌರವಿಸುತ್ತಿದ್ದ. ಕಛೇರಿಯ ಯಾವ ಭಾಗದಲ್ಲಿ ತಲೆದೂಗಬೇಕೆಂದು ಸೂಚಿಸುವ ಸಲುವಾಗಿಯೇ ಒಬ್ಬ ರಸಿಕನನ್ನು ನೇಮಿಸಿಕೊಂಡಿದ್ದನಂತೆ. ದೊರೆಯ ಪೇಟಕ್ಕೆ ಒಂದು ದಾರ ಕಟ್ಟಿ ಆತ ಹಿಂದೆ ಕುಳಿತಿರುತ್ತಿದ್ದ; ಒಂದು ಉತ್ತಮ ಸಂಗತಿಯೋ, ಚಮತ್ಕಾರದ ತಾಳದ ಕೆಲಸವೋ ಬಂದಾಗ ದಾರ ಎಳೆಯುತ್ತಿದ್ದ. ದೊರೆ ತಲೆದೂಗುತ್ತಿದ್ದ. ಇದು ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರು ತಮ್ಮ ನೆನಪುಗಳು ಎಂಬ ಕೃತಿಯಲ್ಲಿ ನಿರೂಪಿಸಿರುವ ಒಂದು ಕತೆ. 

ಸಂಗೀತ ಕಛೇರಿಯೊಂದು ಕಳೆಕಟ್ಟುವುದು ಬಿಡುವುದು ಸಂಗೀತಗಾರನನ್ನು ಹೇಗೆ ಅವಲಂಬಿಸಿರುತ್ತದೆಯೋ ಹಾಗೇ ಕೇಳುಗನನ್ನು ಕೂಡ ಅವಲಂಬಿಸಿರುತ್ತದೆ ಎಂದು ನನ್ನ ಭಾವನೆ. ಸಂಗೀತವೆನ್ನುವುದು ತೀರ ಸ್ವತಂತ್ರವಾದ ಕಲೆ. ಅದು ಅಮೂರ್ತವಾದದ್ದು, ಇತರ ಎಲ್ಲ ಕಲೆಗಳಿಂದ ಸಂಪೂರ್ಣವಾಗಿ ಮುಕ್ತವಾದದ್ದು. ಸಂಗೀತದಲ್ಲಿ (ಕೀರ್ತನೆ, ಬಂದಿಶ್‌, ದೇವರನಾಮ, ಠುಮರಿ ಮೊದಲಾದವನ್ನು ಹೊರತುಪಡಿಸಿದರೆ) ಕತೆಯಿಲ್ಲ; ಚಿತ್ರಗಳ ಪ್ರತಿನಿಧೀಕರಣವಿಲ್ಲ; ಛಂದಸ್ಸಿನ ನಿಯತಗತಿಯಿಲ್ಲ; ಕಟ್ಟುನಿಟ್ಟಾಗಿ ಪಾಲಿಸಬೇಕಾದ ಎಲ್ಲೆಗಳೂ ಇಲ್ಲ. ಇದರ ಅರ್ಥ ಸಂಗೀತಕ್ಕೆ ಅದರದೇ ಅದ ಶಿಸ್ತುಗಳಿಲ್ಲವೆಯೆಂದಲ್ಲ. ಉದಾಹರಣೆಗೆ ರಾಗವಿಕಾಸ; ಅದು ಚೆಲ್ಲುವರಿಯದಂತೆ ನೋಡಿಕೊಳ್ಳುವ ತಾಳ; ಕೀರ್ತನೆ, ಬಂದಿಶ್‌, ಜಾವಳಿ, ಠುಮರಿ ಮೊದಲಾದ ಸಂಗೀತ ರೂಪಗಳು. ಈ ಶಿಸ್ತುಗಳಿದ್ದರೂ ಸಂಗೀತವು ತನ್ನ ಸ್ವಭಾವದಿಂದಾಗಿಯೇ ಕಲ್ಪನಾಶೀಲತೆಯನ್ನು ಬಯಸುವ ಕಲೆ. ಆದ್ದರಿಂದ ಶ್ರೋತೃಗಳಿಗೆ  ಅದನ್ನು ಸರಿಯಾಗಿ ಆಲಿಸುವ ಪ್ರತಿಭೆ ಅಗತ್ಯ. ಮತ್ತೆ ಶ್ರೋತೃಗಳು ತಮ್ಮ ಆ ಪ್ರತಿಭೆಯನ್ನು ಉಪಯೋಗಿಸಬೇಕಾದ್ದು ಬೇರೆ ಯಾರಿಗೋ ಅಲ್ಲ; ತಮಗಾಗಿಯೇ.

ಸಂಗೀತಾಸ್ವಾದನೆಗೆ ಎರಡು ಬಗೆಯ ಪ್ರತಿಭೆ ಅಗತ್ಯ. ಒಂದು, ಶ್ರೋತೃವಾದವನು ಸಂಗೀತಾನುಭವಕ್ಕೆ ತನ್ನನ್ನು ತಾನೇ ತೆರೆದುಕೊಳ್ಳುವುದು; ಎರಡನೆಯದು, ಆ ಅನುಭವವನ್ನು ವಿಮಶಾìತ್ಮಕವಾಗಿ ಶೋಧಿಸಿಕೊಳ್ಳುವುದು. ಈ ಎರಡಕ್ಕೂ ಮುಖ್ಯವಾಗಿ ಬೇಕಾದದ್ದು ಶ್ರವಣ ಶಕ್ತಿ. ಅದು ಕ್ರಮೇಣ ರೂಢಿಸಿಕೊಳ್ಳಬೇಕಾದ ಶಕ್ತಿ. ಸಂಗೀತ ಅಂಥ ಶಕ್ತಿಯನ್ನು ಬಯಸುವುದರಿಂದಲೇ ಅದು ಕೇಳುಗನನ್ನು ಕೇವಲ ರಂಜಿಸುವುದಿಲ್ಲ, ಅವನಿಗೆ ಬೋಧಿಸುತ್ತಲೂ ಇರುತ್ತದೆ. ಶಾಸ್ತ್ರದ ಪ್ರಕಾರ ಮೂರು ಬಗೆಯ ಕೇಳುಗರುಂಟು. 

