ಮಾತಿನ ಮೇಲಿರಲಿ ಹಿಡಿತ

Team Udayavani, May 15, 2019, 6:00 AM IST

ರಾಜಕೀಯ ಕ್ಷೇತ್ರದ ಬಲು ದೊಡ್ಡ ದುರಂತವೆಂದರೆ ವಿವಾದಾತ್ಮಕ ಮಾತುಗಳಿಂದಾಗಿ ಖಂಡನೆ, ಛೀಮಾರಿಗೆ ಒಳಗಾದರೂ ಕೆಲವರು ತಪ್ಪನ್ನು ತಿದ್ದಿಕೊಳ್ಳಲು ಮನಸ್ಸು ಮಾಡುವುದೇ ಇಲ್ಲ. 2017ರಲ್ಲಿ ನಡೆದಿದ್ದ ಗುಜರಾತ್‌ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ನಾಯಕ ಮಣಿಶಂಕರ ಅಯ್ಯರ್‌ ಪ್ರಧಾನಿ ಮೋದಿ ಅವರನ್ನು ‘ನೀಚ’ ಎಂದು ಬೈದು ಸುದ್ದಿಯಾಗಿದ್ದರು. ಹೇಳಿಕೆ ಬಿರುಸಾಗುತ್ತಲೇ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅಯ್ಯರ್‌ ಅವರನ್ನು ಪಕ್ಷದಿಂದ ಅಲ್ಪ ಕಾಲಕ್ಕೆ ಹೊರಹಾಕಿದ್ದರು. 19ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಈಗ ಅಯ್ಯರ್‌ ‘ರೈಸಿಂಗ್‌ ಕಾಶ್ಮೀರ್‌’ ಮತ್ತು ‘ದ ಪ್ರಿಂಟ್’ನಲ್ಲಿ ಪ್ರಕಟಿಸಲಾಗಿರುವ ಲೇಖನದಲ್ಲಿ ಪ್ರಧಾನಿ ವಿರುದ್ಧ ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ಮತ್ತೆ ಪುನರುಚ್ಚರಿಸಿದ್ದಾರೆ.

ಅಯ್ಯರ್‌ ಕಾಂಗ್ರೆಸ್‌ನ ಹಳೆಯ ತಲೆಮಾರಿನ ನಾಯಕರು. ಕೇಂಬ್ರಿಡ್ಜ್ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಅಂಥ ಹಿರಿಯ ನಾಯಕರು ಯಾರನ್ನೋ ಮೆಚ್ಚಿಸಲು ಪ್ರಧಾನಿ ವಿರುದ್ಧ ತುಚ್ಛವಾದ ಹೇಳಿಕೆ ನೀಡುವುದರಿಂದ ಆಗುವ ಪ್ರಯೋಜನವಾದರೂ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳದೇ ಇರುವುದು ಪ್ರಶ್ನಾರ್ಹವಾಗುತ್ತದೆ.

