ಮೋದಿ ಸರ್ಕಾರದ 50 ದಿನದ ದಿಕ್ಸೂಚಿ

Team Udayavani, Jul 28, 2019, 5:04 AM IST

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಅವಧಿಯ ಮೊದಲ ಐವತ್ತು ದಿನಗಳಲ್ಲಿ ಕೈಗೊಂಡ ನಿರ್ಧಾರಗಳು ದೇಶವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯಲು ಮಾರ್ಗಸೂಚಿಯಾಗಿದೆ ಎಂದರೆ ತಪ್ಪಾಗಲಾರದು. ಈ ಅವಧಿಯಲ್ಲಿ ಕೇಂದ್ರ ಸಂಪುಟ ಮತ್ತು ಸರ್ಕಾರ ಕ್ಷಿಪ್ರ ಗತಿಯಲ್ಲಿ ಕೈಗೊಂಡ ನಿರ್ಧಾರಗಳು ಹಾಗೂ ಕೆಲಸಗಳಿಗೆ ಸಾಟಿಯೇ ಇಲ್ಲ. ‘ಕಡಿಮೆ ಸರ್ಕಾರ; ಹೆಚ್ಚು ಆಡಳಿತ’ (ಲೆಸ್‌ ಗವರ್ನ್ಮೆಂಟ್; ಮೋರ್‌ ಗವರ್ನೆನ್ಸ್‌) ಎಂಬ ತತ್ವದ ಮೂಲಕ ಹಾಲಿ ಸರ್ಕಾರ ಕೆಲಸ ಮಾಡುತ್ತಿದೆ. ಈ ಮೂಲಕ ನಮ್ಮ ಸರ್ಕಾರ ಒಂದು ನಿಮಿಷವನ್ನೂ ವ್ಯರ್ಥ ಮಾಡದೆ ಕೆಲಸ ಮಾಡುತ್ತಿದೆ ಎಂಬ ಸಂದೇಶ ರವಾನೆಯಾಗಿದೆ. 2022 ಮತ್ತು 2024ನೇ ವರ್ಷದ ವೇಳೆ ಎರಡು ಪ್ರಮುಖ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಲಾರಂಭಿಸಿದೆ. 2022ನೇ ವರ್ಷದ ವೇಳೆಗೆ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಪೂರ್ತಿಯಾಗಲಿದೆ. 2024ರ ವೇಳೆಗೆ ನಮ್ಮ ಸರ್ಕಾರಕ್ಕೆ ಸಿಕ್ಕಿದ ಜನಾದೇಶದ ಐದನೇ ವರ್ಷವೂ ಆಗಿರುತ್ತದೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ಪ್ರಗತಿಯ ಮತ್ತು ಅವಕಾಶದ ಸಮಾನ ಪಾಲುದಾರರಾಗಿರುವಂತೆ ಬಿಜೆಪಿಯ ಸಂಕಲ್ಪ ಪತ್ರ (ಚುನಾವಣಾ ಪ್ರಣಾಳಿಕೆ)ದಲ್ಲಿ ವಾಗ್ಧಾನ ಮಾಡಿದ್ದಂತೆ ಇದುವರೆಗಿನ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಹೀಗಾಗಿ ಮೊದಲ ಐವತ್ತು ದಿನಗಳಲ್ಲಿ ಸಾಮಾಜಿಕ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಬಡವರು, ರೈತರು, ಕಾರ್ಮಿಕರು ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗಿದೆ. ಸದ್ಯ ಇರುವ ಸರ್ಕಾರ ದೇಶದಲ್ಲಿ ಉತ್ತಮ ಕಾನೂನು ಸುವ್ಯವಸ್ಥೆ, ಮಧ್ಯಮ ವರ್ಗದವರಿಗೆ ಉತ್ತಮ ಜೀವನ ವ್ಯವಸ್ಥೆ, ಬಂಡವಾಳ ಹೂಡಿಕೆಗೆ ಆದ್ಯತೆ, ದೇಶದ ಅರ್ಥ ವ್ಯವಸ್ಥೆಯನ್ನು 5 ಶತಕೋಟಿ ಡಾಲರ್‌ಗೆ ಏರಿಸುವ ಮೂಲಕ ವಿಶ್ವದ ರಾಜಕೀಯ ಭೂಪಟದಲ್ಲಿ ಭಾರತದ ಮಹತ್ವವನ್ನು ಹೆಚ್ಚಿಸುವ ಗುರಿ ಹೊಂದಿದೆ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಅನ್ವಯ 14 ಕೋಟಿ ರೈತರಿಗೆ ವಾರ್ಷಿಕ 6 ಸಾವಿರ ರೂ. ನೆರವು ಸಿಗುವಂತೆ ಮಾಡಲಾಗಿದೆ. ಜತೆಗೆ ಎಲ್ಲಾ ರೈತರಿಗೂ ಪಿಂಚಣಿ ನೀಡುವಂಥ ವ್ಯವಸ್ಥೆ ಮಾಡಿದ್ದೇವೆ. ದೇಶದ ರೈತರು ತಮ್ಮ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು ಎಂಬ ಬೇಡಿಕೆಯನ್ನು ಲಾಗಾಯ್ತಿನಿಂದ ಮಂಡಿಸುತ್ತಾ ಬರುತ್ತಿದ್ದರು ಮತ್ತು ಈಗಲೂ ಅದನ್ನೇ ಪ್ರತಿಪಾದಿಸುತ್ತಿದ್ದಾರೆ. ಅದನ್ನು ಈಡೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್‌.ಸ್ವಾಮಿನಾಥನ್‌ ಸಮಿತಿ ನೀಡಿದ ವ್ಯಾಖ್ಯಾನದ ಪ್ರಕಾರ ಉತ್ತಮ ಬೆಲೆ ಎಂದರೆ ನಿಗದಿತ ಬೆಳೆಯ ಉತ್ಪಾದನಾ ವೆಚ್ಚ ಮತ್ತು ಶೇ.50 ವೆಚ್ಚ. ಮೋದಿ ನೇತೃತ್ವದ ಸರ್ಕಾರ ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ ಅದನ್ನು ಈಡೇರಿಸುವ ಪ್ರಯತ್ನ ಮಾಡಿದೆ ಮತ್ತು 24 ಬೆಳೆಗಳನ್ನು ಕನಿಷ್ಠ ಸಾಮಾನ್ಯ ಬೆಲೆ (ಎಂಎಸ್‌ಪಿ) ವ್ಯಾಪ್ತಿಗೆ ತಂದಿದ್ದು, ಅದರ ಮೂಲಕ ಶೇ.50ಕ್ಕಿಂತ ಹೆಚ್ಚು ಉತ್ಪಾದನಾ ವೆಚ್ಚ ಭರಿಸಲಾಗಿದೆ. ಹೀಗಾಗಿ, ಸಜ್ಜೆ ಬೆಳೆಯುವ ರೈತರಿಗೆ ಶೇ.84ರಷ್ಟು , ಉದ್ದು ಬೆಳೆಯುವ ರೈತರಿಗೆ ಶೇ.64, ತೊಗರಿ ಬೆಳೆಯುವ ರೈತರಿಗೆ ಶೇ. 60ರಷ್ಟು ಉತ್ಪಾದನಾ ವೆಚ್ಚ ಸಿಕ್ಕಿದಂತಾಗಿದೆ. ರೈತರ ಹಣಕಾಸಿನ ಸ್ಥಿತಿ ಉತ್ತಮಗೊಳಿಸುವ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳಲ್ಲಿ ಹತ್ತು ಸಾವಿರ ರೈತರ ಉತ್ಪಾದನಾ ಕಂಪನಿ (ಫಾರ್ಮರ್ಸ್‌ ಪ್ರೊಡ್ಯೂಸರ್‌ ಆರ್ಗನೈಸೇಷನ್‌)ಗಳನ್ನು ಸ್ಥಾಪಿಸಲಾಗುತ್ತದೆ. ಇದಲ್ಲದೆ, ಮೀನುಗಾರಿಕಾ ಕ್ಷೇತ್ರಕ್ಕೆ ಕೂಡ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸರ್ಕಾರ ಕೈಗೊಂಡಿರುವ ಈ ಎಲ್ಲಾ ಕ್ರಮಗಳಿಂದ 2022ರ ಒಳಗಾಗಿ ರೈತರ ಆದಾಯ ದ್ವಿಗುಣಗೊಳ್ಳಲಿದೆ.

