ಸೀರೆಯಲ್ಲಿ ಮೊಬೈಲ್‌ ಪಾಕೇಟ್‌

Team Udayavani, May 31, 2019, 6:00 AM IST

ಇತ್ತೀಚೆಗೆ ಮೊಬೈಲ್‌ ಇಡಲು ಜೇಬು ಇರುವ ಸೀರೆಯೊಂದರ ಚಿತ್ರ ನೋಡಿದೆ. ಟೀವಿ ಶೋ ನೋಡಿದರೆ, ಅದರಲ್ಲಿ ನಿರೂಪಕಿ ಪ್ಯಾಂಟ್‌ ಮೇಲೆ ಸೀರೆಯೊಂದನ್ನು ವಿಶಿಷ್ಟವಾಗಿ ಸುತ್ತಿಕೊಂಡಿದ್ದಳು. ಇನ್ನೊಂದು ವೀಡಿಯೋದಲ್ಲಿ ಫ್ಯಾಷನ್‌ ಡಿಸಾೖನರ್‌ ಒಬ್ಬ ಹದಿನೇಳು ರೂಪದರ್ಶಿಗಳಿಗೆ ಮಟ್ಟಸವಾಗಿ ಸೀರೆ ಉಡಿಸುತ್ತಿದ್ದ ಜಾಹೀರಾತು ಒಂದನ್ನು ನೋಡಿದರೆ ಸೀರೆಯುಟ್ಟ , ನಡು ವಯಸ್ಸಿನ ಮಹಿಳೆಯೊಬ್ಬಳು ಸ್ಕೂಟರ್‌ ಹಿಂದೆ ಕುಳಿತು ಓದುತ್ತಿರುತ್ತಾಳೆ ಹಾಗೂ ಮನೆಯವರೆಲ್ಲ ಆಕೆಗೆ ಪ್ರೋತ್ಸಾಹ ಕೊಡುತ್ತಿರುತ್ತಾರೆ. ಹಾಗೆಯೇ ಇನ್ನೊಂದು ಜಾಹೀರಾತಿನಲ್ಲಿ ಸೀರೆಯುಟ್ಟ ಒಬ್ಬ ಮಹಿಳೆ ತಾನೇ ಕಷ್ಟಪಟ್ಟು ಸ್ಕೂಟಿ ನಡೆಸಲು ಕಲಿಯುತ್ತಾಳೆ ಹಾಗೂ ಅವಳ ಗಂಡ ಹೆಮ್ಮೆಯಿಂದ ಆಕೆಗೆ ಕೀ ಕೊಡುತ್ತಾನೆ. ಈ ಎಲ್ಲ ಜಾಹೀರಾತುಗಳಲ್ಲಿನ ಸ್ಥಾಯೀಭಾವ ಸೀರೆ ಹಾಗೂ ಸಮಾಜದ, ಕುಟುಂಬದ ಉದಾರತೆ.

“ಸೀರೆ’ ಭಾರತೀಯ ನಾರಿಯ ಪ್ರತೀಕವಾಗಿದ್ದು ಅದರಲ್ಲಿ ಮೊಬೈಲ್‌ ಇಡಲು ಅವಕಾಶ ಕೊಟ್ಟಿರುವ ಹಾಗೆಯೇ ಸಮಾಜದಲ್ಲಿ ಬಹಳ ಪ್ರಕಟವಾಗಿಯೇ ಹೆಣ್ಣುಮಕ್ಕಳ ವಿದ್ಯಾಭ್ಯಾಸ, ನೌಕರಿ ಎಂದೆಲ್ಲ ಅಭೂತಪೂರ್ವ ಬದಲಾವಣೆಗಳಾಗಿವೆ. ಒಂದು ಜಾಹೀರಾತಿನಲ್ಲಿ ಒಬ್ಬ ತಂದೆ ತನ್ನ ಮುದ್ದಿನ ಮಗಳಿಗೆ ತಪ್ಪುತಪ್ಪಾಗಿ ಜಡೆ ಹಾಕುತ್ತಾನೆ ಹಾಗೂ ಮಗಳಿಗೆ ನಸು ನಗು. ಮಗಳಿಗೆ ಅಡುಗೆ ಮಾಡಿಕೊಡುವ ತಂದೆ, ಹೆಂಡತಿ ಓದುವಾಗ ಟೀ ಮಾಡಿಕೊಡುವ ಗಂಡ- ಹೀಗೆ ಇದೊಂದು ಆಶಾದಾಯಕ ವಿದ್ಯಮಾನ.