1ಸಂಗೀತವನ್ನು ಬೌದ್ಧಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ, ಹೀಗೆ ಎಲ್ಲ ಹಂತಗಳಲ್ಲೂ ಅನುಭವಿಸಬಲ್ಲವನು.

2ತನ್ನ ಭಾವನೆಗಳಿಂದಷ್ಟೇ ಬದುಕುವವನು, ಸಂಗೀತವನ್ನು ಒಂದು ಮನರಂಜನೆಯಂತೆ ಸ್ವೀಕರಿಸುವವನು.

3ಗಾಯಕ ಹೇಗೆ ತನ್ನ ಕಚೇರಿ ಪ್ರಾರಂಭಿಸಿದ, ಯಾವ ರಾಗಗಳನ್ನು ಹಾಡಿದ, ಅವನು ಹಾಡಿದ್ದನ್ನು ಶ್ರೋತೃಗಳು ಹೇಗೆ ಸ್ವೀಕರಿಸಿದರು ಮೊದಲಾದ ವಿಚಾರಗಳಲ್ಲೇ ಮುಳುಗಿ ನಿಜವಾದ ಸಂಗೀತಾನುಭವಕ್ಕೆ ಎರವಾಗುವವನು. 

ಈ ಮೂವರಲ್ಲಿ ಒಬ್ಬರೋ ಇಬ್ಬರೂ ನಮ್ಮೊಳಗೂ ಇರುವುದುಂಟು. ಆದರೆ, ಸಂಗೀತಗಾರರು, ವಾಗ್ಗೇಯಕಾರರು ಇಷ್ಟಪಡುವುದು ಮೊದಲ ಬಗೆಯ ಶ್ರೋತೃವನ್ನೇ.  ಸಂಗೀತಜ್ಞ ಎಸ್‌. ಕೃಷ್ಣಮೂರ್ತಿಯವರು ಬರೆದಿರುವಂತೆ ಶಾಸ್ತ್ರೀಯ ಸಂಗೀತವನ್ನು ಕೇಳಲು ಹೋಗುವಾಗ ಪೂರ್ವಭಾವಿಯಾಗಿಯೇ  ನಮ್ಮ ಮನಃಸ್ಥಿತಿಯನ್ನು ಅದಕ್ಕೆ ಸಿದ್ಧಪಡಿಸಿಕೊಂಡು ಹೋಗಬೇಕು. ನಾವೇಕೆ ಸಂಗೀತ ಕಛೇರಿಗೆ ಹೋಗುತ್ತಿದ್ದೇವೆ? ಅಲ್ಲಿ ನಮಗೆ ಸಿಗುವ ಆನಂದ ಎಂಥದು? ಈ ರಸಾನಂದವನ್ನು ಹೇಗೆ ಸ್ವ-ಪ್ರಯತ್ನದಿಂದ ಬೆಳೆಸಿಕೊಂಡು ಕಛೇರಿಯಲ್ಲಿ ಅರ್ಥಪೂರ್ಣವಾಗಿ ಪಾಲುಗೊಳ್ಳಬಹುದು? ಮುಂತಾದ ವಿಷಯಗಳನ್ನು ರಸಿಕ ಯೋಚಿಸಬೇಕು. ಅಭಿಜಾತ ಸಂಗೀತ ಕೇಳುವವರಿಗೆ ಮೂರು ಹಂತಗಳಲ್ಲಿ ಆನಂದ ನೀಡಬಲ್ಲದು.  ಮೊದಲನೆಯದು ಲಯ, ಗತಿ; ಎರಡನೆಯದು ನಾದ; ಮೂರನೆಯದು ಇವೆರಡನ್ನೂ ಮೀರಿದ್ದು, ಭಾವೋತ್ಕರ್ಷ. ಮೊದಲು ಕಿವಿಯ ಮಟ್ಟ; ಆ ಬಳಿಕ ಬುದ್ಧಿಯ ಮಟ್ಟ; ಇವೆರಡನ್ನೂ ಮೀರಿದ್ದು ಹೃದಯದ ಮಟ್ಟ.