ಕುಡಿಯುವ ನೀರಿಗೆ ಆದ್ಯತೆ

ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಈ ಸರ್ಕಾರ ಹೊಂದಿದೆ. ಅದಕ್ಕಾಗಿ ‘ಜಲಶಕ್ತಿ’ ಎಂಬ ಯೋಜನೆ ರೂಪಿಸಿದೆ. ಅದಕ್ಕೆ ದೊಡ್ಡ ಮೊತ್ತದ ಹೂಡಿಕೆಯೂ ಅಗತ್ಯವಾಗಿದೆ. ಈ ಉದ್ದೇಶಕ್ಕಾಗಿಯೇ ಹೊಸತಾಗಿ ಜಲಶಕ್ತಿ ಖಾತೆಯನ್ನು ಸೃಷ್ಟಿಸಲಾಗಿದೆ. ಅಂತಾರಾಜ್ಯ ಜಲ ವಿವಾದಗಳ ಪರಿಹಾರವೂ ಕೇಂದ್ರದ ಆದ್ಯತೆಯಾಗಿದ್ದು, ಅದಕ್ಕಾಗಿ ಹೊಸ ಪ್ರಾಧಿಕಾರ ರಚನೆಯಾಗಲಿದೆ. ‘ಜಲ ಶಕ್ತಿ’ ಎನ್ನುವುದು ಸಾಮಾಜಿಕ ಮತ್ತು ಜನರ ಚಳವಳಿಯಾಗಬೇಕು ಎನ್ನುದು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ.

ಕಾನೂನು ಮಾರ್ಪಾಡು

ಅಸಂಘಟಿತ ವಲಯದ 40 ಕೋಟಿ ಕಾರ್ಮಿಕರಿಗಾಗಿ ಹಲವು ಕಾರ್ಮಿಕ ಕಾನೂನುಗಳನ್ನು ಒಗ್ಗೂಡಿಸಿ ನಾಲ್ಕು ಕೋಡ್‌ಗಳನ್ನಾಗಿ ಮಾರ್ಪಡಿಸಲಾಗಿದೆ. ವೇತನ ಮತ್ತು ಸಾಮಾಜಿಕ ಭದ್ರತೆ ನೀಡುವ ನಿಟ್ಟಿನಲ್ಲಿ ಈ ಬದಲಾವಣೆ ತರಲಾಗಿದೆ. ಅಸಂಘಟಿತ ವಲಯದಲ್ಲಿರುವ ಕಾರ್ಮಿಕರಿಗೆ ಸರಿಯಾದ ಸಮಯದಲ್ಲಿ ನೇಮಕ ಪತ್ರ, ವೇತನ ನೀಡುವುದಕ್ಕೆ ಈ ಬದಲಾವಣೆ ನೆರವಾಗಲಿದೆ. ಕಾರ್ಮಿಕರ ರಾಜ್ಯ ವಿಮೆ (ಇಎಸ್‌ಐ)ಗೆ ಉದ್ಯೋಗದಾತರು ಮತ್ತು ಉದ್ಯೋಗಿಗಳ ಕೊಡುಗೆ ಪ್ರಮಾಣ ಇಳಿಸಲಾಗಿದೆ. ಮೋದಿ ನೇತೃತ್ವದ ಸರ್ಕಾರದಿಂದ ಇದೇ ಮೊದಲ ಬಾರಿಗೆ ಸಣ್ಣ ಅಂಗಡಿಗಳ ಮಾಲೀಕರಿಗೆ ಮತ್ತು ವ್ಯಾಪಾರಸ್ಥರಿಗೆ ಪಿಂಚಣಿ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಮಧ್ಯಂತರ ಬಜೆಟ್‌ನಲ್ಲಿ ಐದು ಲಕ್ಷ ರೂ. ವರೆಗೆ ಆದಾಯ ಇರುವವರಿಗೆ ವೈಯಕ್ತಿಕ ಆದಾಯ ತೆರಿಗೆ ಪಾವತಿ ಮಾಡುವುದರಿಂದ ವಿನಾಯಿತಿ ಘೋಷಿಸಲಾಗಿದೆ. ಇದು ಮಧ್ಯಮ ವರ್ಗದವರಿಗೆ ನೀಡಿದ ಬಲುದೊಡ್ಡ ತೆರಿಗೆ ಕೊಡುಗೆಯಾಗಿದೆ. ಮನೆ ನಿರ್ಮಾಣ ಮಾಡುವವರಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಪ್ರಮಾಣ ಕಡಿಮೆ ಮಾಡಲಾಗಿದೆ ಮತ್ತು ಗೃಹ ಖರೀದಿದಾರರಿಗೆ ಸಾಲ ಮರುಪಾವತಿ ವೇಳೆ ಹಲವು ರಿಯಾಯಿತಿ ಘೋಷಿಸಲಾಗಿದೆ.

