ಮೈದಾನದಿಂದ ಓಡಿಹೋದ ರಾಹುಲ್‌

Team Udayavani, Apr 6, 2019, 6:00 AM IST

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ನೇತೃತ್ವದಲ್ಲಿ ಬಿಜೆಪಿಯು ಚುನಾವಣೆಗೆ ಸಜ್ಜಾಗುತ್ತಿದೆ. ಬಿಜೆಪಿಗೆ ಎದುರಾಳಿಯಾಗಿ ಕಾಂಗ್ರೆಸ್‌ ಮತ್ತು ಎಸ್‌ಪಿ-ಬಿಎಸ್‌ಪಿ ಮೈತ್ರಿಯೂ ತೊಡೆ ತಟ್ಟುತ್ತಿವೆ. ಹಾಗಿದ್ದರೆ ಈ ಬಾರಿ ಯುಪಿಯ ರಾಜಕೀಯ ನಕಾಶೆ ಬದಲಾಗುವುದೇ? ಪ್ರಿಯಾಂಕಾ ಫ್ಯಾಕ್ಟರ್‌ ಎಷ್ಟು ಕೆಲಸ ಮಾಡುತ್ತಿದೆ? ಬಿಜೆಪಿಗೆ ನಿಜಕ್ಕೂ ಇದು ಕಠಿಣ ಚುನಾವಣೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಆದಿತ್ಯನಾಥರು ಉತ್ತರಿಸಿದ್ದಾರೆ…

ಈ ಚುನಾವಣೆಯು ಪ್ರಧಾನಿ ಮೋದಿಯವರ ಜೊತೆಗೆ ನಿಮಗೂ ಪರೀಕ್ಷಾ ಸಮಯದಂತಿದೆ. ಸಿದ್ಧತೆ ಹೇಗಿದೆ?
ಪೂರ್ತಿ ತಯ್ನಾರಿದ್ದೇವೆ. ಅನೇಕ ಸ್ತರಗಳಲ್ಲಿ ನಾವು ಸಿದ್ಧವಾಗಿದ್ದೇವೆ. ನಮ್ಮ ಬಳಿ ಪ್ರಪಂಚದ ಅತ್ಯಂತ ಓಜಸ್ವಿ ಮತ್ತು ತೇಜಸ್ವಿ ನಾಯಕತ್ವ ಇದೆ. ಇನ್ನು ನೀತಿಯ ಸ್ತರದಲ್ಲಿ, ನಾವು ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. ನಮಗೆ ದೇಶ ಮೊದಲು, ಉಳಿದದ್ದೆಲ್ಲ ಆಮೇಲೆ. ಮೋದಿಯವರು ಇದನ್ನು ಸಾಧಿಸಿ ತೋರಿಸಿದ್ದಾರೆ. ಇನ್ನು ಮೂರನೇ ಸಿದ್ಧತೆ ಸಂಘಟನಾತ್ಮಕ ಸ್ತರದಲ್ಲಿದೆ. ಅಮಿತ್‌ ಶಾ ನೇತೃತ್ವದಲ್ಲಿ ಬಿಜೆಪಿಯು ಪ್ರಪಂಚದ ಅತಿದೊಡ್ಡ ರಾಜಕೀಯ ಪಕ್ಷದ ರೂಪದಲ್ಲಿ ಬೆಳೆದು ನಿಂತಿದೆ. 2014ರಲ್ಲಿ ನಮ್ಮ ಬಳಿ ಮೋದಿಯವರ ಹೆಸರಷ್ಟೇ ಇತ್ತು. ಇವತ್ತು ನಾಮ್‌(ಹೆಸರು) ಮತ್ತು ಕಾಮ್‌(ಕೆಲಸ) ಎರಡೂ ಇವೆ. ಇವೆಲ್ಲದರ ಫ‌ಲವಾಗಿ ಈ ಬಾರಿ ನಾವು ಪ್ರಚಂಡ ಬಹುಮತದಿಂದ ಗೆಲ್ಲಲಿದ್ದೇವೆ. ಉತ್ತರಪ್ರದೇಶದ 80 ಸ್ಥಾನಗಳಲ್ಲಿ 74ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಮುನ್ನಡೆಯುತ್ತಿದ್ದೇವೆ.

