ಸಮರ್ಪಕ ಮೂಲ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಗಮನ ಹರಿಸಲಿ 

Team Udayavani, Oct 2, 2019, 3:22 AM IST

ನಗರ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ನಿಮ್ಮ

ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವತ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು. ಈ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ. ವೈಯಕ್ತಿಕ ಸಮಸ್ಯೆ, ಕಾನೂನು ವ್ಯಾಜ್ಯದ ದೂರು ಅಥವಾ ವಿವಾದದಲ್ಲಿರುವ ವಿಷಯಗಳನ್ನು ಪರಿಗಣಿಸುವುದಿಲ್ಲ. ನಾಗರಿಕರು ತಮ್ಮ ಪ್ರದೇಶದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು ಪೂರಕವೆನಿಸುವ ಒಂದು ಫೋಟೋ ಜತೆ ಹೆಸರು, ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಅಂಚೆ, ಇಮೇಲ್‌ ಅಥವಾ ವಾಟ್ಸಪ್‌ ಮೂಲಕ ಕಳುಹಿಸಬಹುದು. ಅರ್ಹ ದೂರುಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಸುದಿನ ಮಾಡಲಿದೆ.

ಕಂಬಳಗದ್ದೆಯಾದ ಜಪ್ಪಿನಮೊಗರು ರಸ್ತೆ
ಜಪ್ಪಿನಮೊಗರು-ಕಡೆಕಾರಿಗೆ ಹಾದು ಹೋಗುವ ರಸ್ತೆ ತೀವ್ರ ಹದಗೆಟ್ಟಿದ್ದು ಕಂಬಳದ ಗದ್ದೆಯಾಗಿ ಮಾರ್ಪಟ್ಟಿದೆ. ಪ್ರತಿನಿತ್ಯ ಸಾವಿರಾರು ಜನರು, ನೂರಾರು ವಾಹನಗಳು, ಶಾಲಾಮಕ್ಕಳು ಈ ರಸ್ತೆಯಲ್ಲಿ ಹಾದು ಹೋಗಬೇಕಾದರೆ ಪ್ರಾಣವನ್ನೆ ಕೈಯಲ್ಲಿಹಿಡಿದು ಓಡಾಡಬೇಕಾಗಿದೆ. ಇದು ರಾಷ್ಟ್ರೀಯ ಹೆದ್ದಾರಿಗೆ ಮತ್ತು ಪ್ರಸಿದ್ಧ ಕಡೆಕಾರು ಮಲ್ಲಿಕಾರ್ಜುನ ದೇವಸ್ಥಾನ, ಗುರುವನ ದೇವಸ್ಥಾನದ ಸಂಪರ್ಕಿಸುವ ರಸ್ತೆಯಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ವಹಿಸಿರುವುದು ವಿಪರ್ಯಾಸ. ಆದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು ಈ ರಸ್ತೆಯನ್ನು ದುರಸ್ತಿಪಡಿಸಬೇಕಾಗಿದೆ.
-ನಾಗರಿಕರು,ಕಡೆಕಾರು, ಜಪ್ಪಿನಮೊಗರು.

ರಸ್ತೆಯಲ್ಲೇ ಕುಡಿಯುವ ನೀರು
ಕಳೆದ ಬೇಸಗೆಯಲ್ಲಿ ನಗರದಲ್ಲಿ ಉಂಟಾದ ಕುಡಿಯುವ ನೀರಿನ ಸಮಸ್ಯೆ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಸರಿಯಾಗಿಯೇ ಪಾಠ ಕಲಿಸಿತ್ತು. ನೀರಿನ ಮಹತ್ವವನ್ನು ಆ ಸಮಯದಲ್ಲಿ ಭಾಗಶಃ ಜನರು ಅರಿತುಕೊಂಡಿದ್ದರು. ಟ್ಯಾಂಕರ್‌ಗಳಿಗೆ ದುಬಾರಿ ಬೆಲೆ ನೀಡಿ ಕುಡಿಯುವ ನೀರು ತರಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಇದರ ಅನುಭವ ಮಾಸುವ ಮೊದಲೇ ನಗರದ ವಿವಿಧ ಭಾಗಗಳಲ್ಲಿ ಕುಡಿಯುವ ನೀರು ಪೋಲು ಮಾಡಲಾಗುತ್ತಿದೆ. ನಗರದ ಬಂಟ್ಸ್‌ ಹಾಸ್ಟೆಲ್‌ನ ಸಿವಿ ನಾಯಕ್‌ ಸಭಾಂಗಣದ ಸಮೀಪ ಕುಡಿಯುವ ನೀರಿನ ಪೈಪ್‌ ಒಡೆದು ನೀರು ಪೋಲಾಗುತ್ತಿದೆ. ಹತ್ತು ದಿನಗಳಿಂದ ಇದೇ ಸ್ಥಿತಿ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ.
-ಮನೋಹರ್‌ ಮಲ್ಯ, ಕದ್ರಿ

