ಜಾಧವ್‌ ಪ್ರಕರಣ: ಪಾಕ್‌-ಭಾರತ ಕಲಹ ಕಥನ

Team Udayavani, Jul 18, 2019, 5:00 AM IST

ಕುಲಭೂಷಣ್‌ ಜಾಧವ್‌ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯಮತ್ತೂಮ್ಮೆ ಭಾರತದ ಪರ ತೀರ್ಪು ನೀಡಿದೆ. ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕ ಕಲ್ಪಿಸಬೇಕು ಎಂದು ಆದೇಶಿಸಿರುವ ನ್ಯಾಯಾಲಯ, ಪಾಕ್‌ಗೆ ಪ್ರಕರಣವನ್ನು ಪುನಃ ಪರಿಶೀಲಿಸಲೂ ತಿಳಿಸಿ, ಗಲ್ಲು ಶಿಕ್ಷೆಗೆ ತಡೆ ನೀಡಿದೆ. 15 ನ್ಯಾಯಾಧೀಶರು ಭಾರತದ ಪರ ತೀರ್ಪು ನೀಡಿದರೆ- ಒಬ್ಬ ನ್ಯಾಯಾಧೀಶರಷ್ಟೇ ಪಾಕ್‌ ಪರ ಇದ್ದರು ಎನ್ನುವುದು ವಿಶೇಷ.

ಆದಾಗ್ಯೂ, ‘ಜಾಧವ್‌ಗೆ ವಿಧಿಸಲಾದ ಮರಣದಂಡನೆ ಶಿಕ್ಷೆಯನ್ನು ರದ್ದು ಪಡಿಸಿ, ಅವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಆದೇಶಿಸಬೇಕು’ ಎಂಬ ಭಾರತದ ಬೇಡಿಕೆಗೆ ನ್ಯಾಯಾಲಯ ಒಪ್ಪಿಗೆ ನೀಡಿಲ್ಲ. ಆದರೂ, ಇದು ಭಾರತದ ಪಾಲಿಗಂತೂ ದೊಡ್ಡ ರಾಜತಾಂತ್ರಿಕ ಗೆಲುವು.

•ಏನಿದು ಪ್ರಕರಣ?
ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌, ವೃತ್ತಿ ಬದುಕಿಗೆ ವಿದಾಯ ಹೇಳಿದ ನಂತರ ಸ್ವಂತ ವ್ಯಾಪಾರದಲ್ಲಿ ನಿರತರಾಗಿದ್ದರು. ವ್ಯಾಪಾರ ನಿಮಿತ್ತ ಅವರು ಇರಾನ್‌ಗೆ ಹೋದಾಗ ಪಾಕಿಸ್ತಾನ ಅವರನ್ನು ಬಂಧಿಸಿತ್ತು. ಆದರೆ, ತಾನು ಜಾಧವ್‌ರನ್ನು ಇರಾನ್‌ನಿಂದಲ್ಲ, ಬದಲಾಗಿ ಅವರು ಪಾಕ್‌ನ ಬಲೂಚಿಸ್ತಾನದೊಳಗೆ ನುಗ್ಗಿದಾಗ ಭದ್ರತಾ ಪಡೆಗಳು ಅರೆಸ್ಟ್‌ ಮಾಡಿವೆ ಎಂದು ಪಾಕ್‌ ಹೇಳಿತು. ಜಾಧವ್‌ ಭಾರತದ ಗುಪ್ತಚರ ಇಲಾಖೆ ‘ರಾ’ ಏಜೆಂಟ್ ಆಗಿದ್ದು, ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದಾರೆ, ಬಲೂಚ್ ಮತ್ತು ಕರಾಚಿಯಲ್ಲಿನ ಮಿಲಿಟೆಂಟ್ಗಳನ್ನು ಒಗ್ಗೂಡಿಸಿ, ಪ್ರತ್ಯೇಕತಾವಾದ ಹರಡಿ ಅಶಾಂತಿ ಸೃಷ್ಟಿಸುವುದು ಅವರ ಉದ್ದೇಶವಾಗಿತ್ತು, ಅದರಲ್ಲೂ ಮುಖ್ಯವಾಗಿ ಚೀನಾ-ಪಾಕ್‌ ಎಕನಾಮಿಕ್‌ ಕಾರಿಡಾರ್‌ಗೆ ಹಾನಿ ಮಾಡುವ ಉದ್ದೇಶದಿಂದ ಭಾರತ ಅವರನ್ನು ಪಾಕ್‌ಗೆ ಕಳುಹಿಸಿತ್ತು ಎಂದು ಆರೋಪಿಸಿತು ಪಾಕಿಸ್ತಾನ. ಜಾಧವ್‌, ‘ಹುಸ್ಸೇನ್‌ ಮುಬಾರಕ್‌’ ಎಂಬ ನಕಲಿ ಪಾಸ್‌ಪೋರ್ಟ್‌ ಹೊಂದಿದ್ದಾರೆ ಎಂದೂ ಹೇಳಿತು. ಜಾಧವ್‌ ಬಂಧನಕ್ಕೊಳಗಾದ ಒಂದು ವರ್ಷದಲ್ಲೇ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಅವರಿಗೆ ಗಲ್ಲು ಶಿಕ್ಷೆಯ ತೀರ್ಪು ನೀಡಿತು.