ಸಂಗೀತದ ಸುಖವೇ ಬೇರೆ
ಸಂಗೀತವು ಸಾಹಿತ್ಯ, ಸಿನೆಮಾ, ನಾಟಕಗಳಂತಲ್ಲ. ಆ ಕಲೆಗಳಲ್ಲಿ ಭಾವೋದ್ವೇಗವುಳ್ಳ ಕೆಲವು ಸನ್ನಿವೇಶಗಳಿರುತ್ತವೆ. ಅಂಥ ಸನ್ನಿವೇಶಗಳನ್ನು ಓದುತ್ತಿರುವಾಗ ಅಥವಾ  ನೋಡುತ್ತಿರುವಾಗ (ನಾವು ತುಸು ಭಾವುಕರಾಗಿದ್ದರೆ) ಒಮ್ಮೊಮ್ಮೆ ನಮ್ಮ ಕಣ್ಣು ತುಂಬಿಬರುವುದುಂಟು. ಆದರೆ ಸಂಗೀತ ಕೇಳುತ್ತಿರುವಾಗ, ನಾವು ಕೇಳುತ್ತಿರುವುದು ಶೋಕರಸವನ್ನು ಹೊಮ್ಮಿಸುತ್ತಿರುವ ಸಂಗೀತವಾಗಿದ್ದರೂ ಕೂಡ, ನಮ್ಮ ಕಣ್ಣು ಹನಿಗೂಡುವುದಿಲ್ಲ. ಯಾಕೆ? ಯಾಕೆಂದರೆ, ಸಂಗೀತಕ್ಕೆ ನಮ್ಮನ್ನು ಆವರಿಸಿಕೊಳ್ಳುವ ಗುಣವಿರುವಂತೆಯೇ ನಮ್ಮಿಂದ ತನ್ನ ದೂರವನ್ನು ಕಾಪಾಡಿಕೊಳ್ಳುವ ಗುಣವೂ ಇದೆ. ಅದು ನಮ್ಮೊಳಗೆ, ನಮ್ಮದೇ ಒಂದು ಭಾಗವಾಗಿರುವಂತೆಯೇ ನಮ್ಮಿಂದ ಹೊರಗೆ, ಸಾಕಷ್ಟು ದೂರದಲ್ಲಿಯೂ ಇರಬಲ್ಲದು. ಆದ್ದರಿಂದಲೇ ಶ್ರೋತೃಗಳು ತಮಗಾದ ಸಂಗೀತಾನುಭವವನ್ನು ಬೇರೆ ಯಾರ ಜೊತೆಗಾದರೂ ಹಂಚಿಕೊಳ್ಳುವುದು ಸುಲಭವಲ್ಲ.  ಕವಿ ಪು.ತಿ.ನ. ಅವರ ಕವನವೊಂದರ ಈ ಸಾಲುಗಳನ್ನು ನೋಡಿ: 

ಗಾನವಾವುದೊ ಗೂಢಭಾವವನು ಬಿಚ್ಚುತಿಹುದು
ಆತ್ಮವದನರಿತಿಹುದು; ನುಡಿಗೊಡಲು ನೋಯುತಿಹುದು.
ನಾನು ಮೊದಮೊದಲು ಬೆಂಗಳೂರಿನಲ್ಲಿ, ಆಮೇಲೆ ಕೆಲವು ವರ್ಷ ಮದರಾಸಿನಲ್ಲಿ ಅನೇಕ ಸಂಗೀತ ಕಛೇರಿಗಳನ್ನು ಕೇಳಿದವನು. ಬೆಂಗಳೂರಿಗಿಂತ ಮದರಾಸಿನಲ್ಲಿ ಕಂಡ ಸಂಗೀತ ರಸಿಕರು ಕೆಲವರು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿ¨ªಾರೆ. ಅದಕ್ಕೆ ಅವರ ಹಾವಭಾವಗಳು ಹೇಗೋ ಹಾಗೆ ಅವರ ಹರ್ಷೋದ್ಗಾರಗಳೂ ಕಾರಣವಾಗಿರಲಿಕ್ಕೆ ಸಾಕು. 

ಒಮ್ಮೆ ಮದರಾಸಿನ ಪಾರ್ಥಸಾರಥಿ ಸಂಗೀತ ಸಭಾದಲ್ಲಿ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್‌ ಅವರ ಕಛೇರಿಯಿತ್ತು. ಅಂದು ಅವರು ಆರಿಸಿಕೊಂಡ ಮುಖ್ಯ ರಾಗ ಕಲ್ಯಾಣಿ. ಆ ರಾಗವನ್ನು ಮಧ್ಯಮ ಕಾಲದಲ್ಲಿ ಸುಮಾರು ಹದಿನೈದು ನಿಮಿಷ ವಿಸ್ತರಿಸಿದ ಅಯ್ಯರರು ತಾರಸ್ಥಾಯಿಯನ್ನು ತಲಪಿದ್ದೇ ತಡ, ನನ್ನ ಪಕ್ಕದಲ್ಲೇ ಇದ್ದ, ಸಾಕಷ್ಟು ವಯಸ್ಸಾದ ರಸಿಕರೊಬ್ಬರು ತ್‌cತ್‌c ತ್‌cತ್‌c  ತ್‌cತ್‌cತ್‌c  ತ್‌cತ್‌cತ್‌cತ್‌cತ್‌cತ್‌c ಎನ್ನುತ್ತ, ಕಣ್ಣಗಲಿಸಿಕೊಂಡು ಬೆಕ್ಕಸ ಬೆರಗಾಗಿ ಕೂತುಬಿಟ್ಟರು. ಅವರ ಆ ತ್‌cತ್‌cತ್‌c ಶೆಮ್ಮಂಗುಡಿ ಎಷ್ಟು ಎತ್ತರವನ್ನು ಏರಿಬಿಟ್ಟರೆಂಬ ಆಶ್ಚರ್ಯವನ್ನೋ ಅಲ್ಲಿಂದ ಬಿದ್ದುಬಿಟ್ಟಾರೆಂಬ ಭಯವನ್ನೋ ಸೂಚಿಸಿದ್ದಿರಬಹುದು. ಆದರೆ, ನನಗೆ ಮಾತ್ರ ಅದು ಕೇಳಿಸಿದ್ದು ರಾತ್ರಿಯ ನೀರವದಲ್ಲಿ ಹಲ್ಲಿಯೊಂದು ಲೊಚಗುಟ್ಟಿದ ಹಾಗೆ!

