ಧನ್ಯವಾದ ಯುವರಾಜ್‌

Team Udayavani, Jun 12, 2019, 5:50 AM IST

ಕೆಲವು ವ್ಯಕ್ತಿಗಳಿರುತ್ತಾರೆ. ಅವರು ದಂತಕಥೆಗಳ ಸಾಲಿನಲ್ಲಿ ನಿಲ್ಲಬಲ್ಲ ಎಲ್ಲ ಅರ್ಹತೆಗಳನ್ನು ಹೊಂದಿರುತ್ತಾರೆ. ಆದರೆ ಬದುಕಿನ ಏರಿಳಿತಗಳಿಗೆ ಸಿಲುಕಿ ಅಂತಹ ಅವಕಾಶವನ್ನು ಸಮೀಪದಲ್ಲಿ ಕಳೆದುಕೊಳ್ಳುತ್ತಾರೆ. ಅಂತಹ ಒಬ್ಬ ವ್ಯಕ್ತಿ ಯುವರಾಜ್‌ ಸಿಂಗ್‌. ಒಬ್ಬ ಕ್ರಿಕೆಟಿಗನಾಗಿ ಅವರು ಭಾರತೀಯ ಕ್ರಿಕೆಟ್‌ಗೆ ನೀಡಿದ ಕಾಣಿಕೆ ಯಾವುದೇ ದಂತಕಥೆಗಳಿಗೂ ಕಡಿಮೆಯಿಲ್ಲ. 2007ರ ಟಿ20 ವಿಶ್ವಕಪ್‌, 2011ರ ಏಕದಿನ ವಿಶ್ವಕಪ್‌ನಲ್ಲಿ ಅವರ ಪಾತ್ರ ಅತಿಮುಖ್ಯ. ಬಹುಶಃ ಅವರಿಲ್ಲದೇ ಹೋಗಿದ್ದರೆ ಈ ವಿಶ್ವಕಪ್‌ಗ್ಳನ್ನು ಅದರಲ್ಲೂ 2007ರ ಟಿ20 ವಿಶ್ವಕಪ್‌ ಅನ್ನು ಭಾರತ ಗೆಲ್ಲುವುದು ಸಾಧ್ಯವೇ ಇರಲಿಲ್ಲ. ಧೋನಿ ಭಾರತ ಕ್ರಿಕೆಟ್ ಕಂಡ ಅತಿಶ್ರೇಷ್ಠ ನಾಯಕ ಎಂದು ಕರೆಸಿಕೊಳ್ಳುವುದರಲ್ಲಿ ಯುವಿಯ ಪಾತ್ರ ಬಹುದೊಡ್ಡದು!