•ಐಸಿಜೆ ಮೆಟ್ಟಿಲೇರಿದ ಭಾರತ
ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಭಾರತ ಐಸಿಜೆ ಮೆಟ್ಟಿಲೇರಿತು. ತಾನು ಅನೇಕ ಬಾರಿ ಬೇಡಿಕೆಯಿಟ್ಟರೂ ಜಾಧವ್‌ಗೆ ಪಾಕಿಸ್ತಾನ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ಕೊಟ್ಟಿಲ್ಲ, ಇದು ವಿಯೆನ್ನಾ ಒಪ್ಪಂದದ ಆರ್ಟಿಕಲ್ 36ರ ಉಲ್ಲಂಘನೆಯಾಗಿದೆ ಎಂದು ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ ನೇತೃತ್ವದ ಭಾರತೀಯ ತಂಡ ವಾದಿಸಿತು. ಅಲ್ಲದೇ ಜಾಧವ್‌ಗೆ ತಮಗಿರುವ ಹಕ್ಕುಗಳ ಬಗ್ಗೆಯೂ ಪಾಕಿಸ್ತಾನ ಮಾಹಿತಿ ನೀಡದೇ ಇದ್ದದ್ದನ್ನು ಭಾರತ ಪ್ರಶ್ನಿಸಿತು.

•40 ನಿಮಿಷಕ್ಕೇ ಪಾಕ್‌ ಗಪ್‌ಚುಪ್‌
ಭಾರತ ಎದುರಿಟ್ಟ ಅಂಶಗಳಿಗೆ ಪ್ರತಿವಾದ ಮಂಡಿಸುವಲ್ಲಿ ಪಾಕ್‌ ವಿಫ‌ಲವಾಯಿತು. 90 ನಿಮಿಷಗಳ ವಾದ ಮಂಡನೆಗೆ ಅವಕಾಶವಿದ್ದರೂ ಕೇವಲ 40 ನಿಮಿಷ ಅಸಂಬದ್ಧ ವಾದಗಳನ್ನು ಎದುರಿಟ್ಟರು ಪಾಕ್‌ ಪರ ಹಿರಿಯ ನ್ಯಾಯವಾದಿ ಖವಾರ್‌ ಖುರೇಷಿ. ವಾದ-ಪ್ರತಿವಾದ ಆಲಿಸಿದ ಐಸಿಜೆ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಆದೇಶಿಸಿತು. ಪಾಕಿಸ್ತಾನದ ನ್ಯಾಯವಾದಿಗಳು ಒಂದಿಷ್ಟೂ ತಯ್ನಾರಿನಡೆಸದೇ ದೇಶಕ್ಕೆ ಅವಮಾನ ಮಾಡಿದ್ದಾರೆ ಎಂದು ಆ ದೇಶದಲ್ಲೇ ತೀವ್ರ ವಿವಾದ ಎದ್ದಿತು. ಆದಾಗ್ಯೂ ಪಾಕಿಸ್ತಾನ ಜಾಧವ್‌ ತಪ್ಪೊಪ್ಪಿಗೆ ವಿಡಿಯೋಗಳನ್ನೇ ಸಾಕ್ಷಿಯೆಂದು ಪ್ರತಿಪಾದಿಸಲು ಪ್ರಯತ್ನಿಸಿತಾದರೂ, ಅವೆಲ್ಲ ಹಿಂಸೆ ನೀಡಿ ಹೇಳಿಸಲಾದ ಮಾತುಗಳು ಎಂಬ ಭಾರತದ ವಾದವೇ ಸದ್ದು ಮಾಡಿತು.