ಇರಲಿ. ಇದೀಗ ಸೀರೆಗಳ ವಿಷಯ. ಸೀರೆಯೆನ್ನುವ ಈ ಆರು ಯಾರ್ಡ್‌ನ ಬಟ್ಟೆ ಭಾರತೀಯ ಜನಮಾನಸವನ್ನಾವರಿಸಿಕೊಂಡಿರುವ ಪರಿ ಅಚ್ಚರಿ ಮೂಡಿಸುತ್ತದೆ. ಒಂದು ರೀತಿ ಇದು ಭಾರತದ ಅಸ್ಮಿತೆ ಕೂಡ. ಅದು ಏಕಕಾಲದಲ್ಲಿ ವಿಶಿಷ್ಟವೂ ನಿರ್ಬಂಧಕಾರಿಯೂ ಆಗಿರುವುದು ಹೌದು. ಸ್ವಾತಂತ್ರ್ಯಹೋರಾಟದ ಸಂದರ್ಭದಲ್ಲಿ ಖಾದಿ ಸೀರೆ ಧರಿಸುವುದೊಂದು ಪ್ರತಿಭಟನೆಯ, ಭಾರತೀಯತೆಯ ಸಂಕೇತವಾಗಿತ್ತು. ಈಗ ಸೀರೆ ಎಂದರೆ ಕೇವಲ ಸಾಂಪ್ರದಾಯಿಕ ದಿರಿಸು ಎಂದಲ್ಲ. ಫ್ಯಾಷನ್‌ ಶೋ, ರ್‍ಯಾಂಪ್‌ ವಾಕ್‌ಗಳಲ್ಲಿ , ಮದುವೆಯಂಥ‌ ಶುಭಸಮಾರಂಭಗಳಲ್ಲಿ ಹೆಚ್ಚೇಕೆ ಕಾಲೇಜು ಹುಡುಗಿಯರು ಕೂಡ “ಸ್ಪೆಷಲ್‌’ ಆಗಿ ಕಾಣಿಸಿಕೊಳ್ಳಲು ಸೀರೆಯನ್ನೇ ಆಯ್ದುಕೊಳ್ಳುತ್ತಾರೆ. ಬಣ್ಣ ಬಣ್ಣದ, ಭಿನ್ನ ಶೈಲಿಯಲ್ಲಿ ಸೀರೆಯುಟ್ಟ ಲಲನೆಯರ ಉತ್ಸಾಹ ನೋಡುವುದೇ ಕಣ್ಣಿಗೊಂದು ಹಬ್ಬ. ಇನ್ನು ಡಿಸಾೖನರ್‌ ರವಿಕೆ, ಸೀರೆ, ಕುಚ್ಚು , ಗೊಂಡೆ ಎಂದೆಲ್ಲ ಸೀರೆ ಉಡುವ ತಯಾರಿಯೂ ಒಂದು ಸಂಭ್ರಮದ ವಿಷಯವೇ.

