ಸೊಸೇನೇ ದೊಡ್ಡ ಸಮಸ್ಯೆ!

Team Udayavani, May 15, 2019, 6:00 AM IST

“ಅವರ ಮನೇಲಿ ಅತ್ತೆಯದ್ದೇ ದರ್ಬಾರಂತೆ…’, “ಈ ಮನೇಲಿ ಸೊಸೆ ತುಂಬಾ ಸ್ಟ್ರಾಂಗ್‌ ಅಂತೆ, ಕಂಪ್ಲೇಂಟ್‌ ಕೊಡ್ತೇನೆ ಹುಷಾರ್‌ ಅಂದಳಂತೆ…’ ಇಂಥ ಮಾತುಗಳು ಪ್ರತಿ ಊರಿನಲ್ಲೂ, ಪ್ರತಿ ಓಣಿಯಲ್ಲೂ ಸಾಮಾನ್ಯ. ಮಗಳ ವಯಸ್ಸಿನ ಸೊಸೆಯನ್ನು ಅತ್ತೆಯೂ, ತಾಯಿಯ ವಯಸ್ಸಿನ ಅತ್ತೆಯನ್ನು ಸೊಸೆಯೂ ದ್ವೇಷಿಸದೇ ಬಾಳಲೂ ಸಾಧ್ಯವಿದೆ…

ಪ್ರತಿಯೊಬ್ಬ ಹೆಣ್ಣು ಮಗಳೂ ತನ್ನ ಕುಟುಂಬವನ್ನೇ ತೊರೆದು ಗಂಡನ ಮನೆಗೆ ಬಂದಿರುತ್ತಾಳೆ. ಹೊಸ ಮನೆಯಲ್ಲಿ ಎಲ್ಲರನ್ನೂ ತನ್ನವರೆಂದು ಅಂದುಕೊಳ್ಳುತ್ತಾಳೆ. ಅತ್ತೆ ಅಂದರೆ ಅವಳಿಗೆ ಮತ್ತೂಬ್ಬಳು ತಾಯಿ. ಮಗಳು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವಂತೆ ಅತ್ತೆ ತನ್ನ ಸೊಸೆಗೂ ಬುದ್ಧಿ ಹೇಳಬೇಕು. ಆದರೆ, ಅಂಥ ಸಂದರ್ಭಗಳು ಬದುಕಲ್ಲಿ ಜೊತೆಯಾಗುವುದೇ ಇಲ್ಲ…

ಇದು ಒಬ್ಬರಿಬ್ಬರ ದೂರಲ್ಲ. ಎಲ್ಲರ ಮನೆ ದೋಸೆ ತೂತು ಅನ್ನುವಂತೆ, ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಂಡು ಬರುವಂಥಾ ಸಮಸ್ಯೆ. ಅತ್ತೆ-ಸೊಸೆ ನಡುವೆ ಅನ್ಯೋನ್ಯ ಸಂಬಂಧ ಇರುವುದು ಬಹಳ ವಿರಳ. ಹಲವರು ಅನ್ಯೋನ್ಯವಾಗಿ ಇರುವಂತೆ ಸಮಾಜಕ್ಕೆ ತೋರಿಸಲು ಇನ್ನಿಲ್ಲದ ಕಷ್ಟಪಡುತ್ತಾರೆ. ಮನೆಯಿಂದ ಹೊರಗಡೆ ಮದುವೆ, ಪೂಜೆ ಎಂದಾಗ ಖುಷಿಯಿಂದ ಓಡಾಡುತ್ತಾರೆ. ಮನೆಯೊಳಗೆ ಮಾತ್ರ ಇಬ್ಬರೂ ಉತ್ತರ-ದಕ್ಷಿಣ. ಒಬ್ಬರನ್ನು ಕಂಡ್ರೆ ಇನ್ನೊಬ್ಬರಿಗಾಗಲ್ಲ.

ಹಾಗಂತ, ಮದುವೆಯಾದ ಹೊಸದರಲ್ಲಿ ಹೀಗಿರುವುದಿಲ್ಲ. ಎಲ್ಲಾ ಅತ್ತೆಯಂದಿರೂ ಸೊಸೆಯನ್ನು ಪ್ರೀತಿಯಿಂದಲೇ ಬರಮಾಡಿಕೊಳ್ಳುತ್ತಾರೆ. ಅಕ್ಕಪಕ್ಕದ ಮನೆಯವರಲ್ಲಿ ಸೊಸೆಯ ಅಂದ-ಚಂದ, ಕೆಲಸದ ಅಚ್ಚುಕಟ್ಟು , ಶಿಸ್ತಿನ ಬಗ್ಗೆ ಗಂಟೆಗಟ್ಟಲೆ ಹೊಗಳುತ್ತಾರೆ. ಆದರೆ, ದಿನದಿಂದ ದಿನಕ್ಕೆ ಒಳ್ಳೆಯ ಗುಣಗಳನ್ನು ಬಿಟ್ಟು, ತಪ್ಪುಗಳೇ ಕಾಣತೊಡಗುತ್ತವೆ. ಯಾವ ಕೆಲಸವನ್ನೂ ನೀಟಾಗಿ ಮುಗಿಸಿಲ್ಲ ಅನ್ನೋದ್ರಿಂದ ತೊಡಗಿ, ಹಿರಿಯರ ಮಾತಿಗೆ ಬೆಲೆನೇ ಕೊಡಲ್ಲಪ್ಪಾ ಅನ್ನೋವರೆಗೆ ಬಂದು ನಿಲ್ಲುತ್ತದೆ.

