“ಸೃಜನ್‌”ಶೀಲ ಮಾತು

Team Udayavani, Oct 11, 2019, 5:44 AM IST

ಕಿರುತೆರೆಯಲ್ಲಿ “ಮಜಾ ಟಾಕೀಸ್‌’ ಮೂಲಕ ಮೋಡಿ ಮಾಡಿದ್ದ ನಟ ಸೃಜನ್‌ ಲೋಕೇಶ್‌, ಈಗ ಹಿರಿತೆರೆಯಲ್ಲಿ ಮತ್ತೂಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ಸೃಜನ್‌ ನಾಯಕ ನಟನಾಗಿ ಅಭಿನಯಿಸಿ, ಜೊತೆಗೆ ತಮ್ಮದೇ ಹೋಂ ಬ್ಯಾನರ್‌ನಲ್ಲಿ ನಿರ್ಮಿಸಿರುವ “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಈ ವಾರ (ಅ.11ಕ್ಕೆ) ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕ ಸೃಜನ್‌ ಲೋಕೇಶ್‌ ಚಿತ್ರದ ವಿಶೇಷತೆಗಳ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.

ಸಾಮಾನ್ಯವಾಗಿ ಬಹುತೇಕರು ಚಿತ್ರ ಮಾಡುವುದು ಹಣ, ಹೆಸರು ಮಾಡುವುದಕ್ಕಾಗಿ. ಅದರೆ ಕೆಲವೇ ಕೆಲವರು ಮಾತ್ರ ಪ್ಯಾಷನ್‌ಗಾಗಿ ಚಿತ್ರ ಮಾಡುತ್ತಾರೆ. ಕೆಲವೇ ಕೆಲವು ಚಿತ್ರಗಳು ಮಾತ್ರ ಪ್ರೇಕ್ಷಕರಿಗಾಗಿ ಅಂಥ ಇರುತ್ತವೆ. “ಎಲ್ಲಿದ್ದೆ ಇಲ್ಲಿ ತನಕ’ ಅಂಥದ್ದೇ ಸಾಲಿಗೆ ಸೇರುವ ಚಿತ್ರ ಎನ್ನುವ ಭರವಸೆ ಮಾತು ಸೃಜನ್‌ ಲೋಕೇಶ್‌ ಅವರದ್ದು.
ಸೃಜನ್‌ ಇಂಥದ್ದೊಂದು ಮಾತನಾಡಲು ಬಲವಾದ ಕಾರಣವಿದೆ. ಬಾಲ್ಯದಿಂದಲೂ ಚಿತ್ರರಂಗವನ್ನು ಹತ್ತಿರದಿಂದ ಗಮನಿಸುತ್ತ, ಅಲ್ಲಿ ಕೆಲಸ ಮಾಡಿದ ಅನುಭವವಿರುವ ಸೃಜನ್‌ಗೆ ಎಂಥ ಚಿತ್ರಗಳನ್ನು ಪ್ರೇಕ್ಷಕರಿಗೆ ಕೊಡಬೇಕು ಎನ್ನುವರ ಬಗ್ಗೆ ಸ್ಪಷ್ಟತೆ ಇದೆ. ಈ ಬಗ್ಗೆ ಮಾತನಾಡುವ ಸೃಜನ್‌, “ಒಂದು ಒಳ್ಳೆಯ ಚಿತ್ರ ಮಾಡುತ್ತೇವೆ ಅಂಥ ಹೊರಟಾಗ ಕೆಲವೊಂದು ವಿಷಯಗಳನ್ನು ಬದಿಗಿಟ್ಟು ಯೋಚಿಸಬೇಕಾಗುತ್ತದೆ. ಅದರಲ್ಲೂ ಈ ಚಿತ್ರ ಎಷ್ಟು ದುಡ್ಡು ಮಾಡುತ್ತದೆ ಅನ್ನೋದನ್ನ ತಲೆಯಲ್ಲಿ ಇಟ್ಟುಕೊಳ್ಳಲೇ ಇಲ್ಲ. ಬ್ಯುಸಿನೆಸ್‌ ತಲೆಯಲ್ಲಿ ಇಟ್ಟುಕೊಂಡರೆ ಕ್ವಾಲಿಟಿ ಚಿತ್ರ ಕೊಡೋದಕ್ಕೆ ಸಾಧ್ಯವಿಲ್ಲ. ಚಿತ್ರದ ಕಾನ್ಸೆಪ್ಟ್ ಮೇಲೆ ನಮಗೆ ನಂಬಿಕೆಯಿದೆ. ಆಡಿಯನ್ಸ್‌ಗೆ ಮುಟ್ಟುವ ಹಾಗೆ, ಇಷ್ಟವಾಗುವ ಹಾಗೆ ಚಿತ್ರ ಮಾಡಿದ್ದೇವೆ. ಇವತ್ತು ಬೇರೆ ಬೇರೆ ಜಾನರ್‌ ಚಿತ್ರಗಳು ಬರುತ್ತಿರುವುದರಿಂದ, ಅವುಗಳಿಗಿಂತ ನಮ್ಮ ಚಿತ್ರ ಹೇಗೆ ಡಿಫ‌ರೆಂಟ್‌ ಆಗಿದೆ ಅನ್ನೋದು ಮುಖ್ಯ. ಒಟ್ಟಾರೆ ಆಡಿಯನ್ಸ್‌ಗೆ ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಕೊಡೋದಷ್ಟೇ ನಮ್ಮ ಉದ್ದೇಶ. ಇಲ್ಲಿಯವರೆಗೆ ಎಂಟರ್‌ಟೈನ್ಮೆಂಟ್‌ ಉದ್ದೇಶ ಇಟ್ಟುಕೊಂಡು ಮಾಡಿದ ಚಿತ್ರಗಳು ಸೋತಿದ್ದು ಕಡಿಮೆ. ಹಾಗಾಗಿ ನಮ್ಮ ಚಿತ್ರ ಎಷ್ಟು ಕಲೆಕ್ಷನ್‌ ಮಾಡುತ್ತದೆ ಅನ್ನೋದಕ್ಕಿಂತ, ಆಡಿಯನ್ಸ್‌ಗೆ ಎಷ್ಟು ಎಂಟರ್‌ಟೈನ್ಮೆಂಟ್‌ ಮಾಡುತ್ತೆ ಅನ್ನೋದೆ ಮುಖ್ಯ’ ಎಂಬುದು ಸೃಜನ್‌ ಮಾತು.

