ಕತೆ: ಶಮಂತಿನಿ

Team Udayavani, Oct 20, 2019, 5:09 AM IST

ಆ ಮುದಿಬ್ರಾಹ್ಮಣ ತನ್ನ ಕೈಗಳಲ್ಲಿ ಕರ್ಣನಿಂದ ದಾನವಾಗಿ ಪಡೆದ ಕರ್ಣಕುಂಡಲವನ್ನು ಹಿಡಿದುಕೊಂಡು ನಿಧಾನವಾಗಿ ಹೆಜ್ಜೆಗಳನ್ನು ಊರುತ್ತ ಹೋಗುತ್ತಿದ್ದ. ಅವನ ಹಣ್ಣು ಗಡ್ಡದೊಳಗೆ ಅಡಗಿದ ತುಟಿಯಿಂದ ಸಣ್ಣ ನಗು ತನ್ನಷ್ಟಕ್ಕೆ ತಾನೇ ಬರುತ್ತಲೇ ಇತ್ತು. ಆತನ ಹಿಂದೆ ಹೆಣ್ಣೊಬ್ಬಳು ಹಿಂಬಾಲಿಸುತ್ತ ಓಡಿ ಬರುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ, ಅವಳು ನೇರವಾಗಿ ಬಂದು ಅವನ ದಾರಿಗೆ ಅಡ್ಡವಾಗಿ ನಿಂತಳು. ತನ್ನೆರಡೂ ಕೈಗಳನ್ನು ಜೋಡಿಸಿ, “”ಬ್ರಾಹ್ಮಣೋತ್ತಮರೇ, ನಮಸ್ಕರಿಸಿಕೊಂಡೆ” ಎಂದು ನಯವಾಗಿ ನುಡಿದಳು.

“ಜ್ಞಾನದ ಕಣ್ಣು ತೆರೆದುಕೊಳ್ಳಲಿ’ ಎಂದು ಆಶೀರ್ವದಿಸಿದಾಗ, “ಇದಾವ ಬಗೆ’ ಎಂಬ ಪ್ರಶ್ನಾರ್ಥಕ ಭಾವ ಅವಳಲ್ಲಿ ಮೂಡಿತಾದರೂ, “ನಿಮ್ಮ ಕೃಪೆ’ ಎಂದು ತಲೆಬಾಗಿದಳು.
“”ಯಾರು ನೀನು?”
“”ನಾನು ಶಮಂತಿನಿ”
“”ನನ್ನನ್ನು ಹಿಂಬಾಲಿಸಿ ಬಂದುದೇಕೆ?”
“”ಬಲವಾದ ಕಾರಣವಿದೆ. ಅದು ನಿಮ್ಮ ಕೈಯಲ್ಲಿರುವ ಆ ಕರ್ಣಕುಂಡಲ”.
ಬ್ರಾಹ್ಮಣನಿಗೆ ಆಶ್ಚರ್ಯವಾಯಿತು. ಇವಳಿಗೆ ಇದೆಲ್ಲ ಯಾಕೆ? ಎಂದುಕೊಳ್ಳುತ್ತ ಮಾತು ಮುಂದುವರಿಸಿದ.

“”ಇದು ನಾನು ದಾನವಾಗಿ ಪಡೆದದ್ದು. ಇದು ನಿನಗೇಕೆ?”
“”ನೀವು ದಾನವಾಗಿ ಪಡೆದದ್ದೋ ಅಥವಾ ಕರ್ಣನನ್ನು ಪೀಡಿಸಿ, ಆತನಿಗೆ ಅರಿವಾಗದಂತೆ ಕಸಿದುಕೊಂಡದ್ದೋ?” ಎಂದಳು ವ್ಯಂಗ್ಯವಾಗಿ.
ಬ್ರಾಹ್ಮಣನಿಗೆ ನಗು ಬಂತು. ಅಂದರೆ ಏನರ್ಥ? ಕರ್ಣ, ದಾನಕ್ಕಾಗಿ ತನ್ನಲ್ಲಿ ಏನೂ ಇಲ್ಲವಲ್ಲ ಎಂಬ ಪರಿತಾಪಕ್ಕೆ ಒಳಗಾದಾಗ ಅವನ ಬಳಿಯಿದ್ದ, ದಾನವಾಗಿ ನೀಡಬಹುದಾದ ವಸ್ತುವನ್ನು ನಾನು ತೋರಿಸಿದ್ದಷ್ಟೆ. ಆದರೆ, ಇದನ್ನು ನನಗೆ ಅವನಾಗಿಯೇ ಕೊಟ್ಟದ್ದು. ಬಡತನದಿಂದಾಗಿ ನಾನು ಕೈ ಚಾಚಿದೆ.
ಈಗ ಶಮಂತಿನಿಗೆ ನಗು ಬಂತು. “”ನಾನೆಲ್ಲವನ್ನೂ ನೋಡಿದ್ದೇನೆ. ಅವನು ಕೊಟ್ಟದ್ದನ್ನೂ ನೀವು ತೆಗೆದುಕೊಂಡಿದ್ದನ್ನೂ…’ ’

