Updated at Sat,25th Feb, 2017 8:02PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಂಬಲ್‌ ಆಗೊಂದ್‌ ಸ್ಟೋರಿ, ನೋಗರಾಜನ ಪೊಲಿಟಿಕಲಿ ಕರೆಪ್ಟ್ ಕಥೆ

ಹಾಯ್‌ ಅಂತ ಫೇಸ್‌ ಬುಕ್‌ನಲ್ಲಿ ಮೆಸೇಜ್‌ ಹಾಕಿದ್ದರಂತೆ ದಾನಿಶ್‌ ಸೇಠ್ ಮೂರು ದಿನ ಬಿಟ್ಟು ಉತ್ತರ ಕೊಟ್ಟರಂತೆ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ.
ಪು: ಏನು ಬೇಕು?
ದಾ: ದುಡ್ಡು
ಪು: ಯಾಕೆ?
ದಾ: ಸಿನಿಮಾ ಮಾಡೋಕೆ
ಪು: ಬಂದು ಭೇಟಿ ಮಾಡಿ ...

ಪುಷ್ಕರ್‌ ಹೀಗೆ ಉತ್ತರ ಹಾಕುತ್ತಿದ್ದಂತೆ ದಾನಿಶ್‌ ಸೇಠ್ ಮತ್ತು ಸಾದ್‌ ಖಾನ್‌ ಹೋಗಿ ಭೇಟಿ ಮಾಡಿದ್ದಾರೆ. ಇಬ್ಬರೂ ಪುಷ್ಕರ್‌ಗೆ ಕಥೆ ಹೇಳಿದ್ದಾರೆ. ಕಥೆ ಮೆಚ್ಚಿಕೊಂಡ ಪುಷ್ಕರ್‌, ಹೇಮಂತ್‌ ರಾವ್‌ಗೆ ಹೇಳುವುದಕ್ಕೆ ಹೇಳಿದ್ದಾರೆ. ಅವರೂ ಒಪ್ಪಿದ್ದಾಗಿದೆ. ಅಲ್ಲಿಗೆ ಒಂದು ಚಿತ್ರ ಮಾಡುವ ತೀರ್ಮಾನವಾಗಿದೆ. ಅದೇ "ಹಂಬಲ್‌ ಪಾಲಿಟಿಷಿಯನ್‌ ನೋಗರಾಜ್‌'.
ಈ ಚಿತ್ರ ಸೆಟ್ಟೇರಿದ್ದು ಮಂಗಳವಾರ ಬೆಳಿಗ್ಗೆ, ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ. ಚಿತ್ರ ತಂಡದವರು ಒಳಗೆ ಪೂಜೆ ಮುಗಿಸಿ, ಹೊರಗೆ ಬಯಲಿಗೆ ಬಂದು, ಅರ್ಧರ್ಧ ಕಾಫಿ ಕುಡಿದು ... ಎದುರಿಗಿದ್ದ ಚೇರ್‌ ಮೇಲೆ ಬಂದು ಮಾತಿಗೆ ಕುಳಿತರು. ಅದೇ ಜಾಗದಲ್ಲಿ ಒಂದು ವರ್ಷದ ಹಿಂದೆ "ಕಿರಿಕ್‌ ಪಾರ್ಟಿ' ಚಿತ್ರದ ಮುಹೂರ್ತವಾಗಿತ್ತು. ಈಗ ಅದೇ ಜಾಗದಲ್ಲಿ "ಹಂಬಲ್‌ ಪಾಲಿಟಿಷಿಯನ್‌ ನೋಗರಾಜ್‌'ನ ಪತ್ರಿಕಾಗೋಷ್ಠಿ. ಅಲ್ಲಿ ಚಿತ್ರದ ನಿರ್ಮಾಪಕ ಕಂ ನಟನಾಗಿ ರಕ್ಷಿತ್‌ ಶೆಟ್ಟಿ ಇದ್ದರು. ಈ ಬಾರಿ ಬರೀ ಒನ್‌ ಆಫ್ ದಿ ನಿರ್ಮಾಪಕರಾಗಿ ರಕ್ಷಿತ್‌ ಶೆಟ್ಟಿ ಕುಳಿತಿದ್ದರು.

