ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?


Team Udayavani, Feb 8, 2020, 5:20 AM IST

jai-43

ಜೆಪಿಯ ಹಿರಿಯ ನಾಯಕ ಯಡಿಯೂರಪ್ಪ, ಡಿ.ಎಚ್‌. ಶಂಕರಮೂರ್ತಿ, ದಿವಂಗತ ಡಾ| ವಿ.ಎಸ್‌. ಆಚಾರ್ಯ, ಕೆ.ಎಸ್‌. ಈಶ್ವರಪ್ಪ ಅಥವಾ ರಾಮಚಂದ್ರ ಗೌಡರಂಥವರು 2006ರಲ್ಲಿ ಮೊದಲ ಬಾರಿಗೆ ಮಂತ್ರಿ ಪದವಿ ಪಡೆದುಕೊಳ್ಳಬೇಕಾದರೆ, ಅದಕ್ಕೆ ಮುಂಚೆ ಎಷ್ಟೋ ವರ್ಷಗಳ ಕಾಲ ಪಕ್ಷಕ್ಕಾಗಿ “ರಾಗಿ ಬೀಸಿದ್ದರು’ ಎಂಬ ಸತ್ಯವನ್ನು ನೆನಪಿಸಿಕೊಡಬೇಕಾಗಿದೆ.

ಕರ್ನಾಟಕದ ಮಂತ್ರಿಮಂಡಲಕ್ಕೆ ನೂತನ ಸಚಿವರ ಇನ್ನೊಂದು ತಂಡ ಬಂದು ಸೇರಿಕೊಂಡಿದೆ. ಕಾಂಗ್ರೆಸ್‌ನ ವಿರುದ್ಧ ಬಂಡೆದ್ದು ಮುಂದೆ, “ಪ್ರಸ್ತುತ ವಿಧಾನಸಭೆಯ ಅವಧಿ ಮುಗಿಯುವ ತನಕ ಇವರೆಲ್ಲ ಅನರ್ಹರು’ ಎಂಬುದಾಗಿ ಘೋಷಿಸಲ್ಪಟ್ಟು ಸದನದಿಂದ ಹೊರಹಾಕಲ್ಪಟ್ಟಿದ್ದ ಶಾಸಕರು ಇದೀಗ ಇನ್ನೊಂದು ಪಕ್ಷದ ಅಭ್ಯರ್ಥಿಗಳಾಗಿ ಉಪಚುನಾವಣೆ ಎದುರಿಸಿ ಸಚಿವರಾಗಿ ನಮ್ಮೆದುರು ಬಂದಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಮ್ಮ ಮುಖ್ಯಮಂತ್ರಿತ್ವದ ಈ ನಾಲ್ಕನೆಯ ಅವಧಿಯಲ್ಲಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಾಂತರಿಗಳನ್ನು ಸಚಿವರನ್ನಾಗಿಸುವ ವಿಚಾರದಲ್ಲಿ ಸಾಕಷ್ಟು ಸಮಯವನ್ನು ವ್ಯರ್ಥ ಮಾಡಿದರೆಂದೇ ಹೇಳಬೇಕಾಗುತ್ತದೆ. ಇವರುಗಳನ್ನು ಉಪಚುನಾವಣೆಗೆ ನಿಲ್ಲದಂತೆ ಸುಪ್ರೀಂಕೋರ್ಟ್‌ ನಿಷೇಧಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದೇ ಹೆಚ್ಚಿನವರು ಆಶಿಸಿದ್ದರು. ಪಕ್ಷಾಂತರ ಮಾಡಿದ್ದಕ್ಕಾಗಿ ಈ ಶಾಸಕರು ಯಾವುದೇ ಶಿಕ್ಷೆಗೆ ಒಳಗಾಗಿಲ್ಲ. ಈ ದೃಷ್ಟಿಯಿಂದ ನೋಡಿದರೆ, ಇವರುಗಳನ್ನು ವಿಧಾನಸಭೆಯ ಅವಧಿಯ ಅಂತ್ಯದವರೆಗೆ ಅನರ್ಹಗೊಳಿಸಿದ್ದ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಕ್ರಮವೇ ನ್ಯಾಯಯುತವಾಗಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯ ಬೇರೆಯೇ ರೀತಿಯಲ್ಲಿ ಯೋಚಿಸಿತು. ಅದು ಅನರ್ಹತೆ ಕುರಿತ ಸ್ಪೀಕರ್‌ ಅವರ ಕ್ರಮವನ್ನು ಎತ್ತಿ ಹಿಡಿಯಿತು. ಆದರೆ ಈ ಶಾಸಕರು ಎಷ್ಟು ಸಮಯದವರೆಗೆ ಅನರ್ಹರಾಗಿರುತ್ತಾರೆಂಬುದನ್ನು ಸ್ಪೀಕರ್‌ ನಿರ್ಧರಿಸುವಂತಿಲ್ಲ ಎಂದು ಹೇಳಿತು.

