ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಮೆಗಾಸ್ಟಾರ್ ಆಗಿದ್ದು ಹೇಗೆ?

Team Udayavani, Sep 6, 2018, 6:25 AM IST

ಈ ನಟನ ಬದುಕೇ ಎಲ್ಲರಿಗೂ ಒಂದು ದೊಡ್ಡ ಪಾಠವಾಗಬಲ್ಲದು. ಘಟಾನುಘಟಿ ಸ್ಟಾರ್ ಗಳಿದ್ದ ಕಾಲದಲ್ಲಿ “ಇಂಕಿಲಾಬ್”(ಮೊದಲ ಹೆಸರು) ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟು ಬಿಟ್ಟಿದ್ದರು. ಆರಂಭದಲ್ಲೇ ಕೆಲಸಕ್ಕಾಗಿ ಅಲೆದಾಟ, ಹೋದಲ್ಲೆಲ್ಲಾ ರಿಜೆಕ್ಟ್ ಆಗಿ, ಸ್ಟಾರ್ ಆಗಿ ಮತ್ತೆ ಸೋಲು ಅನುಭವಿಸಿ, ಸಾವಿನ ಮನೆಯ ಕದ ತಟ್ಟಿ, ದಿವಾಳಿ ಅಂಚಿಗೆ ತಲುಪಿ…ಕೊನೆಗೆ ಜೀರೋದಿಂದ ಹೀರೋ ಆದ ಈ ಅದ್ಭುತ ನಟ ಬೇರಾರು ಅಲ್ಲ ಬಾಲಿವುಡ್ ಷಹನ್ ಶಾಹ ಅಮಿತಾಬ್ ಬಚ್ಚನ್!

“ನಮ್ಮ ಜೀವನದ ಕೆಟ್ಟ ಸಮಯ ಒಂದೋ ನಿಮ್ಮನ್ನು ನಾಶ ಮಾಡಿಬಿಡುತ್ತೆ ಇಲ್ಲವೇ ನಿಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ನೀವು ನಿಜಕ್ಕೂ ಯಾರು ಎಂಬುದನ್ನು ತೋರ್ಪಡಿಸುತ್ತದೆ” ಇದು ಅಮಿತಾಬ್ ಬಚ್ಚನ್ ಹೇಳಿದ ಮಾತು.

ನಾನೊಬ್ಬ ಸಾಮಾನ್ಯ ಮೀಡಿಯೋಕರ್ ನಟ ನನ್ನನ್ನು ಬಿಬಿಸಿಯವರು ಶತಮಾನದ ನಟ ಅಂತ ಗುರುತಿಸಿದ್ದಾರೆ. ಮರ್ಲನ್ ಬ್ರ್ಯಾಂಡೋ ಮತ್ತು ಚಾರ್ಲಿ ಚಾಪ್ಲಿನ್ ನನಗಿಂತ ಬಹಳ ದೊಡ್ಡ ಪ್ರತಿಭಾವಂತ ನಟರು. ನಾನೇನಿದ್ದರೂ ಸಾಮಾನ್ಯ ಆ್ಯಕ್ಟರ್ ಅಷ್ಟೇ ಎಂದು ಹೇಳಿದವರು ಭಾರತದ ಚಿತ್ರರಂಗದ ಮೊಘಲ್ ಅಮಿತಾಬ್ ಬಚ್ಚನ್.  ಅಮಿತಾಬ್ ಅಂದರೆ “ನಿರಂತರ ಬೆಳಕು” ಅಂತ ಅರ್ಥ. ಅಷ್ಟು ಮಧುರವಾದ ಹೆಸರಿಟ್ಟವರು ಹಿಂದಿಯ ಪ್ರಖ್ಯಾತ ಕವಿ ಮತ್ತು ಅಮಿತಾಬ್ ತಂದೆ ಹರಿವಂಶರಾಯ್ ಬಚ್ಚನ್. ಅಮಿತಾಬ್ ತಂದೆ ದಿಲ್ಲಿಯ ತಮ್ಮ ಮನೆಗೆ ಸೋಪಾನ್ ಎಂದು ಹೆಸರಿಟ್ಟಿದ್ದರು. ಸೋಪಾನವೆಂದರೆ ಮೆಟ್ಟಿಲು, ಅವರ ಕವಿತೆಯ ಒಂದು ಶೀರ್ಷಿಕೆ ಪ್ರತೀಕ್ಷಾ..ಆ ಹೆಸರನ್ನು ಅಮಿತಾಬ್ ಮುಂಬಯಿಯ ಜುಹುವಿನಲ್ಲಿರುವ ತಮ್ಮ ಮನೆಗೆ ಇಟ್ಟಿದ್ದರು.

