ದೇಶದ ಪ್ರಸಿದ್ಧ ಲೈಂಗಿಕ ತಜ್ಞ ಡಾ.ಮಹೀಂದರ್ ವತ್ಸಾ ನಿಧನ
ದೇಶದ ಲೈಂಗಿಕ ಶಿಕ್ಷಣ ಕ್ಷೇತ್ರದಲ್ಲಿ ವಾಸ್ತಾ ಪ್ರಮುಖರು
Team Udayavani, Dec 28, 2020, 8:45 PM IST
ಮುಂಬೈ: ದೇಶದ ಜನಪ್ರಿಯ ಲೈಂಗಿಕ ರೋಗ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ.ಮಹೀಂದರ್ ವತ್ಸಾ (96) ಅವರು ಸೋಮವಾರ ನಿಧನರಾಗಿದ್ದಾರೆ. ಈ ಅಂಶವನ್ನು ಕುಟುಂಬ ಸದಸ್ಯರು ಖಚಿತಪಡಿಸಿದ್ದಾರೆ. “ನಮ್ಮ ತಂದೆಯವರು ಹಲವು ಆಯಾಮಗಳನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಅವರು ಅತ್ಯುತ್ಕೃಷ್ಟ ಜೀವನವನ್ನು ಸಾಗಿಸಿದ್ದರು’ ಎಂದು ಅವರು ತಿಳಿಸಿದ್ದಾರೆ.
ದೇಶದ ಲೈಂಗಿಕ ಶಿಕ್ಷಣ ಮತ್ತು ಸಮಾಲೋಚನೆಯ ಕ್ಷೇತ್ರದಲ್ಲಿ ಡಾ.ವಾಸ್ತಾ ಹೆಸರು ನೆನಪಿನಲ್ಲಿ ಉಳಿಯುವಂಥದ್ದು.40 ವರ್ಷಗಳ ಕಾಲ ಅವರು ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾಗಿದ್ದರು. ಭಾರತೀಯ ಕುಟುಂಬ ಯೋಜನಾ ಸಂಘಟನೆ (ಎಫ್ಪಿಎಐ)ಯ ಸಲಹೆಗಾರರಾಗಿಯೂ ಅವರು ಕೆಲಸ ಮಾಡಿದ್ದರು. 1974ರಲ್ಲಿ ಸಂಘಟನೆ ಲೈಂಗಿಕ ಶಿಕ್ಷಣ ನೀಡುವ ಬಗ್ಗೆ ಕೇಂದ್ರ ಸ್ಥಾಪಿಸಿದಾಗ ಅವರು, ಈ ಕ್ಷೇತ್ರದಲ್ಲಿ ಸಲಹೆ ಮತ್ತು ಶಿಕ್ಷಣ ನೀಡಲು ಆರಂಭಿಸಿದರು. 1980ರಲ್ಲಿ ಅವರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. 1960ರಿಂದ ಲೈಂಗಿಕ ಸಮಸ್ಯೆ ಮತ್ತು ಸಲಹೆ ವಿಚಾರದಲ್ಲಿ ಪತ್ರಿಕೆಗಳಿಗೆ ಅಂಕಣಕಾರರಾಗಿ ಬರೆಯಲಾರಂಭಿಸಿದ್ದರು.
ಲೈಂಗಿಕ ಜೀವನದ ಕ್ಲಿಷ್ಟ ಸಮಸ್ಯೆಗಳಿಗೆ ಅವರು ಸೂಚಿಸುತ್ತಿದ್ದ ಪರಿಹಾರ ಹಾಸ್ಯ, ಲಘುವಾಗಿದ್ದರೂ, ಜೀವನಕ್ಕೆ ಹತ್ತಿರವಾಗಿರುತ್ತಿತ್ತು. ನಿಯತಕಾಲಿಕವೊಂದರಲ್ಲಿ ಅವರು ಓದುಗರು ಕೇಳುತ್ತಿದ್ದ ಸಮಸ್ಯೆಗಳಿಗೆ ನೀಡುತ್ತಿದ್ದ ಉತ್ತರ ಜನಪ್ರಿಯತೆ ಪಡೆಯಿತು.