ಯಾರದ್ದೋ ಫೋಟೋ,ಯಾರಿಗೋ ನೋಟು!
Team Udayavani, Feb 22, 2017, 9:11 AM IST
ನಿಮ್ಮ ಮಕ್ಕಳ ಅನಾರೋಗ್ಯದ ವಿಚಾರವನ್ನು ಜಾಲತಾಣಗಳಲ್ಲಿ ಬಹಿರಂಗಪಡಿಸುವ ಮೊದಲು ಸ್ವಲ್ಪ ಯೋಚಿಸಿ. ಏಕೆಂದರೆ, ಅನಾರೋಗ್ಯಪೀಡಿತ ಮಗುವಿನ ಫೋಟೊ ಬಳಸಿ ಜಾಲತಾಣಗಳ ಮೂಲಕ ಹಣ ಮಾಡುವ ಹೊಸ ದಂಧೆ ಇದೀಗ ಶುರುವಾಗಿದೆ.
ಇತ್ತೀಚೆಗಷ್ಟೇ ಇಂಗ್ಲೆಂಡ್ನ ಕೇಂಬ್ರಿಡ್ಜ್ಶೈರ್ನ ನಿವಾಸಿ ಸಾರಾ ಅಲ್ಲೆನ್ಗೆ ಇಂಥದ್ದೇ ಅನುಭವ ಆಗಿದೆಯಂತೆ. ಅವರ ಪುಟ್ಟ ಮಗು ಜಸ್ಪೆರ್ ಅಲೆನ್ ತೀವ್ರ ಸ್ವರೂಪದ ದಡಾರದಿಂದ ಬಳಲುತ್ತಿತ್ತು. ಮಗುವಿನ ಮೈ ಮೇಲೆ ದಡಾರ ಆವರಿಸಿತ್ತು. ಚಿಕಿತ್ಸೆ ಕೊಡಿಸಿದ ಬಳಿಕ ಮಗು ಚೇತರಿಸಿಕೊಂಡಿತ್ತು.
ಇದಾಗಿ ತಿಂಗಳುಗಳ ನಂತರ ಅವರಿಗೆ ಆಶ್ಚರ್ಯ ಕಾದಿತ್ತು. ಮಗುವಿನ ಫೋಟೊವನ್ನು ದುಷ್ಕರ್ಮಿಯೊಬ್ಬ ಫೇಸ್ ಬುಕ್ಕಿನಲ್ಲಿ ಪ್ರಕಟಿಸಿದ್ದ. ಮಗು ಕ್ಯಾನ್ಸರ್ನಿಂದ ಬಳಲುತ್ತಿದೆ. ಶಸ್ತ್ರಚಿಕಿತ್ಸೆಗಾಗಿ ಧನ ಸಹಾಯ ಮಾಡಿ ಎಂದು ಬರೆದಿದ್ದ. ಇದು 12,00,000 ಬಾರಿ ಶೇರ್ ಆಗಿತ್ತು. ಪರಿಶೀಲಿಸಿದಾಗ ಇದು ಅಪರಿಚಿತನೊಬ್ಬನ ಕೃತ್ಯ ಎಂದು ತಿಳಿದು ಬಂದಿದೆ. ಈ ಮಗುವಿನ ಹೆಸರಲ್ಲಿ ಆತ ಅದೆಷ್ಟು ಹಣ ದೋಚಿದನೋ?