ಮಧುರೈ ಸೋಮಸುಂದರಂ ತೋಡಿ ರಾಗವನ್ನು ಹಾಡಿದ ಒಂದು ಸಂದರ್ಭ. ಅವರದು ಮಂದ್ರದಲ್ಲಿ ಏನೇನೂ ಕೇಳಿಸದ ದನಿ. ಆದರೆ, ಸಾಕಷ್ಟು ಎತ್ತರದ ಸ್ಥಾಯಿಯನ್ನು ಮುಟ್ಟಬಲ್ಲ ಶಾರೀರ. ಅಂದು ಅವರ ಉತ್ಸಾಹಕ್ಕೆ ತಕ್ಕಂತೆ ಮೇಲೆ ಮೇಲೆ ಏರುತ್ತಿದ್ದ ಅವರ ದನಿ ಒಂದು ಹಂತದಲ್ಲಿ, ತಾರಸ್ಥಾಯಿಯಲ್ಲಿರುವಾಗಲೇ, ಕೇಳಿಸದಂತಾಯಿತು. ಅಂದರೆ ಅವರು ತಮ್ಮ ದನಿಯನ್ನು ಎಲ್ಲಿಯವರೆಗೆ ಏರಿಸಿದ್ದರೋ ಅಲ್ಲಿಂದಾಚೆಗೆ ಏರಿಸಲಾಗಲಿಲ್ಲ. ಆಗ ನನ್ನ ಹಿಂದೆ ಇದ್ದವರೊಬ್ಬರು, ಕವಳ ತುಂಬಿಕೊಂಡ ತಮ್ಮ ಬಾಯಿಯನ್ನು ತೆರೆಯಲಾಗದೆ, ಹೂnಮ್‌ ಹೂnಮ್‌ ಹೂಂಕರಿಸಿ, ಛಾವಣಿ ತೋರಿಸುವಂತೆ ತಮ್ಮ  ಬಲಗೈಯನ್ನು ಮೇಲೆತ್ತಿ ಆಡಿಸುತ್ತ, ಸೋಮಸುಂದರಂ ಅವರ ಮೇಲೇರಲಾಗದ ದನಿಗೆ ಕುಮ್ಮಕ್ಕು ಕೊಟ್ಟದ್ದುಂಟು.   

ಹೀಗೆಯೇ ಡಿ.ಕೆ. ಪಟ್ಟಮ್ಮಾಳ್‌ ಅವರು ಆನಂದಭೈರವಿ ರಾಗಾಲಾಪನೆ ಮಾಡುತ್ತಿರುವಷ್ಟು ಹೊತ್ತೂ ಶ್ರೋತೃವೊಬ್ಬರು ವೀಳ್ಯದೆಲೆಗೆ ಸುಣ್ಣ ಹಚ್ಚುತ್ತ ತಲೆದೂಗುತ್ತಿದ್ದದ್ದನ್ನು, ಎಂ.ಡಿ. ರಾಮನಾಥನ್‌ ಅವರ ರೀತಿಗೌಳ ರಾಗಕ್ಕೆ ತಕ್ಕಂತೆ ಹೆಗಲ ಮೇಲೆ ಅಂಗವಸ್ತ್ರವನ್ನಷ್ಟೇ ಹಾಕಿಕೊಂಡು ಬಂದಿದ್ದ ಒಬ್ಬರು ಜನಿವಾರದಿಂದ ತಮ್ಮ ಬೆನ್ನು ಉಜ್ಜಿಕೊಳ್ಳುತ್ತಿದ್ದದ್ದನ್ನು, ಎಂ.ಎಸ್‌. ಸುಬ್ಬುಲಕ್ಷ್ಮೀಯವರ ಗಾನಸರೋವರದಲ್ಲಿ ಮೀಯುತ್ತಿದ್ದ ರಸಿಕರೊಬ್ಬರು “ಕಡವಳೈ’ ಎನ್ನುತ್ತ ಕೆನ್ನೆ ಕೆನ್ನೆ ಬಡಿದುಕೊಳ್ಳುತ್ತಿದ್ದದ್ದನ್ನು ಮರತೇನೆಂದರೆ ಮರೆಯಲಿ ಹೆಂಗ?  ಒಮ್ಮೆ ಕುನ್ನಕ್ಕುಡಿ ವೈದ್ಯನಾಥನ್ನರು ತಮ್ಮ ವಯೊಲಿನ್ನಿನಲ್ಲಿ ನಿರೂಪಿಸಿದ ತೀವ್ರಗತಿಯ ಸ್ವರಸಮೂಹಗಳಿಗೆ ಕೇಳುಗರೊಬ್ಬರು ಅದೆಷ್ಟು ಬಿರುಸಾಗಿ ತಲೆದೂಗಿದರೆಂದರೆ ಆ ರಾಗ ಮುಗಿಯುವ ಹೊತ್ತಿಗೆ ಅವರು ನೀಟಾಗಿ ಬಾಚಿಕೊಂಡಿದ್ದ ತಲೆಗೂದಲು ಸಂಪೂರ್ಣವಾಗಿ ಕೆದರಿಹೋಗಿತ್ತು!