ವೈದ್ಯ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗಾಗಿ ದೇಶಾದ್ಯಂತ ಒಂದು ಸಾಮಾನ್ಯ ಪ್ರವೇಶ ಪರೀಕ್ಷೆ, ಅಂದರೆ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ – ನೀಟ್ ಮತ್ತು ಎಕ್ಸಿಟ್ ಪರೀಕ್ಷೆ ಜಾರಿಗೊಳಿಸಲಾಗಿದೆ. ಇದರಿಂದಾಗಿ ಶುಲ್ಕ ಮತ್ತು ಖಾಸಗಿ ಕಾಲೇಜುಗಳನ್ನು ನಿಯಂತ್ರಿಸಿದಂತಾಗಿದೆ.

ದೇಶದ ಅರ್ಥ ವ್ಯವಸ್ಥೆಯನ್ನು 5 ಶತಕೋಟಿ ಡಾಲರ್‌ಗೆ ಏರಿಸುವ ಮಹತ್ವಾಕಾಂಕ್ಷೆ ಸರ್ಕಾರದ್ದಾಗಿದೆ. ಅದಕ್ಕಾಗಿ ಬಂಡವಾಳ ಹೂಡಿಕೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಎರಡನೇ ಅವಧಿಯ ಮೊದಲ ಐವತ್ತು ದಿನಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮತ್ತು ದೇಶಿಯವಾಗಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಗಳನ್ನು ಆಹ್ವಾನಿಸುವ ನಿಟ್ಟಿನಲ್ಲಿ ಹಲವು ನಿರ್ಧಾರಗಳನ್ನು ಕೈಗೊಂಡಿದೆ. ದಿವಾಳಿ ಕಾಯ್ದೆ ಯನ್ನು ಪರಿಷ್ಕರಿಸಿದೆ ಸರ್ಕಾರ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ 70 ಸಾವಿರ ಕೋಟಿ ರೂ. ಮರು ಬಂಡವಾಳ ಹೂಡುವ ಮೂಲಕ ಅವುಗಳಿಗೆ ಆರ್ಥಿಕ ಪುನಶ್ಚೇತನ ನೀಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಎಲ್ಲಾ ಮೂಲ ಸೌಕರ್ಯ ಯೋಜನೆಗಳಲ್ಲಿ ಅಂದರೆ ರಸ್ತೆ, ರೈಲು, ಬಂದರು, ವಿಮಾನ ನಿಲ್ದಾಣ, ಕೈಗಾರಿಕಾ ಕಾರಿಡಾರ್‌, ಸರಕು ಸಾಗಣೆಗಾಗಿಯೇ 100 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ನಿರೀಕ್ಷೆಯಲ್ಲಿದೆ.