ಭಾಷಣದಲ್ಲೇನೋ ವಿಕಾಸ, ಸುರಕ್ಷೆ ಮತ್ತು ಉತ್ತಮ ಆಡಳಿತದ ಮಾತನಾಡುತ್ತೀರಿ. ಆದರೆ ವಾಸ್ತವದಲ್ಲಿ ನೀವು ಜನರನ್ನು ಧ್ರುವೀಕರಿಸುತ್ತಿದ್ದೀರಿ…
ನಾನು ವಿಕಾಸ, ಸುರಕ್ಷೆ ಮತ್ತು ಉತ್ತಮ ಆಡಳಿತದ ಬಗ್ಗೆ ಮಾತನಾಡುತ್ತೇನಷ್ಟೆ. ವ್ಯಕ್ತಿ, ಪರಿವಾರ, ಜಾತಿ ಅಥವಾ ಕೋಮಿನ ಬಗ್ಗೆ ಮಾತನಾಡಿಲ್ಲ. ಇನ್ನು, ಹಿಂದೆ ನಮ್ಮ ಜನರ ಮೇಲೆ ಏನು ದೌರ್ಜನ್ಯಗಳು ನಡೆದಿದ್ದವೋ, ಈಗ ನಡೆಯುತ್ತಿವೆಯೋ ಅವುಗಳ ಬಗ್ಗೆ ಮಾತನಾಡುವುದಕ್ಕೆ ನನಗೆ ಅಧಿಕಾರವಿದೆ. ರಾಜಕೀಯ ಅಖಂಡತೆ, ಆರ್ಥಿಕತೆಯ ಸಂಪನ್ನತೆ, ವಿಕಾಸಮುಖೀ ಸಮಾಜ ಮತ್ತು ನಮ್ಮ ಆಧ್ಯಾತಿಕ-ಸಾಂಸ್ಕೃತಿಕ ಹಿರಿಮೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡುತ್ತಿದೆ.

ರಾಹುಲ್‌ ಗಾಂಧಿ ಕೇರಳದಿಂದಲೂ ಚುನಾವಣೆ ಎದುರಿಸಲಿದ್ದಾರೆ. ಇದರಿಂದಾಗಿ ಅಮೇಠಿಯಲ್ಲಿ ಬಿಜೆಪಿಗೆ ಲಾಭವಾಗಲಿದೆಯೇ?
ಅಮೇಠಿಯಲ್ಲಿ ಚುನಾವಣೆ ಎದುರಿಸುವ ಮುನ್ನವೇ ರಾಹುಲ್‌ ಗಾಂಧಿ ಮೈದಾನ ಬಿಟ್ಟು ಪಲಾಯನಗೈದಿದ್ದಾರೆ. ಯಾವ ಕ್ಷೇತ್ರವನ್ನು ಇವರ ನಾಲ್ಕು ಪೀಳಿಗೆ ಪ್ರತಿನಿಧಿಸಿತ್ತೋ ಅದೇ ಕ್ಷೇತ್ರದಿಂದಲೇ ರಾಹುಲ್‌ ಓಡಿಹೋಗುತ್ತಿದ್ದಾರೆ. ಇದೊಂದು ರೀತಿಯಲ್ಲಿ ಕಾಂಗ್ರೆಸ್‌ನ ಸೋಲಲ್ಲವೇ?

ಪ್ರಿಯಾಂಕಾ ಗಾಂಧಿ ಎದುರೊಡ್ಡುತ್ತಿರುವ ಸವಾಲುಗಳನ್ನು ನೀವು ಹೇಗೆ ನೋಡುತ್ತೀರಿ?
ಪ್ರಿಯಾಂಕಾರಿಂದ ಕಾಂಗ್ರೆಸ್‌ಗೆ ಹೆಚ್ಚಿನ ಲಾಭವೇನೂ ಆಗದು. ಸೊನ್ನೆಯನ್ನು ಸೊನ್ನೆಯೊಂದಿಗೆ ಸೇರಿಸಿದರೆ ಅಥವಾ ಯಾವುದೇ ಸಂಖ್ಯೆಯಿಂದ ಗುಣಿಸಿದರೂ ಸೊನ್ನೆಯೇ ಬರುತ್ತದಲ್ಲವೇ? ಪ್ರಿಯಾಂಕ ಹನ್ನೆರಡು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗೇ ಇದ್ದಾರಲ್ಲ…ಏನಾಯಿತು? ಏನೇನೂ ಆಗಿಲ್ಲ!