“”ಆಯಿತು ಅದಕ್ಕೇನಂತೆ. ಈಗ ನನ್ನ ದಾರಿಗೆ ಅಡ್ಡ ನಿಂತದ್ದಾದರೂ ಯಾಕೆ? ಅವನು ಕೊಟ್ಟಿದ್ದಾನೆ, ನಾನು ಪಡೆದಿದ್ದೇನೆ, ಈಗ ತೆಗೆದುಕೊಂಡು ಹೋಗುತ್ತಿದ್ದೇನೆ ಅಷ್ಟೆ”
“”ಇದು ಕೇವಲ ಕೊಟ್ಟು-ತೆಗೆದುಕೊಂಡ ವ್ಯವಹಾರವಷ್ಟೇ ಅಲ್ಲ”
“”ಅಂದರೆ ಏನರ್ಥ, ಇದಕ್ಕೂ ನಿನಗೂ ಏನು ಸಂಬಂಧ?”
“”ಸಂಬಂಧವಿದೆ. ಹಾಗಾಗಿ, ನಿಮ್ಮಿಂದ ನನಗೆ ಉಪಕಾರವಾಗಲೇ ಬೇಕು”
“”ಏನದು?!”
“”ನನಗೆ ಆ ಕರ್ಣಕುಂಡಲ ಬೇಕು”
“”ಇದು ನಿನಗೇಕೆ? ಇದನ್ನು ಪಡೆದುಕೊಂಡು ನಿನಗೇನಾಗುವುದಕ್ಕಿದೆ?”
“”ನನಗೆ ಕರ್ಣ ಬೇಕು, ಕರ್ಣ ಉಳಿಯಬೇಕು. ಹಾಗಾಗಿ, ಅದನ್ನು ಕೊಟ್ಟುಬಿಡಿ, ತಗೊಳ್ಳಿ, ನನ್ನೆಲ್ಲ ಆಭರಣಗಳನ್ನು ನಿಮಗೀಯುತ್ತಿದ್ದೇನೆ. ಇವನ್ನೆಲ್ಲ ತೆಗೆದುಕೊಂಡು ಅದನ್ನು ಕೊಡಿ. ನಿಮ್ಮ ಬಡತನವೂ ನಿವಾರಣೆಯಾಗುತ್ತದೆ, ನನ್ನ ಕರ್ಣನೂ ಉಳಿದುಕೊಳ್ಳುತ್ತಾನೆ”
“”ನಿನಗೂ ಕರ್ಣನಿಗೂ ಏನು ಸಂಬಂಧ? ನಿನ್ನ ಆಭರಣಗಳಿಂದ ನನ್ನ ಹೊಟ್ಟೆ ತುಂಬೀತು ಅಷ್ಟೆ. ಆದರೆ ಧರ್ಮದ ಬಡತನ ನಿವಾರಣೆಯಾಗದು”
ಶಮಂತಿನಿಗೆ ಬ್ರಾಹ್ಮಣರು ಒಗಟಾಗಿ ಮಾತನಾಡುತ್ತಿದ್ದಂತೆ ಭಾಸವಾಯಿತು.

“”ನಾನು ಕರ್ಣನ ಪ್ರೇಯಸಿ. ಅವನಿಗಾಗಿಯೇ ಬದುಕಿ ಉಳಿದವಳು. ಬದುಕುತ್ತಿರುವವಳು. ಅವರೆಡನ್ನು ಹಿಂದಿರುಗಿಸಿ ಅವನನ್ನು ಕಾಪಾಡಿ”
“”ಮಡದಿ-ಮಕ್ಕಳಿರುವ ಕರ್ಣನಿಗೆ ನೀನೆಂಥ ಪ್ರೇಯಸಿ ! ಹಾಗಾದರೆ ಆತನನ್ನು ಮದುವೆಯೇ ಆಗದೆ ಇರುವುದಾದರೂ ಯಾಕೆ?”
“”ಹೌದು. ನಾನು ಭಗ್ನಪ್ರೇಮವುಳ್ಳವಳು. ಆತನನ್ನು ಪ್ರೀತಿಸುವುದಕ್ಕೆ ಮಾತ್ರ ನನಗೆ ಅಧಿಕಾರ. ಅವನ ಹತ್ತಿರವೂ ನಾನು ಸುಳಿಯುವಂತಿಲ್ಲ. ದೂರದಲ್ಲಿ ನಿಂತು ಅವನನ್ನು ಆರಾಧಿಸುತ್ತಿದ್ದೇನೆ. ಇದೆಲ್ಲ ವಿಧಿಯ ಬರಹ. ನನ್ನ ಅಮರವಾದ ಪ್ರೀತಿಯನ್ನು ಅವನಲ್ಲಿಯೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲೇ ಅವನಿಗಾಗಿಯೇ ನಾನು ಬದುಕುತ್ತಿದ್ದೇನೆ. ಈ ಬದುಕನ್ನೇ ಪ್ರೀತಿಸುತ್ತೇನೆ”
ಬ್ರಾಹ್ಮಣನಿಗೆ ಈಗ ಇವಳ ಮಾತುಗಳು ಒಗಟಾಗಿ ಕಂಡುವು.
“”ನನಗೆ ಅರ್ಥವಾಗಲಿಲ್ಲ. ಅಷ್ಟೊಂದು ಪ್ರೀತಿಯುಳ್ಳವಳು ಕರ್ಣನನ್ನು ವರಿಸದೇ ಹೀಗೆ ಏಕಾಕಿನಿಯಾಗಿ ಬದುಕುತ್ತಿರುವುದಾದರೂ ಯಾಕೆ?”
“”ಪರಶುರಾಮರ ಶಾಪ. ಯಾವಾಗ ಕರ್ಣ, ಪರಶುರಾಮರ ಶಾಪಕ್ಕೆ ತುತ್ತಾದನೋ ಅವತ್ತೇ ನಾನೂ ಶಾಪಕ್ಕೆ ಒಳಗಾದೆ”
“”ಅಂದರೆ?!”

