ಹಿಂಗಾರು, ಮುಂಗಾರಿನಲ್ಲಿ ಬತ್ತುತ್ತಿದೆ ಭತ್ತದ ಬೇಸಾಯ

ಅವಿಭಜಿತ ದ.ಕ.ದಲ್ಲಿ ಕ್ಷೀಣಿಸುತ್ತಿವೆ ಗದ್ದೆಗಳು, ತೋಟಗಾರಿಕೆ ಬೆಳೆ ವೃದ್ಧಿ

Team Udayavani, Dec 4, 2019, 5:23 AM IST

ಕೋಟ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಿಂಗಾರು ಕೃಷಿ ಚಟುವಟಿಕೆ ಬಿರುಸುಗೊಳ್ಳುತ್ತಿದೆ. ಭತ್ತ, ದ್ವಿದಳ ಧಾನ್ಯಗಳ ಬಿತ್ತನೆಗೆ ರೈತ ತಯಾರಾಗುತ್ತಿದ್ದಾನೆ. ಪ್ರಸ್ತುತ ಇರುವ ಮಳೆಯ ವಾತಾವರಣ ಪೂರಕವಾಗಿದೆ. ಆದರೆ ಇತ್ತೀಚೆಗೆ ಉಭಯ ಜಿಲ್ಲೆಗಳಲ್ಲಿ ಮುಂಗಾರು- ಹಿಂಗಾರಿನಲ್ಲಿ ಭತ್ತ ಬೆಳೆಯುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಭಾರೀ ಕುಸಿತ ಕಾಣುತ್ತಿದೆ.

ದಶಕಗಳ ಹಿಂದೆ ಉಳುಮೆ, ನಾಟಿ, ನೀರಾವರಿಗೆ ಸಮರ್ಪಕವಾದ ವ್ಯವಸ್ಥೆ ಇಲ್ಲದಿದ್ದರೂ ಸಾಂಪ್ರದಾಯಿಕ ವಿಧಾನದಲ್ಲಿ ಸಾವಿರಾರು ಹೆಕ್ಟೇರ್‌ಗಳಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ ಇಂದು ಆಧುನಿಕ ಸೌಲಭ್ಯಗಳಿದ್ದರೂ ಕಾರ್ಮಿಕರ ಕೊರತೆ, ಉತ್ಪಾದನೆ ವೆಚ್ಚ ಏರಿಕೆ, ನೀರಾವರಿ ಸಮಸ್ಯೆ, ವಿದ್ಯುತ್‌ ಸಮಸ್ಯೆ, ಗದ್ದೆಗಳು ಕೃಷಿಯೇತರ ಭೂಮಿಯಾಗಿ ಪರಿವರ್ತನೆಗೊಂಡಿ ರುವುದರಿಂದ ಭತ್ತದ ಬೇಸಾಯ ಕುಸಿಯುತ್ತಿದೆ ಮತ್ತು ಆ ಸ್ಥಾನವನ್ನು ತೋಟಗಾರಿಕೆ ಬೆಳೆಗಳು ಆವರಿಸುತ್ತಿವೆ.

ಹಿಂಗಾರು, ಮುಂಗಾರು ಕ್ಷೀಣ
ಆರೇಳು ವರ್ಷಗಳ ಹಿಂದೆ ದ.ಕ. ಜಿಲ್ಲೆಯಲ್ಲಿ ಎರಡು ಅವಧಿಗಳಲ್ಲಿ 34 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿತ್ತು. 2018-19ನೇ ಸಾಲಿಗೆ ಇದು 26,560 ಹೆಕ್ಟೇರ್‌ಗೆ ಕುಸಿದಿದ್ದು, ಸುಮಾರು 7,440 ಹೆಕ್ಟೇರ್‌ ಪ್ರದೇಶದಿಂದ ಭತ್ತ ಮಾಯವಾಗಿದೆ. ಉಡುಪಿ ಜಿಲ್ಲೆಯಲ್ಲೂ 10 ವರ್ಷಗಳಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಿಂದ ಭತ್ತ ಅಳಿದಿದೆ.

ತೋಟಗಾರಿಕೆ ಬೆಳೆ ವೃದ್ಧಿ
ಭತ್ತ ಬೇಸಾಯ ಕ್ಷೀಣಗೊಂಡಂತೆ ತೋಟಗಾರಿಕೆ ಬೆಳೆಗಳು ವೃದ್ಧಿಯಾ ಗುತ್ತಿವೆ. ಉಡುಪಿ ಜಿಲ್ಲೆಯಲ್ಲಿ 2015- 16ನೇ ಸಾಲಿನಲ್ಲಿ 55,179 ಹೆಕ್ಟೇರ್‌ಗಳಷ್ಟಿದ್ದ ತೋಟಗಾರಿಕೆ ಬೆಳೆ 2018- 19ನೇ ಸಾಲಿಗೆ 73,002 ಹೆಕ್ಟೇರ್‌ಗೆರಿದೆ. ದ.ಕ.ದಲ್ಲೂ ಭತ್ತದಿಂದ ವಿಮುಖವಾದ ರೈತರು ತೋಟಗಾರಿಕೆ ಬೆಳೆಗಳತ್ತ ಮುಖ ಮಾಡಿದ್ದಾರೆ.

ಈ ಬಾರಿ ಅಕ್ಟೋಬರ್‌ – ನವೆಂಬರ್‌ ತನಕ ಮಳೆಯಾಗಿರುವುದು ಮತ್ತು ಪ್ರಸ್ತುತ ತೇವಾಂಶ ವಿರುವುದರಿಂದ ಹಿಂಗಾರು ಭತ್ತದ ಬೆಳೆಗೆ ಪೂರಕ ವಾತಾವರಣವಿದೆ. ಒಟ್ಟಾರೆ ಅಂಕಿಅಂಶದ ಪ್ರಕಾರ ಭತ್ತ ಬೆಳೆಯುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.
– ಕೆಂಪೇಗೌಡ,  ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಉಡುಪಿ 

ಹಿಂಗಾರು ಭತ್ತದ ಬಿತ್ತನೆ ಈಗಾಗಲೇ ಆರಂಭಗೊಂಡಿದೆ. ಬೇರೆಬೇರೆ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ಭತ್ತದ ಬೇಸಾಯ ಕುಸಿಯುತ್ತಿದೆ.
– ಸೀತಾ, ಜಂಟಿ ಕೃಷಿ ನಿರ್ದೇಶಕರು, ದ.ಕ. ಜಿಲ್ಲೆ

-  ರಾಜೇಶ ಗಾಣಿಗ ಅಚ್ಲಾಡಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