ಅನರ್ಹಗೊಂಡಿದ್ದ ಶಾಸಕರಲ್ಲಿ ಹೆಚ್ಚಿನವರನ್ನು ಬಲವಂತವಾಗಿ ಸಚಿವರನ್ನಾಗಿ ನೇಮಕ ಮಾಡಬೇಕಾದ ಅನಿವಾರ್ಯ ಸ್ಥಿತಿ ಬಿಜೆಪಿಗೆ ಒದಗಿ ಬಂದಿದೆಯಾದರೆ ಇಂಥ ಅವಸ್ಥೆಗೆ ಅದು ತನ್ನನ್ನೇ ಹಳಿದುಕೊಳ್ಳಬೇಕಾಗಿದೆ. ಒಂದು ರೀತಿಯಲ್ಲಿ ರಾಜ್ಯದ ರಾಜಕೀಯ ವೆನ್ನುವುದು ಇನ್ನಷ್ಟು ಕೆಳಗೆ ಕುಸಿದಿದೆ; ನಮ್ಮ ಜನಪ್ರತಿನಿಧಿಗಳಲ್ಲಿ ಹೆಚ್ಚಿನವರು ಕೇವಲ ಅಧಿಕಾರದ ಹಿಂದೆ ಬಿದ್ದವರು; ಮಂತ್ರಿಗಿರಿ ತರುವ ಸಕಲ ಸೌಲಭ್ಯಗಳಿಗಾಗಿ ಹಾತೊರೆಯುವವರು. ಈ ಶಾಸಕರುಗಳಲ್ಲೊಬ್ಬರಾದ ರಮೇಶ್‌ ಜಾರಕಿಹೊಳಿ ಅವರ ಮಾತೊಂದು ನನ್ನ ಕಿವಿಗೆ ಬಿದ್ದಿದೆ. “ನಾನು ಮುಖ್ಯಮಂತ್ರಿ ಆಗಬೇಕು’ ಎಂದವರು ಹೇಳಿಕೊಂಡರು. ಹಾಗೆ ಮುಖ್ಯಮಂತ್ರಿಯಾಗುವ (ರಾಜಕೀಯ) ವ್ಯಕ್ತಿತ್ವವನ್ನು ಅವರು ಹೊಂದಿಲ್ಲವೆಂದೂ, ಬೆಳಗಾವಿ ಜಿಲ್ಲೆಯ ಹೊರಗಿನ ಜನರಿಗೆ ಅವರು ಹೆಚ್ಚು ಪರಿಚಿತರಲ್ಲವೆಂದೂ ಅವರಿಗೆ ಸೌಜನ್ಯದಿಂದಲೇ ತಿಳಿಹೇಳಲಾಯಿತು. ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ, ಡಿ.ಎಚ್‌. ಶಂಕರಮೂರ್ತಿ, ದಿವಂಗತ ಡಾ| ವಿ.ಎಸ್‌. ಆಚಾರ್ಯ, ಕೆ.ಎಸ್‌. ಈಶ್ವರಪ್ಪ ಅಥವಾ ರಾಮಚಂದ್ರ ಗೌಡರಂಥವರು 2006ರಲ್ಲಿ ಮೊದಲ ಬಾರಿಗೆ ಮಂತ್ರಿ ಪದವಿ ಪಡೆದುಕೊಳ್ಳಬೇಕಾದರೆ, ಅದಕ್ಕೆ ಮುಂಚೆ ಎಷ್ಟೋ ವರ್ಷಗಳ ಕಾಲ ಪಕ್ಷಕ್ಕಾಗಿ “ರಾಗಿ ಬೀಸಿದ್ದರು’ ಎಂಬ ಸತ್ಯವನ್ನು ಯಾರಾದರೂ ರಮೇಶ್‌ ಜಾರಕಿ ಹೊಳಿಯವರಿಗೆ ನೆನಪಿಸಿಕೊಡಬೇಕಾಗಿದೆ.