ನೆರೆಮನೆಯವರು ಬಂದರಂತೂ ಅವರ ಬಳಿ ಬರೀ ಸೊಸೆಯ ಕುರಿತಾದ ದೂರುಗಳೇ. ಏನೂಂತ ನೋಡಿ ಒಪ್ಕೊಂಡ್ವೋ… ನಮ್ಮ ಮಗನಿಗೆ ಇದಕ್ಕಿಂದ ಅದೆಷ್ಟೋ ಒಳ್ಳೆಯ ಹುಡುಗಿ ಸಿಗ್ತಾ ಇದ್ಲು ಅಂತ ಅಲವತ್ತುಕೊಳ್ಳುತ್ತಾರೆ. ತಮ್ಮ ಸೊಸೆ ಪಫೆಕ್ಟ… ಅಲ್ಲ ಅನ್ನೋದನ್ನು ಮತ್ತೆ ಮತ್ತೆ ಮನಸ್ಸಿಗೆ ಖಾತರಿಪಡಿಸುತ್ತಲೇ ಇರುತ್ತಾರೆ. ಇನ್ನು ಮನೆಯೊಳಗೆ ಮಗಳು ಇದ್ದರಂತೂ, ಅವಳ ಜತೆ ಹೋಲಿಕೆ ಮಾಡಿ ಸೊಸೆಯನ್ನು ತೆಗಳುವುದು ನಡೆಯುತ್ತದೆ. ಈ ರೀತಿಯಾಗಿ ಅತ್ತೆ-ಸೊಸೆ ನಡುವೆ ಅಂತರ ಬೆಳೆಯುತ್ತಾ ಹೋಗುತ್ತದೆ.

ಇದೆಲ್ಲದರ ಮಧ್ಯೆ ಮಗ, ಸೊಸೆಯ ಪರವಾಗೇ ನಿಲ್ತಾನೆ ಅನ್ನೋದು ಮತ್ತಷ್ಟು ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ನೀವು ಸೊಸೆಯಾಗಿ¨ªಾಗ ನಿಮ್ಮ ಗಂಡ ನಿಮ್ಮ ಪರವಾಗಿ ನಿಂತಿದ್ದು ಸರಿಯಾದರೆ ಮಗ ಮಾಡುವುದು ಯಾಕೆ ತಪ್ಪು? ಎಲ್ಲರೂ ದೂಷಿಸುವವರೇ ಆದಾಗ, ಒಬ್ಬರಿಂದಲಾದರೂ ಪ್ರೀತಿಯ ಆಸರೆ ಬೇಕಿರುತ್ತದಲ್ವಾ?

ಆದರೆ, ಎಲ್ಲಾ ಅತ್ತೆಯಂದಿರೂ ತಿಳಿದುಕೊಳ್ಳಬೇಕು, ಎಲ್ಲರೂ ಸರ್ವಗುಣ ಸಂಪನ್ನರಲ್ಲ. ಎಲ್ಲರ ವ್ಯಕ್ತಿತ್ವದಲ್ಲೂ ಪಾಸಿಟಿವ್‌ ಗುಣಗಳ ಜತೆ ನೆಗೆಟಿವ್‌ ಗುಣಗಳೂ ಇರುತ್ತವೆ. ಎಲ್ಲಾ ಸರಿ-ತಪ್ಪುಗಳನ್ನು ಒಪ್ಪಿಕೊಂಡು ನಮ್ಮವರಾಗಿಸಿಕೊಳ್ಳುವುದೇ ಪರಿಪೂರ್ಣತೆ. ಬಹುತೇಕ ಪ್ರತಿಯೊಬ್ಬ ಅತ್ತೆಯೂ ತಾನೂ ಸೊಸೆಯಾಗಿಯೇ ಬಳಿಕ ಅತ್ತೆಯಾದೆ ಅನ್ನೋದನ್ನೇ ಮರೆತುಬಿಡುತ್ತಾರೆ. ಎಲ್ಲರೂ ಅಲ್ಲ, ಕೆಲವೊಬ್ಬರು. ಹೀಗಾಗಿಯೇ ಸೊಸೆಯ ವ್ಯಕ್ತಿತ್ವದಲ್ಲಿ ಹೊಸ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತದೆ.