ಸತತ ಫೇಲ್..ರಿಜೆಕ್ಟ್..ರಿಜೆಕ್ಟ್!

ನಿಮಗೆ ಗೊತ್ತಿರಲಿ ಅಮಿತಾಬ್ ಒಬ್ಬ ಶಿಕ್ಷಕನಾಗಲಿ ಎಂಬುದು ತಂದೆಯ ಬಯಕೆಯಾಗಿತ್ತು. ಇಲ್ಲ ನಾನು ವಿಜ್ಞಾನಿ ಆಗೋದು ಅಂತ ತೀರ್ಮಾನಿಸಿ ಬಿಎಸ್ಸಿಗೆ ಸೇರಿಕೊಂಡ ಅಮಿತಾಬ್ ಬಿಎಸ್ಸಿಯಲ್ಲಿ ಫೇಲಾಗಿ ಕಡೆಗೆ ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾಗಿದ್ದರು.. ದಿಲ್ಲಿಯ ಡೆಲ್ಲಿಕಾಟನ್ ಮಿಲ್ಸ್ ನಲ್ಲಿ ನೌಕರಿ ಕೇಳಿ ಇಲ್ಲವೆನ್ನಿಸಿಕೊಂಡ ಅಮಿತಾಬ್  ಐಎಎಸ್ ಮತ್ತು ಐಎಫ್ ಎಸ್ ಪರೀಕ್ಷೆಗಾಗಿ ಬರೆದು ಫೇಲಾಗಿದ್ದರು. ನಂತರ ದಿಲ್ಲಿಯಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ಧ್ವನಿ ಪರೀಕ್ಷೆಯಲ್ಲಿಯೂ ಪಾಸಾಗುವುದು ಸಾಧ್ಯವಾಗಿಲ್ಲ…ಹೀಗೆ ಸಾಲು, ಸಾಲು ರಿಜೆಕ್ಟ್ ನಿಂದ ಕಂಗೆಟ್ಟಿದ್ದ ಅಮಿತಾಬ್ ಮುಖ ಮಾಡಿದ್ದು ಮಹಾನಗರಿಯತ್ತ…

ಬಚ್ಚನ್ ಸೂಪರ್ ಸ್ಟಾರ್ ಆಗಿದ್ದರ ಹಿಂದೆ ಅದೆಷ್ಟು ನೋವು..ಅವಮಾನವಿದೆ ಗೊತ್ತಾ?

