ಕಪ್ಪು ಬಂಗಾರ! ಔಷಧೀಯ ಗುಣ ಹೊಂದಿರೋ “ಕರಿಮೆಣಸು ಎಂಬ ದಿವ್ಯೌಷಧ”

Team Udayavani, Nov 15, 2019, 7:24 PM IST

ಸಾಂಬಾರ ಪದಾರ್ಥಗಳ ರಾಜ ಎಂದು ಕರೆಯಲ್ಪಡುವ ಕಾಳು ಮೆಣಸು ಅಥವಾ ಕರಿಮೆಣಸು ಒಂದು ದಿವ್ಯೌಷಧ. ಕಪ್ಪು ಬಂಗಾರ ಎನ್ನಲಾಗುವ ಈ ಸಂಬಾರ ಪದಾರ್ಥದಲ್ಲಿ ಅನೇಕ ರೀತಿಯ ಔಷಧೀಯ ಗುಣಗಳಿವೆ. ಇದನ್ನು ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಬಳಸುತ್ತಿದ್ದರೆ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು, ಹೊಟ್ಟೆ ಸಮಸ್ಯೆಗಳು ಸೇರಿದಂತೆ ಅನೇಕ ರೀತಿಯ ತೊಂದರೆಗಳಿಗೆ ಪರಿಹಾರ ಕಾಣಬಹುದು. ಅಷ್ಟೇ ಅಲ್ಲದೇ ಕೆಮ್ಮು, ಗಂಟಲು ನೋವು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕರಿಮೆಣಸಿನ ಕಷಾಯ, ಪಾನಕಗಳನ್ನು ಕೊಡುವುದೂ ಇದೆ ಹೀಗಾಗಿಯೇ ಕರಿ ಮೆಣಸನ್ನು ದಿವ್ಯೌಷಧ ಎನ್ನಲಾಗುತ್ತದೆ.

ಕಾಳುಮೆಣಸು ಆಹಾರಕ್ಕೆ ಕೇವಲ ಫ್ಲೇವರ್ ನೀಡುವುದು ಮಾತ್ರವಲ್ಲ. ಇನ್ನೂ ಸಾಕಷ್ಟು ಉಪಯೋಗಗಳು ಇದರಲ್ಲಿವೆ ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮೂಗು ಕಟ್ಟುವುದು ಮತ್ತು ಕೆಮ್ಮಿನಿಂದ ಮುಕ್ತಿ:
ಬ್ಯಾಕ್ಟೀರಿಯ ವಿರುದ್ಧ ಹೋರಾಡುವ ಗುಣ ಇದರಲ್ಲಿರುವುದರಿಂದ ಕೆಮ್ಮು ಮತ್ತು ನೆಗಡಿಗೆ ಕಾಳುಮೆಣಸು ಪರಿಹಾರ ನೀಡುತ್ತದೆ. ಇದರ ಬಿಸಿ ಮತ್ತು ಖಾರದ ಗುಣ ಶೀತದಿಂದ ಕಟ್ಟಿದ ಮೂಗನ್ನು ಕೂಡ ಸರಿಯಾಗಿಸುತ್ತದೆ. ರಸಂ ಮತ್ತು ಸೂಪ್ ಗಳ ಮೇಲೆ ಕಾಳುಮೆಣಸಿನ ಪುಡಿ ಸಿಂಪಡಿಸಿ ಸೇವಿಸುವುದರಿಂದ ಕೆಮ್ಮು ಮತ್ತು ನೆಗಡಿ ಕಡಿಮೆ ಆಗುತ್ತದೆ, ಮತ್ತು ಉಸಿರಾಟ ಸರಾಗವಾಗಿಸುತ್ತದೆ.

