ಅಂದಿಗೂ, ಇಂದಿಗೂ, ಎಂದೆಂದಿಗೂ ಪ್ರಸ್ತುತನಾಗಿರುವ ಅಹಿಂಸಾ ಸಂತ

Team Udayavani, Sep 29, 2019, 5:26 AM IST

ಗಾಂಧೀಜಿ ನಂಬಿಕೊಂಡು ಬಂದ ಅವರ ಮಾನವೀಯ ಕಾಳಜಿ, ಸರಳತೆ, ಸತ್ಯ ಸಂಧತೆ, ಅಹಿಂಸೆ ಇತ್ಯಾದಿ ಗುಣಗಳು ಮತ್ತು ಅವರು ಅನ್ಯಾಯದ ವಿರುದ್ಧ ಬಳಸುತ್ತಿದ್ದ ಸತ್ಯಾಗ್ರಹದ ಮಾರ್ಗಗಗಳಿಂದ ಸ್ವಾತಂತ್ರ್ಯವೇನೊ ಸಿಕ್ಕಿತು. ಆದರೆ ಗಾಂಧೀಜಿಯವರಿಗೆ ಯಾವುದು ಇಷ್ಟವಿರಲಿಲ್ಲವೋ ಅದೇ ಆಯಿತು ಮತ್ತು ಇಂದು ಕೂಡ ಅದೇ ಆಗುತ್ತಿದೆ. ಆದರೆ ಗಾಂಧಿ ತತ್ವಗಳನ್ನು ಅನುಷ್ಠಾನಗೊಳಿಸುವುದು ಆ ಮಹಾನ್‌ ಚೇತನಕ್ಕೆ ಸರ್ಮಪಿಸುವ ನೈಜ ಮತ್ತು ಪ್ರಾಮಾಣಿಕ ಶ್ರದ್ಧಾಂಜಲಿ ಎಂಬುದನ್ನು ಮರೆತಿರುತ್ತೇವೆ.

1948ರ ಜನವರಿ 31 ರಂದು ವಿಶ್ವಸಂಸ್ಥೆಯ 55 ಸದಸ್ಯ ರಾಷ್ಟ್ರಗಳ ಧ್ವಜಗಳು ಅರ್ಧ ಮಟ್ಟದಲ್ಲಿ ಹಾರಿದವು. ಕಾರಣ ಅಂದು ಒಬ್ಬ ವ್ಯಕ್ತಿಯ ಅಂತ್ಯ ಸಂಸ್ಕಾರ.

ಆ ವ್ಯಕ್ತಿ ಯಾವುದೇ ರಾಷ್ಟ್ರದ ಅಧ್ಯಕ್ಷನಾಗಿರಲಿಲ್ಲ. ಪ್ರಧಾನಿಯೂ ಆಗಿರಲಿಲ್ಲ. ಅಷ್ಟೇ ಏಕೆ ಆತನಿಗೆ ಸಣ್ಣ ಅಧಿಕಾರದ ಸ್ಥಾನವೂ ಇರಲಿಲ್ಲ. ಆತ ಯಾವ ಸೈನ್ಯಕ್ಕೂ ಅಧಿಪತಿಯಾಗಿರಲಿಲ್ಲ. ಕೈಗಾರಿಕೆಯ ಸಾಮ್ರಾಜ್ಯವನ್ನು ಸ್ಥಾಪಿಸಿರಲಿಲ್ಲ. ಆತನಿಗೆ ಬ್ಯಾಂಕಿನಲ್ಲಿ ಒಂದು ಅಕೌಂಟ್‌ ಕೂಡಾ ಇರಲಿಲ್ಲ. ಸ್ವಂತ ಮನೆಯಿರಲಿಲ್ಲ. ಸೂಜಿಯಷ್ಟೂ ನೆಲ ಅವನಿಗಿರಲಿಲ್ಲ. ಒಂದಿಷ್ಟು ಬಟ್ಟೆ, ಒಂದು ಜತೆ ಚಪ್ಪಲಿ, ಒಂದು ಗಡಿಯಾರ ಅಷ್ಟೇ ಆತನ ಆಸ್ತಿ. ನೋಡಲು ಮನಮೋಹಕನೂ ಅಲ್ಲ. ಅರೆ ಬೆತ್ತಲೆ ಫ‌ಕೀರ ಎಂದು ಕರೆಸಿಕೊಂಡ ಒಬ್ಬ ವಯೋವೃದ್ಧನ ಸಾವಿಗೆ ಜಗತ್ತಿನ 55 ರಾಷ್ಟ್ರಗಳು ಸಂತಾಪ ಸೂಚಿಸಿದವು. ಆತನೇ ಮಹಾತ್ಮ, ಬಾಪು, ರಾಷ್ಟ್ರಪಿತ.