ದಿನನಿತ್ಯ ಸೀರೆ ಉಡಲೇ ಬೇಕಾದ ಟೀಚರುಗಳು, ಉಪನ್ಯಾಸಕಿಯರೂ ಅದನ್ನೇ ಅನಿವಾರ್ಯವಾಗಿ ಸಂಭ್ರಮಿಸಿ ಕೊಳ್ಳುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಮ್ಯಾಚಿಂಗ್‌ ಕಿವಿಯೋಲೆಗಳು, ವಿವಿಧ ರಾಜ್ಯಗಳ ಸೀರೆಗಳ ಕಲೆಕ್ಷನ್‌, ಬೇಸಿಗೆ- ಮಳೆಗಾಲ-ಸಮಾರಂಭಗಳಿಗೆ ಬೇರೆ ಬೇರೆ ಸೀರೆ… ಹೀಗೆಲ್ಲ. ಒಟ್ಟಿನ ಮೇಲೆ ಸೀರೆ ಎನ್ನುವ ಈ ಮೆತ್ತನೆಯ ಬಟ್ಟೆ ನಮ್ಮ ದೇಶದಲ್ಲಿ ಕಾಲ ದೇಶಾತೀತವಾಗಿ ಅಸ್ತಿತ್ವದಲ್ಲಿದ್ದು ಎಲ್ಲ ಕಾಲಕ್ಕೂ ಎಲ್ಲ ವಯೋಮಾನದವರಿಗೂ ಸಲ್ಲುತ್ತಿರುವುದು ಒಂದು ವಿಸ್ಮಯ. ಅತ್ಯಂತ “ಮಾಡ್‌’ ಇರುವವರು ಕೂಡ ತಮ್ಮ ಮದುವೆ ಸೀರೆ ಬಗ್ಗೆ ತಿಂಗಳುಗಟ್ಟಲೆ ತಲೆಕೆಡಿಸಿಕೊಳ್ಳುತ್ತಾರೆ. ಸದಾ ಕೆರಿಯರ್‌ ಎಂದು ಫ್ಯಾಷನ್‌ ಕಡೆ ಗಮನ ಕೊಡದ ಹುಡುಗಿಯರು ಕೂಡ ಒಮ್ಮೊಮ್ಮೆ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಳ್ಳುವುದಿದೆ.

ಇನ್ನು ಸೀರೆಯನ್ನು ನೇಯುವವರ ಕತೆಯೇ ಬೇರೆ. “ಕಾಂಜೀವರಂ’ ಸಿನೆಮಾದಲ್ಲಿ ನೇಕಾರರ ಬವಣೆ ಅತಿ ಸಮರ್ಥವಾಗಿ ಬಿಂಬಿಸಲ್ಪಟ್ಟಿದೆ. ಇನ್ನು ನಮ್ಮ ನವಿರಾದ ರೇಶ್ಮೆ ಸೀರೆಗಳಿಗೋಸ್ಕರ ಅದೆಷ್ಟು ರೇಶ್ಮೆ ಹುಳುಗಳು ವಿಲವಿಲ ಒದ್ದಾಡುತ್ತವೋ ಏನೋ! ಹಾಗಿದ್ದರೂ ಸೀರೆಯ ವ್ಯಾಮೋಹ ಹೆಣ್ಣುಮಕ್ಕಳನ್ನು ಬಿಡದು. ನಗರಗಳಲ್ಲಿ ನಾರ್ತ್‌ ಇಂಡಿಯನ್‌ ಸೀರೆಗಳ ಮಳಿಗೆಗಳು ಬಂದಾಗಲೆಲ್ಲ ಬಹಳ ನಿಗದಿತವಾಗಿ ಸೀರೆಗಳನ್ನು ಕೊಳ್ಳುತ್ತೇವೆ. ಬಾಂದನಿ, ಲಕ್ನೋ, ಚಿಕಾನ್‌ ವರ್ಕ್‌, ಕುಂದನ್‌, ಕಲಂಕರಿ… ಹೀಗೆ ವಿವಿಧ ವಿನ್ಯಾಸದ ಗಿಳಿ, ನವಿಲು, ಸಾರೋಟು ಎಂದೆಲ್ಲ ಚಿತ್ರಗಳಿರುವ, ಕೆಲವೊಮ್ಮೆ ಪೈಂಟಿಂಗ್‌ಗಳೂ ಇರುವ ಈ ಸೀರೆಯ ಸೇಲ್‌ಗ‌ಳಿಗೆ ಮರುಳಾಗದವರಿಲ್ಲ. ಧಾರವಾಡದಂತಹ ನಗರಗಳಲ್ಲಿ ಸಿಗುವ ಕಸೂತಿ ಇರುವ, ಚೌಕುಳಿಗಳ ವಿನ್ಯಾಸಗಳಿರುವ ಸೀರೆಗಳು, ಬಿಳಿ ಬಣ್ಣದ, ಕೆಂಪು ಬಾರ್ಡರ್‌ ಇರುವ ಬಂಗಾಳಿ ಸೀರೆಗಳು, ಕೋಲಿನಂತಹ ಮನುಷ್ಯರ ಚಿತ್ರ ಇರುವ “ವರ್ಲಿ’ ಡಿಸಾೖನ್‌ ಸೀರೆಗಳು, ಆದಿವಾಸಿಗಳ ಗುಡಿಸಲು- ತಮಟೆಯಂತಹ ಚಿತ್ರಗಳಿರುವ ಸೀರೆಗಳು… ಸೀರೆ ಎಂದರೆ ಸಂಸ್ಕೃತಿಯ ಸೂಚಕ ಕೂಡ.

