ಕೇಂದ್ರ ಮಾಹಿತಿ ಕಾಯ್ದೆಗೆ ತಿದ್ದುಪಡಿ; ಯಾರಿಗೆ ಅನುಕೂಲ?


Team Udayavani, Apr 24, 2017, 3:45 AM IST

kendra-mahiti.jpg

2005ರ ಮಾಹಿತಿ ಕಾಯ್ದೆಗೆ ಕೇಂದ್ರ ಸರ್ಕಾರ ಹಲವು ತಿದ್ದುಪಡಿಗಳನ್ನು ಮಾಡಲು ಹೊರಟಿದೆ. ಇವೆಲ್ಲವೂ ನೇರವಾಗಿ ಈ ನೆಲದ ನಾಗರಿಕರನ್ನು ಪ್ರಭಾವಿಸುವಂತದು. ಈ ಸಂಬಂಧ ಕೇಂದ್ರ ಸರ್ಕಾರ ಕಾಯ್ದೆಯ 2012ರ ನಿಯಮಗಳ ತಿದ್ದುಪಡಿಯ ಕರಡನ್ನು ಪ್ರಕಟಿಸಿ ಆಕ್ಷೇಪ ಸಲಹೆಗಳನ್ನು ಸಾರ್ವಜನಿಕರಿಂದ ಆಹ್ವಾನಿಸಿದೆ. ಈ ಮೊದಲು ಏಪ್ರಿಲ್‌ 15ನ್ನು ಪ್ರತಿಕ್ರಿಯೆಗೆ ಕೊನೆಯ ದಿನಾಂಕ ಎಂದು ಘೋಷಿಸಲಾಗಿತ್ತಾದರೂ ಈಗ ಅದನ್ನು ಏಪ್ರಿಲ್‌ 25ರವರೆಗೆ ವಿಸ್ತರಿಸಲಾಗಿದೆ. 

ಮಾಹಿತಿ ಕಾಯ್ದೆ, ಅದರ ತಿದ್ದುಪಡಿಗಳನ್ನು ವಿಶ್ಲೇಷಿಸುವ ಮುನ್ನ ಕೆಲವು ಬಿಡಿ ಬಿಡಿ ಚಿತ್ರಗಳನ್ನು ಕಣ್ಣ ಮುಂದೆ ತಂದುಕೊಳ್ಳಬೇಕು. ಈಗೀಗ ಸರ್ಕಾರವೊಂದು ಕಾನೂನು ಜಾರಿಗೊಳಿಸುತ್ತಿದೆ ಎಂಬುದು ನಾಗರಿಕರಿಗೆ ಅಭಯ ಕೊಡುವ ಬದಲು ಭಯ ಬೀಳುವಂತೆ ಮಾಡುತ್ತಿದೆ. ಮೇಲ್ನೋಟದ ಸತ್ಯದ ಹೊರತಾಗಿ ಬಹುಪಾಲು ಕಾಯ್ದೆಗಳು ಪಟ್ಟಭದ್ರರ ಸಂರಕ್ಷಣೆಯ ಉದ್ದೇಶ ಅಥವಾ ಸಾಮಾನ್ಯ ನಾಗರಿಕರನ್ನು ಅದುಮುವ ಪ್ರಯತ್ನವಾಗಿರುವುದು ಕಟುಸತ್ಯ. ಒಂದೊಮ್ಮೆ ಕಾಯ್ದೆ ಅಸಲಿಯತ್ತಾಗಿ ಜನಪರವಾಗಿದ್ದರೆ ಅದನ್ನು ತಿದ್ದುಪಡಿಗಳ ಹೆಸರಿನಲ್ಲಿ ದುರ್ಬಲಗೊಳಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತವೆ. ಲೋಕಾಯುಕ್ತ ಕಾಯ್ದೆಯಲ್ಲಿಯೇ ಇದನ್ನು ಕಂಡಿದ್ದೇವೆ. ಮಾಹಿತಿ ಕಾಯ್ದೆಗೆ ತಿದ್ದುಪಡಿ ಎಂದಾಗ ಈ ಅನುಮಾನದಿಂದಲೇ ನೋಡಬೇಕಾಗಿದೆ. ಗ್ರಾಹಕ ಹಕ್ಕುಗಳ ಕಾರ್ಯಕರ್ತರಿಗೆ ಮಾಹಿತಿ ಪಡೆಯುವ ಅರ್ಜಿದಾರರಿಂದ ಸಲಹೆಯ ವಿನಂತಿ ಬರುವುದಕ್ಕಿಂತ ಅಧಿಕಾರಿ ವರ್ಗದ ಮಿತ್ರರು ನಾಜೂಕಾಗಿ ಹೆಚ್ಚು ಸಲಹೆಗಳನ್ನು ಕೇಳುತ್ತಾರೆ. ಅವರೆಲ್ಲರ ವಿನಂತಿ ಸಾಮಾನ್ಯವಾಗಿ ಒಂದೇ, ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರಿಗೆ ಮಾಹಿತಿ ನಿರಾಕರಿಸಲು ಯಾವೆಲ್ಲ ಕಾನೂನು ಸಾಧ್ಯತೆಗಳಿವೆ?!