ಆರ್‌ಎಲ್‌ಡಿ ಮತ್ತು ಅಜಿತ್‌ ಸಿಂಗ್‌ರನ್ನು ಕೂಡ ನೀವು ಟಾರ್ಗೆಟ್‌ ಮಾಡುತ್ತಿದ್ದೀರಲ್ಲ?
ಮಾಜಿ ಪ್ರಧಾನಿ ಚೌಧರಿ ಚರಣ್‌ಸಿಂಗ್‌ ಮಹಾನ್‌ ನಾಯಕರಾಗಿದ್ದರು. ರೈತರು ಮತ್ತು ಬಡವರ ನಿಜವಾದ ಹಿತೈಷಿಯಾಗಿದ್ದರು. ದೌರ್ಭಾಗ್ಯದ ವಿಷಯವೇನೆಂದರೆ, ಇಂದು ಅವರ ಮಗ ಅಜಿತ್‌ ಸಿಂಗ್‌ರಲ್ಲಿ ಮತ್ತು ಮೊಮ್ಮಗ ಜಯಂತ್‌ರಲ್ಲಿ ಆ ಗುಣವೇ ಇಲ್ಲ. ಮುಜಫ‌#ರನಗರದ ಜನರು ಕಷ್ಟದಲ್ಲಿದ್ದಾಗ ಇವರು ಏನು ಮಾಡುತ್ತಿದ್ದರು? ದಂಗೆಕೋರರ ಜೊತೆಗಿದ್ದರು.

ಪ್ರಿಯಾಂಕಾ ಅವರು ರಾಮಮಂದಿರಕ್ಕೆ ಹೋಗದ ಕಾರಣ ಜನರ ಬಳಿ ಕ್ಷಮೆ ಕೇಳಬೇಕು ಎಂದಿದ್ದೀರಲ್ಲ…
ಪ್ರಿಯಾಂಕಾ ವಾದ್ರಾ ಅಯೋಧ್ಯೆಗೆ ಹೋಗಬೇಕೋ ಬೇಡವೋ, ಅಲ್ಲಿ ಅವರು ಹನುಮಂತನ ಮಂದಿರದ ದರ್ಶನಕ್ಕೆ ಹೋದರೋ ಇಲ್ಲವೋ, ಶ್ರೀರಾಮನ ದರ್ಶನ ಪಡೆದರೋ ಇಲ್ಲವೋ ಎನ್ನುವುದು ಅವರಿಗೆ ಬಿಟ್ಟ ವಿಷಯ, ಆ ವಿಷಯದಲ್ಲಿ ಅವರಿಗೆ ಅಧಿಕಾರವಿದೆ. ಆದರೆ ಪ್ರಿಯಾಂಕಾ, ಅದು ವಿವಾದಿತ ಪ್ರದೇಶವಾದ ಕಾರಣ ತಾವು ರಾಮನ ದರ್ಶನಕ್ಕೆ ಹೋಗಲಿಲ್ಲ ಎಂದರಲ್ಲ, ಅದೇ ಕಾರಣಕ್ಕೆ ನಾನು ಪ್ರಶ್ನಿಸಿದ್ದು. ಇದು ಹಿಂದೂ ಸಮಾಜದ ಅಪಮಾನವಲ್ಲವೇ? ಪ್ರತಿ ವರ್ಷ ದೇಶದ ಕೋಟ್ಯಂತರ ಜನರು ಪ್ರಭು ರಾಮಚಂದ್ರನ ದರ್ಶನ ಪಡೆಯುತ್ತಾರೆ. ಈ ಭಕ್ತರ ಭಾವನೆಗಳಿಗೆ ಶ್ರೀಮತಿ ವಾದ್ರಾ ಅವಮಾನ ಮಾಡಿದ್ದಾರೆ. ಇದೇ ಕಾರಣಕ್ಕಾಗಿಯೇ ಅವರು ಕ್ಷಮೆ ಕೇಳಲಿ ಎಂದು ನಾನು ಹೇಳಿದ್ದು. ರಾಮಚಂದ್ರನ ಮೂರ್ತಿಯಿರುವ ಜಾಗವೇ ರಾಮಜನ್ಮಭೂಮಿ ಎಂದು ಅಲಹಾಬಾದ್‌ ಉಚ್ಚನ್ಯಾಯಾಲಯದ ಮೂವರು ನ್ಯಾಯಮೂರ್ತಿಗಳೇ ಹೇಳಿದ್ದಾರೆ.

ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯನ್ನು “ಮೋಸ’ ಎಂದೇಕೆ ಕರೆಯುತ್ತೀರಿ?
ಮೋಸವಲ್ಲದೇ ಮತ್ತೇನು? ಕಾಂಗ್ರೆಸ್‌ನ 55 ಪುಟಗಳ ಘೋಷಣಾ ಪತ್ರವನ್ನು ಓದಿ ನೋಡಿ. ಪ್ರತ್ಯೇಕತಾವಾದ, ನಕ್ಸಲ್‌ವಾದ ಮತ್ತು ಅರಾಜಕತೆಯನ್ನು ಹೆಚ್ಚಿಸುವಂಥ ಅಂಶಗಳಿವೆ ಅದರಲ್ಲಿ. ಸೇನೆಯ ಶೌರ್ಯದ ಮೇಲೆ ಯಾರೂ ಸಂದೇಹಪಡುವುದಿಲ್ಲ, ಆದರೆ ಕಾಂಗ್ರೆಸ್‌ ಈ ವಿಷಯದಲ್ಲೂ ಅನುಮಾನ ಹುಟ್ಟುಹಾಕಲು ಪ್ರಯತ್ನಿಸುತ್ತದೆ.

ನಿಮಗೆ ಮುಸಲ್ಮಾನರ ಓಟು ಸಿಗುತ್ತದಾ?
ಭಾರತದ ಪ್ರತಿಯೊಬ್ಬ ನಾಗರಿಕರ ಓಟು ಕೇಳುತ್ತಿದ್ದೇವೆ. ಯಾರಿಗೆ ಸುರಕ್ಷೆ, ಉತ್ತಮ ಆಡಳಿತ ಮತ್ತು ವಿಕಾಸವೆಂದರೆ ಇಷ್ಟವೋ ಅವರು ಬಿಜೆಪಿಗೆ ಓಟು ನೀಡುತ್ತಾರೆ.

ಬಿಜೆಪಿಯು ಯಾವ ಸಂಸದರಿಗೆ ಟಿಕೆಟ್‌ ಕೊಡಲು ಬಯಸಿತ್ತೋ, ಘಟಬಂಧನದ ಕಾರಣದಿಂದಾಗಿ ಅವರಿಗೆ ಟಿಕೆಟ್‌ ಕೊಡಲಿಲ್ಲ. ಇದರ ಪರಿಣಾಮ ಏನಾಗಲಿದೆ?
ಜನತೆ ಮೋದೀಜಿಯ ಹೆಸರಲ್ಲಿ ಮತ ನೀಡುತ್ತಾರೆ, ಅವರು ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುತ್ತಿದ್ದಾರೆ. ಮೋದಿಯವರಂಥ ವರ್ಚಸ್ಸಿನ ನಾಯಕ ವಿಪಕ್ಷಗಳಲ್ಲಿ ಇಲ್ಲ. ಹೀಗಾಗಿ, ಸಾಮಾನ್ಯ ಜನರ ಬೆಂಬಲ ಬಿಜೆಪಿಗೇ ಸಿಗಲಿದೆ.

ಬಿಜೆಪಿಯಲ್ಲಿ ಜಾತಿವಾದಿ ಮುಖಗಳು ಹೆಚ್ಚಾಗಿ ಕಾಣಿಸುತ್ತಿವೆ. ಜಾತಿವಾದವನ್ನು ಮೀರಿ ನಿಲ್ಲುವುದಕ್ಕೆ ಸಾಧ್ಯವಿಲ್ಲವೇನು?
ಮೋದಿ ಇರುವಾಗ, ಮೀರುವುದಕ್ಕೆ ಸಾಧ್ಯವಿದೆ. ನಾವು ಜಾತಿ, ಕ್ಷೇತ್ರ ಮತ್ತು ಭಾಷೆಯ ಆಧಾರದ ಮೇಲಲ್ಲ, ಬದಲಾಗಿ ಪ್ರದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಜಾತಿವಾದದಿಂದಾಗಿ ಕುಖ್ಯಾತಿ ಪಡೆದಿವೆ. ಬಿಜೆಪಿಯ ಮೇಲೆ ನೀವು ಇಂಥ ಆರೋಪ ಮಾಡುವುದಕ್ಕೆ ಆಗುವುದಿಲ್ಲ.