•ಭಾವನಾತ್ಮಕ ವಾದ
ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ನಡೆದ ವಿಚಾರಣೆಯ ವೇಳೆಯೂ ಪಾಕಿಸ್ತಾನ ತಾರ್ಕಿಕವಾಗಿ ವಾದಿಸಲಿಲ್ಲ. ಪಾಕ್‌ ಪರ ಅಟಾರ್ನಿ ಜನರಲ್ ಅನ್ವರ್‌ ಮಸೂದ್‌ ಖಾನ್‌, ತಮ್ಮ ವಾದಕ್ಕೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್ರ ಹೇಳಿಕೆಯೊಂದನ್ನು ಬಳಸಿಕೊಂಡರು. ಪಾಕ್‌ ಅನ್ನು ದುರ್ಬಲಗೊಳಿಸಬೇಕು ಎಂಬ ಧಾಟಿಯಲ್ಲಿ ಅಜಿತ್‌ ದೋವಲ್ ಹೇಳಿಕೆ ನೀಡಿದ ಕೆಲವೇ ಸಮಯದಲ್ಲೇ ಬಲೂಚಿಸ್ತಾನದ ನ್ಯಾಯಾಲಯದ ಮುಂದೆ ಉಗ್ರ ದಾಳಿ ನಡೆದು 70 ವಕೀಲರು ಮೃತಪಟ್ಟರು ಎಂದು ವಾದಿಸಿದರು ಮಸೂದ್‌! ಅಲ್ಲದೇ, ತಾವು 1971ದಲ್ಲಿ ಭಾರತಕ್ಕೆ ಯುದ್ಧ ಕೈದಿಯಾಗಿ ಸಿಕ್ಕಿಬಿದ್ದಾಗ, ಭಾರತೀಯ ಸೇನೆ ತಮಗೆ ಚಿತ್ರಹಿಂಸೆ ಕೊಟ್ಟಿತು ಎಂದರು. ಆದರೆ, ಈ ರೀತಿಯ ಭಾವನಾತ್ಮಕ ವಾದಕ್ಕೆ ಐಸಿಜೆ ಬೆಲೆ ಕೊಡಲಿಲ್ಲ.