ಬೆಂಗಳೂರು ಫೋರ್ಟ್‌ ಹೈಸ್ಕೂಲಿನ ಆವರಣದಲ್ಲಿ ಪ್ರತಿವರ್ಷವೂ ಡಿಸೆಂಬರ್‌ ತಿಂಗಳಲ್ಲಿ ರಾಮನವಮಿ ಸಂಗೀತ ಕಛೇರಿಗಳು ನಡೆಯುತ್ತವೆಯಷ್ಟೆ. ಒಂದು ಸಂಜೆ ಟಿ. ಆರ್‌. ಮಹಾಲಿಂಗಮ್‌ (ಮಾಲಿ) ಅವರ ವೇಣುವಾದನ. ಅಂದು ಅವರು ಖರಹರಪ್ರಿಯ ರಾಗ‌ವನ್ನು ನುಡಿಸುತ್ತಿ¨ªಾಗ ನನ್ನ ಹಿಂದೆ ಕುಳಿತಿದ್ದ ತಮಿಳರೊಬ್ಬರು     ತ್‌cತ್‌c ತ್‌cತ್‌c ತ್‌cತ್‌cತ್‌c ಎನ್ನುತ್ತ ತಲೆಯಾಡಿಸುತ್ತಿದ್ದರು. ರಾಗಾಲಾಪನೆ ಇನ್ನೇನು ಉತ್ತುಂಗ ಸ್ಥಿತಿ ತಲುಪಬೇಕು, ಆಗ ಹೊರಗಡೆ ಬೀದಿಯಲ್ಲಿ, ಬಹುಶಃ ಯಾವುದೋ ಮದುವೆಯ ಮೆರವಣಿಗೆಯಿರಬೇಕು, ನಾಗಸ್ವರವೊಂದು ಹಿಂದೋಳ ರಾಗವನ್ನು ಹೊಮ್ಮಿಸತೊಡಗಿತು. ಮಾಲಿಯವರು ಒಮ್ಮೆ ಮಗುವಿನಂತೆ ನಕ್ಕವರೇ, ತಾವು ನುಡಿಸುತ್ತಿದ್ದ ಖರಹರಪ್ರಿಯವನ್ನು ಅಲ್ಲಿಯೇ ಬಿಟ್ಟು, ನಾಗಸ್ವರದ ಆ ಹಿಂದೋಳಕ್ಕೆ ಸಾಥ್‌ ನೀಡತೊಡಗಿದಾಗ ಇಡೀ ಸಭಾಂಗಣ ಹರ್ಷೋದ್ಗಾರದಿಂದ ತುಂಬಿಹೋಯಿತು. ವಿಪರ್ಯಾಸವೆಂದರೆ, ಆ ರಸಿಕ ಮಹಾಶಯರಿಗೆ ಏನಾಯಿತೆಂದು ಗೊತ್ತಾಗದೇ ಹೋದದ್ದು! ಇನ್ನೊಂದು ರಾಮನವಮಿ ಸಂಗೀತೋತ್ಸವದಲ್ಲಿ ಉಸ್ತಾದ್‌ ಬಿಸ್ಮಿಲ್ಲಾ ಖಾನರ ಶಹನಾಯಿ ಪೀಲು ರಾಗವನ್ನು ನುಡಿಸುತ್ತಿರುವಾಗ ಒಬ್ಬ ಶ್ರೋತೃ ತಲೆದೂಗುತ್ತ, ತೂಕಡಿಸುತ್ತ, ಕಡೆಗೆ ನಿದ್ದೆಹೋಗಿಬಿಟ್ಟ. ನಿದ್ದೆಗೆ ಮೊದಲು ಎಷ್ಟೆಲ್ಲ ಉದ್ಗಾರಗಳನ್ನು ಹೊರಡಿಸಿ, ಏನೆಲ್ಲ ಹಾವಭಾವಗಳನ್ನು ಅಭಿನಯಿಸಿ ದಣಿದಿದ್ದನೋ ಭೂಪ!

ಮದರಾಸಿನ ಮ್ಯೂಸಿಕ್‌ ಅಕಾಡೆಮಿಯಲ್ಲಿ ಪಂಡಿತ್‌ ರವಿಶಂಕರರ ಸಿತಾರ್‌, ಅಲ್ಲಾರಖಾ ಅವರ ತಬಲ! ಅಂದು ಮುಂದಿನ ಸಾಲಿನಲ್ಲಿ ಪಕ್ಕಪಕ್ಕ ಕುಳಿತಿದ್ದವರು ಲೇಖಕ ಆರ್‌. ಕೆ. ನಾರಾಯಣ್‌ ಮತ್ತು ನಮ್ಮವರೇ ಆದ ವೀಣಾವಾದಕ ಮೈಸೂರು ದೊರೆಸ್ವಾಮಿ ಅಯ್ಯಂಗಾರ್‌. ಆ ನಂತರದ ಮೂರು-ನಾಲ್ಕು ಸಾಲುಗಳಲ್ಲಿದ್ದ ಅನೇಕ ಮಂದಿ ರಸಿಕರು ಸಂಗೀತ ಕೇಳುವುದಕ್ಕಿಂತ ಮಿಗಿಲಾಗಿ ಆ ಪ್ರಸಿದ್ಧ ಪುರುಷರಿಬ್ಬರು ಸಂಗೀತವನ್ನು ಹೇಗೆಲ್ಲ ಆಸ್ವಾದಿಸುತ್ತಿದ್ದರೆಂದು ತಿಳಿದುಕೊಳ್ಳುವುದಕ್ಕಾಗಿ ಅವರನ್ನು ಇಣುಕಿ ಇಣುಕಿ ನೋಡುತ್ತಿದ್ದರು. ನನ್ನೆದುರಿಗೆ ಕುಳಿತ ಒಬ್ಬರು ರವಿಶಂಕರ್‌ ಧ್ರುತ್‌ ತ್ರಿತಾಲದಲ್ಲಿ ತಾನ್‌ಗಳನ್ನು ನುಡಿಸಿದ ಹಾಗೆಲ್ಲ ತಮ್ಮ ತಲೆಯನ್ನು ಮುಂದಿದ್ದವರ ಮಧ್ಯೆ ತೂರಿಸಿ ಆ ಮಹನೀಯರಿಬ್ಬರನ್ನು ಗಮನಿಸುತ್ತಿದ್ದುದನ್ನು ಕಂಡು ಒಂದು ಸಲ ತದುಕಿಬಿಡಲೆ ಎನ್ನುವಷ್ಟು ಕೋಪ ಬಂದಿತ್ತು ನನಗೆ. 

