ಅಯ್ಯಪ್ಪ ದೊರೆ ಕೊಲೆ ಆರೋಪಿಗೆ ಗುಂಡೇಟು

Team Udayavani, Oct 21, 2019, 3:09 AM IST

ಬೆಂಗಳೂರು: ಅಲಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಹಾಗೂ ರಾಜಕಾರಣಿ ಡಾ.ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಹಾಗೂ ಸುಪಾರಿ ಹಂತಕನಿಗೆ ಉತ್ತರ ವಿಭಾಗ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ. ಬ್ಯಾಟರಾಯನಪುರ ನಿವಾಸಿ ಗಣೇಶ್‌(37) ಗುಂಡೇಟು ತಿಂದವ. ಈತನ ಎಡಗಾಲಿಗೆ ಗುಂಡೇಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಾಗೆಯೇ ಬಂಧಿಸಲು ಹೋದಾಗ ಆರೋಪಿಯಿಂದ ಹಲ್ಲೆಗೊಳ್ಳಗಾದ ಪ್ರಭಾರ ಪಿಎಸ್‌ಐ ಯಲ್ಲಮ್ಮ ಹಾಗೂ ಕಾನ್‌ಸ್ಟೆಬಲ್‌ ಮಲ್ಲಿಕಾರ್ಜುನ್‌ ಬಲಕೈಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಸುಪಾರಿ ಪಡೆದುಕೊಂಡಿದ್ದ ಸೂರಜ್‌ ಸಿಂಗ್‌ನ ಆತ್ಮೀಯ ಸ್ನೇಹಿತನಾಗಿರುವ ಗಣೇಶ್‌ ಕೃತ್ಯದ ಸಂಚಿನಲ್ಲಿ ಪ್ರಮಖ ಪಾತ್ರವಹಿಸಿದ್ದ. ಅಲ್ಲದೆ, ಈತ ನಗರದ ಕೊಡಿಗೇಹಳ್ಳಿ, ಯಲಹಂಕ ಹಾಗೂ ಇತರೆ ಪೊಲೀಸ್‌ ಠಾಣೆಗಳಲ್ಲಿ ನಡೆದಿರುವ ಕೆಲ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಈಗಾಗಲೇ ಬಂಧನಕ್ಕೊಳಗಾಗಿರುವ ಸೂರಜ್‌ ಸಿಂಗ್‌ನ ವಿಚಾರಣೆ ಸಂದರ್ಭದಲ್ಲಿ ಗಣೇಶ್‌ ಬಗ್ಗೆ ಬಾಯಿಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಎರಡು ದಿನಗಳಿಂದ ಗಣೇಶ್‌ನ ಪೂರ್ವಾಪರ ಪರಿಶೀಲಿಸುತ್ತಿತ್ತು. ಆದರೆ, ಆರೋಪಿ ಪದೇ ಪದೇ ಜಾಗ ಬದಲಿಸುತ್ತಿದ್ದ. ಈ ಮಧ್ಯೆ ಶನಿವಾರ ತಡರಾತ್ರಿ ತನ್ನ ಸ್ನೇಹಿತನೊಬ್ಬನ ಜತೆ ಸಂಜನಗರದಲ್ಲಿರುವ ಕರ್ನಾಟಕ ಬೀಜ ನಿಗಮ ಮಂಡಳಿಯ ಗೋಡೌನ್‌ ಬಳಿಯ ಶೆಡ್‌ವೊಂದರಲ್ಲಿ ಮದ್ಯ ಸೇವಿಸಿ ಮಲಗಿದ್ದಾನೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು.

ಎಡಗಾಲಿಗೆ ಗುಂಡೇಟು: ಕೂಡಲೇ ಕಾರ್ಯಾಪ್ರವೃತ್ತರಾದ ಆರ್‌.ಟಿ.ನಗರ ಇನ್‌ಸ್ಪೆಕ್ಟರ್‌ ವಿಥುನ್‌ ಶಿಲ್ಪಿ ನೇತೃತ್ವದ ಪ್ರಭಾರ ಪಿಎಸ್‌ಐ ಯಲ್ಲಮ್ಮ ಹಾಗೂ ಸಿಬ್ಬಂದಿ ತಂಡ ಭಾನುವಾರ ಮುಂಜಾನೆ ಐದು ಗಂಟೆ ಸುಮಾರಿಗೆ ಸ್ಥಳಕ್ಕೆ ತೆರಳಿತ್ತು. ಶೆಡ್‌ನ‌ಲ್ಲಿದ್ದ ಆರೋಪಿಯನ್ನು ಬಂಧಿಸಲು ಮುಂದಾದ ಪಿಎಸ್‌ಐ ಯಲ್ಲಮ್ಮ ಹಾಗೂ ಕಾನ್‌ಸ್ಟೆಬಲ್‌ ಮಲ್ಲಿಕಾರ್ಜುನ್‌ರ ಬಲಗೈಗೆ ಆರೋಪಿ ಡ್ರ್ಯಾಗರ್‌ನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ.