2007ರ ಟಿ20 ವಿಶ್ವಕಪ್‌ನಲ್ಲಿ ಅವರು ಇಂಗ್ಲೆಂಡ್‌ ವಿರುದ್ಧ 6 ಎಸೆತಗಳಿಗೆ 6 ಸಿಕ್ಸರ್‌ ಬಾರಿಸಿದ್ದರು. ಅದು ಟಿ20 ವಿಶ್ವದಾಖಲೆಯೆನಿಸಿದೆ. ಮುಂದೆ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ಗೆಲ್ಲಲೂ ಅವರ ಸ್ಫೋಟಕ ಬ್ಯಾಟಿಂಗ್‌ ಕಾರಣ. ಅಂತಹ ಯುವರಾಜ್‌ ಸಿಂಗ್‌ಗೆ ಯೋಗ್ಯ ವಿದಾಯ ಸಿಗಲಿಲ್ಲ ಎನ್ನುವುದು ಬಹಳ ನೋವಿನ ಸಂಗತಿ. ಗಮನಿಸಬೇಕಾದ ಸಂಗತಿಯೆಂದರೆ ಇದರಲ್ಲಿ ಯುವರಾಜ್‌ ಸಿಂಗ್‌ ದುರದೃಷ್ಟದ ಪಾತ್ರವೂ ಅಷ್ಟೇ ಇದೆ. ಅವರಿಗೆ ಮತ್ತೆ ಮತ್ತೆ ಅವಕಾಶಗಳನ್ನು ನೀಡಿದರೂ, ದೀರ್ಘ‌ಕಾಲೀನವಾಗಿ ತಮ್ಮ ಆಟದ ಲಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಕಡೆಕಡೆಗಂತೂ ದೇಶೀಯ ಕ್ರಿಕೆಟ್‌ನಲ್ಲೂ ಅವಕಾಶ ಕಳೆದುಕೊಳ್ಳುವ ಮಟ್ಟಕ್ಕೆ ತಲುಪಿದರು. ಈ ಬಾರಿ ಐಪಿಎಲ್ಗೆ ಅವರು ಆಯ್ಕೆಯಾಗುವುದೇ ಅನುಮಾನವಿತ್ತು. ಅದರ ನಡುವೆ ಕಡೆಗಳಿಗೆಯಲ್ಲಿ ಮುಂಬೈ ತಂಡಕ್ಕೆ ಆಯ್ಕೆಯಾಗಿ, ಆರಂಭದ ಕೆಲಪಂದ್ಯಗಳಲ್ಲಿ ಕಾಣಿಸಿಕೊಂಡರು. ಮುಂದೆ ಮತ್ತೆ ಲಯ ಕಳೆದುಕೊಂಡಿದ್ದರಿಂದ ತಂಡದಿಂದ ಹೊರಬಿದ್ದರು. ಅವರು ಮೈದಾನದಲ್ಲಿ ಮೆರೆಯುತ್ತಿದ್ದ ದಿನಗಳಲ್ಲಿ, ಇಡೀ ತಂಡದ ಮನಃಸ್ಥಿತಿಯೇ ಬದಲಾಗಿತ್ತು. ಗೆಲ್ಲಲು ಸಾಧ್ಯವೇ ಇಲ್ಲ ಎಂಬ ಪಂದ್ಯಗಳನ್ನೆಲ್ಲ ಭಾರತ ಗೆದ್ದಿದೆ. ಅಂತಹ ಪವಾಡಗಳನ್ನೆಲ್ಲ ಅವರು ಮಾಡಿ ತೋರಿಸಿದ್ದಾರೆ. ಯುವಿ ಹೀಗೊಂದು ಬುನಾದಿ ಹಾಕಿಕೊಟ್ಟ ನಂತರ ಭಾರತೀಯ ತಂಡದೊಳಗಿನ ಆತ್ಮವಿಶ್ವಾಸವೇ ಹೆಚ್ಚಾಯಿತು. ಹಲವು ಆಟಗಾರರು ಇದೇ ದಾರಿಯಲ್ಲಿ ನಡೆದು, ತಂಡದ ಮನೋಭಾವ ಬದಲಿಸಿದರು. ನಾಯಕನಿಗೂ ವಿಶ್ವಾಸ ಮೂಡಿಸಿದರು. ಒಂದು ರೀತಿ ಯಲ್ಲಿ ಯುವಿ ಒಬ್ಬ ಮಾದರಿ ಕ್ರಿಕೆಟಿಗ.