•ಪಾಕ್‌ ಕಾಂಗಾರು ಕೋರ್ಟ್‌
ಹರೀಶ್‌ ಸಾಳ್ವೆಯವರು ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದ ಮುಖವಾಡವನ್ನೂ ಕಳಚಿಟ್ಟರು. ಅದನ್ನು ಅವರು ‘ಕಾಂಗಾರೂ ಕೋರ್ಟ್‌’ ಎಂದು ಕರೆದರು! ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯಗಳಿಗೆ ಕಾನೂನಿನ ಸರಿಯಾದ ಅರಿವಿಲ್ಲ, ಏಕೆಂದರೆ ಅದಕ್ಕೆ ನೇಮಕವಾಗುವವರು ಮಿಲಿಟರಿ ಅಧಿಕಾರಿಗಳು ಎಂಬ ಭಾರತದ ವಾದವನ್ನು ಪಾಕ್‌ ಬಲವಾಗಿ ಖಂಡಿಸಿತ್ತು. ಕುಲಭೂಷಣ್‌ ಜಾಧ‌ವ್‌ರಿಗೆ ಫೀಲ್ಡ್ ಜನರಲ್ ಕೋರ್ಟ್‌ ಮಾರ್ಷಲ್(ಎಫ್ಜಿಸಿಎಂ) ಮಿಲಿಟರಿ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಎಫ್ಜಿಸಿಎಂಗೆ ನ್ಯಾಯಾಧೀಶರಾಗಿ ನೇಮಕವಾಗುವವರು ಕಾನೂನು ಪದವಿ ಪಡೆಯುವ ಅಗತ್ಯವಿಲ್ಲ. ಬಹುತೇಕರು ಸೇನಾ ಅಧಿಕಾರಿಗಳೇ ಆಗಿದ್ದಾರೆ!

•ಮುಂದೇನಾಗಬಹುದು?
ಆದಾಗ್ಯೂ, ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನು ಪಾಲಿಸಲೇಬೇಕೆಂಬ ಕಟ್ಟಿನಿಟ್ಟು ನಿಯಮ ಇಲ್ಲ ಎಂದು ಪಾಕಿಸ್ತಾನದ ನ್ಯಾಯ ಪಂಡಿತರು ಹೇಳುತ್ತಿದ್ದಾರೆ. ಆದರೆ ಪಾಕಿಸ್ತಾನವೇನಾದರೂ ಐಸಿಜೆಯ ಆದೇಶವನ್ನು ಉಲ್ಲಂಘಿಸಿತೆಂದರೆ, ರಾಜತಾಂತ್ರಿಕವಾಗಿ ಅದು ಮೂಲೆಗುಂಪಾಗಲಿರುವುದು ನಿಶ್ಚಿತ. ಐಸಿಜೆಯ ಆದೇಶಗಳನ್ನು ಪಾಲಿಸದಿರುವುದು ನಿಜಕ್ಕೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯಲಿದೆ. ಕಾಶ್ಮೀರದ ವಿಷಯದಲ್ಲಿ ಭಾರತದ ವಿರುದ್ಧ ಸದಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೂರು ಹೊತ್ತೂಯ್ಯುವ ಪಾಕಿಸ್ತಾನಕ್ಕೆ ಮುಂದೆ ಯಾವ ವಿಷಯದಲ್ಲೂ ಧ್ವನಿಯೆತ್ತುವ ಮುಖ ಉಳಿಯುವುದಿಲ್ಲ. ಹೀಗಾಗಿ, ಜಾಧವ್‌ರಿಗೆ ಮಿಲಿಟರಿ ನ್ಯಾಯಾಲಯ ವಿಧಿಸಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಧೈರ್ಯವನ್ನಂತೂ ಅದು ತೋರಿಸದು.