ಈ ವೇಳೆ ಪಿಐ ವಿಥುನ್‌ ಶಿಲ್ಪಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ಗಣೇಶ್‌ ಮತ್ತೂಮ್ಮೆ ಹಲ್ಲೆಗೆ ಯತ್ನಿಸಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಗಣೇಶ್‌ನ ಎಡಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಗಾಯಗೊಂಡ ಇಬ್ಬರು ಪೊಲೀಸ್‌ ಸಿಬ್ಬಂದಿ ಹಾಗೂ ಆರೋಪಿಯನ್ನು ಚಿಕಿತ್ಸೆಗಾಗಿ ಬ್ಯಾಪಿಸ್ಟ್‌ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಬಾರ್‌ನಲ್ಲಿ ಕೊಲೆಗೆ ಸಂಚು: ಮೂರು ತಿಂಗಳ ಹಿಂದೆ ನಗರದ ಪ್ರತಿಷ್ಠಿತ ಬಾರ್‌ವೊಂದರಲ್ಲಿ ಸೂರಜ್‌ ಸಿಂಗ್‌, ಗಣೇಶ್‌ ಹಾಗೂ ಫ‌ಯಾಜ್‌, ಕಾಂತರಾಜು, ಸುನೀಲ್‌ ಅಯ್ಯಪ್ಪ ಕೊಲೆಗೆ ಸಂಚು ರೂಪಿಸಿದ್ದರು. ಅಯ್ಯಪ್ಪನ ಚಲನವಲನಗಳ ಮೇಲೆ ಗಣೇಶ್‌, ಫ‌ಯಾಜ್‌, ಕಾಂತರಾಜು, ಸುನೀಲ್‌ ಮೂರು ತಿಂಗಳಿಂದ ನಿಗಾವಹಿಸಿದ್ದರು. ಅಯ್ಯಪ್ಪನ ದಿನಚರಿ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಅಯ್ಯಪ್ಪ ದೊರೆ, ಆಗಾಗ್ಗೆ ಮನೆ ಸಮೀಪದಲ್ಲಿರುವ ಅವರ ಮಾವನ ಮನೆಗೆ ರಾತ್ರಿ ಹೊತ್ತು ಊಟಕ್ಕೆ ಹೋಗುತ್ತಾರೆ ಎಂಬ ವಿಚಾರವನ್ನು ಸಂಗ್ರಹಿಸಿದ್ದರು.

ಅದರ ಬೆನ್ನಲ್ಲೇ ಕೃತ್ಯಕ್ಕೂ ವಾರದ ಮೊದಲು ಮಾರುಕಟ್ಟೆಯಲ್ಲಿ ಐದು ಮಾರಕಾಸ್ತ್ರಗಳನ್ನು ಖರೀದಿ ಮಾಡಿ ತನ್ನ ಪಂಕ್ಚರ್‌ ಅಂಗಡಿಯಲ್ಲಿ ಇಟ್ಟುಕೊಂಡಿದ್ದ. ಅ.15ರ ತಡರಾತ್ರಿ 10.30ರ ಸುಮಾರಿಗೆ ಎಚ್‌ಎಂಟಿ ಮೈದಾನಕ್ಕೆ ಬಂದಿಳಿದ ಐವರು ಆರೋಪಿಗಳು ಅಲ್ಲಿಯೇ ಅವಿತುಕೊಂಡು ಅಯ್ಯಪ್ಪ ದೊರೆ ವಾಯುವಿಹಾರ ಮಾಡುವಾಗ ಅವರನ್ನು ಹತ್ಯೆಗೈದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