ಹಾಗೇ ನೋಡಿದರೆ ರಾಜ್ಯದ ಕಾಂಗ್ರೆಸ್‌, ಬಿಜೆಪಿ ಅಥವಾ ಜನತಾದಳದ ಅನೇಕ ಪ್ರಾಮಾಣಿಕ ರಾಜಕಾರಣಿಗಳಿಗೆ ಸಚಿವರಾಗುವ ಅವಕಾಶ ಬಿಡಿ, ಶಾಸಕರಾಗುವ ಅವಕಾಶವೂ ಸಿಗಲಿಲ್ಲ. ಹಳೇ ಕಾಂಗ್ರೆಸಿಗರ ಪೈಕಿ ಹಲವಾರು ಪ್ರಾಮಾಣಿಕ ಸ್ವಾತಂತ್ರ್ಯ ಹೋರಾಟಗಾರರಿಗೆ ಆದ ಅನ್ಯಾಯದ ಬಗ್ಗೆ ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಾಗಿಯೇ ಇಲ್ಲ. ಕಾಂಗ್ರೆಸ್‌ ಪಕ್ಷ ಕೂಡ ಆ ದಿನಗಳಲ್ಲಿ ಜಾತಿ ಹಾಗೂ ಸಮುದಾಯಗಳಿಗೆ ಮಣೆ ಹಾಕುವ ನೆಪದಲ್ಲಿ ಅಂದಿನ ಪಕ್ಷಾಂತರಿಗಳನ್ನು ಹೆಗಲಿಗೇರಿಸಿಕೊಂಡು ಮೆರೆಸಿತ್ತು. ಈಗ ಉಪ ಚುನಾವಣೆಯ ಮೂಲಕ ಅರ್ಹತೆ ಗಳಿಸಿಕೊಂಡ ಮಾಜಿ ಅನರ್ಹ ಶಾಸಕರು ನೂತನ ಸಚಿವರಾಗಿ ಬಂದಿದ್ದು, ಇವರುಗಳು ನಿಶ್ಚಿತವಾಗಿಯೂ ಬಿಜೆಪಿಯ ಪಾಲಿಗೆ ಹೊರೆಯಾಗಲಿದ್ದಾರೆ.

ಹಿಂದಿನ ಕಾಲದಲ್ಲಿದ್ದ ಸಚಿವರ ನೇಮಕಾತಿಯ ಮಾನದಂಡದ ಬಗ್ಗೆ ಹೇಳುವುದಾದರೆ, ಅಂದಿನ ಮಾಜಿ ಅನರ್ಹ ಶಾಸಕರು ಕೇವಲ ಉಪಸಚಿವರೋ, ಹೆಚ್ಚೆಂದರೆ ಸಹಾಯಕ ಸಚಿವರೋ ಆಗಬಹು ದಿತ್ತಷ್ಟೇ. ಶ್ರೀಗಂಧದ ಮರದ ಬಾಗಿಲಿರುವ ವಿಧಾನ ಸೌಧದ ಕ್ಯಾಬಿನೆಟ್‌ ಕೊಠಡಿಗೆ ಪ್ರವೇಶಿಸುವ ಅರ್ಹತೆ ಅವರಿಗಿರಲಿಲ್ಲ. ಇಂದು ಶ್ರೀಗಂಧದ ಬಾಗಿಲ ಪರಿಮಳ ಆರಿಹೋಗಿದೆ; ಅದೇ ರೀತಿ ಸರ್ವೇಸಾಮಾನ್ಯವಾಗಿ ನಮ್ಮ ಸಚಿವರುಗಳ ಸಾಮರ್ಥ್ಯ ವರ್ಚಸ್ಸಿಗೂ ಅದೇ ಗತಿ ಬಂದಿದೆ. ಈ ಶ್ರೀಗಂಧ ದ್ವಾರದ ಸುವಾಸನೆ ಯನ್ನು ಆಘ್ರಾಣಿಸಲೆಂದೇ ಗ್ರೀಕ್‌ ಪ್ರವಾಸಿಯೊಬ್ಬರು ವಿಧಾನಸೌಧಕ್ಕೆ ಭೇಟಿ ನೀಡಿದ್ದನ್ನು ನಾನು ನೋಡಿದ್ದೇನೆ. ಅದೃಷ್ಟವಶಾತ್‌ ಇಂದು ಸೇರ್ಪಡೆಗೊಂಡಿರುವ ನೂತನ ಸಚಿವರುಗಳು ತಮ್ಮನ್ನು ಉಪಮುಖ್ಯಮಂತ್ರಿಯನ್ನಾಗಿಸಬೇಕೆಂದು ಹಕ್ಕು ಸಾಧಿಸಿಲ್ಲ!