“”ನಾನು ಪರಶುರಾಮರ ಆಶ್ರಮದ ಹತ್ತಿರವೇ ಇದ್ದ ಸಾಗರ ಮಿತ್ರನ ಮಗಳು. ನನ್ನಪ್ಪ ಆಶ್ರಮದ ರಕ್ಷಣೆಗೆ ಇದ್ದ. ಆ ಸಮಯದಲ್ಲಿ ಕರ್ಣ ಆ ಆಶ್ರಮಕ್ಕೆ ಬಂದು ಸೇರಿದ್ದ. ಆತನ ರೂಪಕ್ಕೆ ಮಾರುಹೋಗಿ, ನನ್ನ ಮನಸ್ಸಿನಲ್ಲಿ ಆತನನ್ನು ತುಂಬಿಸಿಕೊಂಡು ಬಿಟ್ಟೆ. ಅಪ್ಪನೊಡನೆಯೂ ಹೇಳುವ ಧೈರ್ಯಬರಲಿಲ್ಲ. ಕರ್ಣನ ಹತ್ತಿರ ಸುಳಿಯಲೂ ನನಗೆ ಭಯವಾಗುತ್ತಿತ್ತು. ಅದೊಂದು ದಿನ ದುಂಬಿಯೊಂದು ಕಡಿದಾಗ ಕರ್ಣ ತಾನು ಕ್ಷತ್ರಿಯನಲ್ಲವೆಂದು ಅರಿತ ಪರಶುರಾಮರು ಶಾಪವಿತ್ತು ಅಲ್ಲಿಂದ ಹೊರಗಟ್ಟಿದರು. ಕಾಲಿನಿಂದಿಳಿವ ರಕ್ತವನ್ನು ಲೆಕ್ಕಿಸದೆ ಹೊರಟ ಕರ್ಣನನ್ನು ಹಿಂಬಾಲಿಸಿ ವನೌಷಧವನ್ನು ಹಚ್ಚಿ ಉಪಚರಿಸಿದೆ. ಇನ್ನೇನು, ನನ್ನ ಪ್ರೇಮವನ್ನು ಆತನಲ್ಲಿ ನಿವೇದಿಸಿಕೊಳ್ಳಬೇಕೆನ್ನುವಷ್ಟರಲ್ಲೇ ಪರಶುರಾಮರು ಅಲ್ಲಿಗೆ ಬಂದುಬಿಟ್ಟರು. ನಾನು ಕೂಡಲೇ ಅಲ್ಲಿಂದ ಹೊರಟುಬಿಟ್ಟೆ. ಕರ್ಣನೂ ತನ್ನ ದಾರಿಹಿಡಿದು ಹೊರಟ. ನಾನು ನನ್ನ ಮನೆಯ ಸಮೀಪಿಸುತ್ತಿದ್ದಂತೆ ಹಿಂದೆ ತಿರುಗಿ ನೋಡಿದೆ. ಉಗ್ರರೂಪದಲ್ಲೇ ಇದ್ದ ಪರಶುರಾಮರು ಇನ್ನಷ್ಟು ಉಗ್ರರಾಗಿ ನನ್ನತ್ತ ಕೆಂಗಣ್ಣಿನಿಂದ ನೋಡಿದರು. ನನ್ನ ಎದೆಯಲ್ಲಿ ನಡುಕ ಹುಟ್ಟಿತು. ನನ್ನನ್ನೇ ದಿಟ್ಟಿಸುತ್ತ ನಿನ್ನ ಮನದಿಂಗಿತವನ್ನು ಕರ್ಣನಿಗೆ ಹೇಳುತ್ತಿದ್ದಂತೆ, “ಆತ ನಿನ್ನಿಂದ ದೂರವಾಗಿಬಿಡಲಿ’ ಎಂದು ಶಾಪವಿತ್ತರು.

ಇದು ಅವನಿಗೆ ತಿಳಿದಿದೆಯೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಇವತ್ತಿಗೂ ನಾನು ಆತನನ್ನು ಪ್ರೀತಿಸುತ್ತಲೇ ಇದ್ದೇನೆ. ಅವನ ಶಕ್ತಿಯ ಬಗ್ಗೆ ನನಗೆ ಗೊತ್ತು. ಈ ಕರ್ಣಕುಂಡಲ ಅವನನ್ನು ಕಷ್ಟದಿಂದ ರಕ್ಷಿಸುತ್ತವೆಂಬುದೂ ನನಗೆ ಗೊತ್ತು. ನೀವು ಅದನ್ನು ಕೊಟ್ಟುಬಿಡಿ. ಕರ್ಣ ಎಂಬ ಜೀವ ಇದ್ದರೆ ಮಾತ್ರ ಈ ಶಮಂತಿನಿ ನೋವಿನಲ್ಲೂ ನಗುವನ್ನುಣ್ಣುವವಳು. ಎಲ್ಲವೂ ನಿಮ್ಮ ಕೈಯಲ್ಲಿದೆ” ಎನ್ನುವಾಗ ಶಮಂತಿನಿಯ ಕಣ್ಣೀರು ಕೆನ್ನೆಯಿಂದ ಜಾರಿತ್ತು.

“”ಎಲೇ ಹುಡುಗಿ, ನೀನು ಪ್ರೀತಿಸಿದವನು ಸಿಗದೇ ಇದ್ದ ಮೇಲೆ ಆ ಪ್ರೀತಿಗೆ ಉಳಿವುಂಟೆ? ವೃಥಾ ನಿನ್ನ ಬದುಕನ್ನು ಹಾಳುಮಾಡಿಕೊಂಡೆಯಲ್ಲ. ಇಷ್ಟಕ್ಕೂ ಈಗ ಆತ ರಣರಂಗದಲ್ಲಿದ್ದಾನೆ. ಆತನು ಯುದ್ಧಕ್ಕೆ ಹೋಗುವುದನ್ನು ತಡೆಯುವ ಶಕ್ತಿಯೂ ನಿನಗಿಲ್ಲ. ನೀನು ಹೋಗಿ ಹೇಳಿದರೂ ಶಾಪದ ಫ‌ಲವಾಗಿ ನಿನ್ನ ಮಾತಿಗೆ ಬೆಲೆ ಕೊಡದೆ, ನೀನ್ಯಾರೆಂದು ಕೇಳಿಯಾನು. ಬ್ರಾಹ್ಮಣನಾದವನು ತನಗೆ ಇಂಥಾದ್ದೇ ಬೇಕೆಂದು ಯಾವತ್ತಿಗೂ ಕೇಳುವುದಿಲ್ಲ. ಅಲ್ಲದೆ ದಾನವನ್ನಾಗಿ ಪಡೆದದ್ದನ್ನು ಹಿಂದಿರುಗಿಸುವುದೂ ಸರಿಯಲ್ಲ. ಎಲ್ಲವೂ ನೀನೇ ಹೇಳಿದಂತೆ ವಿಧಿಲಿಖಿತ. ಸುಮ್ಮನೆ ಮರುಗಬೇಡ. ನನಗೆ ತಡವಾಗುತ್ತಿದೆ. ನಾನು ಹೊರಡಬೇಕು. ದಾರಿಬಿಡು”

“”ಇಲ್ಲ, ನಾನು ದಾರಿ ಬಿಡಲಾರೆ. ನಿಮ್ಮ ಕೈಯಾರೆ ಅವನ್ನು ಕರ್ಣನಿಗೆ ಕೊಟ್ಟು, ಆಶೀರ್ವದಿಸಿ ಬನ್ನಿ” ಎನ್ನುತ್ತ ಮುಂದೆ ಹೋಗದಂತೆ ಎರಡೂ ಕೈಗಳನ್ನು ಅಡ್ಡಮಾಡಿ ನಿಂತಳು. ಈಗ ಕೃಷ್ಣನು ತನ್ನ ನಿಜರೂಪವನ್ನು ತೋರಿಸಬೇಕಾಯಿತು.

ಬ್ರಾಹ್ಮಣ ರೂಪ ಹೋಗಿ ಕೃಷ್ಣನ ರೂಪ ಕಂಡು ಶಮಂತಿನಿಗೆ ಒಂದೆಡೆ ಆಶ್ಚರ್ಯವೂ ಇನ್ನೊಂದೆಡೆ ಸಂತೋಷವೂ ಆಯಿತು. “ಕೃಷ್ಣನಿಂದ ನನ್ನ ನೋವು ಶಮನಗೊಳ್ಳುತ್ತದೆ. ಈತನಲ್ಲಿಯೇ ನನ್ನ ಕರ್ಣನನ್ನು ರಕ್ಷಿಸುವಂತೆ ಕೇಳಿಕೊಳ್ಳಬೇಕು’ ಎಂದುಕೊಂಡಳು.
“”ಶಮಂತಿನಿ, ನಿನ್ನ ನೋವು ನನಗರ್ಥವಾಗುತ್ತದೆ. ಆದರೆ ಕಾಲ, ಕಾರಣಗಳು ಇವೆಲ್ಲವನ್ನು ತೆಗೆದುಕೊಂಡು ಸಾಗುವ ಬಗೆಯನ್ನು ನಾವು ಒಪ್ಪಿಕೊಳ್ಳಬೇಕು. ಅದಕ್ಕೆ ಸಿದ್ಧವಾಗಿಯೇ ಇರಬೇಕು”

“”ಅಂದರೆ, ನನ್ನ ಕರ್ಣನಿಗೆ ಈ ವಸ್ತುಗಳನ್ನು ತಿರುಗಿ ನೀಡಲಾರೆಯಾ?”
“”ಇಲ್ಲ. ಅದು ಸಾಧ್ಯವಿಲ್ಲದ ಮಾತು”
“”ಅಂದರೆ ನನ್ನ ಪ್ರೇಮಕ್ಕೆ ಬೆಲೆಯಿಲ್ಲವೆ? ರಾಧೆಯ ಪ್ರೀತಿಯನ್ನು ಅರಿತ ನಿನಗೆ ನನ್ನ ಪ್ರೇಮದ ಪರಿಯನ್ನು ವಿವರಿಸಬೇಕಾಗಿಲ್ಲ ಅಲ್ಲವೆ?”
“”ನಿನ್ನ ಪ್ರೇಮ, ವಿರಹ ಎಲ್ಲವೂ ಸರಿ. ಆದರೆ, ಪ್ರತಿಯೊಂದಕ್ಕೂ ಕಾರಣವಿದೆ. ಬುವಿಯಲ್ಲಿ ಕಾರಣವಿಲ್ಲದೆ ಹುಲ್ಲುಕಡ್ಡಿಯೂ ಕೂಡ ಅಲುಗಾಡುವುದಿಲ್ಲ. ಆದ್ದರಿಂದ ನಿನ್ನ ಈ ಆಸೆಯನ್ನು ಬಿಟ್ಟು ಬೇರೇನನ್ನಾದರೂ ಕೇಳು”
“”ಬೇರೇನನ್ನೂ ಕೇಳುವ ಆಸೆ ನನಗಿಲ್ಲ. ನನಗೆ ಕರ್ಣ ಬದುಕಿ ಉಳಿದರಷ್ಟೇ ಸಾಕು”

