ಮೂಲ ಸೌಲಭ್ಯ ಕೊರತೆ ; ಮಾರುಕಟ್ಟೆ ಸ್ಥಳಾಂತರ
ಏ.21ರಿಂದ ವ್ಯಾಪಾರ ಸಗಿತಕ್ಕೆ ನಿರ್ಧಾರ
Team Udayavani, Apr 19, 2020, 10:05 AM IST
ಬೆಂಗಳೂರು: ಮೂಲಸೌಲಭ್ಯ ಕೊರೆತೆಯ ಹಿನ್ನೆಲೆಯಲ್ಲಿ ತುಮಕೂರು ರಸ್ತೆಯ ನೆಲಮಂಗಲ ಸಮೀಪದ ದಾಸನಪುರ ಉಪ ಮಾರುಕಟ್ಟೆಯಲ್ಲಿ ಮಂಗಳವಾರದಿಂದ ವ್ಯಾಪಾರ ವಾಹಿವಾಟನ್ನು ಸ್ಥಗಿತಗೊಳಿಸಲು ನಿರ್ಧಾರಕ್ಕೆ ವರ್ತಕರು, ಹಮಾಲಿಗಳು ಮತ್ತು ಗುಮಾಸ್ತರು ನಿರ್ಧರಿಸಿದ್ದಾರೆ.
ಈ ಹಿಂದೆ ಕೋವಿಡ್ 19 ಭೀತಿಯ ಹಿನ್ನೆಲೆಯಲ್ಲಿ ಯಶವಂತಪುರದಿಂದ ನೆಲಮಂಗಲ ಸಮೀಪದ ದಾಸನಪುರದಲ್ಲಿರುವ ಉಪ ಮಾರು ಕಟ್ಟೆಗೆ ವ್ಯಾಪಾರವನ್ನು ಸ್ಥಳಾಂತರ ಮಾಡಲ್ಲಾಗಿತ್ತು. ಎಪಿಎಂಸಿ ನಿರ್ದೇಶಕರ ಮನವಿ ಮೇರೆಗೆ ಯಶವಂತಪುರ ಸುಮಾರು 600 ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರು ದಾಸನಪುರ ಉಪ ಮಾರುಕಟ್ಟೆಯಲ್ಲಿ ತಾತ್ಕಾಲಿಕ ವ್ಯಾಪಾರ ಮಾಡಲು ನಿರ್ಧರಿಸಿದ್ದರು. ಆದರೆ ದಾಸನಪುರ ಮಾರುಕಟ್ಟೆಯಲ್ಲಿ ಮೂಲಸೌಕರ್ಯದ ಕೊರತೆ ಎದುರಾಗಿದೆ.
ನೆಲಮಂಗಲದಿಂದ ದಾಸನಪುರ ಮಾರುಕಟ್ಟೆಗೆ ಹೋಗಲು ವಾಹನ ವ್ಯಾವಸ್ಥೆಯಿಲ್ಲ. ಜತೆಗೆ ನೀರಿನ ಸೌಕರ್ಯವಿಲ್ಲ. ಆ ಹಿನ್ನೆಲೆ ಯಲ್ಲಿಯೇ ರೈತರು ಮತ್ತು ಹಮಾಲಿನಗಳು ಕೂಡ ದಾಸನಪುರ ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ. ಜತೆಗೆ ಹಣ ಪಡೆಯಲು ಬ್ಯಾಕಿಂಗ್ ವ್ಯವಸ್ಥೆಯೇ ಇಲ್ಲ ಎಂದು ವರ್ತಕರು ದೂರಿದ್ದಾರೆ.
ಕ್ರಮ ಕೈಗೊಂಡಿಲ್ಲ: ದೂರದೂರುಗಳಿಂದ ಹೊರ ರಾಜ್ಯಗಳಿಂದ ವ್ಯಾಪಾರಿಗಳು, ರೈತರು ಬರುತ್ತಾರೆ. ಆದರೆ ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕೆಲಸ ಕೂಡ ನಡೆದಿಲ್ಲ. ಹೀಗಾಗಿಯೇ ವ್ಯಾಪಾರಿಗಳು ಕೂಡ ಕೋವಿಡ್ 19 ವೈರಸ್ ಸಂಬಂಧದ ಭಯ ಕಾಡತೊಡಗಿದೆ. ಮಾರಾಟ ಅಂಗಡಿಗಳು ಕೂಡ ಅಕ್ಕಪಕ್ಕಯಿವೆ, ಜೊತೆಗೆ ಕೊಳ್ಳುವ ಬರುವ ಸಾರ್ವಜನಿಕರು ಕೂಡ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಕೆಲಸ ನಡೆದಿಲ್ಲ. ಆ ಹಿನ್ನೆಲೆಯಲ್ಲಿಯೇ ಹಮಾನಿಗಳು ಕೂಡ ದಾಸನಪುರ ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ ಎಂದು ವರ್ತಕರು ಹೇಳಿದ್ದಾರೆ.