ದುರದೃಷ್ಟದ ಮಾತೆಂದರೆ ಅನರ್ಹ ಶಾಸಕರಲ್ಲೊಬ್ಬರಾದ ಎ.ಎಚ್‌.ವಿಶ್ವನಾಥ್‌ ಉಪಚುನಾವಣೆಯಲ್ಲಿ ಗೆಲವು ಸಾಧಿಸದಿರುವುದು. ಸಂಪುಟ ಸೇರಲು ಬೇಕಾದ ಅರ್ಹತೆಯುಳ್ಳವರು ಅವರು. ಆದರೆ ಸೋಲು ಅನುಭವಿಸಿರುವ ಎಂ.ಟಿ.ಬಿ. ನಾಗರಾಜ್‌ ಅವರ ಮಂತ್ರಿಗಿರಿಯ ಹಕ್ಕು ಸಾಧನೆಯ ಬಗ್ಗೆ ಇದೇ ಮಾತನ್ನು ಹೇಳುವ ಹಾಗಿಲ್ಲ. ಒಂದು ವೇಳೆ ತಾನು ಮಂತ್ರಿಯಾಗಬೇಕಿದ್ದರೆ ತನ್ನಲ್ಲಿರುವ ರೋಲ್ಸ್‌ ರಾಯ್ಸ ಕಾರನ್ನು ತನ್ನ ಗ್ಯಾರೇಜಿನಲ್ಲೇ ಬಿಟ್ಟು ಬಡಪಾಯಿ ಮಾದರಿಯ ಅಧಿಕೃತ ಕಾರಿಗೆ ತನ್ನನ್ನು ಸೀಮಿತಗೊಳಿಸಿಕೊಳ್ಳಬೇಕೆಂಬ ವಾಸ್ತವವನ್ನು ಅವರು ಅರ್ಥಮಾಡಿಕೊಳ್ಳಬೇಕಾಗಿದೆ. ಒಂದು ವೇಳೆ ಅವರಿಗೆ ಮಂತ್ರಿಪದವಿ ದೊರೆತಿದ್ದಲ್ಲಿ ಅವರು ಮಹಾರಾಜ ಜಯಚಾಮರಾಜ ಒಡೆಯರು ಮೈಸೂರಿನ ಗವರ್ನರು ಆಗಿದ್ದ ಕಾಲದಲ್ಲಿ ತಮ್ಮ ರೋಲ್ಸ್‌ರಾಯ್ಸಗಳು ಡೆಮೈಲರ್‌ಗಳು ಅಥವಾ ಬೆಂಟಿÉಗಳನ್ನು ಬಳಸುತ್ತಿದ್ದ ರೀತಿಯಲ್ಲೇ ಖಾಸಗಿ ಕಾರನ್ನು ಬಳಸುವುದಕ್ಕೆ ಅವಕಾಶ ನೀಡಲಾಗುತ್ತಿತ್ತೋ ಏನೋ! ಇದೇ ರೀತಿ ತಮ್ಮ ಸಂಪತ್ತನ್ನು ದೊಡ್ಡ ರೀತಿಯಲ್ಲಿ ಪ್ರದರ್ಶಿಸುತ್ತಿದ್ದ ಇನ್ನೊಬ್ಬ ಮಾಜಿ ಸಚಿವರು ಬಿಜೆಪಿಯಲ್ಲಿದ್ದಾರೆ. ಅವರೇ, ಸ್ವರ್ಣ ಸಿಂಹಾಸನ, ಚಿನ್ನದ ಬೆಲ್ಟ್, ಹೊಂದಿದ್ದರೆನ್ನಲಾದ, ಹಕ್ಕಿಗಳಿಗಿಂತಲೂ ಹೆಚ್ಚು ಬಾರಿ ಖಾಸಗಿ ಹೆಲಿಕಾಪ್ಟರ್‌ನಲ್ಲಿ ಆಕಾಶದಲ್ಲಿ ಹಾರುತ್ತ ಸುದ್ದಿ ಮಾಡಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ.

ಹೊಸಬರಿಗೆ ಪ್ರಾತಿನಿಧ್ಯ ನೀಡಿರುವುದಕ್ಕಾಗಿ “ಮೂಲ ಬಿಜೆಪಿ’ ಶಾಸಕರಿಗೆ ಬೇಸರವಾಗಿರುವುದು ತೀರಾ ಸಹಜವೇ ಆಗಿದೆ. ದಿಲ್ಲಿ ಕೇಂದ್ರಿತ ಬಿಜೆಪಿ ನಾಯಕರಾಗಲಿ, ಮುಖ್ಯಮಂತ್ರಿಯಾಗಲಿ ಈ ಮೂಲ ಶಾಸಕರನ್ನು ಗಣನೆಗೇ ತೆಗೆದುಕೊಳ್ಳುತ್ತಿಲ್ಲ.