“”ಈ ಮೊದಲೇ ಕರ್ಣನನ್ನು ಪಾಂಡವರನ್ನು ಸೇರಿಕೊಳ್ಳಲು ಹೇಳಿಯಾಗಿದೆ. ಆದರೆ, ಅದಕ್ಕೊಪ್ಪದೆ ಆತ ಇಂದು ರಣರಂಗಕ್ಕೆ ನಮ್ಮ ವಿರುದ್ಧವಾಗಿಯೇ ಬಂದಿದ್ದಾನೆ. ಅದರಿಂದಾಗುವ ಪರಿಣಾಮಕ್ಕೆ ಆತನೇ ನೇರವಾಗಿ ಕಾರಣಕರ್ತ”
“”ಆದರೆ, ಆತನ ತಾಯಿ ಕುಂತಿ ಆ ಮೊದಲೇ ಪಾಂಡವರೊಂದಿಗೆ ಸೇರಿಸಿಕೊಳ್ಳಬಹುದಿತ್ತಲ್ಲ ಅಥವಾ ನೀನಾದರೂ ಆ ಕೆಲಸ ಮಾಡಬಹುದಿತ್ತಲ್ಲ. ಈಗ ಅವನನ್ನು ಕಾರಣಕರ್ತನೆಂದುಬಿಟ್ಟರೆ ನಾನು ಒಪ್ಪುವುದಿಲ್ಲ. ಅವನನ್ನು ಈಗಾಗಲೇ ನೀವೆಲ್ಲ ಸೇರಿ ಎಷ್ಟು ನಿಶ್ಶಕ್ತನನ್ನಾಗಿ ಮಾಡಿದ್ದೀರೆಂಬುದು ನಿನಗೇ ಗೊತ್ತು. ಪರಶುರಾಮರ ಶಾಪ, ಕುಂತಿ ಆತನಿಂದ ಪಡೆದುಕೊಂಡ ಭಾಷೆ ಎಲ್ಲವನ್ನೂ ತಿಳಿದ ನೀನು ಕೊನೆಯ ಆಸರೆ ಎಂಬಂತಿದ್ದ ಈ ಕರ್ಣಕುಂಡಲವನ್ನು ಕಸಿದುಕೊಂಡಿದ್ದು ಸರಿಯೇನು?”

“”ಯುದ್ಧಭೂಮಿಯಲ್ಲಿ ಯುದ್ಧತಂತ್ರವನ್ನು ಹೆಣೆಯುವಾಗ ಇವೆಲ್ಲ ಸಹಜವೇ. ಅಂದು ದ್ರೌಪದಿಯ ವಸ್ತ್ರಾಪಹರಣವಾಗುವಾಗ ಕರ್ಣ ನಗುತ್ತ ಕುಳಿತಿರಲಿಲ್ಲವೇನು? ಅರ್ಜುನನ ಪುತ್ರ ಅಭಿಮನ್ಯುವನ್ನು ದುರ್ಮಾರ್ಗದಿಂದ ಕೊಲ್ಲುವಾಗ ಅವನ ಮನ ಹಿಂಜರಿಯಲಿಲ್ಲ ಅಲ್ಲವೆ? ಅವನನ್ನು ಪ್ರೀತಿಸುತ್ತಿಯಾ ಎಂಬ ಕಾರಣಕ್ಕೆ ಅವನ ತಪ್ಪುಗಳು ನಿನ್ನ ಕಣ್ಣಿಗೆ ಕಾಣಬಾರದೇನು?”

“”ಅವೆಲ್ಲ ತಪ್ಪೆಂಬುದು ನನಗೂ ಗೊತ್ತಿದೆ. ಆದರೆ ಅದಕ್ಕೆ ಮೂಲಕಾರಣ ಕುಂತಿಯೇ ಅಲ್ಲವೆ? ಅನ್ನದ ಋಣವೋ ಸ್ನೇಹದ ಉತ್ತುಂಗತೆಯೋ ಅವನು ಹೀಗೆಲ್ಲ ಮಾಡುವಂತೆ ನಿರ್ದೇಶಿಸಿರಬಹುದು. ಆದರೆ, ಆತ ಮಗುವಾಗಿದ್ದಾಗ ಅಮ್ಮನ ಹಾಲಿಗೋ, ಮಮತೆಗೋ ಅತ್ತುದನ್ನು ಯಾರಾದರೂ ಕೇಳಿಸಿಕೊಂಡರೇನು? ಯಾರೇಕೆ, ಹೆತ್ತ ತಾಯಿಯ ಮನದೊಳಗೂ ಇದು ನುಸುಳಲಿಲ್ಲವೇ? ಅಲ್ಲದೆ ಕುಂತಿಯು ಮಂತ್ರದಿಂದ ಪಡೆದ ಪುತ್ರನಾದ ಕಾರಣ ಕಳಂಕ ಬರುತ್ತಿರಲಿಲ್ಲ. ಸಾಕಿ ಸಲಹಬಹುದಿತ್ತು. ತನ್ನ ಹೆಸರಿಗೆ ಕಳಂಕ ಎಂದುಕೊಂಡಿದ್ದು ಸ್ವಾರ್ಥದಿಂದಾಗಿಯೇ ಅಲ್ಲವೇನು?”