ಗಂಟಲು ನೋವನ್ನು ಗುಣಪಡಿಸಲು:
ಗಂಟಲು ನೋವನ್ನು ಗುಣಪಡಿಸಲು ಕರಿಮೆಣಸನ್ನು ಅಗೆಯುವುದು ಉತ್ತಮ. ಶ್ವಾಸಕೋಶ ಮತ್ತು ಉಸಿರಾಟದ ತೊಂದರೆಗಳಿದ್ದಲ್ಲಿ ಕರಿಮೆಣಸು ಮತ್ತು ಪುದೀನ ಚಹಾವನ್ನು ಕುಡಿಯಿರಿ. ಇದಲ್ಲದೆ, ಕರಿಮೆಣಸು, ತುಪ್ಪ ಮತ್ತು ಸಕ್ಕರೆ ಕ್ಯಾಂಡಿಯನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಬೆಳಿಗ್ಗೆ ಮತ್ತು ಸಂಜೆ ಒಂದು ಚಮಚವನ್ನು ತೆಗೆದುಕೊಳ್ಳಿ. ಇದರಿಂದ ಸಹ ಉಸಿರಾಟ ಸಮಸ್ಯೆಗೆ ಪರಿಹಾರ ಕಾಣಬಹುದು.

ಅಜೀರ್ಣಕ್ರಿಯೆ ಸಮಸ್ಯೆಗೆ :
ಕರಿಮೆಣಸು ಮತ್ತು ಕಪ್ಪು ಉಪ್ಪನ್ನು ಮೊಸರು ಅಥವಾ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದರಿಂದ ಅಜೀರ್ಣ ಸಮಸ್ಯೆಗೆ ಗುಡ್​ಬೈ ಹೇಳಬಹುದು. ಈ ರೀತಿಯ ಪಾನಿಯ ಕುಡಿಯುವುದರಿಂದ ಹೊಟ್ಟೆಯಲ್ಲಿ ಸೂಕ್ಷ್ಮಜೀವಿಗಳು ಸಾಯುತ್ತವೆ. ಹಾಗೆಯೇ ಹೊಟ್ಟೆ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಒಂದು ಕಪ್ ನೀರಿನಲ್ಲಿ ಅರ್ಧ ನಿಂಬೆ ರಸ, ಅರ್ಧ ಟೀ ಸ್ಪೂನ್ ಕರಿಮೆಣಸು ಮತ್ತು ಅರ್ಧ ಸ್ಪೂನ್ ಉಪ್ಪು ಬೆರೆಸಿ ಕುಡಿಯುವುದರಿಂದ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.

ಕರಿಮೆಣಸು ಹಲ್ಲುಗಳಿಗೆ ತುಂಬಾ ಉಪಯುಕ್ತವಾಗಿದೆ. ಕರಿಮೆಣಸನ್ನು ಉಪ್ಪಿನೊಂದಿಗೆ ಬೆರೆಸಿ ಬ್ರಷ್ ಮಾಡಬೇಕು. ಇದು ಹಲ್ಲುಗಳ ಹೊಳಪು ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ.

ತೂಕ ಕಳೆದುಕೊಳ್ಳಲು ಸಹಕರಿಸುತ್ತದೆ
ಕಾಳುಮೆಣಸು ಆಹಾರಕ್ಕೆ ಸರಿಯಾದ ಸಮೀಕರಣ (ಪೋಷಕಾಂಶಗಳನ್ನು ಹೊರತೆಗೆಯಲು) ಮಾಡಲು ಸಹಕರಿಸುತ್ತದೆ. ಇದರಲ್ಲಿ ಪ್ರಬಲವಾದ ಫೈಟೋನ್ಯೂಟ್ರಿಯೆಂಟ್ಸ್ ಅಂಶ ಇರುವುದರಿಂದ ಇದು ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸುತ್ತದೆ. ಜೊತೆಗೆ ಇದು ದೇಹದ ಕಲ್ಮಶವನ್ನು ಮತ್ತು ಹೆಚ್ಚುವರಿ ನೀರನ್ನು ಹೊರಹಾಕಲು ಮೂತ್ರ ವಿಸರ್ಜನೆ, ಬೆವರು ಇವುಗಳು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ದೇಹದ ತೂಕ ಕಡಿಮೆ ಆಗಲು ಸಹಾಯಕವಾಗುತ್ತದೆ. ಆಹಾರ ಪದಾರ್ಥಗಳ ಮೇಲೆ ಕಾಳುಮೆಣಸಿನ ಪುಡಿಯನ್ನು ಬಳಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