ಕೇರಳದ ತಿರುವಾದಿರ ಕಳಿಯಲ್ಲಿ ಹೆಣ್ಣುಮಕ್ಕಳು ಧರಿಸುವ ಬಿಳಿ ಸೀರೆ, ಕೆಂಪು ರವಿಕೆ, ಕೋಲಾಟ, ಜನಪದ ನೃತ್ಯದ ಹೀಗೆಲ್ಲ ಧರಿಸುವ ಚೌಕುಳಿ ಚೌಕುಳಿ ಹತ್ತಿ ಸೀರೆ, ಲಾವಣಿಯಂತಹ ನೃತ್ಯಗಳಲ್ಲಿ ಧರಿಸುವ ಗಾಢ ವರ್ಣದ ಸೀರೆಗಳು… ಹೀಗೆ ಕಲೆ, ಸಂಸ್ಕೃತಿ, ಭೌಗೋಳಿಕ ವಿನ್ಯಾಸ… ಹೀಗೆ ಸೀರೆಗೆ ಅದೆಷ್ಟು ಮುಖ?

ಕೊಡಗಿನ ಬೆಡಗಿಯರು ಸೀರೆ ಉಡುವ ಶೈಲಿಗೆ ಮನ ಸೋಲದವರಿಲ್ಲ. ಮೈಸೂರಿನಲ್ಲಿ ನಮ್ಮ ಪಕ್ಕದ ಮನೆಯ ಅತಿ ಸಂಪ್ರದಾಯಬದ್ಧ ಅಯ್ಯಂಗಾರ್‌ ಅಜ್ಜಿಯೊಬ್ಬರು ಕಚ್ಚೆ ಹಾಕಿ ಸೀರೆ ಉಡುತ್ತಿದ್ದುದು ನನಗೆ ಈಗಲೂ ನೆನಪಾಗುತ್ತಿರುತ್ತದೆ. ಇನ್ನು ಸೀರೆಯ ಬಣ್ಣಗಳ್ಳೋ ಅಸಂಖ್ಯ. ಸೀರೆ ಎಂಬುದು ನಮ್ಮ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಬಗೆ ಆಶ್ಚರ್ಯ ಹುಟ್ಟಿಸುತ್ತದೆ. ನಾವು ಪುಟ್ಟ ಮಕ್ಕಳಿದ್ದಾಗ ರಾಮಾಯಣ ಸೀರೆ, ಬಳೆ ಎಂದೆಲ್ಲ ಅಮ್ಮ, ಅಜ್ಜಿಯರು ಹೇಳುತ್ತಿದ್ದುದು ನೆನಪಿದೆ. ಬಂಧನ ಸಿನೆಮಾದಲ್ಲಿ ಸುಹಾಸಿನಿ ಉಟ್ಟ ಪ್ಲೆ„ಯಿನ್‌ ಸೀರೆಗಳು ಈಗಲೂ ನೋಡಲು ಖುಶಿ. ಹಳೆಯ ಹಿಂದಿ ಸಿನೆಮಾಗಳು, ಕಲ್ಪನಾರಂತಹ ನಟಿಯರು ಗೇಣುದ್ದದ ಬಾರ್ಡರ್‌ ಸೀರೆಯಲ್ಲಿ ರಾರಾಜಿಸುತ್ತಿರುತ್ತಾರೆ. ಮೊನ್ನೆ ತಾನೇ ಒಬ್ಬ ಫ್ಯಾಶನೇಬಲ್‌ ಮಹಿಳೆ ಧರಿಸಿದ ಬ್ಲೌಸ್‌ ಡಿಸೈನ್‌ ನನಗ್ಯಾಕೋ “ಕವಿ ರತ್ನ ಕಾಳಿದಾಸ’ದ ಶಕುಂತಲೆಯ ವಸ್ತ್ರ ವಿನ್ಯಾಸವನ್ನು ನೆನಪಿಸಿತು. ಜಾಹೀರಾತುಗಳಲ್ಲಿ ನೀಟಾಗಿ ಹೈನೆಕ್‌ ಬ್ಲೌಸ್‌ ಧರಿಸಿ ಬರುವ ಐಎಎಸ್‌ ಮಹಿಳೆಯ ದಕ್ಷತೆ, ಅಮ್ಮ-ಅಜ್ಜಿಯರ ಮೆತ್ತನೆಯ ಹತ್ತಿ ಸೀರೆಯ ಆಪ್ತತೆ, ಅಣ್ಣ ಕೊಟ್ಟ ಸೀರೆ ಹೀಗೆಲ್ಲ ಭಾವನಾತ್ಮಕತೆ… ಹೀಗೆ ಸೀರೆ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚು.