ಮಡದಿ-ತಾಯಿ ಭೇಟಿ

ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಾಗುತ್ತಿದ್ದಂತೆಯೇ ಅದು ಕೊನೆಗೂ ‘ಮಾನವೀಯತೆಯ ಆಧಾರ’ದ ಹೆಸರಲ್ಲಿ ಜಾಧವ್‌ಗೆ ಅವರ ಪತ್ನಿ ಮತ್ತು ತಾಯಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿತು. ಆದರೆ ಜಾಧವ್‌ ಬಳಿ ಕರೆದೊಯ್ಯುವ ಮುನ್ನ ಅವರ ತಾಯಿ ಮತ್ತು ಪತ್ನಿಗೆ ತಪಾಸಣೆಯ ಹೆಸರಲ್ಲಿ ತೊಂದರೆ ಮಾಡಿತು. ಅವರ ಚಪ್ಪಲಿ, ಮಂಗಳಸೂತ್ರವನ್ನೆಲ್ಲ ತೆಗೆಸಿತು. ಸುಮಾರು 40 ನಿಮಿಷಗಳ ಮಾತುಕತೆ ನಡೆಯಿತಾದರೂ ಅವರೆಲ್ಲರ ನಡುವೆ ಗಾಜಿನ ಗೋಡೆ ಅಡ್ಡ ಕುಳಿತಿತ್ತು! ಇಂಟರ್ಕಾಮ್‌ ಮೂಲಕವೇ ಅವರೆಲ್ಲ ಪರಸ್ಪರ ಮಾತುಕತೆ ನಡೆಸುವಂತಾಯಿತು. ಈ ಸಂದರ್ಭದಲ್ಲಿ ಜಾಧವ್‌ ಕುಟುಂಬದ ಜತೆಗೆ ಭಾರತದ ಉಪ ಹೈಕಮಿಷನರ್‌ ಜೆ.ಪಿ. ಸಿಂಗ್‌ ಕೂಡ ಇದ್ದರು. ಇದ್ದನ್ನೇ ನೆಪವಾಗಿಟ್ಟುಕೊಂಡ ಪಾಕ್‌ ಕುಲಭೂಷಣ್‌ ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕ ಒದಗಿಸುವ ಆಶ್ವಾಸನೆಯನ್ನು ತಾನು ಈಡೇರಿಸಿದ್ದಾಗಿ ಹೇಳಿಬಿಟ್ಟಿತು! ತದನಂತರ ಛೀಮಾರಿ ಹಾಕಿಸಿಕೊಳ್ಳುವ ದಿಗಿಲಲ್ಲಿ ಇದನ್ನು ‘ಕುಟುಂಬದ ಭೇಟಿ’ ಎಂದು ಕರೆಯಿತು.

ಅಸಾಮಾನ್ಯ ಸಾಳ್ವೆ

ಒಂದು ಅಪಿಯರೆನ್ಸ್‌ಗೆ 5ರಿಂದ 16 ಲಕ್ಷ ರೂಪಾಯಿ ಫೀಸು ತೆಗೆದುಕೊಳ್ಳುವ 64 ವರ್ಷದ ಹಿರಿಯ ನ್ಯಾಯವಾದಿ, ಪದ್ಮಭೂಷಣ ಹರೀಶ್‌ ಸಾಳ್ವೆಯವರು ಈ ಪ್ರಕರಣದಲ್ಲಿ ಕೇವಲ 1 ರೂಪಾಯಿ ಶುಲ್ಕ ಪಡೆದರು. ಬಿಲ್ಕಿಸ್‌ ಬಾನೋ ಪ್ರಕರಣದಲ್ಲಿ ಶುಲ್ಕವಿಲ್ಲದೇ ವಾದಿಸಿದ್ದರು. ಭಾರತ ಮತ್ತು ಇಂಗ್ಲೆಂಡ್‌ನಲ್ಲೂಬ್ಯಾರಿಸ್ಟರ್‌ ಆಗಿ ಅರ್ಹತೆ ಪಡೆದಿರುವ ಸಾಳ್ವೆ, ಸುಪ್ರೀಂ ಕೋರ್ಟ್‌, ಹೈಕೋರ್ಟ್‌, ಐಸಿಜೆ ಯಷ್ಟೇ ಅಲ್ಲದೆ, ಇಂಗ್ಲೆಂಡ್‌ ಮತ್ತು ವೇಲ್ಸ್ನಲ್ಲಿಯೂ ವಾದ ಮಂಡಿಸಿದ್ದಾರೆ.