ಪ್ರವೀಣ್‌ ಸೂದ್‌ ಸೇವಾವಧಿ ಉಳಿದವರಿಗಿಂತ ದೀರ್ಘ‌ವೇ?
ಇನ್ನು, ರಾಜ್ಯದ ನೂತನ ಪೊಲೀಸ್‌ ಮಹಾನಿರ್ದೇಶಕರಾಗಿ ನೇಮಕಗೊಂಡಿರುವ ಪ್ರವೀಣ್‌ ಸೂದ್‌ ಅವರು 2024ರ ಮೇವರೆಗೆ ಅಂದರೆ 51 ತಿಂಗಳ ಕಾಲ ಈ ಹುದ್ದೆಯಲ್ಲಿರುತ್ತಾರೆಂದೂ, ಈ ಮೂಲಕ ಅವರ ಸೇವಾವಧಿ ಅತ್ಯಂತ ದೀರ್ಘ‌ವಾದುದೆಂದೂ ಅನೇಕ ವಾರ್ತಾಪತ್ರಿಕೆಗಳು, ಅಷ್ಟೇಕೆ ಟೆಲಿವಿಜನ್‌ ವಾಹಿನಿಗಳು ಕೂಡ ಹೇಳಿವೆ. ಆದರೆ ಇದು ತಪ್ಪು ಮಾಹಿತಿ. ಈ ಹಿಂದೆ, ಎಸ್‌.ಎನ್‌. ಹೊಸಾಳಿ (ಈಗ ದಿವಂಗತರು) ಅವರು 1958ರ ಡಿಸೆಂಬರ್‌ನಿಂದ 12 ವರ್ಷ ಏಳು ತಿಂಗಳ ಕಾಲ ಪೊಲೀಸ್‌ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯದ ಇನ್ನೋರ್ವ ಪೊಲೀಸ್‌ ಮುಖ್ಯಸ್ಥ 1972ರ ಜೂನ್‌ನಿಂದ 52 ತಿಂಗಳ ಕಾಲ ಈ ಹುದ್ದೆಯಲ್ಲಿದ್ದರು.