ರಾಜೇಶ್ ಖನ್ನಾ ಥರಾ ನಾನು ಚೆಂದಗೆ ಕಾಣಿಸಲ್ಲ, ಅವರ ಹಾಗೆ ನಂಗೆ ಡೈಲಾಗ್ ಹೇಳಲಿಕ್ಕೆ ಬರಲ್ಲ. ನನ್ನ ಮುಖವೇ ಸರಿಯಿಲ್ಲ ನಾನು ನಟನಾಗಲಿಕ್ಕೆ ಸಾಧ್ಯವಾ ಎಂಬ ಭಯ ಬಚ್ಚನ್ ಗೆ ಕಾಡುತ್ತಿತ್ತು. ಏತನ್ಮಧ್ಯೆ ಬಾಲಿವುಡ್ ಚಿತ್ರರಂಗ ಬೆಳೆಯುತ್ತಿತ್ತು ಏನೇ ಆಗಲಿ ಎಂದು ಗಟ್ಟಿ ಮನಸ್ಸು ಮಾಡಿದ್ದ ಅಮಿತಾಬ್ ಬಾಂಬೆಗೆ ಬಂದುಬಿಟ್ಟಿದ್ದರಂತೆ. ಖೈತಾನ್ ಕುಟುಂಬದವರೊಂದಿಗೆ ಬಚ್ಚನ್ ತಂದೆ ಮಾತಾಡಿದ್ದರಿಂದ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಆರಂಭದಲ್ಲಿ ಒಂದೆರಡು ಕಂಪನಿಗಳಲ್ಲಿ ಸೇಲ್ಸ್ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿದರೂ  ಯಾವುದರಲ್ಲೂ ಮನಸ್ಸು ನಿಲ್ಲುತ್ತಿರಲಿಲ್ಲ. ಸಿನಿಮಾಕ್ಕೆ ಸೇರಲು ಆಡಿಷನ್ ಗೆ ಹೋದರೆ ಅಲ್ಲಿ 6 ಅಡಿ 3 ಇಂಚು ಎತ್ತರದ ನಿನಗೆ ಅವಕಾಶ ಕೊಡೋದು ಹೇಗೆ ಎಂದು ವಾಪಸ್ ಕಳುಹಿಸುತ್ತಿದ್ದರಂತೆ! ಅಂತೂ ಹಿಂದಿ ಚಿತ್ರರಂಗದ ಖ್ಯಾತ ಹಾಸ್ಯ ನಟ ಮೆಹಮೂದ್ ಅವರ ನೆರಳಿಗೆ ಬಚ್ಚನ್ ಸೇರಿಕೊಂಡುಬಿಟ್ಟರು. ಎಲ್ಲೋ ಒಂದೆರಡು ರಾತ್ರಿ ಮರೀನ್ ಡ್ರೈವ್ ನ ರಸ್ತೆ ಬದಿಯ ಬೆಂಚಿನ ಮೇಲೂ ಬಚ್ಚನ್ ಮಲಗಿದ್ದೂ ಉಂಟಂತೆ!. ಈ ಎಲ್ಲಾ ಜಂಜಾಟಗಳ ನಡುವೆ 1969ರಲ್ಲಿ ಸಾಥ್ ಹಿಂದೂಸ್ತಾನಿ ಚಿತ್ರಕ್ಕೆ ಬಚ್ಚನ ಸಹಿ ಮಾಡಿದ್ದರು, ಆ ಚಿತ್ರ 70ರಲ್ಲಿ ಬಿಡುಗಡೆಯಾಯಿತು.  ಆ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು.

ಆದರೆ ಬಚ್ಚನ್ ಅದೃಷ್ಟ ಹೇಗಿತ್ತು ನೋಡಿ, ಮತ್ತೊಂದು ಸಿನಿಮಾದಲ್ಲಿ ಅವಕಾಶ ಪಡೆಯಲಿಕ್ಕಾಗಿ ಬರೋಬ್ಬರಿ 2 ವರ್ಷ ಕಾಲ ಕಾಯಬೇಕಾಯಿತು. ಈ ಸಮಯದಲ್ಲಿ ಮೆಹಮೂನ್ ಭಾಯಿಯ ಮಗ ಅನ್ವರ್ ಅಲಿ ಬಚ್ಚನ್ ಅವರನ್ನು ಕರೆದೊಯ್ದು ಜಾಹೀರಾತು ಕಂಪನಿಯವರಿಗೆ ಪರಿಚಯಿಸಿದ. ಹಾರ್ಲಿಕ್ಸ್ ಮತ್ತು ನಿರ್ಲಾನ್ ಕಂಪನಿಗಳ ಜಾಹೀರಾತಿಗೆ ದನಿ ಕೊಟ್ಟಿದ್ದಕ್ಕೆ 50 ರೂಪಾಯಿ ಸಿಗುತ್ತಿತ್ತಂತೆ!.

ಸಾಥ್ ಹಿಂದೂಸ್ತಾನಿ ಸಿನಿಮಾ ತೆರೆಕಂಡ 2 ವರ್ಷದ ಬಳಿಕ ಅಮಿತಾಬ್ ಆನಂದ್, ಝಂಜೀರ್ ಸಿನಿಮಾಗಳಲ್ಲಿ ನಟಿಸುವ ಮೂಲಕ ನಟನೆಯಲ್ಲಿ ಉತ್ತುಂಗಕ್ಕೆ ಏರತೊಡಗಿದ್ದರು. 60-70ರ ದಶಕದಲ್ಲಿ ಬಾಲಿವುಡ್ ನಲ್ಲಿ ದಿಲೀಪ್ ಕುಮಾರ್, ಅಶೋಕ್ ಕುಮಾರ್, ಗುರುದತ್, ಸಂಜೀವ್ ಕುಮಾರ್, ದೇವ್ ಆನಂದ್, ರಾಜೇಶ್ ಖನ್ನಾ, ವಿನೋದ್ ಖನ್ನಾ, ಜಿತೇಂದ್ರ, ಶತ್ರುಘ್ನಸಿನ್ನಾ, ರಾಜ್ ಕುಮಾರ್, ಶಶಿಕಪೂರ್, ಶಮ್ಮಿಕಪೂರ್  ಸೇರಿದಂತೆ ಘಟಾನುಘಟಿ ಸ್ಟಾರ್ ನಟರ ದಂಡೇ ಇತ್ತು. ಇಂತಹ ಸಮಯದಲ್ಲೇ ಹುಟ್ಟಿಕೊಂಡ ನಟ ಆ್ಯಂಗ್ರಿ ಯಂಗ್ ಮ್ಯಾನ್ ಅಮಿತಾಬ್ ಬಚ್ಚನ್!