3 ವರ್ಷಗಳಲ್ಲಿ ನೂರೆಂಟು ತಿರುವು
ಮಾರ್ಚ್‌ 3, 2016: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ರನ್ನು ಬೇಹುಗಾರಿಕೆಯ ಆರೋಪದಲ್ಲಿ ಬಂಧಿಸಿತು ಪಾಕಿಸ್ತಾನ. ಕುಲಭೂಷಣ್‌ರನ್ನು ತನ್ನ ನೆಲದಲ್ಲೇ(ಬಲೂಚಿಸ್ತಾನದಲ್ಲಿ) ಬಂಧಿಸಿರುವುದಾಗಿ ಪಾಕಿಸ್ತಾನ ಹೇಳಿತು. ಆದರೆ ಕುಲಭೂಷಣ್‌, ವ್ಯಾಪಾರ ನಿಮಿತ್ತ ಇರಾನ್‌ನಲ್ಲಿದ್ದಾಗ ಅವರನ್ನು ಅಪಹರಿಸಲಾಯಿತು ಎನ್ನುವುದು ಭಾರತದ ವಾದ.

ಮಾರ್ಚ್‌ 25, 2016: ಕುಲಭೂಷಣ್‌ ಬಂಧನದ ಬಗ್ಗೆ ಭಾರತಕ್ಕೆ ಪಾಕಿಸ್ತಾನದಿಂದ ಅಧಿಕೃತ ಸೂಚನೆ ದೊರೆಯಿತು. ಆಗ ಭಾರತ, ಅಂತಾರಾಷ್ಟ್ರೀಯ ರಾಜತಾಂತ್ರಿಕ ನಿಯಮಗಳ ಅನ್ವಯ ಕುಲಭೂಷಣ್‌ಗೆ ರಾಜತಾಂತ್ರಿಕ ಸಂಪರ್ಕ ಒದಗಿಸಬೇಕೆಂದು ಪಾಕಿಸ್ತಾನಕ್ಕೆ ವಿನಂತಿಸಿತು. ಆ ವರ್ಷದಲ್ಲಿ ಭಾರತ 16 ಬಾರಿ ಈ ರೀತಿಯ ಬೇಡಿಕೆಯಿಟ್ಟಿತಾದರೂ, ಪಾಕಿಸ್ತಾನ ಮಾತ್ರ ನಿರಾಕರಿಸಿಬಿಟ್ಟಿತು.

ಏಪ್ರಿಲ್ 10, 2017: ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಿತು. ಕುಲಭೂಷಣ್‌ ಜಾಧವ್‌ ಪಾಕ್‌ನಲ್ಲಿ ಬೇಹುಗಾರಿಕೆ ಮತ್ತು ಭಯೋತ್ಪಾದನೆಗೆ ಪ್ರಚೋದನೆ ನೀಡಿರುವುದು ಸಾಬೀತಾಗಿದೆ ಎಂದ ಪಾಕ್‌ ಮಿಲಿಟರಿ ನ್ಯಾಯಾಲಯ, ಮರಣದಂಡನೆ ಶಿಕ್ಷೆ ವಿಧಿಸಿತು. (ಅಲ್ಲದೇ, ಜಾಧವ್‌ ಭಾರತೀಯ ನೌಕಾಪಡೆಯಲ್ಲಿ ನಿವೃತ್ತಿ ಪಡೆದಿಲ್ಲ, ಅವರು ಸಕ್ರಿಯ ಅಧಿಕಾರಿಯಾಗಿದ್ದಾರೆ ಎಂದೂ ಹೇಳಿತು ಪಾಕ್‌)

ಮೇ8, 2017: ಪಾಕಿಸ್ತಾನವು ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕ ಒದಗಿಸದೇ ವಿಯೆನ್ನಾ ಒಪ್ಪಂದದ ಉಲ್ಲಂಘನೆ ಮಾಡಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದ(ಐಸಿಜೆ) ಮೆಟ್ಟಿಲೇರಿತು ಭಾರತ.