ಅಂದಿನ ದಿನಗಳ ಪೊಲೀಸ್‌ ಮುಖ್ಯಸ್ಥರು ಇದ್ದುದು ಇನ್‌ಸ್ಪೆಕ್ಟರ್‌ ಜನರಲ್‌ ಹುದ್ದೆಯಲ್ಲಿ ಎಂದೇನೋ ಕೆಲವರು ವಾದಿಸಬಹುದು. 1980ರ ದಶಕದ ಆದಿಯಲ್ಲಿ ಈ ಹುದ್ದೆಯನ್ನು ಉನ್ನತೀಕರಿಸಿ ಡಿಜಿ – ಡಿಐಜಿ ಎಂಬ ಹೆಸರನ್ನು ನೀಡಲಾಯಿತು. ಸ್ವಾತಂತ್ರ್ಯಪೂರ್ವದ ಬ್ರಿಟಿಷ್‌ ಪೊಲೀಸ್‌ ಇಲಾಖೆಯಲ್ಲಿದ್ದ ಎಸ್‌.ಎನ್‌. ಹೊಸಾಳಿ, ಅದಕ್ಕೆ ಮುನ್ನ ಬಾಂಬೆ ಪ್ರಾಂತ್ಯದ ಪೊಲೀಸ್‌ ಪಡೆಯಲ್ಲಿದ್ದರು. ರಾಜ್ಯದ ಪೊಲೀಸ್‌ ವ್ಯವಸ್ಥೆಯ ಆಧುನೀಕರಣ ಪ್ರಕ್ರಿಯೆಗೆ ಕಾರಣರಾದವರು ಸಿ.ವಿ.ಎಸ್‌. ರಾವ್‌. ಅವರೇ ಪೊಲೀಸ್‌ ಕಾನ್‌ಸ್ಟೆàಬಲ್‌ಗ‌ಳ ಸಮವಸ್ತ್ರದ ವಿನ್ಯಾಸವನ್ನು ಬದಲಿಸಿ ಇದಕ್ಕೆ ಮುಂಚಿನ ದಿನಗಳಲ್ಲಿ ಕಾನ್‌ಸ್ಟೆàಬಲ್‌ಗ‌ಳು ನಿಕ್ಕರ್‌ ಟ್ಯುನಿಕ್‌ (ಮಂಡಿ ತನಕ ಬರುವ ಮೋಟು ತೋಳಿನ ಜುಬ್ಬ/ಕಪನಿ) ಹಾಗೂ ಪೇಟದಂತೆ ಕಾಣುವ ಟೋಪಿಯನ್ನು ಧರಿಸುತ್ತಿದ್ದರು. ಬೆಂಗಳೂರಿನ ಪೊಲೀಸ್‌ ಆಯುಕ್ತರಾಗಿದ್ದ ಎ.ಆರ್‌. ನಿಜಾಮುದ್ದೀನ್‌ ಅವರು ನಗರದ ಕಾನ್‌ಸ್ಟೆàಬಲ್‌ಗ‌ಳ ಸಮವಸ್ತ್ರವನ್ನು ಬ್ರಿಟಿಷ್‌ ಸೈನಿಕರ ಸಮವಸ್ತ್ರದಂತೆ ಮಾರ್ಪಡಿಸಿ ಚಾಲ್ತಿಯಲ್ಲಿ ತಂದರು. ಆದರೆ ಇದು ಹೆಚ್ಚು ಕಾಲ ಉಳಿಯಲಿಲ್ಲ. ನಿಜಾಮುದ್ದೀನ್‌ ಅವರು ಸಮವಸ್ತ್ರದಲ್ಲಿದ್ದ ಓರ್ವ ಧೀಮಂತ; ಅವರು ಮುಂದೆ ರಾಜ್ಯದ ಪೊಲೀಸ್‌ ಮಹಾನಿರ್ದೇಶಕ ಹಾಗೂ ಪೊಲೀಸ್‌ ಮಹಾ ನಿರೀಕ್ಷಕ (ಡಿಜಿ – ಐಜಿಪಿ)ರಾದರು. ರಾಜ್ಯ ಪ್ರಭುತ್ವ ಚಾಲ್ತಿಯಲ್ಲಿದ್ದ ದಿನಗಳಲ್ಲಿ ಎಫ್.ಡಬ್ಲ್ಯು. ಹ್ಯಾಮಿಲ್ಟನ್‌ ಎಂಬ ಬ್ರಿಟಿಷ್‌ ಅಧಿಕಾರಿ ಮೈಸೂರು ರಾಜ್ಯದ ಪೊಲೀಸ್‌ ಮಹಾ ನಿರೀಕ್ಷಕ (ಐಜಿ)ರಾಗಿ 1931ರಿಂದ ಎಂಟು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಅಂದಿನ ದಿನಗಳಲ್ಲಿ ಹ್ಯಾಮಿಲ್ಟನ್‌ ಅವರನ್ನು ಕಾಂಗ್ರೆಸಿಗರು ದ್ವೇಷಿಸುತ್ತಿದ್ದುದು ಹೌದಾದರೂ, ರಾಜ್ಯದ ಪೊಲೀಸ್‌ ಪಡೆಯನ್ನು ಕಂದಾಯ ಇಲಾಖೆಯಿಂದ ಮುಕ್ತಗೊಳಿಸಿದವರು ಹ್ಯಾಮಿಲ್ಟನ್‌ ಅವರೇ. ಆ ದಿನಗಳಲ್ಲಿ ಮೈಸೂರು ನಾಗರಿಕರು ಸೇವಾ ವ್ಯಾಪ್ತಿಗೆ ಸೇರಿದ್ದ ಕಂದಾಯಾಧಿಕಾರಿಗಳು ಪೊಲೀಸ್‌ ಸೇವೆಯ ತರಬೇತಿ ಇಲ್ಲದೆಯೇ ಪೊಲೀಸ್‌ ಸೂಪರಿಂಟೆಂಡೆಂಟ್‌ ಆಗಬಹುದಿತ್ತು; ಅಷ್ಟೇಕೆ, ಪೊಲೀಸ್‌ ನಿರೀಕ್ಷಣಾಧಿಕಾರಿ (ಐಜಿಪಿ) ಕೂಡ ಆಗಬಹುದಿತ್ತು.