ಕೇಂದ್ರ ಮಾಹಿತಿ ಹಕ್ಕು ನಿಯಮಗಳ ತಿದ್ದುಪಡಿಯನ್ನು ಕೂಡ ನಾವು ಅದನ್ನು ಅಧಿಕಾರಿ ವರ್ಗ ದುರುಪಯೋಗಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿಯೇ ಅರ್ಥೈಸಿಕೊಳ್ಳಬೇಕು. ಸಾಮಾನ್ಯವಾಗಿ ಮಾಹಿತಿ ಅಧಿಕಾರಿಗಳು ಅರೆಬರೆಯ ಮಾಹಿತಿ ಕೊಡುವ ಮೂಲಕ ಅಥವಾ ಮಾಹಿತಿ ಕೊಡದಿರುವ ಮೂಲಕ ಕಾಯ್ದೆಯ ಉದ್ದೇಶವನ್ನು ಭಂಗಪಡಿಸುತ್ತಾರೆ. ನಿಯಮದಲ್ಲಿ ಅವಕಾಶ ನೀಡುವ ಕಾಲಮಿತಿಯ ಪರಮಾವಧಿಯನ್ನೇ ಬಳಸಿಕೊಂಡು ವಿಳಂಬ ಮಾಹಿತಿ ನೀಡುವುದೂ ಇದೆ. ಮಾಹಿತಿ ಅರ್ಜಿದಾರ ಅರ್ಜಿ ಸಲ್ಲಿಕೆಯ ನಂತರದ ಪ್ರತಿ ಹಂತದಲ್ಲಿ ಸೋಲು ಕಾಣುವಂತೆ ಕಾಯ್ದೆಯಿದೆ. ಮಾಹಿತಿ ಅಧಿಕಾರಿ ಮಾಹಿತಿ ನೀಡುವಿಕೆಯಲ್ಲಿ ಮಾಡುವ ವ್ಯತ್ಯಯವನ್ನು ಪ್ರಥಮ ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಶ್ನಿಸಬಹುದು. ಈ ಅಧಿಕಾರಿ ಈ ಮುನ್ನ ಮಾಹಿತಿ ಕೇಳಿದ ಅಧಿಕಾರಿಯ ಮೇಲಿನ ಅಧಿಕಾರಿಯಾಗಿರುತ್ತಾನೆ. ಬಹುಸಂದರ್ಭಗಳಲ್ಲಿ ಈತ ತನ್ನ ಕೆಳ ಅಧಿಕಾರಿಗಳ ಕುರಿತು ಅನುಕಂಪ ಹೊಂದಿರುತ್ತಾನೆಯೇ ವಿನಃ ಅರ್ಜಿದಾರನ ಪರ ಇರುವುದಿಲ್ಲ. 45 ದಿನಗಳ ಕಾಲಮಿತಿಯ ಬಳಕೆಯಾದ ನಂತರವೂ ಮೇಲ್ಮನವಿ ಪ್ರಾಧಿಕಾರ ಅರ್ಜಿದಾರನಿಗೆ ಮಾಹಿತಿ ಒದಗಿಸಿಕೊಟ್ಟ ಪ್ರಕರಣಗಳು ಕಡಿಮೆ!

ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಯಾವ ದಂಡ ವಿಧಿಸುವ ಅವಕಾಶ ಕಲ್ಪಿಸದಿರುವುದರಿಂದ ಇದೊಂದು ಥರ ಹಲ್ಲು ಕಿತ್ತ ಹಾವಿನಂತೆ. ಇಲ್ಲಿ ಸಮಯ ಕೊಲ್ಲುವುದರ ಜೊತೆಗೆ ಮಾಹಿತಿ ಆಯೋಗಕ್ಕೆ ನೇರ ಅರ್ಜಿ ಹೋಗದಿರುವುದನ್ನು ತಡೆಯುತ್ತದೆ. ಈ ವ್ಯವಸ್ಥೆಯನ್ನು ಖುದ್ದು ಮಾಹಿತಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿನ್ನೆಲೆಯಲ್ಲಿ ತಿದ್ದುಪಡಿ ಈ ವ್ಯವಸ್ಥೆಗೆ ಹೆಚ್ಚಿನ ಅಧಿಕಾರವನ್ನು ಕೊಡದೆ ನಿರಾಶೆ ಮೂಡಿಸುತ್ತದೆ. ಪ್ರಥಮ ಮೇಲ್ಮನವಿ ಪ್ರಾಧಿಕಾರವನ್ನು ನಿರ್ಲಕ್ಷಿಸಿ ನೇರವಾಗಿ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸದಂತೆಯೂ ನಿರ್ಬಂಧಿಸಲಾಗಿದೆ. ಈ ಕುರಿತು ಸಾರ್ವಜನಿಕರು ತಮಗಿರುವ ಅವಕಾಶ ಬಳಸಿಕೊಂಡು ಒತ್ತಾಯ ತರಬೇಕಿದೆ.

ಮಾಹಿತಿ ಹಕ್ಕು ಅರ್ಜಿ ಎಂಬುದು ಅಧಿಕಾರಿಗಳನ್ನು ಬ್ಲಾಕ್‌ವೆುàಲ್‌ ಮಾಡುವ ಅಸ್ತ್ರವಾಗಿಯೂ ಬಳಕೆಯಾಗುತ್ತಿದೆ. ಅಧಿಕಾರಿಗಳ ಅಧಿಕಾರ ವ್ಯತ್ಯಯ, ದುರುಪಯೋಗದಿಂದಲೇ ಬ್ಲಾಕ್‌ವೆುàಲ್‌ ಸಾಧ್ಯತೆ ಸೃಷ್ಟಿಯಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಆದರೆ ಈ ತಿದ್ದುಪಡಿ ಮೂಲಕ ಅರ್ಜಿದಾರರಿಗೆ ಅರ್ಜಿ ಹಿಂಪಡೆಯುವ ಅವಕಾಶವನ್ನು ಕಲ್ಪಿಸಿರುವುದು ಅಧಿಕಾರ ವರ್ಗದವರಿಗೆ ನೆಮ್ಮದಿ ತರಬಹುದು! ಅರ್ಜಿದಾರ ಹಣದ ಆಮಿಷಕ್ಕೆ ಬಲಿಯಾಗದಿದ್ದರೆ ಬೆದರಿಕೆಗಳ ಮೂಲಕ ಅರ್ಜಿ ಹಿಂಪಡೆಯುವಂತೆ ಮಾಡುವುದು ಅವರಿಗೆ ಸುಲಭ. ಈಗಾಗಲೇ ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆಗಳಾಗಿವೆ, ಕೊಲೆಗಳಾಗಿವೆ. ಇದೇ ತಿದ್ದುಪಡಿಯಲ್ಲಿ ಅರ್ಜಿದಾರರ ನಿಧನ ನಂತರ ಅರ್ಜಿ ನಿಷ್ಕ್ರಿಯವಾಗುತ್ತದೆ ಎಂಬ ಉಲ್ಲೇಖವೂ ಇದೆ. ಈ ಎರಡು ಅಂಶಗಳು ಮಾಹಿತಿ ಹಕ್ಕಿನ ಬ್ರಹ್ಮಾಸ್ರವನ್ನು ಸಂಪೂರ್ಣವಾಗಿ ಮೊಂಡುಗೊಳಿಸುತ್ತದೆ. ಸ್ವಲ್ಪ ತೀಕ್ಷ್ಣವಾಗಿ ಹೇಳುವುದಾದರೆ, ಅರ್ಜಿದಾರರ ಜೀವ ಬೆದರಿಕೆ, ಕೊಲೆಗೂ ಇದು ಪ್ರೇರೇಪಿಸುತ್ತದೆ.