ಈಗ ಹಿಂದುಸ್ತಾನಿ ಮೆಹಫಿಲ್‌ಗ‌ಳಿಗೆ ಬರೋಣ. ಆ ಮೆಹಫಿಲ್‌ಗ‌ಳ ಶ್ರೋತೃಗಳಿಗೆ ಭಲೆ ಭಲೆ, ಶಹಬ್ಟಾಸ್‌, ಕ್ಯಾ ಬಾತ್‌ ಹೈ, ಆಹಾ ಆಹಾ, ಅಚ್ಛಾ ಅಚ್ಚಾ  ಇವಿಷ್ಟೇ ಉದ್ಗಾರಗಳಿವೆಯಲ್ಲ ಎಂದು ನನಗೆ ಎಷ್ಟೋ ಬಾರಿ ಆಶ್ಚರ್ಯವಾಗಿರುವುದುಂಟು. ಆದರೆ ಈ ಉದ್ಗಾರಗಳ ಜೊತೆ ಸಾಥಿದಾರರ ಹಾವಭಾವಗಳೂ ಬೆರೆಯುತ್ತಿರುತ್ತವೆಯೆಂಬುದನ್ನು ಮರೆಯಲಾಗದು. ಹೀಗೆ ಬರೆಯುತ್ತಿರುವಾಗ ನನ್ನ ಮನಸ್ಸಿನಲ್ಲಿರುವುದು ಭೀಮಸೇನ್‌ ಜೋಶಿಯವರು. 

ಜೋಶಿಯವರು. ಒಂದೊಂದು ತಾನ್‌ ಹೊಡೆದಾಗಲೂ ಅವರ ಹಾರ್ಮೋನಿಯಂ ಸಾಥಿದಾರ ಪುರುಷೋತ್ತಮ್‌ ವಲವಾಲ್ಕರರ ಮುಖದಲ್ಲಿ ಕಾಣಿಸುತ್ತಿದ್ದ ಭಾವಾಭಿನಯ. ಸಂಗೀತ ಕಛೇರಿಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ಇನ್ನೊಂದು ಬಗೆಯ ರಸಿಕರ ಬಗೆಗೂ ಹೇಳಬೇಕು. ಅವರು ಒಬ್ಬೊಬ್ಬರೇ ಬರುವುದಿಲ್ಲ; ಇಬ್ಬರೋ, ಮೂವರೋ ಬರುತ್ತಾರೆ, ಒಟ್ಟಿಗೆ ಕುಳಿತುಕೊಳ್ಳುತ್ತಾರೆ. ಸಂಗೀತ ಕಛೇರಿಯುದ್ದಕ್ಕೂ ಮುಂದುವರಿಯುತ್ತಲೇ ಇರುತ್ತದೆ ಅವರ ವಾಗ್ವಿಲಾಸ- ಸಂಗೀತಗಾರನ ಬಗ್ಗೆ, ಅವನ ಸಾಧನೆಯ ಬಗ್ಗೆ, ಅವನು ನಿರ್ಮಿಸುವ ರಾಗಸೌಧದ ಬಗ್ಗೆ. ಯಶವಂತ ಚಿತ್ತಾಲರ ಗಾನಪ್ರಿಯ ಶಂಭುಶಾಸ್ತ್ರಿ  ಎಂಬ ಕತೆಯ ಅದೇ ಹೆಸರಿನ ನಾಯಕ ಅಂಥವರÇÉೊಬ್ಬ. ಅವನ ಸಂಗೀತಜ್ಞಾನಕ್ಕೆ ಕನ್ನಡಿ ಹಿಡಿಯುವಂತಿವೆ ಕತೆಯ ಈ ಎರಡು ತುಣುಕುಗಳು: 

1. ಭೇಷ್‌ ಭೇಷ್‌! ನೋಡಿದೆಯಾ, ಅವಳು ಹೇಗೆ ತನ್ನ ಸ್ವರವನ್ನು ಏರಿಸಿ ಒಮ್ಮೆಲೇ ಕೆಳಗಿಳಿಸಿದಳು. ಇದೋ ಈಗದು ಇನ್ನೂ ಕೆಳಗಿಳಿಯಹತ್ತಿತ್ತು. ಇದು ನೋಡು ಸಗುಣಾಬಾಯಿಯ ವೈಶಿಷ್ಟ್ಯ. ಒಂದು ಮೈಲು ದೂರದಿಂದ ಇಂದಿನ ಕಾರ್ಯಕ್ರಮ ಕೇಳುತ್ತಿದ್ದರೂ ನಾನು ಕಣ್ಣುಮುಚ್ಚಿ ಹೇಳುತ್ತಿದ್ದೆ: ಹಾಡುವವಳು ಸಗುಣಾಬಾಯಿಯೇ ಎಂದು. ಅವಳ ಈ ವೈಶಿಷ್ಟ್ಯವನ್ನು ಹಸ್ತಗತ ಮಾಡಿಕೊಂಡವರು ತೀರ ವಿರಳ. ವ್ಹಾ ವ್ಹಾ ! ಏನು ದನಿ! ಏನು ಸವಿ! ಇನ್ನೂ ಹಾಡಿಗೆ ಸುರು ಮಾಡಿಲ್ಲ. ಇದು ಬರೇ ಆಲಾಪ. ಸುಂದರವಾದ ಕಟ್ಟಡ ಕಟ್ಟಬೇಕಾದರೆ ಹೇಗೆ ಸರಿಯಾದ ಬುನಾದಿ ಬೇಕೋ ಹಾಗೆ ಅವಳು ಕಟ್ಟಲಿರುವ ಗಾನಮಂದಿರಕ್ಕೆ ಈ ಆಲಾಪವೇ ತಳಹದಿ. ಬಹಳ ಮಂದಿಗೆ ಇದರ ಅರ್ಥವೇ ಆಗುವುದಿಲ್ಲ. ಏನೋ ಎಮ್ಮೆಯಂತೆ “ಆ’ ಅಂತಾರೆ.