ಚುಪ್ಕೆ, ಚುಪ್ಕೆ, ಫರಾರ್, ಡಾನ್, ತ್ರಿಶೂಲ್, ಮುಖ್ದರ್ ಕಾ ಸಿಕಂದರ್, ಗಂಗಾ ಕಿ ಸೌಗಂಧ್, ಬೇಷರಮ್, ಸುಹಾಗ್, ಮಿ.ನಟವರ್ ಲಾಲ್, ಕಾಲಾ ಪತ್ಥರ್, ದ ಗ್ರೇಟ್ ಗ್ಯಾಂಬ್ಲರ್, ಝಂಜೀರ್, ದೀವಾರ್, ಶೋಲೆ, ಕನ್ವರ್ ಬಾಪ್ ಮತ್ತು ದೋಸ್ತ್, ರೋಟಿ, ಕಪಡಾ ಔರ್ ಮಕಾನ್, ಮಜ್ಬೂರ್..ಹೀಗೆ 1986ರವರೆಗೆ ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆದು ಇಂದಿಗೂ ಬೇಡಿಕೆಯ ನಟ ಎನ್ನಿಸಿಕೊಂಡವರು ಅಮಿತಾಬ್ ಬಚ್ಚನ್.

ಬೆಂಗಳೂರಿನಲ್ಲಿ ಕೂಲಿ ಸಿನಿಮಾ ಶೂಟಿಂಗ್ ವೇಳೆ ಬಚ್ಚನ್ ಮೃತ್ಯುವಿನ ಕದ ತಟ್ಟಿದ್ದರು!

