ಐಫೋನ್ 11 ಸಿರೀಸ್ ಇಂದು ಮಾರುಕಟ್ಟೆಗೆ : ಏನೆಲ್ಲಾ ಫೀಚರ್ಸ್ ಇರಲಿದೆ?

ಮಾರುಕಟ್ಟೆಗೆ ಬರಲಿದೆ ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್ ಮಾದರಿಗಳು

Team Udayavani, Sep 10, 2019, 6:52 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ವಿಶ್ವದ ಪ್ರತಿಷ್ಠಿತ ಮೊಬೈಲ್ ಫೋನ್ ತಯಾರಿಕಾ ಕಂಪೆನಿಯಾಗಿರುವ ಆ್ಯಪಲ್ ನ ಐಫೋನ್ ಸರಣಿಯಲ್ಲಿ ಬಹುನಿರೀಕ್ಷಿತ ಹೊಸ ಮಾದರಿ ಇಂದು ಬಿಡುಗಡೆಗೊಳ್ಳಲಿದೆ. ಕೆಮರಾ ಫೀಚರ್ ಗಳು ಮತ್ತು ಹಾರ್ಡ್ ವೇರ್ ನಲ್ಲಿ ಗಮನಾರ್ಹ ಬದಲಾವಣೆಗಳನ್ನು ಒಳಗೊಂಡಿರುವ ಐಫೋನ್-11 ಸಿರೀಸ್ ಇದಾಗಿರಲಿದೆ.

ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್ ಎಂಬ ಹೆಸರಿನ ಈ ಮಾದರಿಗಳಿಗೆ ಯಾವ ಹೆಸರು ಘೋಷಣೆಯಾಗಲಿದೆ ಎಂಬ ಕುತೂಹಲವು ಟೆಕ್ ಪ್ರಿಯರದ್ದಾಗಿದೆ. ಐಫೋನ್ ಎಕ್ಸ್.ಆರ್., ಎಕ್ಸ್.ಎಸ್., ಮತ್ತು ಎಕ್ಸ್.ಎಸ್. ಮ್ಯಾಕ್ಸ್ ಮಾದರಿಗಳಿಗೆ ಬದಲಾಗಿ ಈ ಹೊಸ ಮಾದರಿಗಳನ್ನು ಆ್ಯಪಲ್ ಪರಿಚಯಿಸುತ್ತಿದೆ.

ಈ ನೂತನ ಐಫೋನ್ 11 ಸರಣಿ ಮಾದರಿಗಳಲ್ಲಿ ನಿರೀಕ್ಷಿಸಲಾಗುತ್ತಿರುವ ಕೆಲವೊಂದು ಪ್ರಮುಖ ಫೀಚರ್ ಗಳು:

ಈ ಮಾದರಿಗಳಲ್ಲಿ ಎಲ್ಲರೂ ನಿರೀಕ್ಷಿಸುತ್ತಿರುವ ಬಹುದೊಡ್ಡ ಅಂಶವೆಂದರೆ ಕೆಮರಾ ಮೇಲ್ದರ್ಜೆಗೇರಿಸುವಿಕೆ. ಈ ಬಾರಿ ಆ್ಯಪಲ್ ತನ್ನ ಮೊಬೈಲ್ ಗಳಲ್ಲಿನ ಕೆಮರಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂಬ ನಿರೀಕ್ಷೆ ಎಲ್ಲರದ್ದಾಗಿದೆ. 5.8 ಇಂಚಿನ ಐ-ಫೋನ್ 11 ಪ್ರೊ ಮತ್ತು 6.5 ಇಂಚಿನ ಐ-ಫೋನ್ 11 ಪ್ರೊ ಮ್ಯಾಕ್ಸ್ ಗಳಲ್ಲಿ ಮೂರು ಕೆಮರಾ ವ್ಯವಸ್ಥೆಗಳಿರುವ ನಿರೀಕ್ಷೆ ಇದೆ. ಐಫೋನ್ ಎಕ್ಸ್.ಆರ್.ಗೆ ಪರ್ಯಾಯವಾಗಿ ಬರಲಿರುವ ಐಫೋನ್ 11ನಲ್ಲ ಎರಡು ಕೆಮರಾಗಳಿರಲಿವೆ.