ಇದೊಂದು ರಾಜಕೀಯ ವಿಡಂಬನಾತ್ಮಕ ಚಿತ್ರವಂತೆ. ಈ ಚಿತ್ರದ ತಿರುಳು ಏನಾಗಿರುತ್ತದೆ ಎಂಬುದನ್ನು ಚಿತ್ರದ ನಾಯಕ ಕಂ ಕಥೆಗಾರ ದಾನಿಶ್‌ ಸೇಠ್ ಹೇಳಿಕೊಂಡರು. ಈ ದಾನಿಶ್‌ ಸೇಠ್, ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಹೆಸರು ಮಾಡಿದವು. ಸುವರ್ಣ ವಾಹಿನಿಯಲ್ಲಿ ಒಂದು ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದ್ದರು. ನೋಗರಾಜ್‌ ಎಂಬ ಹೆಸರಿಟ್ಟುಕೊಂಡು, ಹಲವು ವಿಡಂಬನಾ ವೀಡಿಯೋಗಳನ್ನು ಮಾಡಿದವರೂ ಅವರೇ. ಈಗ ಮೊದಲ ಬಾರಿಗೆ ಚಿತ್ರದ ಹೀರೋ ಆಗುತ್ತಿದ್ದಾರೆ. "ರಸ್ತೆಯಲ್ಲಿ ಹೋಗುವಾಗ ಪೋಸ್ಟರ್‌ಗಳನ್ನು ನೋಡಿರಬಹುದು. ಅಲ್ಲಿ ರಾಜಕಾರಣಿಗಳ ಜೊತೆಗೆ ಹುಲಿ ಇರುತ್ತೆ, ಅವರು ನೀರಿನ ಮೇಲೆ ನಡೀತಿರುತ್ತಾರೆ. ಇವನ್ನೆಲ್ಲಾ ನೋಡಿ ನಗ್ತಿàವಿ. ಯಾಕೆ ಹೀಗೆಲ್ಲಾ ಪೋಸ್ಟರ್‌ ಮಾಡಿಸ್ತಾರೆ? ಹೀಗೆ ಮಾಡಿಸೋ ಹಿಂದಿನ ಮನಸ್ಥಿತಿ ಏನು? ಅದೆಷ್ಟೋ ರಾಜಕಾರಣಿಗಳು ಹಗರಣ ಮಾಡಿಕೊಂಡಿರ್ತಾರೆ. ಆದರೆ, ಐದು ವರ್ಷದ ನಂತರ ಅವರೇ ಗೆದ್ದು ಬರ್ತಾರೆ. ಇದೆಲ್ಲಾ ಇಟ್ಟುಕೊಂಡು ಒಂದು ಕಾಮಿಡಿ ಚಿತ್ರ ಮಾಡುತ್ತಿದ್ದೀವಿ. ಕೊನೆಯಲ್ಲಿ ಒಂದು ಸಂದೇಶ ಇದೆ. ಚಿತ್ರದಲ್ಲಿ ಇಂಗ್ಲೀಷ್‌, ಕನ್ನಡ ಎರಡೂ ಇರುತ್ತೆ. ಎಲ್ಲಾ ವರ್ಗದ ಜನರಿಗೆ ಅರ್ಥ ಆಗೋ ಹಾಗೆ ಮಾಡಿದ್ದೀವಿ' ಎಂದರು ದಾನಿಶ್‌ ಸೇಠ್.