ಬಾಲಿವುಡ್ ನ ಬಿಡುವಿಲ್ಲದ ಸ್ಟಾರ್ ನಟರಾಗಿದ್ದ ಬಚ್ಚನ್ “ಕೂಲಿ” ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. 1982ರ ಜುಲೈನಲ್ಲಿ ಬೆಂಗಳೂರು ಯೂನಿರ್ವಸಿಟಿ ಆವರಣದಲ್ಲಿ ಸಹ ನಟ ಪುನೀತ್ ಇಸ್ಸಾರ್ (ಮಹಾಭಾರತ ಧಾರವಾಹಿಯಲ್ಲಿ ದುರ್ಯೋಧನ ಪಾತ್ರ ಹಾಕಿದ್ದರು) ಜೊತೆಗೆ ಬಚ್ಚನ್ ಫೈಟ್ ಮಾಡಬೇಕಿತ್ತು. ಸಿನಿಮಾದಲ್ಲಿ ಬಚ್ಚನ್ ತಮ್ಮ ಸ್ಟಂಟ್ ಸೀನ್ ಅನ್ನು ಡ್ಯೂಪ್ ಹಾಕದೇ ತಾವೇ ಮಾಡುತ್ತಿದ್ದರು. ಕೂಲಿ ಸಿನಿಮಾದ ಒಂದು ದೃಶ್ಯದಲ್ಲಿ ಬಚ್ಚನ್ ಮೇಲಿಂದ ಟೇಬಲ್ ಮೇಲೆ ಹಾರಿ, ಬಳಿಕ ನೆಲದ ಮೇಲೆ ಬೀಳಬೇಕಿತ್ತು. ನಿರ್ದೇಶಕರು ಆ್ಯಕ್ಷನ್ ಎಂದಾಗ ಬಚ್ಚನ್ ಹಾರಿ ಬಿಟ್ಟಿದ್ದರು..ಆಗ ಟೇಬಲ್ ನ ತುದಿ ಹೊಟ್ಟೆಗೆ ಬಲವಾಗಿ ಬಡಿದು ಬಿಟ್ಟಿತ್ತು. ಬಾಯಿಂದ ರಕ್ತ ಹೊರಬಂದಿತ್ತು..ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು..ಹಲವು ತಿಂಗಳ ಕಾಲ ಆಸ್ಪತ್ರೆಯಲ್ಲಿ ಬಚ್ಚನ್ ಚಿಕಿತ್ಸೆ ಪಡೆದಿದ್ದರು..ಈ ವೇಳೆ ಅವರು ಸಾವಿನ ಮನೆಯ ಕದ ತಟ್ಟಿ ಗೆದ್ದು ಬಂದಿದ್ದರು! ಕೊನೆಗೆ ನಿರ್ದೇಶಕ ಮನಮೋಹನ್ ದೇಸಾಯಿ ಚಿತ್ರದ ಕ್ಲೈಮ್ಯಾಕ್ಸ್ ಬದಲಾಯಿಸಿದ್ದರು. ಮೊದಲು ಸಿದ್ದಪಡಿಸಿದ್ದ ಸ್ಕ್ರಿಪ್ಟ್ ಪ್ರಕಾರ ಚಿತ್ರದ ಕೊನೆಯಲ್ಲಿ ಅಮಿತಾಬ್ ಸಾವನ್ನಪ್ಪಬೇಕಾಗಿತ್ತು. ಬಳಿಕ ಚಿತ್ರಕಥೆ ಬದಲಿಸಿ ಬಚ್ಚನ್ ಜೀವಂತವಾಗಿರುವುದನ್ನು ಚಿತ್ರದಲ್ಲಿ ತೋರಿಸಿದ್ದರು. 1983ರಲ್ಲಿ ಕೂಲಿ ಸಿನಿಮಾ ಬಿಡುಗಡೆಯಾದ ಮೇಲೆ ಅದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು! ಆದರೆ ಮಾನಸಿಕವಾಗಿ, ದೈಹಿಕವಾಗಿ ಜರ್ಜರಿತರಾಗಿದ್ದ ಅಮಿತಾಬ್ ಸಿನಿಮಾರಂಗ ಬಿಟ್ಟು ರಾಜಕೀಯ ಪ್ರವೇಶಿಸಲು ನಿರ್ಧರಿಸಿಬಿಟ್ಟಿದ್ದರು.

ಬಚ್ಚನ್ ಕುಟುಂಬಕ್ಕೂ, ಗಾಂಧಿ ಕುಟುಂಬಕ್ಕೂ ನಂಟು ಹೇಗಾಯ್ತು?

ಅಲಹಾಬಾದ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಅಮಿತಾಬ್ ತಂದೆ ಹರಿವಂಶ್ ರಾಯ್ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಜವಾಹರಲಾಲ್ ನೆಹರು ಅವರು ತಮ್ಮ ಸ್ವಂತ ಖರ್ಚಿನಲ್ಲಿ ಹರಿವಂಶರಾಯ್ ಅವರನ್ನು ಇಂಗ್ಲೆಂಡ್ ಗೆ ಕಳುಹಿಸಿ ಯೇಟ್ಸ್ ಕವಿಯ ಮೇಲೆ ಪಿಎಚ್ ಡಿ ಮಾಡಿಸಿದ್ದರು. ಆದರೆ ಅಲಹಾಬಾದ್ ಗೆ ಹಿಂದಿರುಗಿದ ಮೇಲೆ ಹರಿವಂಶರಾಯ್ ಅವರಿಗೆ ಕಾಲೇಜಿನಲ್ಲಿ ಹೇಳಿಕೊಳ್ಳುವ ಮರ್ಯಾದೆ ಕೊಡಲಿಲ್ಲ. ಬಳಿಕ ಹರಿವಂಶರಾಯ್ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದರು. ಈ ಸಂದರ್ಭದಲ್ಲಿ ವಿಷಯ ತಿಳಿದ ನೆಹರು ಅವರು ಹರಿವಂಶರಾಯ್ ಗೆ ಭಾರತದ ರಕ್ಷಣಾ ಇಲಾಖೆಯಲ್ಲಿ ಕೆಲಸ ಕೊಡಿಸಿದ್ದರು. ಇಬ್ಬರ ಮನೆಗಳೂ ದೆಹಲಿಯಲ್ಲಿ ಹತ್ತಿರ, ಹತ್ತಿರವೇ ಇತ್ತು. ಇದರಿಂದಾಗಿ ಅಮಿತಾಬ್, ಅಜಿತಾಬ್(ಬಚ್ಚನ್ ಅಣ್ಣ)ಗೆ ತಮ್ಮದೇ ವಯಸ್ಸಿನ ರಾಜೀವ್ ಗಾಂಧಿ, ಸಂಜಯ್ ಗಾಂಧಿ ಜೊತೆ ಕಾಲ ಕಳೆಯುತ್ತಿದ್ದರು. ಹೀಗೆ ಬಚ್ಚನ್ ಮತ್ತು ಗಾಂಧಿ ಕುಟುಂಬಕ್ಕೆ ಮೈತ್ರಿ ಬೆಳೆದಿತ್ತು. ಇಂದಿರಾಗಾಂಧಿ ಕುಟುಂಬದ ಮೇಲಿನ ಗೌರವದಿಂದಾಗಿ ಹರಿವಂಶರಾಯ್ ರಾಜ್ಯಸಭಾ ಸದಸ್ಯರೂ ಆಗಿದ್ದರು.