21ಕ್ಕೆ ಸ್ಥಗಿತ ಸಾಧ್ಯತೆ: ಕೆಲವು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಬಳಿ ಇನ್ನೂ ಆವಕ ಇದೆ. ಸೋಮವಾರದ ವೇಳೆಗೆ ಇದು ಮುಗಿಯಲಿದೆ. ಆ ಹಿನ್ನೆಲೆಯಲ್ಲಿಯೇ ಮಂಗಳವಾರ (ಏ.21) ದಿಂದ ವರ್ತಕರು ದಾಸನಪುರ ಉಪ ಮಾರುಕಟ್ಟೆ ಯನ್ನು ಸ್ಥಗಿತಗೊಳಿಸಲು ನಿರ್ಧ ರಿಸಿ ದ್ದಾರೆ. ಈ ಬಗ್ಗೆ ಈಗಾಗಲೇ ವರ್ತಕರು, ಹಮಾಲಿಗಳು ಹಾಗೂ ಗುಮಾಸ್ತರುಗಳು ಸ್ವಯಂ ಪ್ರೇರಿತವಾಗಿ ಚರ್ಚೆ ನಡೆಸಿ ಒಮ್ಮತ ವಾದ ತೀರ್ಮಾ ನಕ್ಕೆ ಬಂದಿದ್ದಾರೆ. ಈ ಹಿಂದೆ ಕೋವಿಡ್ 19 ಭೀತಿಯ ಹಿನ್ನೆಲೆಯಲ್ಲಿ ಅಧಿಕಾರಿ ಗಳು ಒಂದು ತಿಂಗಳ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಅವರ ಮನವಿಗೆ ನಾವು ಸ್ಪಂದಿಸಿದ್ದೇವು. ಆದರೆ ಇಲ್ಲಿ ಮೂಲಭೂತಗಳ ಸೌಲಭ್ಯಗಲೇ ಇಲ್ಲ. ಆ ಹಿನ್ನೆಲೆಯಲ್ಲಿ ವ್ಯಾಪಾರ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಗುಮಾಸ್ತರು ಹೇಳಿದ್ದಾರೆ.
ಯಶವಂತಪುರದಲ್ಲೇ ವ್ಯಾಪಾರ: ಕೋವಿಡ್ 19 ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ಏ. 14 ರವರೆಗೂ ಲಾಕ್ ಡೌನ್ ಗೆ ಕರೆ ನೀಡಿದೆ. ಒಂದು ವೇಳೆ ಲಾಕ್ ಡೌನ್ ತೆರೆವುಗೊಂಡರೆ ಯಶವಂತಪುರ ಎಪಿಎಂಸಿಯಲ್ಲಿಯೇ ವ್ಯಾಪಾರ ನಡೆಸುತ್ತೇವೆ. ಲಾಕ್ ಡೌನ್ ತೆರವುಗೊಳ್ಳಲಿದ್ದರೆ. ಮೇ.1ರವರೆಗೂ ಕಾದು ಆ ನಂತರ ಮತ್ತೆ ಯಶವಂತಪುರ ಮಾರುಕಟ್ಟೆಯಲ್ಲೇ ವ್ಯಾಪಾರ ಆರಂಭಿಸಲಾಗುವುದು ಎಂದು ವರ್ತಕರು ಹೇಳಿದ್ದಾರೆ.
ಮೂಲ ಸೌಕರ್ಯ ಮರೀಚಿಕೆ : ಮಾರುಕಟ್ಟೆ ಅಂದ ಮೇಲೆ ಕನಿಷ್ಠ ಮೂಲಸೌಕರ್ಯಗಳಾದರೂ ಇರಬೇಕು. ಅಲ್ಲಿ ಯಾವುದೇ ಸೌಲಭ್ಯಗಳು ಇಲ್ಲ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರ ವ್ಯವಸ್ಥೆಯೇ ಇಲ್ಲ. ಅಧಿಕಾರಿಗಳ ಮನವಿ ಮೇರೆಗೆ ನಾವು ಅಲ್ಲಿ ವ್ಯಾಪಾರ ಮಾಡಲುಒಪ್ಪಿಕೊಂಡಿದ್ದೆವು. ಆದರೆ ಮೂಲ ಸೌಕರ್ಯಗಳೇ ಇಲ್ಲದೆ ವ್ಯಾಪಾರ ಎಲ್ಲಿಂದ ಎಂದು ವರ್ತಕರು ಪ್ರಶ್ನಿಸಿದ್ದಾರೆ.
ಖರೀದಿದಾರರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು. ಆ ಹಿನ್ನೆಲೆಯಲ್ಲಿ ದಾಸನಪುರ ಉಪ ಮಾರುಕಟ್ಟೆಯಲ್ಲಿ ವ್ಯಾಪಾರ ಸ್ಥಗಿತಗೊಳಿಸುವ ತೀರ್ಮಾನಕ್ಕೆ ವ್ಯಾಪಾರಿಗಳು ಬಂದಿದ್ದಾರೆ. –ಉದಯಶಂಕರ್, ಆಲೂಗಡ್ಡೆ, ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ
ಕೆ.ಆರ್.ಮಾರುಕಟ್ಟೆಯನ್ನು ಸಿಂಗೇನ ಅಗ್ರಹಾರಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಿದೆ. ಆದರೆ, ಇಲ್ಲಿ ಸರಿಯಾದ ಮೂಲಸೌಕರ್ಯ ಇಲ್ಲದ ಹಿನ್ನೆಲೆಯಲ್ಲಿ ಈ ಭಾಗದ ಸ್ಥಳೀಯರಿಗೆ ಕೊರೊನಾ ಬಗ್ಗೆ ಆತಂಕ ಮನೆ ಮಾಡಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕು – ಸುಷ್ಮಾ, ಗ್ರಾಪಂ ಅಧ್ಯಕ್ಷರು ಹುಸ್ಕೂರು