Updated at Sun,20th Aug, 2017 11:31AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

"ಸಿಗರೇಟ್‌ ಪ್ಯಾಕ್‌ ಎಚ್ಚರಿಕೆ ಚಿತ್ರ ವಾಪಸ್‌ ಬೇಡ'

ಬೆಂಗಳೂರು: ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಹತ್ತಿಕ್ಕಲು ಕೇಂದ್ರ ಆರೋಗ್ಯ ಇಲಾಖೆ ತೆಗೆದುಕೊಂಡಿರುವ ಕ್ರಮಗಳನ್ನು ಶ್ಲಾ ಸಿರುವ ಸಾರ್ವಜನಿಕ ಆರೋಗ್ಯ ಸಂಸ್ಥೆಯು (ಐಪಿಎಚ್‌), ಸಿಗರೇಟ್‌ ಮತ್ತು ಇತರೆ ತಂಬಾಕು ಉತ್ಪನ್ನಗಳ ಪ್ಯಾಕ್‌ಗಳ ಮೇಲೆ ಶೇ. 85ರಷ್ಟು ಚಿತ್ರಸಹಿತವಾದ ಎಚ್ಚರಿಕೆ ಸಂದೇಶಗಳನ್ನು ಕಡ್ಡಾಯವಾಗಿ ಮುದ್ರಿಸುವಂತೆ ಕೈಗೊಂಡಿರುವ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬಾರದು ಎಂದು ಆಗ್ರಹಿಸಿದೆ. 

ಸಿಗರೇಟ್‌ ಪ್ಯಾಕ್‌ ಸೇರಿದಂತೆ ತಂಬಾಕು ಉತ್ಪನ್ನಗಳ ಪ್ಯಾಕ್‌ಗಳ ಶೇ.85ರಷ್ಟು ಭಾಗದಲ್ಲಿ ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆ ಸಂದೇಶ ಮುದ್ರಿಸುವುದನ್ನು ಕಡ್ಡಾಯಗೊಳಿಸಿ 2014 ರ ಅಕ್ಟೋಬರ್‌ 15ರಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ, ಈವರೆಗೂ ಆದೇಶ ಕಾರ್ಯರೂಪಕ್ಕೆ ಬಂದಿಲ್ಲ. ಇಂತಹ ವೇಳೆಯಲ್ಲಿ ಕೇಂದ್ರ ಸಂಸದೀಯ ಸಮಿತಿಯು ಸಿಗರೇಟ್‌ ಪ್ಯಾಕ್‌ಗಳ ಎರಡೂ ಬದಿಯಲ್ಲಿ ಶೇ. 50 ರಷ್ಟು ಮತ್ತು ಬೀಡಿ ಹಾಗೂ ಇತರೆ ಧೂಮರಹಿತ ತಂಬಾಕು ಉತ್ಪನ್ನಗಳ ಪ್ಯಾಕ್‌ಗಳ ಕೇವಲ ಒಂದು ಬದಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕ ಎಂಬ ಅಪಾಯದ ಚಿತ್ರ ಸಂದೇಶವನ್ನು ಮುದ್ರಿಸಲು ಪ್ರಸ್ತಾವನೆ ಸಲ್ಲಿಸಿದೆ. ಸಮಿತಿಯ ಈ ಕ್ರಮಕ್ಕೆ ಆರೋಗ್ಯ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ ಸದಸ್ಯ ಹಾಗೂ ಕ್ಯಾನ್ಸರ್‌ ತಜ್ಞ ಡಾ.ಯು.ಎಸ್‌. ವಿಶಾಲ್‌ರಾವ್‌, ಸಿಗರೇಟ್‌ ಮತ್ತು ತಂಬಾಕಿನ ಇತರೆ ಉತ್ಪನ್ನಗಳ ಪ್ಯಾಕ್‌ಗಳ ಮೇಲೆ ಶೇ. 85ರಷ್ಟು ಭಾಗದಲ್ಲಿ ಚಿತ್ರಸಹಿತವಾದ ಎಚ್ಚರಿಕೆ ಸಂದೇಶ ಮುದ್ರಿಸುವುದನ್ನು ಕಡ್ಡಾಯ ಮಾಡಬೇಕು. ಗ್ರಾಹಕರನ್ನು ಆಕರ್ಷಿಸಲು ಹಾಗೂ ಪ್ರೇರೇಪಿಸುವಂತಹ ರೀತಿಯಲ್ಲಿ ಸಿಗರೇಟ್‌ ಮತ್ತು ತಂಬಾಕು ಉತ್ಪನ್ನಗಳ ಕಂಪನಿಗಳು ನೀಡುವ ಜಾಹೀರಾತು ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು. ಕಡ್ಡಾಯಗೊಳಿಸಿರುವ ಎಚ್ಚರಿಕೆ ಸಂದೇಶವನ್ನು ಅನುಷ್ಠಾನಗೊಳಿಸಬೇಕು ಮತ್ತು ಕೇಂದ್ರ ಸಂಸದೀಯ ಸಮಿತಿಯ ಪ್ರಸ್ತಾವನೆಯನ್ನು ಕೈ ಬಿಡಬೇಕು. 

ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರ ಸೂಕ್ತವಾಗಿದೆ. ಅದಷ್ಟು ಶೀಘ್ರವಾಗಿ ಕಾರ್ಯರೂಪಕ್ಕೆ ಬರಬೇಕು ಎಂದರು ಲೋಕಸತ್ತಾ ಪಕ್ಷದ ಸದಸ್ಯ ಮತ್ತು ನರರೋಗ ತಜ್ಞ ಡಾ.ಭಾನುಪ್ರಕಾಶ್‌ ಮಾತನಾಡಿ, ಸಮಿತಿಯ ವರದಿ ತಂಬಾಕು ಉತ್ಪನ್ನ ಕಂಪನಿಗಳ ಜತೆ ರಾಜೀ ಮಾಡಿಕೊಂಡ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ವರದಿಯನ್ನು ಪರಿಗಣಿಸುವ ಅಗತ್ಯವಿಲ್ಲ. ಬೀಡಿ ಮತ್ತು ಧೂಮರಹಿತವಾದ ತಂಬಾಕು ಪ್ಯಾಕ್‌ಗಳು ಕೇವಲ ಒಂದು ಭಾಗದಲ್ಲಿ ಎಚ್ಚರಿಕೆ ಸಂದೇಶವನ್ನು ಮುದ್ರಿಸುವುದು ಭಾರತೀಯ ಸಮುದಾಯದ ಆರೋಗ್ಯದ ಮೇಲೆ ಸಾಕಷ್ಟು ಗಂಭೀರ ಪ್ರಮಾಣದ ಪರಿಣಾಮ ಬೀರಲಿದೆ. ಇದು ಒಂದು ರೀತಿಯಲ್ಲಿ ಬಡ ವರ್ಗದ ಜನರ ಸಾವಿಗೆ ಸಬ್ಸಿಡಿ ನೀಡಿದಂತೆ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಐಪಿಎಚ್‌ ಸದಸ್ಯ ಡಾ.ಉಪೇಂದ್ರ ಭೋಜಾನಿ, ವಕೀಲ ಜಾಯ° ಕೊಠಾರಿ ಇತರರು ಉಪಸ್ಥಿತರಿದ್ದರು.

Back to Top