ಈ ಸ್ನೇಹದ ಮುಂದುವರಿದ ಭಾಗ ಬಚ್ಚನ್ ರಾಜಕೀಯಕ್ಕೆ ಎಂಟ್ರಿ, ಬೋಫೋರ್ಸ್ ತಲೆನೋವು!

ತಮ್ಮ ದೀರ್ಘಕಾಲದ ಕುಟುಂಬದ ಗೆಳೆಯ, ಅಂದಿನ ಪ್ರಧಾನಿ ರಾಜೀವ್ ಗಾಂಧಿ ಆಹ್ವಾನದ ಮೇರೆಗೆ 1984ರಲ್ಲಿ ಮೆಗಾಸ್ಟಾರ್ ಆಗಿದ್ದ ಅಮಿತಾಬ್ ಬಚ್ಚನ್ ಉತ್ತರಪ್ರದೇಶದ ಅಲಹಾಬಾದ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಭರ್ಜರಿ ಜಯಗಳಿಸುವ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಆದರೆ ಅವರ ರಾಜಕೀಯ ಜೀವನ ಕೇವಲ 3ವರ್ಷಕ್ಕೆ ಕೊನೆಗೊಂಡಿತ್ತು. ಅದಕ್ಕೆ ಕಾರಣವಾಗಿದ್ದು ಬೋಪೋರ್ಸ್ ಹಗರಣ! ತಾನು ಮತ್ತು ಸಹೋದರ ಶಾಮೀಲಾಗಿರುವುದಾಗಿ ಆರೋಪಿಸಿ ವರದಿ ಪ್ರಕಟಿಸಿದ್ದ ಪತ್ರಿಕೆ ವಿರುದ್ಧ ಕಾನೂನು ಸಮರಕ್ಕಿಳಿದಿದ್ದರು. ಬಳಿಕ ಅಮಿತಾಬ್ ದೋಷಿ ಅಲ್ಲ ಎಂಬುದಾಗಿ ಸ್ವೀಡನ್ ಪೊಲೀಸರು ಕ್ಲೀನ್ ಚಿಟ್ ಕೊಟ್ಟಿದ್ದರು. ತಾನು ಕೊಟ್ಟ ಭರವಸೆ ಈಡೇರಿಸಲಾಗಿಲ್ಲ ಎಂದು ಅಲಹಾಬಾದ್ ಕ್ಷೇತ್ರದ ಜನರಲ್ಲಿ ಕ್ಷಮಾಪಣೆಯನ್ನೂ ಕೇಳಿದ್ದರು. ತುಂಬಾ ಭಾವನಾತ್ಮಕ ವಿಚಾರಧಾರೆಯಲ್ಲಿ ಬಚ್ಚನ್ ರಾಜಕೀಯ ಪ್ರವೇಶಿಸಿದ್ದರು, ಆದರೆ ಅಲ್ಲಿ ಹೋದ ಮೇಲೆ ತಿಳಿಯಿತು ರಾಜಕೀಯದಲ್ಲಿ ಭಾವನೆಗಳಿಗೆ ಬೆಲೆ ಇಲ್ಲ ಎಂಬುದು! 1988ರಲ್ಲಿ ಮತ್ತೆ ಸಿನಿಮಾ ಲೋಕ ಪ್ರವೇಶಿಸಿದ್ದರು.