ರಾಜ್ಯದ ಮಾಹಿತಿ ಹಕ್ಕು ಅರ್ಜಿ 150 ಪದಗಳನ್ನು ಮೀರುವಂತಿಲ್ಲ ಎಂದು ತಿದ್ದುಪಡಿಯೊಂದರ ಮೂಲಕ ನಿಯಮ ಹೇರಲಾಯಿತು. ಅರ್ಜಿ ಬಂದ ತಕ್ಷಣ ಪದಗಳನ್ನು ಲೆಕ್ಕಹಾಕಲು ಅಧಿಕಾರಿಗಳ ಶುರು ಮಾಡುವಂತಾಯಿತು. ತಿರಸ್ಕಾರಕ್ಕೆ ಕಾರಣ ಬೇಕಲ್ಲ! ಕೇಂದ್ರದ ತಿದ್ದುಪಡಿಯಲ್ಲಿ ಪದ ಮಿತಿ 500 ಶಬ್ಧಗಳಿಗಿದೆ. ಅರ್ಜಿ ಜೊತೆಗಿನ ಅಡಕಗಳಿಗೆ ಇದು ಅನ್ವಯಿಸುವುದಿಲ್ಲ.  ಅರ್ಜಿದಾರರ ವಿವರ, ಮಾಹಿತಿ ಅಧಿಕಾರಿಯ ವಿಳಾಸಗಳನ್ನು ಲೆಕ್ಕದಿಂದ ಕೈಬಿಡಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಒಂದೊಮ್ಮೆ ಅರ್ಜಿ 500 ಶಬ್ದ ಮೀರಿದ್ದರೂ ಅದನ್ನು ತಿರಸ್ಕರಿಸುವಂತಿಲ್ಲ ಎಂಬ ಪ್ರಸ್ತಾಪ ಇದ್ದು, ಅದು ಹೆಚ್ಚು ಗೊಂದಲಗಳಿಗೆ ಕಾರಣವಾಗಬಹುದು. ಪದಮಿತಿಯನ್ನು ದಾಟಿದ್ದರೂ ಮಾಹಿತಿ ಕೊಡಬೇಕು ಎಂಬುದೇ ಆಲೋಚನೆಯಾದರೆ ಪದಮಿತಿಯ ಷರತ್ತು ಅಗತ್ಯವಾಗುತ್ತಿರಲಿಲ್ಲ. ಮಾಹಿತಿ ಹಕ್ಕು ಅರ್ಜಿಗಳು ಒಂದು ವಿಷಯದ ಮೇಲಿನ ಮಾಹಿತಿ ಕೋರಿಕೆ ಆಗಿರುವುದರಿಂದ ಕೋರಿಕೆಯ ಮೊದಲ ಶಬ್ದದಿಂದ ಆರಂಭಿಸಿ 500 ಶಬ್ದಗಳವರೆಗಿನ ವಾಕ್ಯದವರೆಗಿನ ಮಾಹಿತಿ ವಿನಂತಿಯನ್ನು ಮನ್ನಿಸುವ ಒಂದು ಚೌಕಟ್ಟನ್ನು ತಿದ್ದುಪಡಿಯಲ್ಲಿ ಸ್ಪಷ್ಟಪಡಿಸಬೇಕಾದೀತು.

