ಕಿರುತೆರೆಯಲ್ಲಿ ಮರುಪ್ರಸಾರ ಭಾಗ್ಯ
Team Udayavani, Apr 16, 2020, 11:05 AM IST
ಕೋವಿಡ್ 19 ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಕಿರುತೆರೆಯಲ್ಲಿ ಒಂದು ಕಾಲದಲ್ಲಿ ಮನೆಮನ ರಂಜಿಸಿ ಜನಪ್ರಿಯತೆಪಡೆದುಕೊಂಡಿದ್ದ ಧಾರಾವಾಹಿಗಳು ಮತ್ತೆ ಮರುಪ್ರಸಾರವಾಗುವ ಅವಕಾಶವನ್ನು ಪಡೆದುಕೊಂಡಿವೆ. ಈಗಾಗಲೇ ಹಿಂದಿಯಲ್ಲಿ ರಾಮಾಯಣ, ಮಹಾಭಾರತ, ಶಕ್ತಿಮಾನ್ ಮೊದಲಾದ ಜನಪ್ರಿಯ ಧಾರಾವಾಹಿಗಳು ಮರು ಪ್ರಸಾರವಾಗುತ್ತಿದ್ದು, ಈಗ ಅದೇ ಸಾಲಿಗೆ ಕನ್ನಡದ ಜನಪ್ರಿಯ ಧಾರಾವಾಹಿಗಳೂ ಸೇರ್ಪಡೆಯಾಗುತ್ತಿವೆ.
ಹೌದು, ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯವಾಗಿದ್ದ ಹಾಸ್ಯ ಧಾರಾವಾಹಿ ಸಿಲ್ಲಿ ಲಲ್ಲಿ ಈಗ ಮತ್ತೆ ಮರು ಪ್ರಸಾರವಾಗುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಈ ಧಾರಾವಾಹಿ ಪ್ರೇಕ್ಷಕರ ಒತ್ತಾಯದ ಮೇರೆಗೆ ಮರುಪ್ರಸಾರವಾಗುತ್ತಿದೆ. ಇದೊಂದೇ ಅಲ್ಲ, ಬಹುತೇಕ ವಾಹಿನಿಗಳು ಹಳೆಯ ಕಾರ್ಯಕ್ರಮಗಳನ್ನು ಮರುಪ್ರಸಾರ ಮಾಡುತ್ತಿವೆ. ಕೆಲವು ವಾಹಿನಿಗಳು ಧಾರಾವಾಹಿಗಳ ಯಶಸ್ವಿ ಕಂತುಗಳನ್ನು ಮರುಪ್ರಸಾರ ಮಾಡಿದರೆ, ಇನ್ನು ಕೆಲವು ವಾಹಿನಿಗಳು ರಿಯಾಲಿಟಿ ಶೋ ಸೇರಿದಂತೆ ಬೇರೆ ಬೇರೆ ಯಶಸ್ವಿ ಶೋಗಳನ್ನು ಮರುಪ್ರಸಾರ ಮಾಡುತ್ತಿವೆ. ಲಾಕ್ಡೌನ್ನಿಂದಾಗಿ ಇಡೀ ಬಣ್ಣದ ಲೋಕ ಸ್ತಬ್ಧವಾಗಿದೆ. ಸಿನಿಮಾ, ಧಾರಾವಾಹಿ ಯಾವುದೇ ಚಿತ್ರೀಕರಣವಾಗುತ್ತಿಲ್ಲ. ಹೀಗಾಗಿ ಧಾರಾವಾಹಿಗಳ ಮರುಪ್ರಸಾರ ಅನಿವಾರ್ಯವಾಗಿದೆ.