ಸ್ಥಾನಮಾನ ಹೆಚ್ಚಳ

ಮೋದಿ ಸರ್ಕಾರದ ಆಡಳಿತದ ಅವಧಿಯಲ್ಲಿ ವಿಶ್ವದ ಭೂಪಟದಲ್ಲಿ ಭಾರತಕ್ಕೆ ಇರುವ ಸ್ಥಾನಮಾನ ಗಣನೀಯವಾಗಿ ಬದಲಾಗಿದೆ. ಎರಡನೇ ಅವಧಿಗಾಗಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಬಿಮ್‌ಸ್ಟೆಕ್‌ ರಾಷ್ಟ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಇತ್ತೀಚೆಗೆ ನಡೆದಿದ್ದ ಜಿ20 ರಾಷ್ಟ್ರಗಳ ಸಮ್ಮೇಳನದಲ್ಲಿಯೂ ಮೋದಿಜಿಯವರು ಪ್ರಧಾನ ಪಾತ್ರ ವಹಿಸಿದ್ದರು. ಮಾಲ್ಡೀವ್ಸ್‌ ಮತ್ತು ಶ್ರೀಲಂಕಾಗಳಿಗೆ ಅವರು ನೀಡಿದ ಭೇಟಿಯಿಂದಾಗಿ ಆ ಎರಡೂ ರಾಷ್ಟ್ರಗಳ ಜತೆಗೆ ನಾವು ಹೊಂದಿರುವ ಬಾಂಧವ್ಯ ಮತ್ತಷ್ಟು ವೃದ್ಧಿಯಾಗಿದೆ. ಚಂದ್ರಯಾನ-2ರ ಯಶಸ್ಸು ಮತ್ತು 2022ರಲ್ಲಿ ಕೈಗೊಳ್ಳಲಿರುವ ಗಗನಯಾನ ಯೋಜನೆಯಿಂದಾಗಿ ಇಂಥ ಸಾಹಸ ಕೈಗೊಂಡ ವಿಶ್ವದ ನಾಲ್ಕನೇ ರಾಷ್ಟ್ರ ನಮ್ಮದು ಎಂದು ಹೆಗ್ಗಳಿಕೆ ಪಡೆದುಕೊಂಡಿದ್ದೇವೆ. ಜತೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶ ಅಪ್ರತಿಮ ಸಾಧನೆ ಮಾಡಲು ಶಕ್ತವಿದೆ ಎಂದು ತೋರಿಸಿಕೊಟ್ಟಂತಾಗಿದೆ.

ಕಠಿಣ ಕ್ರಮ

ಭಯೋತ್ಪಾದನೆ ಮತ್ತು ಭ್ರಷ್ಟಾಚಾರದ ವಿರುದ್ಧ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಗೆ ಸಿಗುತ್ತಿದ್ದ ಹಣಕಾಸಿನ ನೆರವಿಗೆ ಪೂರ್ಣ ವಿರಾಮ ಹಾಕಲಾಗಿದೆ. ಪ್ರತ್ಯೇಕತಾವಾದಿ ನಾಯಕರನ್ನು ಜೈಲಿಗೆ ಹಾಕಲಾಗಿದೆ ಮತ್ತು ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದರ ಜತೆಗೆ ಜಮ್ಮು ಮತ್ತು ಕಾಶ್ಮೀರದ ಜನರ ಹೃದಯ ಗೆಲ್ಲುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಕಣಿವೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಸುಮಾರು ನಲುವತ್ತು ಸಾವಿರಕ್ಕೂ ಅಧಿಕ ಮಂದಿ ಆಯ್ಕೆಯಾಗಿದ್ದಾರೆ.

27 ಮಂದಿ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಭ್ರಷ್ಟಾಚಾರದಲ್ಲಿ ಯಾವುದೇ ರಾಜಿ ಇಲ್ಲ ಮತ್ತು ಅದರ ವಿರುದ್ಧ ಹೋರಾಟ ಮುಂದುವರಿದಿದೆ ಎಂಬ ಸಂದೇಶ ರವಾನಿಸಲಾಗಿದೆ. ಜತೆಗೆ ಬೇನಾಮಿ ಆಸ್ತಿ ಹೊಂದಿರುವವ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಜತೆಗೆ ಹಲವು ಗುರುತರ ಪ್ರಕರಣಗಳಲ್ಲಿ ವಂಚಿಸಿ ವಿದೇಶಗಳಿಗೆ ಪರಾರಿಯಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಅಂಥವರ ಪೈಕಿ ಕೆಲವರನ್ನು ಮತ್ತೆ ಭಾರತಕ್ಕೆ ಗಡಿಪಾರು ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದರೆ, ಇನ್ನಿತರರಿಗೆ ಜೈಲು ಶಿಕ್ಷೆ ವಿಧಿಸುವ ಪ್ರಕ್ರಿಯೆಯಲ್ಲಿದೆ.