ಇಡೀ ತಿದ್ದುಪಡಿ ಹಿಂದಿ ಭಾಷೆ ಹೇರಿಕೆಯ ಪ್ರಯತ್ನವಾಗಿರುವುದು ಖಂಡನೀಯ. ಅರ್ಜಿ ಇಂಗ್ಲೀಷ್‌ ಅಥವಾ ಹಿಂದಿಯಲ್ಲಿ ಇರಬೇಕು ಎಂಬುದರ ಜೊತೆ ಪೂರಕ ದಾಖಲೆಗಳು ಇತರ ಭಾಷೆಯಲ್ಲಿದ್ದರೆ ಅದರ ದೃಢೀಕೃತ ತರ್ಜುಮೆಯನ್ನು ಅರ್ಜಿದಾರ ಒದಗಿಸಬೇಕಾಗುತ್ತದೆ. ಇದು ಹಿಂದಿಯೇತರ ಭಾರತೀಯ ಪ್ರಜೆಗಳಿಗೆ ಅನಗತ್ಯ ಹೊರೆಯನ್ನು ಸೃಷ್ಟಿಸುತ್ತದೆ. ಸಾಮಾನ್ಯ ಜನರನ್ನು ಮಾಹಿತಿ ಹಕ್ಕಿನಿಂದ ದೂರ ಇಡುವ ಪ್ರಯತ್ನವಾಗಿಯೂ ಕಂಡುಬರುತ್ತದೆ. ಅರ್ಜಿ ಇಂಗ್ಲೀಷ್‌ನಲ್ಲಿಯೇ ಇರಬೇಕು ಎಂಬುದನ್ನು ಒಪ್ಪಿಕೊಳ್ಳಬಹುದಾದರೂ ವಿಚಾರಣೆಯಲ್ಲಿ ಹಿಂದಿಗೆ ವಿಶೇಷ ಅವಕಾಶ ಪ್ರಶ್ನಾರ್ಹ. 

ಈವರೆಗೆ ಮಾಹಿತಿ ಹಕ್ಕಿನ ಅರ್ಜಿ ಜೊತೆ ಸಲ್ಲಿಸುವ 10 ರೂ. ಶುಲ್ಕದ ಹೊರತಾಗಿ ಮಾಹಿತಿಗಳನ್ನು ಕಳುಹಿಸಿಕೊಡಲು ಅಂಚೆ ಶುಲ್ಕ ವಸೂಲಿಸುವಂತಿರಲಿಲ್ಲ. ಕೇಂದ್ರದ ತಿದ್ದುಪಡಿಯ ಪ್ರಕಾರ, ಅಂಚೆ ವೆಚ್ಚ 50 ರೂ.ಗಿಂತ ಹೆಚ್ಚಾದ ಸಂದರ್ಭದಲ್ಲಿ ಅದನ್ನು ಅರ್ಜಿದಾರರಿಂದ ಪಡೆಯಲು ಅವಕಾಶವಿದೆ. ಮಾಹಿತಿ ಹಕ್ಕಿನ ಅವಶ್ಯಕತೆ ಬೀಳುವುದು ಇಲಾಖೆಗಳು ಜನರ ಪರವಾಗಿ ಯೋಜನೆಗಳನ್ನು, ಕರ್ತವ್ಯಗಳನ್ನು ನಿರ್ವಹಿಸುವಾಗ ಆಗುವ ಸರಿತಪ್ಪುಗಳ ಮಾಹಿತಿ ಪಡೆಯಬೇಕೆಂದಾಗ. ನಾವು ಸಂಬಂಧಿಸಿದ ಅಧಿಕಾರಿಯ ಮುಂದೆ ತೆರಳಿ, ಈ ಯೋಜನೆಯ ಫ‌ಲಾನುಭವಿಯ ಪಟ್ಟಿಯನ್ನೊಮ್ಮೆ ತೋರಿಸಿ ಎಂದರೆ ನಿಮಗೆ ಮಾಹಿತಿ ಕೊಡಬೇಕಾದ ದರ್ದು ನನಗಿಲ್ಲ ಎಂಬರ್ಥದ ಮಾತು ಕೇಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂಚೆ ವೆಚ್ಚವನ್ನು ಅರ್ಜಿದಾರರಿಂದ ವಸೂಲಿಸುವುದು ತರವಲ್ಲ.