“”ನಿನ್ನ ಪ್ರಶ್ನೆಗಳೆಲ್ಲವೂ ಉಚಿತವೇ. ಆದರೆ, ಕರ್ಣ ಮತ್ತು ಕೌರವನ ಬಾಂಧವ್ಯ ನನ್ನ ಮತ್ತು ಅರ್ಜುನನ ಬಾಂಧವ್ಯಕ್ಕಿಂತಲೂ ಮಿಗಿಲಾದುದು. ಕರ್ಣ ಮನಸ್ಸು ಮಾಡಿದ್ದರೆ ಅವೆಲ್ಲವನ್ನೂ ತಡೆಯಬಹುದಿತ್ತು. ಆದರೆ, ಆತ ಮಾಡಲಿಲ್ಲ. ಇನ್ನು ಕುಂತಿ, ಹೆತ್ತ ಮಗುವನ್ನೆ ನೀರಿಗೆ ಬಿಟ್ಟಳು ಎಂದು ಆಡಿಕೊಳ್ಳುವುದು ಸಹಜ. ನೀನು ಒಂದು ಹೆಣ್ಣು. ಸರಿಯಾಗಿ ಯೋಚಿಸಿ ನೋಡು. ಕುಂತಿ ಆ ಮಂತ್ರಶಕ್ತಿಯನ್ನು ಪರೀಕ್ಷಿಸಿದ್ದಾಗಲಿ, ಹೆದರಿ ಮಗುವನ್ನು ನೀರಿಗೆ ಬಿಟ್ಟದ್ದಾಗಲಿ ಮೇಲ್ನೋಟಕ್ಕೆ ತಪ್ಪೆಂದು ಕಂಡುಬಂದರೂ ಅವಳ ಕುತೂಹಲ ಮತ್ತು ಆ ವಯಸ್ಸಿನಲ್ಲಿ ಇವೆಲ್ಲವನ್ನೂ ನಿಭಾಯಿಸುವ ಮಾನಸಿಕ ಶಕ್ತಿಯ ಕೊರತೆಯೇ ಇದಕ್ಕೆಲ್ಲ ಕಾರಣವಾಯಿತು. ಆ ನೋವನ್ನು ಇವತ್ತಿನವರೆಗೂ ಅನುಭವಿಸುತ್ತಲೇ ಇದ್ದಾಳೆ. ನೀನಾದರೂ ಮಾಡಿದ್ದೇನು? ಕರ್ಣನ ಮೇಲೆ ಹುಟ್ಟಿದ ಪ್ರೀತಿಯನ್ನು ಕೊಲ್ಲಲಾಗದೆ, ಪರಶುರಾಮರು ಶಾಪಕೊಟ್ಟ ಮೇಲೂ ಬೇರೊಬ್ಬನನ್ನು ವರಿಸದೆ ಏಕಾಕಿನಿಯಾಗಿ ಬದುಕಿದ್ದು ತರವೇನು? ನಿನಗೆ ಕರ್ಣನ ಚಿಂತೆ ಮಾತ್ರ, ಆದರೆ, ಕುಂತಿಗೆ ತಂದೆಯಿಲ್ಲದ ಐದು ಮಕ್ಕಳ ಚಿಂತೆ. ಇನ್ನೊಂದೆಡೆ ಯಾರಲ್ಲೂ ಹೇಳಿಕೊಳ್ಳಲಾಗದ ಕರ್ಣನ ಬಗೆಗಿನ ನೋವು. ಹೆಣ್ಣಾದ ನಿನಗೆ ಇದೆಲ್ಲ ಅರ್ಥವಾಗುತ್ತದಲ್ಲವೆ?”

“”ನಿನಗೆ ನೀನಾಡಿಸುವ ಆಟಗಳೆಲ್ಲ ಸರಿ ಎಂದು ಒಪ್ಪಿಸುವ ಶಕ್ತಿಯಿದೆ. ಅವೆಲ್ಲ ಸರಿಯಿರಲೂಬಹುದು. ಕುಂತಿಯ ಬಗೆಗೋ ಈ ಮಹಾಯುದ್ಧದ ಬಗೆಗೋ ನಾನು ಯೋಚಿಸಲಾರೆ. ನನಗೆ ನನ್ನ ಕರ್ಣನೇ ಜಗತ್ತು. ರಣರಂಗದಲ್ಲಿ ಅವನನ್ನು ರಕ್ಷಿಸಬೇಕಾಗಿದ್ದ ಕರ್ಣಕುಂಡಲವನ್ನು ನೀನು ಹಿಂದಿರುಗಿಸಿ ನನ್ನ ಕರ್ಣನನ್ನು ಉಳಿಸಿಕೊಡು”
“”ನಾನಿದನ್ನು ಹಿಂದಿರುಗಿಸುವಂತಿಲ್ಲ. ಕರ್ಣ ದಾನಶೂರನೆಂಬುದು ನಿನಗೂ ಗೊತ್ತು. ನಾನು ಕೊಟ್ಟರೂ ಆತನು ಇವನ್ನು ಖಂಡಿತವಾಗಿ ಹಿಂದಕ್ಕೆ ಪಡೆಯಲಾರ”
“”ಹಾಗಾದರೆ, ನಿನ್ನ ಶಕ್ತಿಯಿಂದ ನೀನೇ ಕರ್ಣನನ್ನು ರಕ್ಷಿಸು. ನಿನ್ನಲ್ಲಿ ನನಗೆ ನಂಬಿಕೆಯಿದೆ”
ಕೃಷ್ಣನಿಗೆ ನಗುಬಂತು.

