ಹಮ್‌ ನಿಭಾಯೇಂಗೆ ಮತ್ತು ಸಂಕಲ್ಪ ಪತ್ರ

Team Udayavani, Apr 9, 2019, 6:00 AM IST

ಲೋಕಸಭೆಯ ಪ್ರಥಮ ಹಂತದ ಚುನಾವಣೆಗೆ ಮೂರು ದಿನ ಬಾಕಿಯಿರುವಾಗಲೇ, ಬಿಜೆಪಿ ತನ್ನ ಬಹು ನಿರೀಕ್ಷಿತ ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ಆಶ್ವಾಸನೆಗಳ ಜತೆಗೆ ದೀರ್ಘ‌ಕಾಲೀನವಾಗಿ ಪ್ರಭಾವ ಬೀರಬಲ್ಲ ಹಲವು ಕಾರ್ಯಕ್ರಮಗಳನ್ನೊಳಗೊಂಡಿರುವ ಪ್ರಣಾಳಿಕೆಗೆ ಬಿಜೆಪಿ ಸಂಕಲ್ಪ ಪತ್ರ ಎಂದು ಹೆಸರು ಕೊಟ್ಟಿದೆ. ರಾಜಕೀಯ ಪಕ್ಷಗಳು ಚುನಾವಣೆ ಕಾಲದಲ್ಲಿ ಬಿಡುಗಡೆಗೊಳಿಸುವ ಪ್ರಣಾಳಿಕೆಯಲ್ಲಿ ನೀಡುವ ಆಶ್ವಾಸನೆಯನ್ನು ಸಾಮಾನ್ಯ ಮತದಾರರು ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನುವುದು ನಿಜವೇ ಆಗಿದ್ದರೂ ಒಂದು ಪಕ್ಷದ ಚಿಂತನೆ, ಭವಿಷ್ಯದ ದೃಷ್ಟಿಕೋನ ಇತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಇದು ನೆರವಾಗುತ್ತದೆ. ಪ್ರಣಾಳಿಕೆ ಬಿಡುಗಡೆ ಗೊಳಿಸುವ ವಿಚಾರದಲ್ಲಿ ಬಿಜೆಪಿಯನ್ನು ಕಾಂಗ್ರೆಸ್‌ ಹಿಂದಿಕಿತ್ತು. ಆದರೆ ಪ್ರಣಾಳಿಕೆಯ ಅಂಶದಲ್ಲಿರುವ ವಿಚಾರದಲ್ಲಿ ಕಾಂಗ್ರೆಸನ್ನು ಬಿಜೆಪಿ ಹಿಂದಿಕ್ಕಿದೆ.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಹುಚರ್ಚಿತವಾಗಿರುವುದು ಬಡ ಕುಟುಂಬಗಳಿಗೆ ಪ್ರತಿ ವರ್ಷ 72,000 ರೂ. ನೀಡುವುದು, ರೈತರಿಗಾಗಿ ಪ್ರತ್ಯೇಕ ಬಜೆಟ್‌ ಮಂಡಿಸುವುದು, ಒಂದೇ ಶ್ರೇಣಿಯ ಜಿಎಸ್‌ಟಿ, ಮಹಿಳೆಯರಿಗೆ ಶೇ. 33 ಮೀಸಲಾತಿ ಮತ್ತು ಜಮ್ಮು-ಕಾಶ್ಮೀರದಲ್ಲಿ ಸೇನೆಗೆ ನೀಡಲಾಗಿರುವ ವಿಶೇಷಾಧಿಕಾರವನ್ನು ರದ್ದುಪಡಿಸುವಂಥ ಆಶ್ವಾಸನೆಗಳು. 121 ಸಾರ್ವಜನಿಕ ಸಂಪರ್ಕಗಳನ್ನು ಏರ್ಪಡಿಸಿ 53 ಸಮಾಲೋಚನೆಗಳನ್ನು ನಡೆಸಿ. ತಜ್ಞರ ಸಲಹೆಗಳನ್ನು ಪಡೆದು ಪ್ರಣಾಳಿಕೆಯನ್ನು ರಚಿಸಲಾಗಿದೆ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ. ಆದರೆ ಬಿಡುಗಡೆಯಾದ ಗಳಿಗೆಯಿಂದಲೇ ಕಾಂಗ್ರೆಸ್‌ ಪ್ರಣಾಳಿಕೆ ವಿವಾದಕ್ಕೀಡಾಗಿದೆ. ಮುಖ್ಯವಾಗಿ ಸೇನೆಯ ವಿಶೇಷಾಧಿಕಾರವನ್ನು ಹಿಂದೆಗೆದುಕೊಳ್ಳುವ ವಿಚಾರ ತೀವ್ರ ಟೀಕೆಗೆ ಗುರಿಯಾಗಿ ಪಕ್ಷಕ್ಕೆ ಮುಜುಗರವಾಗಿದೆ. ಜೊತೆಗೆ ವಾರ್ಷಿಕ 72,000 ರೂ. ನೀಡುವುದಾಗಿ ಹೇಳಿದ್ದರೂ ಇದಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಹೇಗೆ ಹೊಂದಿಸಬೇಕೆಂಬ ಸ್ಪಷ್ಟತೆ ಪಕ್ಷಕ್ಕೆ ಇಲ್ಲ. ರಾಹುಲ್‌ ಗಾಂಧಿಯ ಸಲಹೆಗಾರ ಸ್ಯಾಮ್‌ ಪಿತ್ರೊಡ ಮಧ್ಯಮ ವರ್ಗದವರ ಮೇಲೆ ತೆರಿಗೆ ಹಾಕಿ ಸಂಪನ್ಮೂಲ ಸಂಗ್ರಹಿಸಲಾಗುವುದು ಎಂದರೆ ರಾಹುಲ್‌ ಗಾಂಧಿ ಶ್ರೀಮಂತರಿಗೆ ತೆರಿಗೆ ಹಾಕುತ್ತೇವೆ ಎನ್ನುತ್ತಾರೆ. ಪಿ.ಚಿದಂಬರಂ ಸೇರಿದಂತೆ ಕೆಲವು ನಾಯಕರು ದೇಶದ ಆರ್ಥಿಕ ಸ್ಥಿತಿ ಸದೃಢವಾಗಿರುವುದರಿಂದ ಹೆಚ್ಚುವರಿ ತೆರಿಗೆ ಹಾಕುವ ಅಗತ್ಯ ಇಲ್ಲ ಎನ್ನುವ ಸಮಜಾಯಿಸಿ ನೀಡುತ್ತಿದ್ದಾರೆ. ವರ್ಷಕ್ಕೆ 3,60,000 ಕೋಟಿ ರೂ. ಸಂಗ್ರಹಿಸುವುದು ಹೇಗೆ ಎನ್ನುವ ಸ್ಪಷ್ಟ ಕಲ್ಪನೆ ಯಾರಿಗೂ ಇಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಹೀಗಾಗಿ ಕಾಂಗ್ರೆಸ್‌ನ ಈ ಆಶ್ವಾಸನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವಾರು ಪ್ರಶ್ನೆಗಳಿವೆ. ಇದರ ಬದಲು ತನ್ನ ಅಚ್ಚುಮೆಚ್ಚಿನ ನರೇಗ ಯೋಜನೆಯನ್ನೇ ಇನ್ನಷ್ಟು ಬಲಪಡಿಸುವ ಯೋಜನೆಯನ್ನು ಘೋಷಿಸಿದ್ದರೆ ಒಂದಷ್ಟು ಅನುಕೂಲವಾಗುತ್ತಿತ್ತು. ಅದೇ ರೀತಿ ಸೇನೆಯ ವಿಶೇಷಾಧಿಕಾರವನ್ನು ಹಿಂದೆಗೆಯುವ ವಿಚಾರವನ್ನು ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳುವುದಕ್ಕಿಂತ ಅಧಿಕಾರಕ್ಕೇರಿದ ಬಳಿಕ ಕೂಲಂಕಷವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಬಹುದಿತ್ತು.ಜಿಎಸ್‌ಟಿ ವಿಚಾರದಲ್ಲೂ ಎಲ್ಲ ಉತ್ಪನ್ನ ಮತ್ತು ಸೇವೆಗಳಿಗೆ ಒಂದೇ ದರವನ್ನು ಹೇಗೆ ಅನ್ವಯಿಸಬಹುದು ಎನ್ನುವುದನ್ನು ಕಾಂಗ್ರೆಸ್‌ ವಿವರಿಸಿಲ್ಲ.