ಫ್ಯಾಮಿಲಿ ಎಂಟರ್‌ಟೈನರ್‌
“ಇವತ್ತು ಫ್ಯಾಮಿಲಿ ಆಡಿಯನ್ಸ್‌ ಥಿಯೇಟರ್‌ಗೆ ಬರೋದೆ ಎಂಟರ್‌ಟೈನ್ಮೆಂಟ್‌ಗಾಗಿ. ಹಾಗಾಗಿ ಥಿಯೇಟರ್‌ಗೆ ಬರುವ ಆಡಿಯನ್ಸ್‌ನ ಭರಪೂರ ಮನರಂಜಿಸುವುದು ನಮ್ಮ ಕೆಲಸ. ಸಾಮಾನ್ಯವಾಗಿ ಕಮರ್ಶಿಯಲ್‌ ಚಿತ್ರಗಳು ಅಂದ ತಕ್ಷಣ, ಅಲ್ಲಿ ಎಲ್ಲಾ ಅಂಶಗಳ ಮಿಶ್ರಣ ಇರುತ್ತದೆ. “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದಲ್ಲಿಯೂ ಆ ಎಲ್ಲಾ ಅಂಶಗಳನ್ನು ನಿರೀಕ್ಷಿಸಬಹುದು. ಆದರೆ ಅದನ್ನು ತೋರಿಸುವ ರೀತಿ ವಿಭಿನ್ನವಾಗಿದೆ. ಹಾಗಾಗಿ “ಎಲ್ಲಿ¨ªೆ ಇಲ್ಲಿ ತನಕ’ ಮನೆಮಂದಿ ಎಲ್ಲ ಕುಳಿತು ನೋಡಬಹುದಾದ, ನಕ್ಕು ಹಗುರಾಗಬಹುದಾದ, ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಪ್ಯಾಕೇಜ್‌ ಚಿತ್ರ’ ಅನ್ನೋದು ಸೃಜನ್‌ ಲೋಕೇಶ್‌ ಮಾತು. ಥಿಯೇಟರ್‌ನಿಂದ ಹೊರಬರುವ ಪ್ರತಿಯೊಬ್ಬರೂ ನಗುತ್ತಲೇ ಹೊರಬರಬೇಕು ಅನ್ನೋದು ನಮ್ಮ ನಮ್ಮ ತಂಡದ ಉದ್ದೇಶ’ ಎನ್ನುತ್ತಾರೆ.

ಇನ್ನು “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ ಪ್ರತಿ ಕೆಲಸದಲ್ಲಿಯೂ ಸೃಜನ್‌ ಭಾಗಿಯಾಗಿದ್ದಾರೆ. ಇಂದಿನ ಆಡಿಯನ್ಸ್‌ ಮನಸ್ಥಿತಿ ಗಮನದಲ್ಲಿ ಇಟ್ಟುಕೊಂಡು, ಎಲ್ಲೂ ಬೋರ್‌ ಆಗದಂತೆ ನಿರ್ದೇಶಕ ತೇಜಸ್ವಿ, ನಾಯಕ ಸೃಜನ್‌ ಮತ್ತು ಚಿತ್ರತಂಡ ಚಿತ್ರದ ದೃಶ್ಯಗಳನ್ನು ಹೆಣೆದಿದೆ. “ಎರಡು ಗಂಟೆಯ ಚಿತ್ರವನ್ನು ನೋಡಿದವರು, ಎರಡು ದಿನಗಳವರೆಗೂ ನಗಿಸುತ್ತಿರಬೇಕು. ಹಾಗೆ ಚಿತ್ರವನ್ನು ಕೊಡುವ ಪ್ರಯತ್ನ ಮಾಡಿದ್ದೇವೆ’ ಅನ್ನೋದು ಸೃಜನ್‌ ಲೋಕೇಶ್‌ ಭರವಸೆಯ ಮಾತು.