ಅರ್ಜಿ ಶುಲ್ಕವನ್ನು ನಗದು, ಡಿಡಿ, ಬ್ಯಾಂಕ್‌ ಚೆಕ್‌ ಹಾಗೂ ಪೋಸ್ಟಲ್‌ ಆರ್ಡರ್‌ ಮೂಲಕ ಪಾವತಿಸಲು ಕಾನೂನಿನಲ್ಲಿ ಅವಕಾಶ ಕಲಿಸಲಾಗಿದೆ. ಈ ಬಾರಿಯ ಆಕ್ಷೇಪ ಸಲ್ಲಿಕೆಯಲ್ಲಿ ಹಲವರು ಸಾಮಾನ್ಯ ಜನರಿಗೆ ಅನುಕೂಲವಾಗಲು ಮನಿಯಾರ್ಡರ್‌ ಮುಖಾಂತರವೂ ಅರ್ಜಿ ಶುಲ್ಕ ಪಾವತಿಯ ಬೇಡಿಕೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಅರ್ಜಿ ಹಾಗೂ ಎಂಓ ಎರಡೂ ಪ್ರತ್ಯೇಕ ಮಾಧ್ಯಮಗಳ ಮೂಲಕ ಮಾಹಿತಿ ಅಧಿಕಾರಿಗೆ ತಲುಪುವ ಹಿನ್ನೆಲೆಯಲ್ಲಿ ಗೊಂದಲಗಳಾಗುವ ಸಾಧ್ಯತೆಗಳಿವೆ. ಪೋಸ್ಟಲ್‌ ಆರ್ಡರ್‌ ಪಾವತಿ ತಾಂತ್ರಿಕತೆ ಇರುವ ಹಿನ್ನೆಲೆಯಲ್ಲಿ ಮನಿಯಾರ್ಡರ್‌ ಸ್ವರೂಪದ ಪಾವತಿ ಬೇಡಿಕೆ ಅಗತ್ಯವಿಲ್ಲ.