ಬಿಜೆಪಿ ಪ್ರಣಾಳಿಕೆಯಲ್ಲಿ ರಾಷ್ಟ್ರೀಯತೆಗೆ ಆದ್ಯತೆ ನೀಡಿದೆ. ಅಧಿಕಾರದಲ್ಲಿರುವ ಪಕ್ಷಕ್ಕೆ ಇನ್ನೊಂದು ಅವಧಿಗೆ ಅಧಿಕಾರ ಕೋರುವ ಪ್ರಣಾಳಿಕೆ ಬಿಡುಗಡೆಗೊಳಿಸುವುದು ನಿಜಕ್ಕೂ ಕಠಿಣ ಪರೀಕ್ಷೆಯಾಗುತ್ತದೆ. ಈ ಆಶ್ವಾಸನೆಗಳನ್ನು ನಿಮ್ಮ ಅಧಿಕಾರಾವಧಿಯಲ್ಲಿ ಏಕೆ ಈಡೇರಿಸಿಲ್ಲ ಎಂಬ ಸಹಜ ಪ್ರಶ್ನೆಯನ್ನು ಆಡಳಿತ ಪಕ್ಷ ಎದುರಿಸಬೇಕಾಗುತ್ತದೆ. ಅದಕ್ಕೆ ಉತ್ತರಿಸಲು ಬಿಜೆಪಿ ಪ್ರಯತ್ನಿಸಿದೆ.

ಬಿಜೆಪಿ ಪ್ರಣಾಳಿಕೆಯಲ್ಲಿ ಮತ ತಂದುಕೊಡಬಹುದು ಎಂದು ಭಾವಿಸಲಾಗಿರುವ 3ಅಂಶಗಳಿಗೆ ಒತ್ತುಕೊಡಲಾಗಿದೆ. ಅದು ರಾಷ್ಟ್ರೀಯತೆ ಅಥವಾ ರಾಷ್ಟ್ರೀಯ ಭದ್ರತೆ, ಗ್ರಾಮೀಣ ಭಾರತದ ಅಭಿವೃದ್ಧಿ ಮತ್ತು ಒಟ್ಟಾರೆ ಆರ್ಥಿಕ ಪ್ರಗತಿ. ಮೂರನೇ ಅಂಶದಲ್ಲಿ ಉದ್ಯೋಗ, ಜಿಎಸ್‌ಟಿ ಸುಧಾರಣೆ, ಉತ್ಪಾದನೆ ಹೆಚ್ಚಳ, ಜಿಡಿಪಿ ಅಭಿವೃದ್ಧಿ ರಫ್ತು ಹೆಚ್ಚಳ ಸೇರಿದಂತೆ ಎಲ್ಲ ವಿಷಯಗಳು ಅಡಕವಾಗಿದೆ. 2022ಕ್ಕೆ ರೈತರ ಆದಾಯ ದ್ವಿಗುಣ, ಗ್ರಾಮೀಣ ಭಾರತದಲ್ಲಿ 5 ವರ್ಷಗಳಲ್ಲಿ 25 ಲಕ್ಷ ಕೋಟಿ ರೂ. ಹೂಡಿಕೆ, ರೈತರಿಗೆ ವಾರ್ಷಿಕ 6,000 ರೂ. ಕೊಡುಗೆ ಇತ್ಯಾದಿ ಭರವಸೆಗಳನ್ನು ಪುನರುಚ್ಚರಿಸಿದೆ. ಸ್ವಾತಂತ್ರೊéàತ್ಸವದ 75ನೇ ವರ್ಷಕ್ಕೆ 75 ಸಂಕಲ್ಪಗಳನ್ನು ಬಿಜೆಪಿ ಮಾಡಿದೆ. ಇದೇ ವೇಳೆ 100ನೇ ಸ್ವಾತಂತ್ರ್ಯೋತ್ಸವ ಆಚರಣೆಗಾಗುವಾಗ ದೇಶವನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಿದ ದೇಶವಾಗಿ ರೂಪಿಸುವ ದೊಡ್ಡ ಕನಸನ್ನೂ ಬಿತ್ತಿದೆ. ಇದಾಗಲು ಇನ್ನೂ 27 ವರ್ಷಗಳಿರುವುದರಿಂದ ಈ ವಿಚಾರವನ್ನು ಚರ್ಚಿಸಲು ಅವಸರವೇನಿಲ್ಲದಿದ್ದರೂ ಒಂದು ಪಕ್ಷ ಇಷ್ಟು ಸುದೀರ್ಘ‌ವಾಧಿಯ ಬಗ್ಗೆಯೂ ಯೋಚಿಸುತ್ತಿದೆ ಎನ್ನುವುದು ಧನಾತ್ಮಕವಾದ ಅಂಶ. ಎರಡೂ ರಾಷ್ಟ್ರೀಯ ಪಕ್ಷಗಳ ಪ್ರಣಾಳಿಕೆಗಳು ಜನರ ಮಧ್ಯೆ ಇದ್ದು, ಯಾವುದು ಉತ್ತಮ ಎಂದು ನಿರ್ಧರಿಸುವ ಹೊಣೆ ಅವರದ್ದು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