ಏಳು..ಬೀಳು..ಎಬಿಸಿಎಲ್ ನಿಂದಾಗಿ ದಿವಾಳಿ!

1988ರಲ್ಲಿ ಬಿಡುಗಡೆಯಾದ ಷಹೆನ್ ಶಾ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕ ಬಂದ ಜಾದೂಗಾರ್, ತೂಫಾನ್, ಮೈ ಆಝಾದ್ ಹೂ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸೋತು ಹೋಗಿದ್ದವು. ಹೀಗೆ 1996ರಲ್ಲಿ ಅಮಿತಾಬ್ ಬಚ್ಚನ್ ಕಾರ್ಪೋರೇಶನ್ ಲಿಮಿಟೆಡ್(ಎಬಿಸಿಎಲ್) ಅನ್ನು ಹುಟ್ಟು ಹಾಕಿದ್ದರು. ಸಿನಿಮಾ ನಿರ್ಮಾಣ, ವಿತರಣೆ, ಆಡಿಯೋ ಕ್ಯಾಸೆಟ್, ವಿಡಿಯೋ ಡಿಸ್ಕ್, ಮಾರುಕಟ್ಟೆ ಹೀಗೆ ಎಲ್ಲವೂ ಎಬಿಸಿಎಲ್ ಕಾರ್ಯ ವ್ಯಾಪ್ತಿಯಾಗಿತ್ತು. 1996ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವ ಸುಂದರಿ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದ್ದು ಎಬಿಸಿಎಲ್..ಆದರೆ ಇದರಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಯಿತು. ಬ್ಯಾಂಕ್ ಸಾಲ ಏರತೊಡಗಿತ್ತು. ಮುಂಬೈನಲ್ಲಿದ್ದ ತಮ್ಮ ಪ್ರತೀಕ್ಷಾ ಬಂಗ್ಲೆಯನ್ನು ಮಾರಾಟ ಮಾಡಿದ್ದರು ಜೊತೆಗೆ ಇತರ ಎರಡು ಫ್ಲ್ಯಾಟ್ ಗಳನ್ನು ಮಾರಿದ್ದರು. ಆದರೂ ಸಾಲ ತೀರಲಿಲ್ಲವಾಗಿತ್ತು. ಈ ವೇಳೆ ಕೈಹಿಡಿದದ್ದು ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಅಮರ್ ಸಿಂಗ್ ಮತ್ತು ಸ್ಯಾಂಡಲ್ ವುಡ್ ನ ಅಂಬರೀಶ್!

2000ನೇ ಇಸವಿಯಲ್ಲಿಯೂ ಅಮಿತಾಬ್ ನಟಿಸಿದ ಸಿನಿಮಾಗಳು ಬಹುತೇಕ ಸೋಲತೊಡಗಿದ್ದವು. ನಂತರ ಕೌನ್ ಬನೇಗಾ ಕರೋಡ್ ಪತಿಯಂತಹ ಜನಪ್ರಿಯ ಕಾರ್ಯಕ್ರಮ, ಸಾಲು, ಸಾಲು ಸಿನಿಮಾಗಳ ಗೆಲುವು ಅಮಿತಾಬ್ ಅವರ ಕೈ ಹಿಡಿದಿದ್ದವು. ಅಲ್ಲಿಂದ ಹಲವು ಗೆಲುವು, ಸೋಲು, ನೋವು ನಲಿವುಗಳ ನಡುವೆಯೇ ಬ್ಲ್ಯಾಕ್, ಪಾ, ಪೀಕೂ ಸೇರಿದಂತೆ ವಿಭಿನ್ನ ಪಾತ್ರಗಳ ಮೂಲಕ ಅಮಿತಾಬ್ ಬಚ್ಚನ್ ಇಂದಿಗೂ ಜನಮಾನಸಲ್ಲಿ ಮೆಗಾಸ್ಟಾರ್ ಆಗಿ ಉಳಿದಿದ್ದಾರೆ..

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