ಪ್ರವೀಣ್‌ ಸೂದ್‌ ಅವರನ್ನು ನೂತನ ಡಿಜಿ ಐಜಿಪಿ ಆಗಿ ನೇಮಿಸಿರುವ ಸರಕಾರ, ಈ ಪ್ರಕ್ರಿಯೆಯಲ್ಲಿ ಆಗಿರುವ ಅಚಾತುರ್ಯವೊಂದನ್ನು ದೂರ ಮಾಡಿಕೊಳ್ಳಬಹುದಿತ್ತು. ಇಲ್ಲಿ ಅಸಿತ್‌ ಮೋಹನ್‌ ಪ್ರಸಾದ್‌ ಅವರ ಸೇವಾ ಹಿರಿತನವನ್ನು ಕಡೆಗಣಿಸಿದಂತಾಗಿದೆ. ಅಸಿತ್‌ ಮೋಹನ್‌ ಪ್ರಸಾದ್‌ ಅವರು ಸೂದ್‌ ಅವರಿಗಿಂತ ಒಂದು ವರ್ಷದಷ್ಟು ಸೀನಿಯರ್‌. ಪ್ರಕಾಶ್‌ ಸಿಂಗ್‌ ಹಾಗೂ ಭಾರತ ಸರಕಾರದ ವಿರುದ್ಧದ ಪ್ರಕರಣ (2006)ದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ತನ್ನ ಅನುಕೂಲಕ್ಕೆ ತಕ್ಕಂತೆ ನಿರ್ಲಕ್ಷಿಸಿರುವ ಸರಕಾರ, ಅಸಿತ್‌ ಮೋಹನ್‌ ಪ್ರಸಾದ್‌ ಅವರಿಗೆ ಒಂಬತ್ತು ತಿಂಗಳ ಕಾಲ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬಹುದಿತ್ತು. ಮೇಲೆ ಉಲ್ಲೇಖೀಸಿದ ಪ್ರಕಾಶ್‌ ಸಿಂಗ್‌ ಪ್ರಕರಣದಲ್ಲಿ ಪೊಲೀಸ್‌ ಇಲಾಖೆಯಲ್ಲಿನ ಸುಧಾರಣೆಗಳಿಗೆ ಸಂಬಂಧಿಸಿದಂತೆ ರಾಜ್ಯಗಳಿಗೆ ಏಳು ನಿರ್ದೇಶಗಳನ್ನು ನೀಡಿತ್ತು. ಇವುಗಳಲ್ಲೊಂದು ಪೊಲೀಸ್‌ ಇಲಾಖೆಯನ್ನು ರಾಜಕೀಯ ಮಧ್ಯಪ್ರವೇಶ ರಾಜಕೀಯ ಒತ್ತಡ ಹಾಗೂ ಪಕ್ಷಪಾತ ತನಗಳಿಂದ ರಕ್ಷಿಸುವುದಕ್ಕೋಸ್ಕರ ಪೊಲೀಸ್‌ ಮುಖ್ಯಸ್ಥರ ಹುದ್ದೆಯ ಸೇವಾ ಅವಧಿಯನ್ನು ಕನಿಷ್ಠ ಎರಡು ವರ್ಷಗಳಿಗೆ ನಿಗದಿಪಡಿಸಬೇಕೆಂಬುದು. ಪ್ರಕಾಶ್‌ ಸಿಂಗ್‌ ಉತ್ತರ ಪ್ರದೇಶದ ಪೊಲೀಸ್‌ ಮುಖ್ಯಸ್ಥರಾಗಿದ್ದವರು; ಮುಂದೆ ಗಡಿ ಭದ್ರತಾ ಪಡೆಯ ಮುಖ್ಯಸ್ಥರಾದರು.

ನಮ್ಮ ಹೆಚ್ಚಿನ ಸರಕಾರಿ ಇಲಾಖೆಗಳಂತೆಯೇ ಕರ್ನಾಟಕದ ಪೊಲೀಸ್‌ ಇಲಾಖೆ ಕೂಡ ಸಿಬಂದಿಯಿಂದ ತುಂಬಿ ತುಳುಕುತ್ತಿದೆ. 2018ರ ಮಾರ್ಚ್‌ ಹೊತ್ತಿಗೆ ಕರ್ನಾಟಕದ ವಿವಿಧ ಪೊಲೀಸ್‌ ಪದಾಧಿಕಾರಿಗಳಲ್ಲಿ 176 ಐಪಿಎಸ್‌ ಅಧಿಕಾರಿಗಳಿದ್ದರು. ಒಬ್ಬರು ಡಿಜಿ-ಐಜಿಪಿ, ಆರು ಮಂದಿ ಡಿಜಿಪಿಗಳು, 21 ಹೆಚ್ಚುವರಿ ಡಿಜಿಪಿಗಳು, 22 ಮಂದಿ ಐಜಿಪಿಗಳು. ಆದರೆ 1956ರಲ್ಲಿ ನಮ್ಮ ಇಡೀ ಮೈಸೂರು ರಾಜ್ಯಕ್ಕೆ ಇದ್ದುದು ಒಬ್ಬರೇ ಒಬ್ಬರು ಐಜಿಪಿ ಹಾಗೂ ಇಬ್ಬರೇ ಡಿಐಜಿಗಳು. ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್‌ ಕೇಂದ್ರ ಕಚೇರಿಯನ್ನು ನೀವು ಹೊಕ್ಕರೆ ಅಲ್ಲಿಂದ ಹೊರಬರುವಾಗ ಯಾರಾದರೂ ಒಬ್ಬ ಡಿಜಿಪಿಯನ್ನು ಹಾದುಕೊಂಡೇ ಬರಬೇಕಾಗುತ್ತದೆ ಎಂದು ವ್ಯಕ್ತಿಯೊಬ್ಬರು ತಮಾಷೆ ಮಾಡಿದ್ದನ್ನು ಕಂಡಿದ್ದೇನೆ. ಮಲ್ಲೇಶ್ವರಂನಲ್ಲಿರುವ ಅರಣ್ಯಾಧಿಕಾರಿಗಳ ಕಚೇರಿಯದೂ ಇದೇ ಕತೆ. ಅರಣ್ಯ ಇಲಾಖೆಯ ಈ ಕಚೇರಿಯಲ್ಲೀಗ ಹೊಸ ಹುದ್ದೆಯೊಂದು ಸೃಷ್ಟಿಯಾಗಿದೆ. “ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ’!