20 ಲಕ್ಷ ರೂ. ನಗದು, ಕಾರಿಗಾಗಿ ಸುಪಾರಿ ಒಪ್ಪಿದ ಗಣೇಶ್‌: ಈ ಮೊದಲು ಮುನಿರೆಡ್ಡಿ ಪಾಳ್ಯದಲ್ಲಿ ಪಂಕ್ಚರ್‌ ಅಂಗಡಿ ನಡೆಸುತ್ತಿದ್ದ ಗಣೇಶ್‌, ಸೂರಜ್‌ ಸಿಂಗ್‌ನ ಆತ್ಮೀಯ ಸ್ನೇಹಿತರಾಗಿದ್ದಾನೆ. ಗಣೇಶ್‌ ಇತ್ತೀಚೆಗಷ್ಟೇ ತನ್ನ ಕುಟುಂಬವನ್ನು ಬ್ಯಾಟರಾಯನಪುರಕ್ಕೆ ಸ್ಥಳಾಂತರಿಸಿದ್ದ. ಅಲ್ಲಿಯೇ ಪಂಕ್ಚರ್‌ ಅಂಗಡಿಯನ್ನು ನಡೆಸುತ್ತಿದ್ದ. ಈ ಮಧ್ಯೆ ಮೂರು ತಿಂಗಳ ಹಿಂದೆ ಗಣೇಶ್‌ನನ್ನು ಭೇಟಿಯಾಗಿದ್ದ ಸೂರಜ್‌ ಸಿಂಗ್‌, “ಎಷ್ಟು ದಿನಗಳು ಪಂಕ್ಚರ್‌ ಅಂಗಡಿ ನಡೆಸಿಕೊಂಡು ಜೀವನ ನಡೆಸುತ್ತಿಯಾ? ಒಳ್ಳೆ ಯೋಜನೆಯೊಂದನ್ನು ಸಿದ್ದಪಡಿಸಿದ್ದೇನೆ.

ಒಂದು ವೇಳೆ ಯಶಸ್ವಿಯಾದರೆ ಲಕ್ಷಗಟ್ಟಲೇ ಹಣ ಸಂಪಾದಿಸಬಹುದು ಎಂದು ಆಮಿಷವೊಡ್ಡಿ. ಅಲ್ಲದೆ, ಒಂದು ಹೊಸ ಕಾರು ಕೊಡಿಸುತ್ತೇನೆ. ಅದರಿಂದ ಊಬರ್‌ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡು ಕಾರು ಓಡಿಸಬಹುದು ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ 20 ಲಕ್ಷ ರೂ. ಹಣ ಹಾಗೂ ಕಾರಿನ ಆಸೆಗೆ ಬಿದ್ದು ಕೊಲೆಗೈಯಲು ಗಣೇಶ್‌ ಸಂಚು ರೂಪಿಸಿದ್ದ. ಅಲ್ಲದೆ, ತನ್ನ ಸ್ನೇಹಿತರಾದ, ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಫ‌ಯಾಜ್‌, ಕಾಂತರಾಜು, ಸುನೀಲ್‌ಗೆ ತಲಾ 20 ಲಕ್ಷ ರೂ. ಕೊಡುವುದಾಗಿ ಗಣೇಶ್‌ ಭರವಸೆ ನೀಡಿದ್ದ ಎಂದು ಪೊಲೀಸರು ಹೇಳಿದರು.

ವಿನಯ್‌ ಎಂಬಾತನ ಬಂಧನ: ಇದೇ ವೇಳೆ ಕೃತ್ಯದ ದಿನ ರಾತ್ರಿ ಸೂರಜ್‌ ಸಿಂಗ್‌, ಗಣೇಶ್‌ ಸೇರಿ ಐವರು ಆರೋಪಿಗಳನ್ನು ಕಾರಿನಲ್ಲಿ ಘಟನಾ ಸ್ಥಳಕ್ಕೆ ಕಾರಿನಲ್ಲಿ ಬಿಟ್ಟು ಹೋಗಿದ್ದ ವಿನಯ್‌ ಎಂಬಾತನನ್ನು ಬಂಧಿಸಲಾಗಿದೆ. ಗಣೇಶ್‌ ಮನವಿ ಮೇರೆಗೆ ಅಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಸ್ಥಳಕ್ಕೆ ಕಾರಿನಲ್ಲಿ ಬಿಟ್ಟು ಹೋಗಿದ್ದ. ಆದರೆ, ಆತನಿಗೆ ಕೊಲೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಪೊಲೀಸರು ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