“”ನನ್ನಲ್ಲಿರುವ ಶಕ್ತಿ ಧರ್ಮದ ಪರವಾಗಿಯೇ ಹೊರತು ಅಧರ್ಮದ ನಡೆಗಲ್ಲ. ಕರ್ಣ ಅಧರ್ಮದ ದಾರಿಯಲ್ಲಿದ್ದ ದುರ್ಯೋಧನನ ಮೋಹಕ್ಕೆ ಬಲಿಯಾಗಿ ಸಹಾಯಕ್ಕೆ ನಿಂತಿ¨ªಾನೆ. ಅಧರ್ಮದ ಯುದ್ಧವನ್ನೂ ಮಾಡಿ ಅಭಿಮನ್ಯುವನ್ನು ಕೊಂದಿದ್ದಾನೆ. ಆ ಕರ್ಣಕುಂಡಲ ಮತ್ತು ಅವನ ಕವಚ ಎರಡೂ ಕರ್ಣನ ಸ್ವತ್ತಲ್ಲ. ತನ್ನ ಸಾವನ್ನೂ ಪರಿಗಣಿಸದೆ ದಾನ ಮಾಡಿದ ಶೂರತ್ವದಿಂದಾಗಿ ಆತ ಇನ್ನೂ ವೀರನಾಗಿಯೇ ಇದ್ದಾನೆ”

“”ಕೃಷ್ಣ, ನನ್ನನ್ನು ಸಂತೈಸುವ ಮಾತುಗಳು ನನಗೆ ಬೇಡ. ನನಗೆ ಕರ್ಣ ಕದನದಲ್ಲಿ ಗೆದ್ದು ಬರಲಾರನೆಂಬ ಭಯ ಪ್ರತಿಕ್ಷಣವೂ ಹೆಚ್ಚುತ್ತಲಿದೆ. ಪರುಶುರಾಮರ ಶಾಪವನ್ನು ಕಣ್ಣಾರೆ ಕಂಡವಳು ನಾನು. ಕರ್ಣ ಇನ್ನೂ ಬದುಕಬೇಕೆಂಬುದು ನನ್ನ ಆಸೆ. ಅದರಲ್ಲಿ ಸ್ವಾರ್ಥವೂ ಅಡಗಿದೆ. ಆಗಲೇ ನಾನು ಹೇಳಿದಂತೆ ಅವನಿಲ್ಲದೆ ನಾನಿರಲಾರೆ. ಇದ್ದರೂ ನನಗೆ ನೆಮ್ಮದಿಯಿರದು. ನಿನ್ನಿಂದ ಇದು ಸಾಧ್ಯ. ಆತನಿಗೆ ಯಾವುದೇ ಅಪಾಯವಾಗದಂತೆ ಕಾಪಾಡು. ಇದು ನನ್ನ ಪ್ರಾರ್ಥನೆ” ಎಂದು ಮತ್ತೆ ಕಾಲಿಗೆರಗಿದಳು.

“”ಶಮಂತಿನಿ, ಕರ್ಣನು ಕೂಡ ಸೂರ್ಯದೇವನ ಸೊತ್ತೇ. ಅಂದರೆ ಕರ್ಣ ಸೂರ್ಯನ ಅಂಶ. ನಿನ್ನೆಯೇ ಸೂರ್ಯ ದೇವ ತನ್ನ ಈ ಅಂಶವನ್ನು ತನ್ನೊಡನೆ ಸೇರಿಸು ಎಂದು ಕೇಳಿಕೊಂಡಿದ್ದಾನೆ. ಇದು ಧರ್ಮಯುದ್ಧ. ಅಧರ್ಮದ ಪರವಾಗಿ ಯಾರೇ ನಿಂತರೂ ಅವರಿಗೆ ಗೆಲುವಿಲ್ಲ. ಇಲ್ಲಿ ಕರ್ಣ ಗೊತ್ತಿದ್ದೋ-ಗೊತ್ತಿಲ್ಲದೆಯೋ, ನೀನೇ ಹೇಳಿದಂತೆ ಅನಿವಾರ್ಯಕ್ಕೋ ಅಧರ್ಮವನ್ನು ಬೆಂಬಲಿಸಿ ಹೋರಾಟಕ್ಕೆ ನಿಂತಿದ್ದಾನೆ. ಆದರೂ ಅವನು ಆಸೆಗಳನ್ನು ಗೆದ್ದವನು. ಪರಶುರಾಮರ ಶಾಪದಿಂದಾಗಲೀ ಕುಂತಿಗೆ ಮಾತು ಕೊಡುವ ಸಮಯದಲ್ಲಾಗಲೀ ನನಗೆ ಈ ಕರ್ಣಕುಂಡಲಗಳನ್ನು ಕಿತ್ತು ಕೊಡುವ ಹೊತ್ತಿನಲ್ಲಾಗಲೀ ಪ್ರಾಣಕ್ಕೆ ಕುತ್ತೆಂಬುದು ತಿಳಿದಿದ್ದರೂ ಆ ಬಗೆಗೆ ಯೋಚಿಸದೆ, ಕುಂದದೆ ನಡೆದುಕೊಂಡವನು. ಅವನ ಮುಕ್ತಿಯ ಪಥ ಈಗ ಅವನ ಕಣ್ಣೆದುರು ಹಾದು ಹೋಗಿರುವುದು ಅವನಿಗೆ ಗೋಚರಿಸುತ್ತಿದೆ. ನಾಳೆಯ ಯುದ್ಧದಲ್ಲಿ ಏನಾಗಬಹುದೆಂಬ ಅರಿವು ಆತನಿಗಿದೆ. ಹಾಗಾಗಿ ಆತ ಕರ್ಣಕುಂಡಲವನ್ನು ನನ್ನ ಕೈಗಿಡುತ್ತ ಬ್ರಾಹ್ಮಣರೇ, ನೀವಾರೆಂಬುದರ ಅರಿವು ನನಗಿದೆ. ಇದೋ ಈ ಸುವಸ್ತುವನ್ನು ನಿಮ್ಮ ಕೈಗಿತ್ತಂತೆ, ನನ್ನ ಪ್ರಾಣವನ್ನೂ ಒತ್ತೆಯಿಟ್ಟಿದ್ದೇನೆ. ತಾಯಿಯ ಮಾತನ್ನು ಪರಿಪಾಲಿಸುವವನಿದ್ದೇನೆ. ಈ ದಾನ ಮತ್ತು ತಾಯಿಗಿತ್ತ ಭಾಷೆಯಿಂದಾಗಿ ಒಂದಿಷ್ಟು ಪುಣ್ಯ ನನಗೆ ಲಭಿಸಿರಬಹುದು. ಸಾವಿಗೆ ಈ ಕರ್ಣ ಎಂದಿಗೂ ಹೆದರುವವನಲ್ಲ. ಅರ್ಜುನನ ಬಾಣದ ಜೊತೆ ನಿಮ್ಮ ಕೃಪೆಯ ಸೌಭಾಗ್ಯ ನನ್ನನ್ನಾವರಿಸಲಿ. ಆ ಸೌಭಾಗ್ಯವೇ ಈವರೆಗೆ ನನ್ನಿಂದಾದ ತಪ್ಪನ್ನು ಮನ್ನಿಸಿ ಮುಕ್ತಿಯನ್ನು ದೊರಕಿಸಿಕೊಡಲಿ ಎಂದು ಕೈಜೋಡಿಸಿದ್ದಾಂನೆ. ಹಾಗಾಗಿ, ಇಲ್ಲಿ ಯುದ್ಧ ಎಂಬುದು ಕೇವಲ ಒಂದು ಮುಕ್ತಿಯ ಮಾರ್ಗದ ರೂಪವಷ್ಟೆ”