ಸಮಯಮಿತಿ ಇಲ್ಲದಿದ್ದರೆ ನ್ಯಾಯ ಸಾಯುತ್ತದೆ. ದುರಂತವೆಂದರೆ, ಕೇಂದ್ರ ಮಾಹಿತಿ ಆಯೋಗ ತನ್ನ ಮುಂದೆ ಬರುವ ದೂರಗಳ ಇತ್ಯರ್ಥಕ್ಕೆ ತಿದ್ದುಪಡಿಯಲ್ಲಿಯೂ ಸಮಯ ನಿಗದಿಪಡಿಸಿಲ್ಲ. ಅರ್ಜಿ ಸಲ್ಲಿಕೆಯಾದ 15 ದಿನಗಳಲ್ಲಿ ನೋಟೀಸ್‌ ಜಾರಿಯಾಗಬೇಕು ಹಾಗೂ ಆರು ತಿಂಗಳ ಅವಧಿಯಲ್ಲಿ ಪ್ರಕರಣ ಇತ್ಯರ್ಥವಾಗಬೇಕು ಎಂಬುದು ಬಹುಸಂಖ್ಯಾತ ಗ್ರಾಹಕ ಪರ ಸಂಸ್ಥೆಗಳ ಆಗ್ರಹ. ಇದೇ ವೇಳೆ ತಿದ್ದುಪಡಿಯಲ್ಲಿ ತೀರ್ಪನ್ನು ಮನ್ನಿಸದ ಅಧಿಕಾರಿ ವಿರುದ್ಧ 30 ದಿನಗಳ ನಂತರ ಪರಿಹಾರ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದು ಅತ್ಯಂತ ಮುಖ್ಯ ಬೆಳವಣಿಗೆ. ನಿರ್ದಿಷ್ಟ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಆನ್‌ಲೈನ್‌ ವ್ಯವಸ್ಥೆಯನ್ನೂ ಪ್ರಸ್ತಾಪಿಸಲಾಗಿದೆ.

ಸದರಿ ಕರಡು ಪ್ರತಿ ದಾಖಲೆ ಸಲ್ಲಿಸುವ ಕ್ರಮ, ವಿವಿಧ ಮಾದರಿಯ ಕಾಗದ ದಾಖಲೆಗಳ ಪ್ರತಿಗೆ ಶುಲ್ಕ ಮಾದರಿ, ಬಿಪಿಎಲ್‌ನವರಿಗೆ ರಿಯಾಯ್ತಿ ಮೊದಲಾದವುಗಳ ಬಗ್ಗೆ ಚರ್ಚಿಸಿದೆ. ಸಾಮಾನ್ಯವಾಗಿ ಜನರಿಗಾಗಲಿ, ಅಧಿಕಾರಿಗಳಿಗಾಗಲಿ ಕಾನೂನುಪ್ರಕಾರ “ಚೌಕಟ್ಟಿನೊಳಗೆ ಕೆಲಸ ಮಾಡುವಂತೆ ಪ್ರಚೋದಿಸಲು ದಂಡ ಪ್ರಾವಿಧಾನವೇ ಸರಿ. ಸಿಐಸಿ ವ್ಯವಸ್ಥೆಯಲ್ಲೂ ಮಾಹಿತಿ ಕೊಡದ ಅಧಿಕಾರಿಗಳಿಗೆ ಬಡ್ತಿ ರದ್ದು, ಸೇವಾ ಪುಸ್ತಕದಲ್ಲಿ ದಾಖಲು ಮಾದರಿಯ ದೂರಗಾಮಿ ಪರಿಣಾಮಗಳುಳ್ಳ ಶಿಕ್ಷೆ ಹಾಕದಿದ್ದರೆ ಅವರು ಎಂದಿನಂತೆ ಮಾಹಿತಿ ಹಕ್ಕಿನ ಜೊತೆ ಆಟವಾಡುತ್ತಾರೆ. ಇಂತಹ ನಿಯಮ ಕೂಡ ಸೇರ್ಪಡೆಯಾಗಬೇಕು.