ಇನ್ನು ಇಲ್ಲಿಯವರೆಗೆ ಚಿತ್ರಗಳಲ್ಲಿ ನಟಿಸುತ್ತ ಬಂದಿರುವ ಸೃಜನ್‌ ಲೋಕೇಶ್‌ ಅವರಿಗೆ, ಚಿತ್ರ ನಿರ್ಮಾಣ ಹೊಸ ಜವಾಬ್ದಾರಿ ಮತ್ತು ಅನುಭವವನ್ನು ತಂದುಕೊಟ್ಟಿದೆಯಂತೆ. “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ ಮೂಲಕ ಚಿತ್ರ ನಿರ್ಮಾಣ ಮಾಡಬೇಕು ಎನ್ನುವ ಸೃಜನ್‌ ಅವರ ಬಹು ವರ್ಷಗಳ ಕನಸು ನನಸಾಗುತ್ತಿದೆ. ಈ ಬಗ್ಗೆ ಮಾತನಾಡುವ ಸೃಜನ್‌, “ನಟನೆಯ ಜೊತೆಗೆ, ನಿರ್ಮಾಣದ ಹೊಣೆಯನ್ನು ಅಷ್ಟೇ ಕಾಳಜಿಯಿಂದ ನಿರ್ವಹಿಸಿದ್ದೇನೆ. ನನಗೆ ಮಾತ್ರವಲ್ಲದೆ ನನ್ನ ತಂದೆ, ತಾಯಿ ಮತ್ತು ಮನೆಯವರಿಗೂ ನನ್ನನ್ನು ನಿರ್ಮಾಪಕನಾಗಿ ನೋಡುಯವ ಆಸೆಯಿತ್ತು. ಅದರ ಪ್ರತಿಫ‌ಲವೇ ಈ ಚಿತ್ರ. “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ ಮೂಲಕ ಅವರೆಲ್ಲರ ಕನಸು ಈಡೇರಿದೆ’ ಎನ್ನುತ್ತಾರೆ.

ಕಾಮಿಡಿ ಜೋರು…
ಇನ್ನು ಸೃಜನ್‌ ಲೋಕೇಶ್‌ ನಡೆಸಿಕೊಟುತ್ತಿದ್ದ ಜನಪ್ರಿಯ “ಮಜಾ ಟಾಕೀಸ್‌’ ಕಾರ್ಯಕ್ರಮದಲ್ಲಿ ಅವರಿಗೆ ಸಾಥ್‌ ನೀಡಿ ಮನರಂಜನೆ ನೀಡುತ್ತಿದ್ದ ಬಹುತೇಕರು “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದಲ್ಲೂ ಸೃಜನ್‌ಗೆ ಸಾಥ್‌ ನೀಡಿದ್ದಾರೆ. “ಮಜಾ ಟಾಕೀಸ್‌’ನಲ್ಲಿ ಆಡಿಯನ್ಸ್‌ ಎಂಜಾಯ್‌ ಮಾಡುತ್ತಿದ್ದ ಪಂಚಿಂಗ್‌ ಡೈಲಾಗ್ಸ್‌, ಅದೇ ಮನರಂಜನೆ ನೀಡುವ ಕಲಾವಿದರ ಕಾಮಿಡಿ ಕಮಾಲ್‌ ಈ ಚಿತ್ರದಲ್ಲೂ ಮುಂದುವರೆಯಲಿದೆ. ಇದು ಕೇವಲ ನನ್ನೊಬ್ಬನ ಚಿತ್ರವಲ್ಲ. ನಮ್ಮೆಲ್ಲರ ಚಿತ್ರ. ಕೇವಲ ಹೀರೋ, ಹೀರೋಯಿನ್‌ ಮಾತ್ರವಲ್ಲ ಚಿತ್ರದಲ್ಲಿ ಬರುವ ಪ್ರತಿ ಪಾತ್ರವೂ ನಗು ತರಿಸುತ್ತದೆ’ ಎನ್ನುತ್ತಾರೆ ಸೃಜನ್‌.

– ಜಿ.ಎಸ್‌.ಕಾರ್ತಿಕ ಸುಧನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