2014ರ ಲೋಕಸಭಾ ಚುನಾವಣೆಯಲ್ಲಿ ಮಣಿಶಂಕರ್‌ ಅಯ್ಯರ್‌ ಅವರು ಮೋದಿ ಕುರಿತು ಮಾಡಿದ ಚಾಯ್‌ವಾಲಾ ಟೀಕೆಯು ಕಾಂಗ್ರೆಸ್‌ಗೆ ಬಹುದೊಡ್ಡ ಪೆಟ್ಟನ್ನು ಕೊಟ್ಟಿತ್ತು. ಇಷ್ಟಾದರೂ ಅವರನ್ನು ಸುಮ್ಮನಾಗಿಸುವಲ್ಲಿ ಕಾಂಗ್ರೆಸ್‌ ನಾಯಕತ್ವ ವಿಫ‌ಲವಾಗುತ್ತಿರುವುದೇಕೆ ಎನ್ನುವ ಪ್ರಶ್ನೆ ಏಳುತ್ತದೆ. ಕಾಂಗ್ರೆಸ್‌ನ ಸಾಗರೋತ್ತರ ವಿಭಾಗದ ಮುಖ್ಯಸ್ಥ ಸ್ಯಾಮ್‌ ಪಿತ್ರೊಡಾ 1984ರ ಸಿಖ್‌ ವಿರೋಧಿ ದಂಗೆ ನಡೆದಿತ್ತು, ಆಗಿದ್ದು ಆಯಿತು ಎಂದು ಹೇಳಿದ್ದಷ್ಟೇ ಖಂಡನೀಯ ವಿಚಾರವಿದು. ನಿರ್ದಿಷ್ಟ ವ್ಯಕ್ತಿ, ಪಕ್ಷ ಅಧಿಕಾರಕ್ಕೆ ಬರಲೇಬಾರದು, ಅವರು ಇದ್ದರೆ ಏನೋ ಆಗುತ್ತದೆ ಎಂಬಿತ್ಯಾದಿ ಹುಯಿಲೆಬ್ಬಿಸುವುದು ಸುಲಭ. ಈಗಂತೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಹಿತಿಯೇ ಸತ್ಯವಾಗಿಬಿಡುತ್ತದೆ. ಈ ಮೂಲಕ ಚಾರಿತ್ರ್ಯ ಹರಣಕ್ಕೆ ರಹದಾರಿ ಸಿಕ್ಕಿದೆ. ಅಯ್ಯರ್‌ ಬರೆದದ್ದು ಯಾವ ಸಂದರ್ಭಕ್ಕೆ, ಅದರ ಹಿಂದಿನ ಸತ್ಯಾಂಶ ಏನು, ವಾಸ್ತವ ವಿಚಾರ ಏನು ಇತ್ಯಾದಿ ವಿಚಾರಗಳ ಬಗ್ಗೆ ಜನರು ಯೋಚಿಸಲು ಹೋಗುವುದಿಲ್ಲ. ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿದರೆ ಸತ್ಯವಾಗುತ್ತದೆ ಎಂಬ ನಾಣ್ಣುಡಿಯಂತೆ ಪ್ರಧಾನಿ ವಿರುದ್ಧ ಬರೆದರೆ, ಮಾತನಾಡಿದರೆ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಲ್ಲಿರಬಹುದೆಂಬ ಲೆಕ್ಕಾಚಾರವೂ ಕೇಂದ್ರದ ಮಾಜಿ ಸಚಿವರದ್ದು ಇರಬಹುದೇನೋ?

ಲೇಖನದ ಬಗ್ಗೆ ‘ಎಎನ್‌ಐ’ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ್ದ ಅವರು ‘ಒಂದೊಂದು ಪದಕ್ಕೂ ಬದ್ಧನಿದ್ದೇನೆ. 2017ರಲ್ಲಿ ನಾನು ಏನು ಹೇಳಿದ್ದೆ ಎನ್ನುವುದು ಈಗ ಸರಿಯಾತಲ್ಲವೇ?’ ಎಂದು ಪ್ರಶ್ನೆ ಮಾಡಿದ್ದಾರೆ. ತಮ್ಮ ವಿರುದ್ಧ ಮಿತಿ ಮೀರಿದ ಟೀಕೆ ವ್ಯಕ್ತವಾಗುತ್ತಲೇ ಪ್ರಧಾನಿ ಸೂಕ್ತವಾಗಿ ಅದಕ್ಕೆ ತಿರುಗೇಟು ನೀಡಿದ್ದಾರೆ. ಹೊಲಸು ಬಾಯಿಯ ಪ್ರಧಾನಿ ಮೋದಿ ಎಂದು ಹೇಳಿದ್ದಾರೆ ಅಯ್ಯರ್‌. ಪ್ರಧಾನಿ ಮೋದಿಯವರ ವಿರುದ್ಧ ಪ್ರಯೋಗಿಸಲಾಗಿರುವ ಪದಗಳ ಪಟ್ಟಿ ನೋಡಿದರೆ, ದೇಶದಲ್ಲಿ ಒಬ್ಬ ರಾಜಕೀಯ ನಾಯಕನ ವಿರುದ್ಧ ಇಷ್ಟೊಂದು ದ್ವೇಷಮಯ ಭಾಷೆ ಪ್ರಯೋಗವಾಗುತ್ತದೆಯೇ ಎಂದು ಮುಂದಿನ ದಶಕಗಳಲ್ಲಿ ಓದಿ ತಿಳಿದುಕೊಳ್ಳುವವರಿಗೆ ಅಚ್ಚರಿ ಎನಿಸದೇ ಇರದು.

ಕೆಲ ದಿನಗಳ ಹಿಂದಷ್ಟೇ ‘ಟೈಮ್‌’ ನಿಯತಕಾಲಿಕದಲ್ಲೂ ಕೂಡ ಪ್ರಧಾನಿ ಮೋದಿಯನ್ನು ಡಿವೈಡರ್‌ ಇನ್‌ ಚೀಫ್ ಎಂಬ ಶೀರ್ಷಿಕೆಯಲ್ಲಿ ಸಂಬೋಧಿಸಿದ ಲೇಖನ ಪ್ರಕಟವಾಗಿತ್ತು. ಪಾಶ್ಚಿಮಾತ್ಯ ಮತ್ತು ಐರೋಪ್ಯ ಒಕ್ಕೂಟದ ಕೆಲ ಮಾಧ್ಯಮ ಸಂಸ್ಥೆಗಳು ನಮ್ಮ ದೇಶದ ಬಗ್ಗೆ, ನಾಯಕರ ಬಗ್ಗೆ ಯಾವ ರೀತಿ ಪೂರ್ವ ನಿರ್ಧರಿತ ಅಭಿಪ್ರಾಯಗಳನ್ನು ಹೊಂದಿ ಬರೆಯುತ್ತಾರೆ ಎಂಬ ವಿಚಾರ ಮತ್ತೂಮ್ಮೆ ಜಾಹೀರಾಗಿದೆ.