2. ಛೇ ಛೇ ಛೇ, ಏನು ಚಾತುರ್ಯ! ಏನು ಪ್ರಾವೀಣ್ಯ! ನಾನಂತೂ ಈ ಲೋಕದಲ್ಲೇ ಇರಲಿಲ್ಲ ನೋಡು. ಅವಳ ಇಂಪು ದನಿ ಅಲೆ ಅಲೆಯಾಗಿ ತೇಲಿಸುತ್ತಿತ್ತು ನನ್ನನ್ನು. ಏನೋ ಗರುಡಪಕ್ಷಿಯ ರೆಕ್ಕೆಯ ಮೇಲೆ ಕುಳಿತು ಮೇಲೆ ಮೇಲೆ ಹಾರಿಹೋಗುತ್ತಿದ್ದಂತೆ ಭಾಸವಾಯಿತು. ಚಂದ್ರಲೋಕದಲ್ಲಿ ವಿಹರಿಸುತ್ತಿದ್ದಂತೆ, ನಕ್ಷತ್ರಗಳನ್ನೇ ಕೈಯಿಂದ ಕಿತ್ತು ಸಂಗ್ರಹಿಸುತ್ತಿದ್ದಂತೆ, ಎಂಥ ದಿವ್ಯ ಅನುಭವ! ದೇವರ ಸಾನ್ನಿಧ್ಯದಲ್ಲಿದ್ದಂತೆ ಅನಿಸಿತು. ಕಲೆಯೆಂದರೆ ದೇವರು ತಾನೆ! ಈಗಲಾದರೂ ಮೆಚ್ಚಿದೆಯಾ ಸಗುಣಾಬಾಯಿಯ ಗಾನವನ್ನು?

ಕತೆಯ ಕೊನೆಗೆ ಬಹಿರಂಗವಾಗುವ ಸಂಗತಿ: ವೇದಿಕೆಯಲ್ಲಿ ಹಾಡುತ್ತಿದ್ದವಳು ಸಗುಣಾಬಾಯಿಯಲ್ಲ; ಅವಳ ಗಾನಶಾಲೆಯ ವಿದ್ಯಾರ್ಥಿನಿ ಶೋಭಾದೇವಿ! ಸಂಗೀತ ಕಛೇರಿ ಉಚಿತವಾಗಿದ್ದರೆ ಕೆಲವರು ಸಂಗೀತ ಪ್ರಾರಂಭವಾದ ಮೇಲೆಯೇ ಆಗಮಿಸುವುದುಂಟು. ಅಂಥವರು ಸಾಕಷ್ಟು ವಯಸ್ಸಾದವರೇ ಆಗಿರುತ್ತಾರೆಂದು ನಾನು ಅನುಭವದಿಂದ ಬಲ್ಲೇ. ಬಂದವರು ಖಾಲಿಯಿರುವ ಯಾವುದಾದರೊಂದು ಆಸನದಲ್ಲಿ ಕೂರುತ್ತಾರೆಯೆ? ಇಲ್ಲ. ಪರಿಚಿತರು ಕಂಡದ್ದೇ ಅವರ ಬಳಿಗೆ ಹೋಗಿ ಕೈಮುಗಿಯುತ್ತಾರೆ. “ಕ್ಷೇಮವೇ?’ ಎಂದು ಕೇಳುತ್ತಾರೆ. ತಾವು ತಡವಾಗಿ ಬಂದದ್ದಕ್ಕೆ ಕಾರಣವೇನೆಂದು ವಿವರಿಸುತ್ತಾರೆ. ಇದೆಲ್ಲ ಸುಮಾರು ಎರಡು-ಮೂರು ನಿಮಿಷ ನಡೆಯುತ್ತಿರುವಾಗ ಸಂಗೀತವಂತೂ ಮುಂದುವರಿಯುತ್ತಲೇ ಇರುತ್ತದೆ. 

ಇತ್ತೀಚೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಪಂ. ವೆಂಕಟೇಶ ಕುಮಾರ್‌ ಅವರ ಮೆಹಫಿಲ್‌ನಲ್ಲಿ ಒಳಗೆ ಬಂದ ಇಂಥ ಏಳೆಂಟು ಮಂದಿ ಸಂಗೀತವನ್ನು ಆಲಿಸುತ್ತಿದ್ದವರಿಗೆ ಎಷ್ಟು ಅಡಚಣೆಯುಂಟುಮಾಡಬೇಕೋ ಅಷ್ಟೂ ಮಾಡಿ ಕೃತಾರ್ಥರಾದರು! ಅಷ್ಟೇ ಅಲ್ಲ, ವೆಂಕಟೇಶ್‌ ಕುಮಾರರು ರಾಗವೊಂದನ್ನು ವಿಸ್ತರಿಸುತ್ತಿದ್ದಾಗ ಒಳಗೆ ಬಂದವನೊಬ್ಬ ಯಾವುದೋ ಕಾರ್ಯಕ್ರಮದ ಆಹ್ವಾನ ಪತ್ರಗಳನ್ನು, ಬೀದಿಯಲ್ಲಿ ಕರಪತ್ರ ಹಂಚುವಂತೆ, ಹಂಚತೊಡಗಿದ. ಅದನ್ನು ಯಾರೂ ಆಕ್ಷೇಪಿಸಲಿಲ್ಲವೆನ್ನುವುದೇ ಆಶ್ಚರ್ಯ. ಕಡೆಗೆ ವೆಂಕಟೇಶ ಕುಮಾರರೇ ಬೇಸರದಿಂದ, “ಏ ತಮ್ಮಾ, ಆ ಕೆಲಸ ಆಮ್ಯಾಲೆ ಮಾಡೂವಂತಿ. ಈಗ ಸಂಗೀತ ಕೇಳು; ಬ್ಯಾಡಾಂದ್ರೆ ಹೊರಗ ಹೋಗು’ ಎಂದು ಹೇಳಬೇಕಾಯಿತು.