ವಾಸ್ತವವಾಗಿ, ಮಾಹಿತಿ ಹಕ್ಕು ಕಾಯ್ದೆ ಜನಸಾಮಾನ್ಯರಿಗೆ ಇನ್ನೊಂದು ಸ್ವಾತಂತ್ರ್ಯ ಚಳವಳಿಯ ಯಶಸ್ಸನ್ನು ನೆನಪಿಸುತ್ತದೆ. ಭ್ರಷ್ಟಾಚಾರದ ವಿರುದ್ಧದ ವಿಝಲ್‌ ಬ್ಲೋವರ್ ಲಾ ಕೂಡ ಭಾರತದಲ್ಲಿ ಇನ್ನೂ ಜಾರಿಯಾಗಿಲ್ಲದ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪಾರದರ್ಶಕ, ಭ್ರಷ್ಟಾಚಾರರಹಿತ ಆಡಳಿತ ನಡೆಸುವಂತೆ ಪ್ರೇರೇಪಿಸುವ ಅಪರೂಪದ ಕಾಯ್ದೆ ಆರ್‌ಟಿಐ. ಆದರೆ ತಿದ್ದುಪಡಿಗಳ ಹೆಸರಿನಲ್ಲಿ ಹಲವು ಅಂಶಗಳು ನೇರವಾಗಿಯೇ ಜನರ ಹಕ್ಕನ್ನು ನಿಸ್ತೇಜಗೊಳಿಸುತ್ತದೆ. ಒಂದೇ ಒಂದು ಉದಾಹರಣೆಯನ್ನು ನೀಡುವುದಾದರೆ, ಮಾಹಿತಿ ಅರ್ಜಿದಾರ ಮೇಲ್ಮನವಿ ಸಲ್ಲಿಸುವಾಗ ಈ ಕುರಿತು ಎದುರಿಗೆ ನೋಟೀಸ್‌ ಕೊಟ್ಟುದ್ದನ್ನು ಅವರಿಂದಲೇ ದೃಢೀಕರಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇಂತಹ ಹಲವಾರು ಅಂಶಗಳು ತಿದ್ದುಪಡಿಯಲ್ಲಿವೆ. 

ನೀವೂ ಓದಿ, ಆಕ್ಷೇಪ ಸಲ್ಲಿಸಿ!
ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿಯನ್ನೇ ತೆಗೆದುಕೊಂಡರೆ, ಅದರ ಕರಡು ಅಂತಜಾìಲದಲ್ಲಿ ಲಭ್ಯ. ಬೇಕಿದ್ದರೆ ಈ ಲಿಂಕ್‌ ಬಳಸಿ…https://drive.google.com/file/d/0BzXilfcxe7yuWnhzMVhrb3Q3VkE/view  ಅಥವಾ  http://ccis.nic.in ನಲ್ಲೂ ಇಂಗ್ಲೀಷ್‌ ಅಥವಾ ಹಿಂದಿಯ ತಿದ್ದುಪಡಿ ಕರಡು ಸಿಗುತ್ತದೆ. 

ಇಲ್ಲಿನ ಪ್ರಸ್ತಾವನೆಗಳಿಗೆ ಆಕ್ಷೇಪ ಸಲ್ಲಿಸಬಹುದು, ಸಲಹೆ ನೀಡಬಹುದು. ಸೇರ್ಪಡೆ ಸೂಚಿಸಬಹುದು. ಸಾರ್ವಜನಿಕರು ಕೂಡ ತಮ್ಮ ಪೂರ್ಣ ವಿವರಗಳ ಸಹಿತ ವರ್ಡ್‌ ಫೈಲ್‌ ರೂಪಿಸಿ ಮಾಹಿತಿ ಹಕ್ಕು ಅಧೀನ ಕಾರ್ಯದರ್ಶಿ ಪ್ರೀತಿ ಖನ್ನಾ ಅವರಿಗೆusrti-dopt@n ic.in ಇ ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಿ.

 ಕೇಂದ್ರ ಸರ್ಕಾರದ ಮಾಹಿತಿ ಕಾಯ್ದೆಗೆಂದೇ ಮೀಸಲಾದ ವೆಬ್‌ಸೈಟ್‌ ಆರ್‌ಟಿಐ ಡಾಟ್‌ ಜಿಓವಿ ಡಾಟ್‌ ಇನ್‌ ನ  http://rti.gov.in/rtiact-kannada.pdf ಲಿಂಕ್‌ನಲ್ಲಿ ಇತರ ಭಾಷೆಗಳ ಜೊತೆಗೆ ಕನ್ನಡದಲ್ಲಿಯೇ ಮಾಹಿತಿ ಹಕ್ಕು ಕಾಯ್ದೆಯ ಪೂರ್ಣ ಪಾಠ ಲಭ್ಯ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.