2017ರಲ್ಲಿ ಮಣಿಶಂಕರ್‌ ಅಯ್ಯರ್‌ ಅವರ ನೀಚ ಎಂಬ ಹೇಳಿಕೆ ವಿವಾದಕ್ಕೊಳಾಗುತ್ತಿದ್ದಂತೆಯೇ, ತಮಗೆ ಹಿಂದಿ ಭಾಷೆಯ ಇರುವ ಹಿಡಿತ ಸೀಮಿತವಾದದ್ದು ಎಂದು ಯಾರೂ ಸ್ವೀಕರಿಸದ ಸಮಜಾಯಿಷಿ ಕೊಟ್ಟಿದ್ದರು. ಈ ಬಾರಿ ಸದ್ಯದ ಮಟ್ಟಿಗೆ ಒಂದೊಂದು ಪದಕ್ಕೂ ಬದ್ಧನಿದ್ದೇನೆಂದು ಹೇಳಿಕೊಂಡಿದ್ದಾರೆ. ಹಾಗಿದ್ದರೆ ಅಂದು ಅವರು ತಮಗೆ ಹಿಂದಿ ಭಾಷೆಯ ಮೇಲೆ ಅಷ್ಟಾಗಿ ಹಿಡಿತವಿಲ್ಲ ಎಂದು ಹೇಳಿದ್ದು ಸುಳ್ಳೆಂದು ಆಯಿತಲ್ಲವೇ? ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಹೀಗೆ ವರ್ತಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆಯೂ ಏಳುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಅಯ್ಯರ್‌ ವಿರುದ್ಧ ಕಟುವಾಗಿಯೇ ಆಕ್ರೋಶ ವ್ಯಕ್ತವಾಗಿದೆ. ಗುಜರಾತ್‌ ಚುನಾವಣೆ ವೇಳೆ ಅವರು ಹೇಳಿದ್ದ ಮಾತುಗಳಿಂದ ಕಾಂಗ್ರೆಸ್‌ಗೆ ಯಾವ ರೀತಿ ನಷ್ಟವಾಗಿದೆ ಎನ್ನುವುದು ಗೊತ್ತಿದೆ. ಹಿಂದಿನ ತಪ್ಪನ್ನೇ ಮತ್ತೆ ಪುನರಾವರ್ತನೆ ಮಾಡಿದ್ದಾರೆ ಎಂದು ಟ್ವೀಟಿಗರೊಬ್ಬರು ಬರೆದುಕೊಂಡಿದ್ದಾರೆ. ಇದೊಂದು ಉದಾಹರಣೆಯಷ್ಟೇ. ಯಾರಿಂದಲೇ ಆಗಲಿ ತಪ್ಪುಗಳು ಆಗುತ್ತವೆ. ಆದರೆ ಮತ್ತೆ ಮತ್ತೆ ಅದನ್ನೇ ಪುನರಾವರ್ತಿಸುವ ನಾಯಕರ ವರ್ತನೆ ಖಂಡನಾರ್ಹ. ಈ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರಷ್ಟೇ ಅಲ್ಲ, ಬಿಜೆಪಿ ಸೇರಿದಂತೆ ಬಹುತೇಕ ಎಲ್ಲಾ ಪಕ್ಷಗಳ ನಾಯಕರನ್ನೂ ಪ್ರಶ್ನಿಸಲೇಬೇಕಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಹೀಗೆ ಕೀಳುಮಟ್ಟದ ಭಾಷಾಪ್ರಯೋಗಕ್ಕೆ ಮುಂದಾದರೆ ಹೇಗೆ? ಜನರು ತಮ್ಮನ್ನು ನೋಡುತ್ತಿದ್ದಾರೆ, ತಮ್ಮ ಮಾತುಗಳು ಪ್ರಬುದ್ಧವಾಗಿರಬೇಕು ಎನ್ನುವ ಕನಿಷ್ಠ ಜ್ಞಾನ ಎಲ್ಲರಲ್ಲೂ ಇರಲೇಬೇಕು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