ಯುವಿಯನ್ನು ನೆನಪಿಸಿಕೊಂಡಾಗಲೆಲ್ಲ ಅವರು ಕ್ಯಾನ್ಸರ್‌ ಗೆದ್ದ ಕ್ರಿಕೆಟಿಗ ಎನ್ನುವುದನ್ನು ಜನ ಪದೇ ಪದೇ ನೆನಪಿಸಿಕೊಳ್ಳುತ್ತಾರೆ. 2011ರ ಫೆಬ್ರವರಿ- ಏಪ್ರಿಲ್ನಲ್ಲಿ ಏಕದಿನ ವಿಶ್ವಕಪ್‌ ನಡೆದ ನಂತರ ಅವರು ತೀವ್ರ ಅಸ್ವಸ್ಥರಾಗುತ್ತ ಸಾಗಿದರು. ದಿನೇ ದಿನೇ ಅವರು ಸುಸ್ತಾದರು. ಕಡೆಗೆ ಅವರಿಗೆ ಕ್ಯಾನ್ಸರ್‌ ಇದೆ ಎನ್ನುವುದು ಖಚಿತವಾಯಿತು. ಮುಂದೆ ಅವರು ಚಿಕಿತ್ಸೆ ತೆಗೆದುಕೊಂಡು ಮತ್ತೆ ಮೈದಾನಕ್ಕೆ ಮರಳಿದರು. ಕ್ಯಾನ್ಸರ್‌ ಅನ್ನು ಗೆದ್ದು ಮತ್ತೆ ಆಟಕ್ಕೆ ಮರಳಿದರೂ, ಅವರು ಕುಗ್ಗುತ್ತಾ ಹೋದರು. ಅವರಲ್ಲಿ ಎಂದಿನ ಚೈತನ್ಯ ಇರಲಿಲ್ಲ. ಕ್ಷೇತ್ರರಕ್ಷಣೆ ಮಾಡುವಾಗ ಜಿಂಕೆಯಂತೆ ಜಿಗಿಯುತ್ತಿದ್ದ ಅವರು ಮುಂದೆ ಅಂಥ ಜಾದೂ ಮಾಡಲಿಲ್ಲ. ಒಂದು ರೀತಿಯಲ್ಲಿ ಕ್ಯಾನ್ಸರನ್ನು ಅವರು ಸೋಲಿಸಿದರೂ, ಮತ್ತೂಂದು ರೀತಿಯಲ್ಲಿ ಕ್ಯಾನ್ಸರ್‌ ಅವರನ್ನು ಸೋಲಿಸಿತು. ಆದರೆ ಅವರು ದಂತಕಥೆ ಎನ್ನುವುದನ್ನು ಮಾತ್ರ ಒಪ್ಪಲೇಬೇಕು. ಭಾರತೀಯ ಕ್ರಿಕೆಟ್ ಚರಿತ್ರೆಯಲ್ಲಿ ಯುವರಾಜ್‌ ಸಿಂಗ್‌ ಅವರ ಹೆಸರು ಎತ್ತರದ ಸ್ಥಾನದಲ್ಲೇ ಉಳಿಯಲಿದೆ, ಅಂತೆಯೇ ದೇಶದ ಕೋಟ್ಯಂತರ ಕ್ರೀಡಾ ಭಿಮಾನಿಗಳ ಮನಸ್ಸಲ್ಲೂ ಕೂಡ ಯುವಿ ಶಾಶ್ವತವಾಗಿ ವಿರಾಜಮಾನರಾಗಿರಲಿದ್ದಾರೆ. ಧನ್ಯವಾದ ಯುವಿ!

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ದೇಶೀಯ ಕಾರ್ಪೊರೇಟ್‌ ಕಂಪನಿಗಳ ಮತ್ತು ಹೊಸ ಉತ್ಪಾದಕ ಕಂಪೆನಿಗಳ ಕಾರ್ಪೊರೇಟ್‌ ತೆರಿಗೆ ಕಡಿತ ಘೋಷಿಸುವ ಮೂಲಕ ಹಣಕಾಸು ಸಚಿವೆ...

  • ಸೈದ್ಧಾಂತಿಕ‌ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪರಸ್ಪರರ ಮೇಲೆ ಗೌರವ ಮತ್ತು ಆತ್ಮೀಯ ಭಾವನೆ ಇರುವುದು ಆರೋಗ್ಯಕರ ರಾಜಕೀಯದ ಲಕ್ಷಣ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ...

  • ಇನ್ನೂ ಬೆಳೆಯುತ್ತಿರುವ ಪ್ರಜಾತಂತ್ರ ವ್ಯವಸ್ಥೆಗೆ ದ್ವಿಪಕ್ಷೀಯ ಪದ್ಧತಿ ಸ್ವೀಕರಾರ್ಹ ಅಲ್ಲ. ಆದರೆ ಬಹುಪಕ್ಷೀಯ ಪದ್ಧತಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು...

  • ಜಮ್ಮು-ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನಿ ಸೇನೆಯ ನಡುವೆ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟು ಚಿಂತೆಯ ವಿಷಯವಾಗಿದೆ. ಅದರಲ್ಲೂ ಕಲಂ 370 ದಯಪಾಲಿಸಿದ್ದ ವಿಶೇಷಾಧಿಕಾರವನ್ನು...

  • ಹೂಸ್ಟನ್‌ ಕಾರ್ಯಕ್ರಮ ಪಾಕ್‌ ಹಾಗೂ ಚೀನಾಕ್ಕೊಂದು ಬಲವಾದ ಸಂದೇಶ ನೀಡುವುದು ಖಚಿತ. ಏನೇ ಮಾಡಿ ದರೂ ಜಾಗತಿಕ ವೇದಿಕೆಯಲ್ಲಿ ಭಾರತದ ಪಾರಮ್ಯವನ್ನು ತಡೆಯಲು ಸಾಧ್ಯವಿಲ್ಲ...

ಹೊಸ ಸೇರ್ಪಡೆ