ಗಾಂಧೀಜಿಯವರಿಗೆ ಜನ್ಮವಿತ್ತ ಭಾರತ ಮಾತೆಯೇ ಧನ್ಯಳು. ಸಹಸ್ರಮಾನದ ಮಾನವನೆನಿಸಿಕೊಂಡ ಈ ಮಹಾನ್‌ ಚೇತನ ತನ್ನ ಜೀವಿತಾವಧಿಯ ಅರ್ಧ ಶತಮಾನಕ್ಕೂ ಮೇಲ್ಪಟ್ಟ ಕಾಲವನ್ನು ಶಾಂತಿ, ಸತ್ಯ ಮತ್ತು ಅಹಿಂಸೆಯಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಗಾಂಧೀಜಿ ಅಂದಿಗೆ, ಇಂದಿಗೆ ಮಾತ್ರವಲ್ಲ, ಭವಿಷ್ಯದ ಬದುಕಿಗೂ ಬೇಕಾದವರು. ಅವರ ಸಾಧನೆ, ತ್ಯಾಗ, ಬಲಿದಾನ ಸೇವೆ, ಪಾರದರ್ಶಕ ಬದುಕು ಎಂದೆಂದಿಗೂ ಪ್ರಸ್ತುತ.

ಗಾಂಧೀಜಿ ನಂಬಿಕೊಂಡು ಬಂದ ಅವರ ಮಾನವೀಯ ಕಾಳಜಿ, ಸರಳತೆ, ಸತ್ಯ ಸಂಧತೆ, ಅಹಿಂಸೆ ಇತ್ಯಾದಿ ಗುಣಗಳು ಮತ್ತು ಅವರು ಅನ್ಯಾಯದ ವಿರುದ್ಧ ಬಳಸುತ್ತಿದ್ದ ಸತ್ಯಾಗ್ರಹದ ಮಾರ್ಗಗಗಳಿಂದ ಸ್ವಾತಂತ್ರ್ಯವೇನೊ ಸಿಕ್ಕಿತು. ಆದರೆ ಗಾಂಧೀಜಿಯವರಿಗೆ ಯಾವುದು ಇಷ್ಟವಿರಲಿಲ್ಲವೋ ಅದೇ ಆಯಿತು ಮತ್ತು ಇಂದು ಕೂಡ ಅದೇ ಆಗುತ್ತಿದೆ.

ಗಾಂಧಿ ಜಯಂತಿ ಮತ್ತು ಪುಣ್ಯ ತಿಥಿಯಂದು ಅವರ ಪ್ರತಿಮೆಗೆ ಹೂಹಾರ ಹಾಕಿ ಬಾಯಿ ತುಂಬಾ ಗುಣಗಾನ ಮಾಡುತ್ತೇವೆ. ಆದರೆ ಗಾಂಧಿ ತತ್ವಗಳನ್ನು ಅನುಷ್ಠಾನಗೊಳಿಸುವುದು ಆ ಮಹಾನ್‌ ಚೇತನಕ್ಕೆ ಸರ್ಮಪಿಸುವ ನೈಜ ಮತ್ತು ಪ್ರಾಮಾಣಿಕ ಶ್ರದ್ಧಾಂಜಲಿ ಎಂಬುದನ್ನು ಮರೆತಿರುತ್ತೇವೆ.

ಶಾಂತಿ ಮತ್ತು ಅಹಿಂಸೆಯ ತತ್ವಕ್ಕೆ ಮಾನವೀಯತೆಯನ್ನು ಒಗ್ಗೂಡಿಸುವ ಶಕ್ತಿ ಇದೆ. ಸರ್ವೋದಯವು ಗಾಂಧೀಜಿಯವರ ಗುರಿಯಾಗಿತ್ತು. ಸ್ವಾತಂತ್ರ್ಯ ಸಿಕ್ಕಿ ಪೂರ್ತಿ ಏಳು ದಶಕಗಳು ಕಳೆದರೂ ಬಹುಪಾಲು ಜನ ಅನ್ನ, ಅರಿವೆ ಮತ್ತು ಅಕ್ಷರದಿಂದ ವಂಚಿತರಾಗಿದ್ದಾರೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿದೆ.