ಇನ್ನು ಈ ನೂತನ ಮಾದರಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಕೆಮರಾ ಸೌಲಭ್ಯಗಳ ಕುರಿತಾಗಿಯೇ ಹೆಚ್ಚಿನ ಮಾಹಿತಿಗಳನ್ನು ಕಂಪೆನಿ ನೀಡುವ ನಿರೀಕ್ಷೆ ಇದೆ. ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಸೌಲಭ್ಯ ಇರುವ ನಿರೀಕ್ಷೆ ಇದೆ. ಉಳಿದ ಮೊಬೈಲ್ ಕಂಪೆನಿಗಳು ಕೆಮರಾ ಫೀಚರ್ ಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುತ್ತಿರುವುದರಿಂದ ಆ್ಯಪಲ್ ಸಹ ತನ್ನ ನೂತನ ಮಾದರಿಗಳಲ್ಲಿ ಕೆಮರಾ ಫೀಚರ್ ಗಳನ್ನು ಅಪ್ ಗ್ರೇಡ್ ಮಾಡುವ ನಿರೀಕ್ಷೆ ಇದೆ. ಅದರಲ್ಲೂ ಕಡಿಮೆ ಬೆಳಕಿನ ಫೊಟೋಗ್ರಾಫಿ ಫೀಚರ್ ಸುಧಾರಿಸುವ ಸಾಧ್ಯತೆಗಳಿವೆ.

ಐಫೋನ್ 11ನಲ್ಲಿ ಎಲ್.ಸಿ.ಡಿ. ಡಿಸ್ ಪ್ಲೇ ಇದ್ದರೆ ಹೈ –ಎಂಡ್ ಐ-ಫೊನ್ 11 ಪ್ರೊ ಮತ್ತು ಐ-ಫೋನ್ 11 ಪ್ರೊ ಮ್ಯಾಕ್ಸ್ ಗಳಲ್ಲಿ OLED (ಆರ್ಗಾನಿಕ್ ಲೈಟ್ ಎಮಿಟಿಂಗ್ ಡಯೋಡ್ಸ್) ಡಿಸ್ ಪ್ಲೇ ವ್ಯವಸ್ಥೆಗಳನ್ನು ಕಂಪೆನಿ ಒದಗಿಸುವ ನಿರೀಕ್ಷೆ ಐ-ಫೋನ್ ಬಳಕೆದಾರರದ್ದಾಗಿದೆ. ಇನ್ನು ಮೊಬೈಲ್ ನ ಕಾರ್ಯನಿರ್ವಹಣೆ ಇನ್ನಷ್ಟು ಉತ್ತಮಗೊಳ್ಳುವ ನಿರೀಕ್ಷೆ ಇದೆ. ಹೊಸ ಎ13 ಪ್ರೊಸೆಸರ್ ಗಳು ಫೋನ್ ನ ಕಾರ್ಯನಿರ್ವಹಣೆಯನ್ನು ಇನ್ನಷ್ಟು ಉತ್ತಮಗೊಳ್ಳುವ ನಿರೀಕ್ಷೆ ಇದೆ.

ಈ ನೂತನ ಮಾದರಿಗಳಲ್ಲಿ ಗ್ರಾಹಕರು ನಿರೀಕ್ಷಿಸುತ್ತಿರುವ ಇನ್ನೊಂದು ಪ್ರಮುಖ ಸೌಲಭ್ಯವೆಂದರೆ ಫೇಷಿಯಲ್ ರೆಕಗ್ನಿಷನ್ ಸೌಲಭ್ಯವನ್ನು ಇನ್ನಷ್ಟು ಸುಧಾರಿತ ರೂಪದಲ್ಲಿ ನೀಡುವುದು. ಇನ್ನಷ್ಟು ವಿಸ್ತಾರ ರೇಂಜ್ ನ ಫೇಷಿಯಲ್ ರೆಕಗ್ನಿಷನ್ ಸೌಲಭ್ಯದ ಮೂಲಕ ನಿಮ್ಮ ಫೋನು ನೆಲದ ಮೇಲೆ ಅಥವಾ ಮೇಜಿನ ಮೇಲೆ ಪ್ಲ್ಯಾಟ್ ಆಗಿ ಇರುವಂತೆಯೂ ನಿಮ್ಮ ಮುಖವನ್ನು ಗುರುತಿಸಬಹುದಾಗಿರುವ ಸೌಲಭ್ಯ ದೊರಕುವ ನಿರೀಕ್ಷೆ ಇದೆ.