ಮೇ18, 2017: ಕುಲಭೂಷಣ್‌ ಜಾಧವ್‌ರನ್ನು ಗೂಢಚಾರಿ ಎಂದು ಕರೆದ ಪಾಕಿಸ್ತಾನದ‌ ನ‌ಡೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತೀವ್ರವಾಗಿ ಖಂಡಿಸಿತು ಭಾರತ. ಅಲ್ಲದೇ, ಜಾಧವ್‌ಗೆ ಅವರ ಹಕ್ಕುಗಳ ಬಗ್ಗೆಯೂ ತಿಳಿಸದೇ, ಪಾಕಿಸ್ತಾನ ಸಾಮಾನ್ಯ ನಿಯಮಗಳನ್ನೂ ಉಲ್ಲಂಘಿಸಿದೆ ಎಂದು ವಾದಿಸಿತು.

ಮೇ18, 2017: ಅಂತಾರಾಷ್ಟ್ರೀಯ ನ್ಯಾಯಾಲಯವು ತಾನು ಅಂತಿಮ ತೀರ್ಪು ನೀಡುವವರೆಗೂ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಪಾಕಿಸ್ತಾನಕ್ಕೆ ಆದೇಶಿಸಿತು.

ಡಿಸೆಂಬರ್‌ 25, 2017: ನಿರಂತರವಾಗಿ ರಾಜತಾಂತ್ರಿಕ ಸಂಪರ್ಕವನ್ನು ನಿರಾಕರಿಸಿದ್ದ ಪಾಕಿಸ್ತಾನ, ಕೊನೆಗೆ ಜಾಧವ್‌ರ ತಾಯಿ ಮತ್ತು ಮಡದಿಗೆ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿತು. ಆದರೆ ಅವರ ನಡುವೆ ಗಾಜಿನ ಗೋಡೆಯನ್ನು ಅಳವಡಿಸಿ, ಅವರೆಲ್ಲ ಇಂಟರ್ಕಾಮ್‌ ಮೂಲಕವೇ ಪರಸ್ಪರ ಮಾತುಕತೆ ನಡೆಸುವಂತೆ ಮಾಡಿತು ಪಾಕ್‌. ಈ ಭೇಟಿಯ ವೇಳೆ ಜಾಧವ್‌ರ ಪತ್ನಿ ಮತ್ತು ತಾಯಿಗೆ ಪಾಕ್‌ ಕಿರುಕುಳ ಕೊಟ್ಟಿತೆಂದು ಭಾರತದಿಂದ ತೀವ್ರ ಆಕ್ರೋಶ ಹೊರಹೊಮ್ಮಿತು.

ಜುಲೈ 2018: ಪಾಕಿಸ್ತಾನ ಮತ್ತು ಭಾರತ ಎರಡನೇ ಸುತ್ತಿನ ಲಿಖೀತ ಹೇಳಿಕೆಗಳನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಸಲ್ಲಿಸಿದವು. ಈ ವಿಚಾರವು ವಿಯೆನ್ನಾ ಕನ್ವೆಷನ್‌ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಾಕ್‌ ವಾದಿಸಿತು.

ಫೆಬ್ರವರಿ 2019: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಾಲ್ಕು ದಿನಗಳ ವಿಚಾರಣೆ ನಡೆಯಿತು. ಸರಿಯಾಗಿ ಅದೇ ಅವಧಿಯಲ್ಲೇ ಪುಲ್ವಾಮಾ ಉಗ್ರ ದಾಳಿಯಲ್ಲಿ 40 ಸೈನಿಕರು ಮೃತಪಟ್ಟು ಭಾರತ-ಪಾಕ್‌ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು.

ಜುಲೈ 4,2019: ತಾನು ಈ ಪ್ರಕರಣದ ಕುರಿತ ತೀರ್ಪನ್ನು ಜುಲೈ 17ರಂದು ನೀಡುವುದಾಗಿ ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿತು.

ಜುಲೈ 17,2019: ಭಾರತ ಪರ ತೀರ್ಪು ನೀಡಿದ ಅಂತಾರಾಷ್ಟ್ರೀಯ ನ್ಯಾಯಾಲಯ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