ಇದೀಗ ಹಳೆ ಫ್ಯಾಷನ್‌ಗಳು ಹೊಸ ಅವತಾರಗಳಲ್ಲಿ ಬರುತ್ತಿರುತ್ತವೆ. ತಮಾಷೆ ಎಂದರೆ ಸೀರೆಗಿಂತ ಬ್ಲೌಸಿಗೇ ಎರಡರಿಂದ ಮೂರು ಸಾವಿರ ಖರ್ಚಾಗುವುದಿದೆ. ಮುತ್ತಿನ ಮಣಿಗಳು, ಕನ್ನಡಿ ಚೂರುಗಳು, ಭಿನ್ನ ವಿನ್ಯಾಸಗಳು, ಡಿಸಾೖನ್‌ಗಳು… ಹೀಗೆ ಒಳ್ಳೆಯ ದರ್ಜಿಯೊಬ್ಬರು ಎಂಥ ಸಿಂಪಲ್‌ ಸೀರೆಗೂ ವಿಶಿಷ್ಟ ಅಂದ ಕೊಡಬಲ್ಲರು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೀರೆಗಳ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಇತ್ತೀಚೆಗೆ “ಸಾರಿ ಸ್ಪೀಕ್‌’ ಎನ್ನುವ ಗ್ರೂಪ್‌ಗೆ ಸೇರ್ಪಡೆಯಾದೆ. ಆ ಗುಂಪಿನಲ್ಲಂತೂ ದಿನನಿತ್ಯ ಬೇರೆ ಬೇರೆ ರಾಜ್ಯಗಳ, ವಿವಿಧ ಬೆಲೆ, ಡಿಸೈನಿನ ಸೀರೆಯುಟ್ಟ ಲಲನೆಯರ ಚಿತ್ರ ಪಟಗಳು. ರವಿವರ್ಮನ ಚಿತ್ರಗಳಿಂದ ಹಿಡಿದು ಈಗಿನ ಷೋಡಷಿಯರ ವರೆಗೆ ಸೀರೆಯ ಘನತೆ ಕುಂದಿಲ್ಲ. ಭಾರತಕ್ಕೆ ಬಂದ ವಿದೇಶೀಯರೂ ಸೀರೆ ಉಟ್ಟು ಸಂಭ್ರಮಿಸುವುದನ್ನು ನೋಡಬಹುದು.