ಈ ಹಿಂದೆ ಹಬ್ಬಿದ್ದ ಒಂದು ಸುದ್ದಿಯ ಪ್ರಕಾರ ಈ ಬಾರಿ ಐಫೋನ್ ನವೀನ ಮಾದರಿಗಳಲ್ಲಿ ರಿಸರ್ವ್ ವಯರ್ ಲೆಸ್ ಚಾರ್ಜಿಂಗ್ ಸೌಲಭ್ಯ ಇರಬುದೆಂಬ ಗುಮಾನಿ ಇತ್ತು ಆದರೆ ಈ ಸುದ್ದಿಯನ್ನು ಆ್ಯಪಲ್ ಅನಾಲಿಸ್ಟ್ ಮಿಂಗ್ – ಚಿ-ಕ್ಯೂ ಅವರು ನಿರಾಕರಿಸಿದ್ದಾರೆ ಮತ್ತು ಆ್ಯಪಲ್ ಪೆನ್ಸಿಲ್ ಸಪೋರ್ಟ್ ಸಹ ಹೊಸ ಮಾದರಿಗಳಲ್ಲಿ ಲಭ್ಯವಿರುವುದಿಲ್ಲ.

ಉನ್ನತ ಶ್ರೇಣಿಯ ಐ-ಫೋನ್ ಪ್ರೊ ಮತ್ತು ಐ-ಫೋನ್ 11 ಪ್ರೊ ಮ್ಯಾಕ್ಸ್ ಮಾದರಿಗಳಲ್ಲಿ ವೇಗವಾಗಿ ಚಾರ್ಜ್ ಆಗುವ ಸೌಲಭ್ಯ ಇರುವ ನಿರೀಕ್ಷೆಯನ್ನು ವಿಶ್ಲೇಷಕರು ಹೊರಗೆಡಹಿದ್ದಾರೆ. 5.8 ಇಂಚು ಮತ್ತು 6.5 ಇಂಚಿನ ಐ-ಫೋನ್ ಗಳಲ್ಲಿ 18ವ್ಯಾಟ್ ವೇಗದ ಚಾರ್ಜರ್ ಲಭ್ಯವಿರುವ ನಿರೀಕ್ಷೆ ಇದೆ. ಆದರೆ ಐ-ಫೊನ್ 11 ಮಾದರಿಯಲ್ಲಿ ಈ ಹಿಂದಿನ ಎಕ್ಸ್.ಆರ್. ನಲ್ಲಿದ್ದಂತೆಯೇ 5ವ್ಯಾಟ್ ಚಾರ್ಜಿಂಗ್ ಸೌಲಭ್ಯವೇ ಇರಲಿದೆ ಎನ್ನಲಾಗುತ್ತಿದೆ.

ಇನ್ನು ಈ ಬಾರಿ ನೂತನ ಮಾದರಿಯ ಐಫೋನ್ ಗಳು ಹೊಸ ಬಣ್ಣಗಳಲ್ಲಿ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆ ಇದೆ. ಈಗಾಗಲೇ ಕಂಪೆನಿಯು ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಆ್ಯಪಲ್ ಲೋಗೋವನ್ನು ವಿವಿಧ ಬಣ್ಣಗಳಲ್ಲಿ ಮುದ್ರಿಸಿರುವುದು ಐಫೋನ್ ಪ್ರಿಯರಲ್ಲಿ ಕುತೂಹಲ ಮೂಡಲು ಕಾರಣವಾಗಿದೆ. ಹಸಿರು ಮತ್ತು ನೇರಳೆ ಬಣ್ಣಗಳಲ್ಲಿಯೂ ಸಹ ಹೊಸ ಐಫೋನ್ ಗಳು ಲಭ್ಯವಾಗುವ ನಿರೀಕ್ಷೆ ಇದೆ.

ಭಾರತೀಯ ಕಾಲಮಾನ ಮಂಗಳವಾರ ರಾತ್ರಿ 10.30ಕ್ಕೆ ಕಂಪೆನಿಯ ಕೇಂದ್ರ ಕಛೇರಿಯಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಹೊಸ ಮಾಡಲ್ ಗಳು ಅನಾವರಣಗೊಳ್ಳಲಿವೆ. ಮತ್ತು ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮದ ನೇರಪ್ರಸಾರ ಯೂ-ಟ್ಯೂಬ್ ನಲ್ಲಿ ಲಭ್ಯವಾಗಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