“”ಹಾಗಾದರೆ ನನ್ನ ಪ್ರೀತಿ ಸತ್ತುಬಿಡುವುದೇ? ಕರ್ಣನ ಅವಸಾನ ಸತ್ಯವೆ?”
“”ಅದನ್ನು ನಾನೀಗ ಹೇಳಲಾರೆ. ಹೇಳಬಾರದು. ನಿನಗೆ ಕರ್ಣನಲ್ಲಿ ಮಾತನಾಡುವುದಕ್ಕಿದೆಯೇ? ಇಂದೇ ಹೋಗಿ ಮಾತನಾಡು”
“”ಇಲ್ಲ. ನಾನು ಹೋಗಲಾರೆ. ನಾಳೆ ಸಾಯುವ ಕರ್ಣನಿಗೆ ನಾನು ನಿನ್ನ ಪ್ರೇಯಸಿ ಎಂದು ಹೇಳಲೇನು? ಪರಶುರಾಮರ ಶಾಪ ನನಗಿನ್ನೂ ನೆನಪಿದೆ. ಬೇಡ ನನ್ನ ಬಗ್ಗೆ ತಿಳಿದ ಕರ್ಣ ಆ ನೋವನ್ನೂ ಹೊತ್ತುಕೊಂಡು ಯುದ್ಧ ಮಾಡುವುದು ಬೇಡ. ಇಡೀ ಜೀವನವನ್ನೇ ತಪಸ್ಸಿನಂತೆ ಬದುಕಿದವಳಿಗೆ ಘೋರತಪಸ್ಸನ್ನು ಮಾಡಲೂ ಗೊತ್ತು. ಈಗಲೇ ಕಾಡಿಗೆ ತೆರಳಿ ತಪಸ್ಸಿಗೆ ತೊಡಗುತ್ತೇನೆ. ಒಂದೋ ಕರ್ಣನ ಆಯಸ್ಸು ಹೆಚ್ಚಬೇಕು ಅಥವಾ ನನ್ನ ಆಯಸ್ಸು ನಾಳೆಯೇ ತೀರಬೇಕು” ಎನ್ನುತ್ತ ಕ್ಷಣಕಾಲವೂ ಅಲ್ಲಿನಿಲ್ಲದೆ ಹೊರಟಳು.

ಕೃಷ್ಣ ಭಾರವಾದ ಮನಸ್ಸಿನಿಂದ ಆಕಾಶದತ್ತ ನೋಡಿದ.

ಕರ್ಣ ರಣರಂಗದಲ್ಲಿ ಹತನಾಗುತ್ತಲೇ ಆಕಾಶದತ್ತವೇ ನೋಡುತ್ತಿದ್ದ ಕೃಷ್ಣನಿಗೆ ಶಮಂತಿನಿ ತಪಸ್ಸಿಗೆ ಕುಳಿತ ಕಾಡಿನಿಂದ ನಕ್ಷತ್ರ ರೂಪವೊಂದು ಕರ್ಣನ ಪ್ರಾಣವಾಯುವನ್ನು ಸೇರಿಕೊಂಡು ಸೂರ್ಯನನ್ನು ಸೇರಿದ್ದು ಕಂಡಿತು.
ಕೃಷ್ಣ ಮತ್ತೆ ಮುಗುಳ್ನಕ್ಕ.

ವಿಷ್ಣು ಭಟ್‌ ಹೊಸ್ಮನೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