ಹಾಗೇ ನೋಡಿದರೆ ರಾಜ್ಯದ ಕಾಂಗ್ರೆಸ್‌, ಬಿಜೆಪಿ ಜನತಾದಳದ ಅನೇಕ ಪ್ರಾಮಾಣಿಕ ರಾಜಕಾರಣಿಗಳಿಗೆ ಶಾಸಕರಾಗುವ ಅವಕಾಶವೂ ಸಿಗಲಿಲ್ಲ.

ಹೊಸಬರಿಗೆ ಪ್ರಾತಿನಿಧ್ಯ ನೀಡಿರುವುದಕ್ಕಾಗಿ “ಮೂಲ ಬಿಜೆಪಿ’ ಶಾಸಕರಿಗೆ ಬೇಸರವಾಗಿರುವುದು ತೀರಾ ಸಹಜವೇ ಆಗಿದೆ.

ನಮ್ಮ ಹೆಚ್ಚಿನ ಸರಕಾರಿ ಇಲಾಖೆಗಳಂತೆಯೇ ಕರ್ನಾಟಕದ ಪೊಲೀಸ್‌ ಇಲಾಖೆ ಕೂಡ ಸಿಬಂದಿಯಿಂದ ತುಂಬಿ ತುಳುಕುತ್ತಿದೆ.

 ಅರಕೆರೆ ಜಯರಾಮ್‌

ಟಾಪ್ ನ್ಯೂಸ್

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

1-sasadsa

2nd ODI ; ಆಸೀಸ್ ವಿರುದ್ಧ ಭರ್ಜರಿ ಜಯ : ಸರಣಿ ವಶ ಪಡಿಸಿಕೊಂಡ ಟೀಮ್ ಇಂಡಿಯಾ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು

1-sasadas

Pavagada ; ಹಾವು ಕಡಿದು ಅರು‌ ವರ್ಷದ ಬಾಲಕ ಸಾವು: ಆಸ್ಪತ್ರೆ ಎದುರು ಪ್ರತಿಭಟನೆ

Ullal ನೇತ್ರಾವತಿ ಸೇತುವೆಯಲ್ಲಿ ಮೀನು ಸಾಗಾಟದ ಪಿಕಪ್‌ ವಾಹನ ಪಲ್ಟಿ

Ullal ನೇತ್ರಾವತಿ ಸೇತುವೆಯಲ್ಲಿ ಮೀನು ಸಾಗಾಟದ ಪಿಕಪ್‌ ವಾಹನ ಪಲ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

kat-13

ಕೊರೊನಾ ವೈರಸ್‌- ಅಸ್ವಾಭಾವಿಕ ಆಹಾರ ಪದ್ಧತಿಯ ಕೊಡುಗೆ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

KHALISTANI MOVEMENT

Khalistani: ಇನ್ನಷ್ಟು ಖಲಿಸ್ತಾನಿ ಪುಂಡರ ಆಸ್ತಿ ಜಪ್ತಿ

belur

Heritage: ವಿಶ್ವ ಪರಂಪರೆ ತಾಣವಾಗಿ ಬೇಲೂರು, ಹಳೆಬೀಡು ದೇಗುಲ: ಮೋದಿ ಮೆಚ್ಚುಗೆ

aksharadhama nj

USA: ಅ. 8ರಂದು ಬೃಹತ್‌ ದೇಗುಲ ದರ್ಶನ: ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಾಣ

1-sasad

Kalasa: ಹೃದಯಾಘಾತದಿಂದ ಎಎಸ್‌ಐ ಸಾವು

RAMA LINGA REDDY

Politics: “ಡಿಕೆಶಿ ಸಿಎಂ” ಚರ್ಚೆ ಅನವಶ್ಯಕ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.