ಇಂದು ಪ್ರಜಾಪ್ರಭುತ್ವವೇ ಡೋಲಾಯಮಾನ ಪರಿಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲಿ ಗಾಂಧೀಜಿಯವರು ಪ್ರಜಾಪ್ರಭುತ್ವದ ಬಗ್ಗೆ ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳುವುದು ಸೂಕ್ತ. ಅದೇನೆಂದರೆ “ಒಂದು ವ್ಯವಸ್ಥೆ ದೊಡ್ಡದಾದಷ್ಟೂ ಅದರ ದುರುಪಯೋಗದ ಅವಕಾಶಗಳು ಹೆಚ್ಚಿಗೆ ಇರುತ್ತವೆ. ಪ್ರಜಾಪ್ರಭುತ್ವ ಎನ್ನುವುದು ಒಂದು ದೊಡ್ಡ ವ್ಯವಸ್ಥೆಯಾಗಿರುವುದರಿಂದ ಅದು ಹೆಚ್ಚಿನ ಪ್ರಮಾಣದಲ್ಲಿ ದುರುಪಯೋಗಕ್ಕೆ ಒಳಗಾಗುತ್ತದೆ. ಇದಕ್ಕೆ ಪರಿಹಾರವೆಂದರೆ ಪ್ರಜಾಪ್ರಭುತ್ವವನ್ನು ತೊರೆದು ಬಿಡುವುದಲ್ಲ. ದುರಪಯೋಗದ ಸಾಧ್ಯತೆಯನ್ನು ತಗ್ಗಿಸುವುದೇ ಆಗಿದೆ.’ ಆದರೆ ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂಪೂರ್ಣ ಸ್ವಾರ್ಥಕ್ಕೆ ಬಳಸಿಕೊಂಡು, ಅಧಿಕಾರ ದುರಪಯೋಗದ ಪರಮಾವಧಿಯನ್ನು ನಾವು ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಳಲ್ಲಿ ಕಾಣುತ್ತಿರುವುದು ಒಂದು ದುರಂತ. ಇದಕ್ಕೆ ಕಾರಣ ಯಾರು ಎನ್ನುವುದಕ್ಕಿಂತಲೂ ಏಕೆ ಹೀಗಾಗುತ್ತಿದೆ ಎಂದು ಯೋಚಿಸುವುದು ಸೂಕ್ತ.

ಈ ಸಂದರ್ಭದಲ್ಲಿ ಗಾಂಧೀಜಿಯವರ ಬಗ್ಗೆ ಅವರು ತಳೆದ ನೀತಿಯ ಬಗ್ಗೆ ಉಲ್ಲೇಖೀಸುವುದು ಸೂಕ್ತ. ಈ ಜಗತ್ತು ನೂರಾರು ಹಿಟ್ಲರ್‌ಗಳನ್ನು ಸೃಷ್ಟಿಸಬಹುದು. ಆದರೆ ಒಬ್ಬ ಗಾಂಧಿಯನ್ನು ಸೃಷ್ಟಿಸಲು ಅಸಾಧ್ಯ. ಸತ್ಯ, ನ್ಯಾಯ, ಧರ್ಮ, ನೀತಿ, ಪ್ರಾಮಾಣಿಕತೆ, ನಿಷ್ಠೆ, ಅಹಿಂಸೆ ಮತ್ತು ಸರಳ ತತ್ವಗಳಿಂದ ಇಡಿ ಜಗತ್ತೇ ಬೆರಗಾಗುವಷ್ಟು ಎತ್ತರಕ್ಕೆ ಬೆಳೆದರು. ಸತ್ಯವು ಶಾಂತಿಗಿಂತ ಹಿರಿದಾದದ್ದು, ಸತ್ಯವೇ ದೇವರು. ಅಹಿಂಸೆಯಿಲ್ಲದೆ ಸತ್ಯ ಸಾಕ್ಷಾತ್ಕಾರವಾಗಲಾರದು. ಸತ್ಯಕ್ಕಾಗಿ ಏನನ್ನಾದರೂ ತ್ಯಾಗಮಾಡಿ ಆದರೆ ಸತ್ಯವನ್ನು ಯಾವ ಕಾರಣಕ್ಕೂ ತ್ಯಾಗ ಮಾಡಬೇಡಿ’ ಎಂಬುದನ್ನು ಜಗತ್ತಿಗೆ ಪರಿಚಯಿಸಿದ ಮಹಾನ್‌ ಚೇತನ.

ವಿಶ್ವದ ವಿವಿಧ ದೇಶಗಳು ಗಾಂಧಿ ಸ್ಮಾರಕ ಮತ್ತು ಪ್ರತಿಮೆಗಳನ್ನು ಸ್ಥಾಪಿಸಿವೆಯಲ್ಲದೆ ಪ್ರಮುಖ ರಸ್ತೆಗಳಿಗೆ ಗಾಂಧೀಜಿಯವರ ಹೆಸರನ್ನು ಇಟ್ಟಿವೆ. ನೆದರ್‌ಲ್ಯಾಂಡ್‌ 29 ರಸ್ತೆಗಳಿಗೆ ಗಾಂಧೀಜಿಯವರ ಹೆಸರನ್ನಿಟ್ಟಿದೆ.

ಅಹಿಂಸಾ ಸಂತನ ಹಿಂಸಾತ್ಮಕ ಅಂತ್ಯದ ಬಗ್ಗೆ ಜಾರ್ಜ್‌ ಬರ್ನಾಡ್‌ ಷಾರವರು ಅತ್ಯಂತ ಸದ್ಗುಣಗಳು ಮತ್ತು ಮಾನವೀಯತೆಯನ್ನು ಹೊಂದಿರುವುದೂ ಅಪಾಯಕಾರಿ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು.

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