ಮಧ್ಯಮ ವರ್ಗದವರಿಗಾಗಿ ಪ್ರತಿ ಅಡುಗೆ ಅನಿಲ ಸಿಲಿಂಡರ್‌ಗೆ 100 ರೂ. ಕಡಿಮೆ ಮಾಡಲಾಗಿದೆ ಮತ್ತು ಗ್ರಾಹಕ ಹಕ್ಕುಗಳ ವಿಧೇಯಕವನ್ನು ಸಂಸತ್‌ನಲ್ಲಿ ಮಂಡಿಸಲು ಉದ್ದೇಶಿಸಲಾಗಿದೆ. ಸೌರಶಕ್ತಿಯ ಜನಪ್ರಿಯತೆಗಾಗಿ ರಚಿಸಲಾಗಿರುವ ಅಂತಾರಾಷ್ಟ್ರೀಯ ಸೌರ ಒಕ್ಕೂಟ ಉತ್ತಮ ರೀತಿಯಲ್ಲಿ ಕಾರ್ಯವೆಸಗುತ್ತಿದೆ ಮತ್ತು ಐದನೇ ಆವೃತ್ತಿಯ ಯೋಗ ದಿನವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಬಳಕೆಯಲ್ಲಿ ಇಲ್ಲದ 58 ಕಾನೂನುಗಳನ್ನು ರದ್ದು ಮಾಡುವ ಮೂಲಕ ಸುಮಾರು 1 ಸಾವಿರ ಕಾನೂನುಗಳನ್ನು ಇದುವರೆಗೆ ರದ್ದು ಮಾಡಿದಂತಾಗಿದೆ. ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ ಯೋಜನೆಯನ್ನು ರಾಜ್ಯಗಳಲ್ಲಿ ಕರ್ತವ್ಯದಲ್ಲಿರುವ ಹುತಾತ್ಮ ಪೊಲೀಸ್‌ ಸಿಬ್ಬಂದಿಗಳ ಮಕ್ಕಳಿಗೂ ವಿಸ್ತರಿಸಲಾಗಿದೆ. ಇದರ ಜತೆಗೆ ಸೇನಾ ಪಡೆಗಳ ಅಧಿಕಾರಿಗಳಿಗೆ ಕ್ರಿಯಾತ್ಮಕ ರಹಿತ ಆರ್ಥಿಕ ಯೋಜನೆಯನ್ನೂ ಪ್ರಕಟಿಸಲಾಗಿದೆ.

ಇಂಥ ಯೋಜನೆಗಳನ್ನು ಪ್ರಕಟಿಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲ ಐವತ್ತು ದಿನಗಳಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟಿದೆ. ಮುಂದಿನ ಐದು ವರ್ಷಗಳಲ್ಲಿ ಹೆಚ್ಚು ಪ್ರಾಮಾಣಿಕವಾಗಿ ಮತ್ತು ಗುರಿ ಸಾಧನೆಯ ವಾಗ್ಧಾನದೊಂದಿಗೆ ಕೆಲಸ ಮಾಡಲಿದೆ.

ಪ್ರಕಾಶ್‌ ಜಾವಡೇಕರ್‌
(ಲೇಖಕರು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವ)

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದಾಸ ಸಾಹಿತ್ಯದಲ್ಲಿ ಹೊಸ ಭಕ್ತಿ ಪರಂಪರೆಯೊಂದನ್ನು ಸೃಷ್ಟಿಸುವಲ್ಲಿ ಹಾಗೂ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ದಾಸ ಶ್ರೇಷ್ಠ ಕನಕದಾಸರ ಕೊಡುಗೆ ಅಪಾರ....

  • ಅಮೆರಿಕದ ರಾಸಾಯನ ತಂತ್ರಜ್ಞ ಮತ್ತು ಶ್ರೀಮಂತ ಉದ್ಯಮಿ ಜಾನ್‌ ಮೋಟಿÉ ಮೋರ್‌ಹೆಡ್‌ ಹೆಸರಾಂತ ಖಗೋಳ ವಿಜ್ಞಾನಿ ಹಾರ್ಲೋ ಶಾರ್ಪ್‌ಲಿ ಅವರನ್ನು ಭೇಟಿ ಮಾಡುತ್ತಾರೆ....