ಸಂಗೀತ ರಸಿಕರನ್ನು ಕುರಿತ ಈ ಪ್ರಬಂಧವನ್ನು ಮೈಸೂರು ವಾಸುದೇವಾಚಾರ್ಯರು ಉÇÉೇಖೀಸಿರುವ ಒಂದು ಕತೆಯಿಂದ ಪ್ರಾರಂಭಿಸಿದ ನಾನು ಅವರೇ ನಿರೂಪಿಸಿರುವ ಇನ್ನೊಂದು ಪ್ರಸಂಗದಿಂದ ಮುಗಿಸುವುದು ಸೂಕ್ತವೆನಿಸುತ್ತದೆ. ಅದು ಕೂಡ ಅವರ ನೆನಪುಗಳು ಎಂಬ ಕೃತಿಯಲ್ಲಿರುವ  ಪ್ರಸಂಗ:  

ಪ್ರಸಿದ್ಧ ಪಿಟೀಲು ವಿದ್ವಾಂಸರಾಗಿದ್ದ ತಿರುಕ್ಕೋಡಿಕಾವಲ್‌ ಕೃಷ್ಣಯ್ಯರ್‌ ಅವರ ಒಂದು ಕಛೇರಿಯಲ್ಲಿ ಒಂದು ವಿನೋದ ಜರುಗಿತು. ವಾದ್ಯದ ಮೇಲೆ ಕೃಷ್ಣಯ್ಯರ್‌ ಅವರಿಗೆ ಅದ್ಭುತವಾದ ಸ್ವಾಮಿತ್ವ . ಎಲ್ಲಿಂದ ಎಲ್ಲಿಯವರೆಗೆ ಬೇಕಾದರೂ ಲೀಲಾಜಾಲವಾಗಿ ಕೈ ಬೆರಳುಗಳನ್ನಾಡಿಸುತ್ತಿದ್ದರು. ಅಪಸ್ವರದ ನೆರಳು ಸಹ ಅವರ ವಾದ್ಯದ ಮೇಲೆ ಬೀಳುತ್ತಿರಲಿಲ್ಲ ಎಂಬುದಕ್ಕೆ ಒಂದು ನಿದರ್ಶನ ಇದು. ಒಮ್ಮೆ ಪಕ್ಕವಾದ್ಯ ನುಡಿಸುತ್ತಿದ್ದರು. ಅಕಸ್ಮಾತ್ತಾಗಿ ಪಿಟೀಲಿನ ತಂತಿಯೊಂದು ಕಿತ್ತುಹೋಯಿತು. ತಾನು ಹಾಡಿದ ಸಂಗತಿಯನ್ನು ನುಡಿಸಲಾರದೆ ಉದ್ದೇಶಪೂರ್ವಕವಾಗಿಯೇ ತಂತಿಯನ್ನು ಕಿತ್ತು ಆಟ ಹೂಡಿ¨ªಾರೆ ಎಂದು ಗಾಯಕ ಕುಚೋದ್ಯದ ನಗೆಯನ್ನು ಬೀರಿದ. ಇದನ್ನು ಕಂಡು, ಉಂಗುಷ್ಟದಿಂದ ಹಿಡಿದು ನೆತ್ತಿಯವರೆಗೂ ಕೃಷ್ಣಯ್ಯರ್‌ ಅವರಿಗೆ ಬಿಸಿ ಏರಿತು. “ನಿಮ್ಮ ಸಂಗೀತಕ್ಕೆ ಪಕ್ಕವಾದ್ಯ ನುಡಿಸಲು ನಾಲ್ಕು ತಂತಿಗಳು ಬೇಕೆ? ಇಗೋ ಇನ್ನೂ ಎರಡು ತಂತಿಗಳನ್ನು ಕಿತ್ತೆಸೆಯುತ್ತೇನೆ’ ಎಂದು ಹೇಳಿ ಕೃಷ್ಣಯ್ಯರ್‌ ಅವರು ಒಂದೇ ತಂತಿಯಲ್ಲಿ ಉಳಿದ ಕಛೇರಿಯೆಲ್ಲವನ್ನೂ ನಿರ್ವಹಿಸಿದರು. ಇಂಥ ನಿಪುಣತೆಯುಳ್ಳ ಕಲಾವಿದರು ನುಡಿಸುತ್ತಿರುವಾಗ್ಗೆ ಅಂದು ಹಠಾತ್ತಾಗಿ ಒಂದು ಅಪಸ್ವರ ಕೈತಪ್ಪಿ ಬಂದಿತು. “ಶಹಭಾಸ್‌’ ಎಂದ ಆ ಸಮಯಕ್ಕೆ ಸರಿಯಾಗಿ, ಸಭೆಯಲ್ಲಿದ್ದ ರಸಿಕ ಭೂಪತಿಯೊಬ್ಬ! ಕೃಷ್ಣಯ್ಯರ್‌ ಅವರು ಪಿಟೀಲನ್ನು ಪಕ್ಕಕ್ಕಿರಿಸಿ “ರಸಿಕ ಮಹಾಶಯರೇ, ತಮಗೆ ಬೇಕಾದುದು ಬಂದಾಯಿತಲ್ಲ. ತಮಗೆ ಇನ್ನೇನು ಕೆಲಸ ಇಲ್ಲಿ? ಹೊರಡಬಹುದಲ್ಲ?’ ಎಂದು ತಂಪಾಗಿ ಕೇಳಿದರು.

ಎಸ್‌. ದಿವಾಕರ್‌

ಟಾಪ್ ನ್ಯೂಸ್

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.