Udayavani | Oct 24, 2010
ಉಡುಪಿ ಮೇಲಿನ ಶೀರ್ಷಿಕೆ ನೋಡಿ ಇದಾವ ಹುಲಿ? ಇದಾವ ಮನುಷ್ಯರು? ಎಂದು ಅಚ್ಚರಿಪಡಬೇಡಿ. ಇದನ್ನು ಹೇಳಿದವರು ಬೆಂಗಳೂರಿನ ಎ-ಟ್ರೀ (ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಆಂಡ್ ಎನ್ವಿರಾನ್ಮೆಂಟ್) ಸಂಸ್ಥೆಯ ಸಂಶೋಧಕ ಡಾ|ಸಿದ್ಧಪ್ಪ ಶೆಟ್ಟಿಯವರು. ಆದರೆ ಇದು ಅವರದೇ ಮಾತಲ್ಲ.
ಅರಣ್ಯ ಪ್ರದೇಶದ ಗಿರಿಜನ ವಾಸಿಗಳ ಜ್ಞಾನ ಹೇಗಿರುತ್ತದೆಎಂಬುದಕ್ಕೆ ಅವರು ನೀಡಿದ ಉದಾಹರಣೆ ಇದು. 'ಹುಲಿ ವಾಸನೆ ನಮಗೆ ಗೊತ್ತು, ನಮ್ಮ ವಾಸನೆ ಹುಲಿಗಳಿಗೊತ್ತು' ಎಂಬ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಮಾತನ್ನು ಸಿದ್ಧಪ್ಪ ಶೆಟ್ಟಿ ಉದಾಹರಿಸಿ ಎಷ್ಟೋ ದೂರದಲ್ಲಿ ಪ್ರಾಣಿಗಳು ಘರ್ಜಿಸಿದರೆ ಎಷ್ಟು ದೂರದಲ್ಲಿ ಪ್ರಾಣಿಗಳಿದ್ದಾವೆ ಎಂಬುದನ್ನು ಸೋಲಿಗರು ನಿಖರವಾಗಿ ಹೇಳುತ್ತಾರೆಂದರು. ಆದರೆ...?
ಈ ಜ್ಞಾನ ಹಳೆಯ ತಲೆಮಾರಿನವರಿಗೆ ಗೊತ್ತೇನೋ ಹೌದು. ಆದರೆ ಅವರ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಈ ಜ್ಞಾನ ಮುಂದಿನ ಪೀಳಿಗೆಗೂ ಗೊತ್ತಾಗಬೇಕೆಂದು ಎಲ್ಲರಿಗೂ ತಿಳಿಯುವಂತೆ ಏ-ಟ್ರೀ ಸಂಸ್ಥೆ ಮಾಡಿ 'ವನಸಂಜೀವನ' ಕೃತಿಯನ್ನು ಹೊರತಂದಿದೆ. ಪಶ್ಚಿಮಘಟ್ಟ, ಹಿಮಾಲಯದಂತಹ ಜೀವವೈವಿಧ್ಯವಿರುವ ಪ್ರದೇಶಗಳ ಜ್ಞಾನ ಎಲ್ಲರಿಗೂ ತಿಳಿಯಬೇಕೆಂಬುದು ನಮ್ಮ ಆಶಯ. ಶಿಕ್ಷಕರು ಆಸಕ್ತಿ ತೋರಿಸಿದರೆ ಸಂಸ್ಥೆ ತರಬೇತಿಯನ್ನೂ ನೀಡಲಿದೆ ಎಂದರು ಸಿದ್ಧಪ್ಪ ಶೆಟ್ಟಿಯವರು.
ಉಡುಪಿಯ ಅಕಲಂಕ ಪ್ರತಿಷ್ಠಾನ 'ವನಸಂಜೀವನ' ಕೃತಿಗೆ ಕೊಡಮಾಡಿದ ಅಕಲಂಕ ಪುಸ್ತಕ ಪುರಸ್ಕಾರವನ್ನು ಅ.24ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸ್ವೀಕರಿಸಿದ ಡಾ|ಸಿದ್ಧಪ್ಪ ಶೆಟ್ಟಿ ಪ್ರಶಸ್ತಿ ಕೊಡಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಅಕಾಡೆಮಿ ಆಡಳಿತಾಧಿ ಕಾರಿ ಡಾ|ಎಚ್.ಶಾಂತಾರಾಮ್ ಪ್ರಶಸ್ತಿ ಪ್ರದಾನ ಮಾಡಿದರು. ಅತಿಥಿಗಳಾಗಿ ಸುಹಾಸಂ ಅಧ್ಯಕ್ಷ ಶಾಂತರಾಜ ಐತಾಳ ಭಾಗವಹಿಸಿದ್ದರು. ಇತ್ತೀಚಿಗೆ ಪಿಎಚ್‌ಡಿ ಪಡೆದ ಸುರತ್ಕಲ್ ಎನ್‌ಐಟಿಕೆ ಪ್ರಾಧ್ಯಾಪಕ ಡಾ|ಬಿ.ಪ್ರಕಾಶ ಅವರನ್ನು ಸಮ್ಮಾನಿಸಲಾಯಿತು. ಪ್ರಶಸ್ತಿ ಪುರಸ್ಕೃತ ಕೃತಿ ಕುರಿತು ಕುಂದಾಪುರ ಭಂಡಾರ್‌ಕಾರ್ಸಿ ಕಾಲೇಜಿನ ಪ್ರಾಧ್ಯಾಪಕ ಅರವಿಂದ ಹೆಬ್ಟಾರ, ಪಿಎಚ್‌ಡಿ ಕೃತಿ ಕುರಿತು ಮಂಗಳೂರು ವಿ.ವಿ. ಕಾಲೇಜಿನ ಪ್ರಾಧ್ಯಾಪಕ ಡಾ|ಸತ್ಯನಾರಾಯಣ ಮಲ್ಲಿಪಟ್ಟಣ ಮಾತನಾಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ|ಪಿ.ವೆಂಕಟ್ರಮಣ ಗೌಡ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಡಾ|ಉಪ್ಪಂಗಳ ರಾಮ ಭಟ್ಟ ಸ್ವಾಗತಿಸಿ ಟ್ರಸ್ಟಿ ಬಿ.ಶಂಕರಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಧ್ಯಾಪಕರಾದ ಪ್ರೊ|ಎಂ.ಸುಧಾಕರ ರಾವ್, ಡಾ|ಕೆ.ಗೋಪಾಲಕೃಷ್ಣ ಭಟ್ಟ, ಅರವಿಂದ ಹೆಬ್ಟಾರರು ಪುರಸ್ಕಾರಕ್ಕೆ ಮೌಲ್ಯಮಾಪನ ಮಾಡಿದ್ದರು.
ಸುಜಾತಾ ಪದ್ಮನಾಭನ್, ಸುನಿತಾ ರಾವ್, ಯಶೋಧರಾ ಕುಂಡಾಜಿ ಅವರು ಜಂಟಿಯಾಗಿ ಕೃತಿ ರಚಿಸಿದ್ದರು. ವಿವೇಕಾನಂದ ಗಿರಿಜನ ಕೇಂದ್ರ, ಎ-ಟ್ರೀ, ಕಲ್ಪವೃಕ್ಷ ಸಂಸ್ಥೆಗಳು ಸಂಶೋಧನೆಗೆ ನೆರವಾಗಿದ್ದು ನಾಗೇಶ ಹೆಗಡೆ ಕನ್ನಡಕ್ಕೆ ಅನುವಾದಿಸಿದ್ದಾರೆ.