  • ಕನ್ನಡ ಪರಿಸರ ಎಂದಾಗ ಕೇವಲ ಕನ್ನಡ ಮಾತಾಡುವ ಒಂದು ವಾತಾವರಣ ಇರುವ ಜಾಗ ಎಂದು ಗ್ರಹಿಸುವುದೇ ದೊಡ್ಡ ತಪ್ಪಾಗುತ್ತದೆ. ಕನ್ನಡ ಪರಿಸರ ಭೌತಿಕವಾದ, ಆರ್ಥಿಕವಾದ, ಸಾಂಸ್ಕೃತಿಕವಾದ...

  • ನಾವು ಕಳಿಸುವ ತನಕ ಬೇರೆ ಯಾರೂ ಅಂತರಜಾಲದಲ್ಲಿ ಸಂದೇಶಗಳನ್ನೇ ಕಳಿಸುತ್ತಿರಲಿಲ್ಲವೇ?ಖಂಡಿತಾ ಕಳಿಸುತ್ತಿದ್ದರು. ನಿನ್ನೆ ಮೊನ್ನೆಯ ಮಾತೆಲ್ಲ ಏಕೆ, ಇವತ್ತಿಗೆ...

  • "ಸ್ವಾತಿ ಮುತ್ತಿನ ಮಳೆ ಹನಿಯೆ| ಮೆಲ್ಲ ಮೆಲ್ಲನೆ ಧರೆಗಿಳಿಯೆ||...' ಸಿನೇಮಾ ಹಾಡು ಈಗಲೂ ಗುನುಗುನಿಸುತ್ತಿರಬಹುದು, ಕೆ(ಹ)ಲವರ ಮನದಲ್ಲಿಯಾದರೂ... ಅ. 24ರ ಸಂಜೆಯಿಂದ ಸ್ವಾತಿ...

ಹೊಸ ಸೇರ್ಪಡೆ

  • ಭಾರತ ಸರ್ಕಾರದ ವತಿಯಿಂದ "ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ'(NCRB) ಸ್ವಯಂಚಾಲಿತ ಮುಖ ಗುರುತು ಪತ್ತೆ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ....

  • "ಹನಿ ಹನಿಗೂಡಿದರೆ ಹಳ್ಳ- ತೆನೆ ತೆನೆ ಕೂಡಿದರೆ ಬಳ್ಳ' (Little drops of water make a mighty ocean)ಎನ್ನುವ ಗಾದೆಯ ಆಧಾರದ ಮೇಲೆ ಈ ಠೇವಣಿಯನ್ನು ಪ್ರಾರಂಭಿಸಲಾಗಿದೆ. ಈ ಠೇವಣಿಯ ಮಹಾಶಿಲ್ಪಿ,...

  • ಕಳೆದ ಎರಡು -ಮೂರು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಹಿಂಜರಿತ ಅನುಭವಿಸುತ್ತಿದೆ. ಬ್ಯಾಂಕುಗಳಲ್ಲಿ ಗೃಹಸಾಲ ದೊಡ್ಡ ಪ್ರಮಾಣದಲ್ಲಿ ಸುಸ್ತಿಯಾಗುತ್ತಿದೆ....

  • ಜೀವನ ಅಂದರೆ ಅಲೆಗಳಂತೆ. ಇಲ್ಲಿ ಭಾವದ ಏರು-ತಗ್ಗುಗಳಿವೆ. ಸಹಿಸಲಾಗದ ದುಃಖ, ಒಬ್ಬನೇ ಸಹಿಸಿಕೊಂಡು ಅನುಭವಿಸುವ ನೋವು, ಒಂಟಿಯಾಗಿಯೇ ಸಾಗಬೇಕು, ಸಾಧಿಸಬೇಕು ಮೌನವಾಗಿಯೇ...

  • ಅಂತರ್ಜಾಲವನ್ನು ಜಾಲಾಡಲು ಬ್ರೌಸರ್‌ಗಳು ಬೇಕೇ ಬೇಕು. "ಗೂಗಲ್‌ನ ಕ್ರೋಮ್‌' ಜಗತ್ತಿನಲ್ಲಿ ಅತಿ ಹೆಚ್ಚು ಜನರು ಬಳಸುತ್ತಿರುವ ಬ್ರೌಸರ್‌. ಅತಿ ವೇಗವಾಗಿ ಕಾರ್ಯಾಚರಿಸುತ್ತದೆ...