ಹಾಗಂತ ಜಗಳ, ಮುನಿಸು ನಡೆಯಲೇಬಾರದು ಅಂತಲ್ಲ. ಅದ್ಯಾವುದೂ ಇರದ ಸಂಬಂಧಗಳು ಇವೆಯಾ? ಎಲ್ಲಾ ಸಂಬಂಧಗಳಲ್ಲೂ ಪ್ರೀತಿ, ಗೌರವದ ಜತೆ ಅಷ್ಟಿಷ್ಟು ಜಗಳ, ಕಿತ್ತಾಟ ನಡೆದಾಗಲೇ ಆ ಬಾಂಧವ್ಯದ ಎಳೆ ಸರಿಯಾಗಿದೆ ಎಂದರ್ಥ. ಆದರೆ ಜಗಳ, ಆಗಿನ ಮಾತು ಎಲ್ಲವನ್ನೂ ಮರೆತು, “ಸ್ಸಾರಿ’ ಎಂದು ಮತ್ತೆ ಪ್ರೀತಿಯಿಂದ ಮುನ್ನಡೆಯುವ ಮನಸ್ಸಿರಬೇಕು ಅಷ್ಟೆ.

ಅತ್ತೆಯಾದವಳು ಸೊಸೆಯ ತಪ್ಪುಗಳನ್ನು ಎತ್ತಿ ಹಿಡಿದು ದೂಷಿಸುವ ಬದಲು, ಸರಿಪಡಿಸಿಕೊಳ್ಳಲು ಸೂಚಿಸಬೇಕು. ಸೊಸೆ ಕೂಡಾ, ಹಿರಿಯರು ಹೇಳುವುದು ತನ್ನ ಒಳ್ಳೆಯದಕ್ಕೇ ಎಂದು ಅರಿತು ತಗ್ಗಿ ಬಗ್ಗಿ ನಡೆಯಬೇಕು. ಹೀಗಾದಾಗಲಷ್ಟೇ, ಅತ್ತೆ-ಸೊಸೆಯ ಸಂಬಂಧ “ಮಧುರ’ವಾಗಲು ಸಾಧ್ಯ.

ವಿನುತಾ ಪೆರ್ಲ


ಈ ವಿಭಾಗದಿಂದ ಇನ್ನಷ್ಟು

  • ಮನೆಗೆ ಬೀಗ ಹಾಕ್ಕೊಂಡು ಎಲ್ಲರೂ ಹೋಗಬೇಕಾದ ಪರಿಸ್ಥಿತಿ ಬಂದಾಗ ಮತ್ತೂಂದಿಷ್ಟು ಹೆಚ್ಚಿನ ಜವಾಬ್ದಾರಿ. ಎಲ್ಲರ ಬಟ್ಟೆ, ಸಾಮಾನುಗಳನ್ನು ಸರಿಯಾಗಿ ಪ್ಯಾಕ್‌ ಮಾಡೋದು...

  • ಮಾವಿನ ಮರ ಹೂ ಬಿಟ್ಟಾಗಲೇ, ಈ ವರ್ಷ ಮಾವಿನ ಹಣ್ಣು ಮತ್ತು ಕಾಯಿಯಿಂದ ಯಾವೆಲ್ಲಾ ಅಡುಗೆ ಮಾಡಬಹುದು ಅಂತ ಗೃಹಿಣಿಯರು ಲೆಕ್ಕ ಹಾಕುತ್ತಾರೆ. ಮಾವಿನ ಹಣ್ಣನ್ನು ಹಾಗೇ...

  • ನಿರ್ಜಲೀಕರಣ, ಸನ್‌ಬರ್ನ್, ತುರಿಕೆ, ಬೆವರುಸಾಲೆ, ಕಜ್ಜಿ, ಬಾಯಿಹುಣ್ಣು, ಉರಿಮೂತ್ರ ಸಮಸ್ಯೆ, ನಿದ್ರಾಹೀನತೆ... ಬೇಸಿಗೆಯಲ್ಲಿ ನಮ್ಮನ್ನು ಕಾಡುವ ಸಮಸ್ಯೆಗಳು ಒಂದೇ,...

  • "ಕಾಡು ಕುದುರೆ ಓಡಿ ಬಂದಿತ್ತಾ...' ಗೀತೆಯ ಮೂಲಕ ರಾಷ್ಟ್ರಪ್ರಶಸ್ತಿಗೆ ಪಾತ್ರರಾದವರು ಶಿವಮೊಗ್ಗ ಸುಬ್ಬಣ್ಣ. ಅವರ ಸಿರಿಕಂಠವನ್ನು ಪ್ರಧಾನಿ ನೆಹರು ಅವರೂ ಮೆಚ್ಚಿಕೊಂಡಿದ್ದರು....

  • ಲಾಭ ಮಾಡುವುದೇ ವ್ಯಾಪಾರದ ಮೂಲ ಉದ್ದೇಶ ಎಂಬ ಮಾತಿದೆ. ಆದ್ರೆ, ಕೆಲವರಿಗೆ ವ್ಯಾಪಾರವೇ ಬದುಕಿನ ಮೂಲಾಧಾರ. ಸಂಸಾರದ ತಕ್ಕಡಿ ತೂಗಿಸಲು, ತಕ್ಕಡಿ ಹಿಡಿಯಲೇಬೇಕಾದ ಅನಿವಾರ್ಯಕ್ಕೆ...

ಹೊಸ ಸೇರ್ಪಡೆ