ತ್ರಿವಳಿ ತಲಾಖ್‌ ವಿಷಯದಿಂದಾಗಿ ಮುಸ್ಲಿಂ ಮಹಿಳೆಯರು ನಿಮಗೆ ಮತ ನೀಡಬಹುದೇ?
ದೇಶದಲ್ಲಿ ಮೊದಲ ಬಾರಿ ಪ್ರಧಾನಿಯೊಬ್ಬರು ತಮಗಾಗಿ ಸಂವೇದನೆಯಿಂದ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಮುಸ್ಲಿಂ ಮಹಿಳೆಯರಿಗೆ ಅರಿವಾಗುತ್ತಿದೆ. ನಮ್ಮ ಸರ್ಕಾರ ಯಾವ ಭೇದಭಾವವೂ ಇಲ್ಲದೇ, ದೇಶದ 7 ಕೋಟಿ ಮಹಿಳೆಯರಿಗೆ ಗ್ಯಾಸ್‌ ಕನೆಕ್ಷನ್‌ ಕೊಟ್ಟಿದೆ, 37 ಕೋಟಿ ಜನರಿಗೆ ಬ್ಯಾಂಕ್‌ ಖಾತೆಯನ್ನು ಒದಗಿಸಿದೆ, ಅಂತೆಯೇ ಮುಸ್ಲಿಂ ಮಹಿಳೆಯರಿಗೂ ತಲಾಖ್‌ನಿಂದ ಮುಕ್ತಿ ಸಿಕ್ಕಿದೆ. ಹಾಗೆಂದು ನಾವು ಅವರನ್ನು ಮತಗಳ ರೂಪದಲ್ಲಿ ನೋಡುತ್ತಿಲ್ಲ. ಬಿಜೆಪಿಗೆ ಎಲ್ಲಾ ಧರ್ಮದ ಬೆಂಬಲಿಗರೂ ಇದ್ದಾರೆ. ನಾವು ಭೇದಭಾವ ಮಾಡದೇ ಕೆಲಸ ಮಾಡಿದ್ದೇವೆ.

ಕಾಂಗ್ರೆಸ್‌ ಪಕ್ಷ ಎಸ್‌ಪಿ-ಬಿಎಸ್‌ಪಿಯೊಂದಿಗೆ ಮೈತ್ರಿಮಾಡಿಕೊಳ್ಳದೆಯೇ ಚುನಾವಣೆ ಎದುರಿಸುತ್ತಿದೆ. ಇದರಿಂದ ಬಿಜೆಪಿಗೆ ಲಾಭವಾಗುತ್ತದಾ?
ಇವರೆಲ್ಲ ತೋರಿಕೆಗಾಗಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದ್ದಾರೆ ಎಂದು ನಿಮಗೆ ಅನ್ನಿಸುತ್ತಿಲ್ಲವೇ? ಹಾಗಿದ್ದರೆ ರಾಯಬರೇಲಿ ಮತ್ತು ಅಮೇಠಿಯಲ್ಲಿ ಎಸ್‌ಪಿ-ಬಿಎಸ್‌ಪಿ ಏಕೆ ಸ್ಪರ್ಧಿಸುತ್ತಿಲ್ಲ? ಇನ್ನು ಕಾಂಗ್ರೆಸ್‌ ಪಕ್ಷ, ಸಮಾಜವಾದಿ ಪಾರ್ಟಿಗೇಕೆ 7 ಸೀಟು ಬಿಟ್ಟುಕೊಟ್ಟಿದೆ? ಈ ಮೂರೂ ಪಕ್ಷಗಳೂ ಒಂದೇ ಬಳ್ಳಿಯ ಹೂಗಳು

ಪ್ರಿಯಾಂಕಾರಿಂದ ಕಾಂಗ್ರೆಸ್‌ಗೆ ಹೆಚ್ಚಿನ ಲಾಭವೇನೂ ಆಗದು. ಸೊನ್ನೆಯನ್ನು ಸೊನ್ನೆಯೊಂದಿಗೆ ಸೇರಿಸಿದರೆ ಅಥವಾ ಯಾವುದೇ ಸಂಖ್ಯೆಯಿಂದ ಗುಣಿಸಿದರೂ ಸೊನ್ನೆಯೇ ಬರುತ್ತದಲ್ಲವೇ? ಪ್ರಿಯಾಂಕ 12 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗೇ ಇದ್ದಾರಲ್ಲ. ಏನಾಯಿತು?

(ಸಂದರ್ಶನ ಕೃಪೆ-ಅಮರ್‌ ಉಜಾಲಾ)

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