ಈ ದಾನಿಶ್‌ ಬಗ್ಗೆ ನಿಮಗೆ ಗೊತ್ತಿರಲಾರದು. ಅವರು ಸಹ ರಾಜಕಾರಣಿಯ ಕುಟುಂಬದವರೇ. ಮೈಸೂರಿನ ಅಜೀಜ್‌ ಸೇಠ್ ಇದ್ದರಲ್ಲ, ಅವರ ಸಂಬಂಧಿಯೇ ಈ ದಾನಿಶ್‌. ಚಿಕ್ಕಂದಿನಿಂದ ಅವರು ರಾಜಕಾರಣಿಗಳನ್ನು ನೋಡಿಕೊಂಡು ಬಂದಿದ್ದಾರಂತೆ. ಹಾಗಾದರೆ, ಅವೆಲ್ಲಾ ಈ ಚಿತ್ರದಲ್ಲಿರುತ್ತದಾ ಎಂಬ ಪ್ರಶ್ನೆಯೂ ಬಂತು. ಇಲ್ಲಿ ಯಾರನ್ನೂ ಗೇಲಿ ಮಾಡುವ ಉದ್ದೇಶ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು ದಾನಿಶ್‌. "ಇಲ್ಲಿ ಯಾರೊಬ್ಬರನ್ನೂ ಟಾರ್ಗೆಟ್‌ ಮಾಡುತ್ತಿಲ್ಲ. ಬದಲಿಗೆ ನಮ್ಮ ರಾಜಕೀಯ ವ್ಯವಸ್ಥೆಯನ್ನ ವಿಡಂಬನೆ ಮಾಡುತ್ತಿದ್ದೇವೆ. ಇದೊಂದು ವಿಡಂಬನಾತ ಮಕ ಚಿತ್ರ. ಒಬ್ಬ ಮನುಷ್ಯ ಹೇಗೆ ತನ್ನ ಕೆಲಸದಿಂದ, ತಾನೇ ಯಾಮಾರುತ್ತಾನೆ ಎನ್ನುವುದು ಚಿತ್ರದ ಕಥೆ' ಎಂಬುದು ದಾನಿಶ್‌ ವಿವರಣೆ.

ಇನ್ನು ಚಿತ್ರದ ಹೆಸರಿನ ಬಗ್ಗೆಯೂ ಪ್ರಶ್ನೆ ಬಾರದೇ ಇರಲಿಲ್ಲ. ಏಕೆಂದರೆ, ಕನ್ನಡದಲ್ಲಿ Nagaraj ಎಂದು ಬರೆಯಲಾಗಿದ್ದರೆ, ಇಂಗ್ಲೀಷ್‌ನಲ್ಲಿ Nogaraj . ಹಾಗಾದರೆ, ಇದು ನಾಗರಾಜೋ, ನೋಗರಾಜೋ ಎಂಬ ಪ್ರಶ್ನೆ ಬಂತು. ಅದಕ್ಕೊಂದು ಉದಾಹರಣೆ ಸಮೇತ ವಿವರಿಸಿದರು ದಾನಿಶ್‌. "ಕಾಲ್‌ ಸೆಂಟರ್‌ನಿಂದ ಫೋನ್‌ ಬಂದಿತ್ತು. ಅವರು ತಮ್ಮನ್ನು Nogesh ಅಂತ ಪರಿಚಯಿಸಿಕೊಂಡರು. ಕೇಳಿ ಆಶ್ಚರ್ಯ ಆಯಿತು. ಅದು ನೋಗೇಶ್‌ ಅಲ್ಲ, ನಾಗೇಶ್‌ ಅಂದೆ. ಅವರು, ಅದೆಲ್ಲಾ ಬಿಡಿ, ಮೊದಲು ಬಿಲ್‌ ಕಟ್ಟಿ ಎಂದರು' ಅಂತ ದಾನಿಶ್‌ ಹೇಳುತ್ತಿದ್ದಂತಯೇ ನೋರು ನಗೆ ಕೇಳಿಬಂತು.

ಈ ಚಿತ್ರದಲ್ಲಿ ದಾನಿಶ್‌ ಜೊತೆಗೆ "ಯೂ ಟರ್ನ್' ಖ್ಯಾತಿಯ ರೋಜರ್‌ ನಾರಾಯಣ್‌ ಮತ್ತು ಶ್ರುತಿ ಹರಿಹರನ್‌, ರಘು, ವಿಜಯ್‌ ಚೆಂಡೂರ್‌, ಸುಮುಖೀ ಮುಂತಾದವರು ನಟಿಸುತ್ತಿದ್ದಾರೆ. ಸಾದ್‌ ಖಾನ್‌ ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಪುಷ್ಕರ್‌, ಹೇಮಂತ್‌ ಮತ್ತು ರಕ್ಷಿತ್‌ ನಿರ್ಮಾಪಕರು. ಮಾರ್ಚ್‌ ಒಂದರಿಂದ ಚಿತ್ರೀಕರಣ ಪ್ರಾರಂಭವಾಗಿ ಸೆಪ್ಟೆಂಬರ್‌, ಅಕ್ಟೋಬರ್‌ ಹೊತ್ತಿಗೆ ಚಿತ್ರ ಬಿಡುಗಡೆಯಾಗುತ್ತದಂತೆ.


More News of your Interest

Trending videos

Back to Top