ಸೀರೆಗಳನ್ನು ಹೊಗಳುತ್ತಲೇ ಅದರ ಋಣಾತ್ಮಕ ಅಂಶಗಳನ್ನೂ ಗಮನಿಸಬೇಕಾಗಿದೆ. ಸೀರೆಯೆನ್ನುವುದು ಹೆಣ್ಣಿನ ಸ್ವಾತಂತ್ರ್ಯವನ್ನು ದಮನಿಸಲೇ ರೂಢಿಯಾಗಿದೆಯೇನೋ ಎನ್ನುವಷ್ಟು ಅದರೊಂದಿಗೆ ಮಿಳಿತವಾದ ಸಂಕಷ್ಟಗಳಿವೆ. ಮೊದಲನೆಯದಾಗಿ ಅದನ್ನು ಧರಿಸಿ ಓಡುವುದಿರಲಿ, ವೇಗವಾಗಿ ನಡೆಯಲೂ ಕಷ್ಟವೇ. ಸೀರೆಯೊಂದು ಸಂಸ್ಕೃತಿಯ ಪ್ರತೀಕ ಎನ್ನುವವರು ಅದನ್ನು ಉಡುವವರ ಕಷ್ಟ ಗಮನಿಸಿದಂತಿಲ್ಲ. ಸೀರೆ ಉಟ್ಟ ಹೆಣ್ಣು ಬಹಳ ಪ್ರಜ್ಞಾಪೂರ್ವಕವಾಗಿ ಇರಬೇಕಾಗುತ್ತದೆ. ಸಲ್ವಾರ್‌ನಂಥ ಇಡೀ ಮೈ ಮುಚ್ಚುವ ಬಟ್ಟೆಯ “ಕಂಫ‚‌ರ್ಟ್‌’ ಖಂಡಿತವಾಗಿಯೂ ಸೀರೆಯಲ್ಲಿ ಇಲ್ಲ. ಹೆಣ್ಣಿನ “ಹೆಣ್ತನ’ ಢಾಳಾಗಿ ತೋರಿಸುವ ಬಟ್ಟೆಯೇ ಇದಾಗಿದ್ದು ಸೀರೆಯುಡುವ ಹೆಣ್ಣಿಗೆ ಆಗಾಗ ಮುಜುಗರ ತರುವ ಸನ್ನಿವೇಶಗಳು ಎದುರಾಗುತ್ತಿರುತ್ತವೆ. ಹೀಗಾಗಿಯೇ ಕೆಲವು ಸಂಸ್ಥೆಗಳಲ್ಲಿ ಸೀರೆ ಮೇಲೆ ಜಾಕೆಟ್‌ ಧರಿಸುವ ವ್ಯವಸ್ಥೆ ಇದೆ. ಜ್ಯುವೆಲ್ಲರಿ, ಹೊಟೇಲ್‌ ರಿಸೆಪ್ಷನ್‌ಗಳಲ್ಲಿ ನೀಟಾಗಿ ಸೀರೆ ಉಟ್ಟ ಲಲನೆಯರು, ಮಾಸಲು ಬಟ್ಟೆ ಉಟ್ಟು ಹಾಲು, ತರಕಾರಿ ಮಾರುವ, ಸೇವಂತಿಗೆ ಹೂವ ಮಾರುವ, ನೇಜಿ ನೆಡುವ, ಸ್ಟೇಜ್‌ ಮೇಲೆ ನಿರೂಪಣೆ- ಭಾಷಣ ಮಾಡುವ… ಹೀಗೆ ಸೀರೆಗೆ ಹಲವು ಮುಖ. ಈ ನಮ್ಮ ನಲ್ಮೆಯ ಸೀರೆಯ ಇತಿಹಾಸದ ಬಗ್ಗೆ ಗೂಗಲಿಸಿದರೆ ಆಶ್ಚರ್ಯವಾಗುತ್ತದೆ. ಕ್ರಿ.ಪೂ.ದಲ್ಲೇ ಭಾರತದಲ್ಲಿ ಹತ್ತಿಯ ಸೀರೆಗಳು ಬಳಕೆಯಲ್ಲಿದ್ದವಂತೆ. ಬಾಣಭಟ್ಟನ ಕಾದಂಬರಿ, ತಮಿಳಿನ ಶಿಲಪ್ಪದಿಕಾರಮ್‌ ಕೃತಿಗಳಲ್ಲಿ, ನಮ್ಮ ಪುರಾಣಗಳಲ್ಲಿಯೂ ಸೀರೆಯ ಉಲ್ಲೇಖವಿದೆ, ಸುಂದರ ವರ್ಣನೆಗಳಿವೆ. ಒಟ್ಟಿನ ಮೇಲೆ ಸೀರೆ ಎಂದರೆ ಲಾಲಿತ್ಯ, ನವಿರು, ಪುಳಕ. ಹಾಗೆಯೇ ಅದೊಂದು ಸಾಂಸ್ಕೃತಿಕ ಎಚ್ಚರ.

ಜಯಶ್ರೀ ಬಿ. ಕದ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