ಬಸ್‌ ನಿಲ್ಲುವಲ್ಲಿ ನಿಲ್ದಾಣವಿಲ್ಲ, ನಿಲ್ದಾಣದಲ್ಲಿ ಬಸ್‌ ನಿಲ್ಲುವುದಿಲ್ಲ
ನಗರದ ಕದ್ರಿ ಸಿಟಿ ಆಸ್ಪತ್ರೆಯ ಸ್ವಲ್ಪ ಮುಂಭಾಗದಲ್ಲಿ ಪಾಲಿಕೆ ಹಾಗೂ ಲಯನ್ಸ್‌ ಕ್ಲಬ್‌ ಸಹಯೋಗದಲ್ಲಿ ಬಸ್‌ ನಿಲ್ದಾಣ ನಿರ್ಮಿಸಲಾಗಿದ್ದು, ಇದು ಸಾರ್ವಜನಿಕರಿಗೆ ಬಳಕೆಯಾಗುತ್ತಿಲ್ಲ. ಆ ಭಾಗದಲ್ಲಿ ಓಡಾಡುವ ಬಸ್‌ಗಳು ಬಸ್‌ ನಿಲ್ದಾಣದಲ್ಲಿ ನಿಲ್ಲದೆ ಅದರ ಹಿಂಭಾಗದ ಜಂಕ್ಷನ್‌ನಲ್ಲಿ ನಿಲ್ಲುತ್ತವೆೆ. ಆ ಕಾರಣದಿಂದ ಈ ಬಸ್‌ ನಿಲ್ದಾಣ ಭಿಕ್ಷುಕರಿಗೆ ಮಲಗುವ ಸ್ಥಳವಾಗಿ ಬದಲಾಗಿದೆ. ಅಲ್ಲದೆ ಖಾಸಗಿ ವ್ಯಕ್ತಿಗಳು ಬಸ್‌ ನಿಲ್ದಾಣದ ಮುಂಭಾಗದಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡುತ್ತಾರೆ. ಸಮೀಪದಲ್ಲೇ ಟ್ರಾಫಿಕ್‌ ಪೊಲೀಸರು ಇದ್ದರೂ ಇತ್ತ ಗಮನಹರಿಸುವುದಿಲ್ಲ. ಆಸ್ಪತ್ರೆ ಸಮೀಪದಲ್ಲೇ ಇದ್ದರೂ ಖಾಸಗಿ ಬಸ್‌ಗಳು ಹಾರ್ನ್ ಹಾಕಿಕೊಂಡು ಅಲ್ಲೇ ಬಸ್‌ ನಿಲ್ಲಿಸುತ್ತವೆ. ಇದರಿಂದ ರೋಗಿಗಳಿಗೆ ತೊಂದರೆ ಆಗುವುದರೊಂದಿಗೆ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ.
– ಸ್ಥಳೀಯರು, ಕದ್ರಿ

ಸರ್ವರ್‌ ಸಮಸ್ಯೆಯಿಂದ ಸಾರ್ವಜನಿಕರು ಹೈರಾಣ
ಬಡವರಿಗೆ ನೆರವಾಗುವ ದೃಷ್ಟಿಯಿಂದ ಮಾಡಲಾದ ಪಡಿತರ ವಿತರಣೆ ಕೇಂದ್ರದ ಅಧಿಕಾರಿಗಳ ನಿರ್ಲಕ್ಷದಿಂದ ಜನರು ಕಷ್ಟ ಅನುಭವಿಸುವಂತಾಗಿದೆ. ಕೃಷ್ಣಾಪುರ-ಕಾಟಿಪಳ್ಳದ ಪಡಿತರ ಕೇಂದ್ರದಲ್ಲಿ ಈ ಸಮಸ್ಯೆ ಹಲವು ಸಮಯಗಳಿಂದ ಇದ್ದು, ಸಾರ್ವಜನಿಕರು ಕಷ್ಟ ಅನುಭವಿಸುವಂತಾಗಿದೆ. ಅಕ್ಕಿ ಹಾಗೂ ಇತರ ವಸ್ತುಗಳನ್ನು ತರಲು ಹೋದರೆ ಯಾವಾಗಲೂ ಸರ್ವರ್‌ ಸಮಸ್ಯೆ ಇದೆ ಎಂಬುದಾಗಿ ಹೇಳಿ ಬಂದ ಜನರನ್ನು ವಾಪಸ್ಸು ಕಳುಹಿಸಲಾಗುತ್ತದೆ. ಬೆಳಗ್ಗಿನಿಂದ ಸರತಿ ಸಾಲಿನಲ್ಲಿ ನಿಂತ ಜನರಿಗೆ ಹಲವು ಕಾರಣಗಳನ್ನು ನೀಡಿ ವಾಪಸ್ಸು ಕಳುಹಿಸಲಾಗುತ್ತಿದೆ.
-ಆಯಿಷಾ, ಕಾಟಿಪಳ್ಳ

ಕಸದ ರಾಶಿಯಿಂದ ದುರ್ನಾತ
ದೇಶದ ಪ್ರಧಾನಿ ಅವರು ವಿದೇಶದಲ್ಲಿ ನಮ್ಮ ದೇಶದ ಸ್ವತ್ಛತೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರೆ ಕೆಲವು ಮಂದಿ ಸ್ವತ್ಛತೆಯನ್ನು ಕಡೆಗಣಿಸಿ ಇತರರಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಸರಿಪಳ್ಳ ನೂರ್ಜಿ ರಸ್ತೆಯಲ್ಲಿ ನಿತ್ಯ ಕಸವನ್ನು ತಂದು ರಾಶಿ ಹಾಕಲಾಗುತ್ತಿದೆ. ಮಳೆ ನೀರು ಇದರ ಮೇಲೆ ಬಿದ್ದು ದುರ್ನಾತ ಬೀರುತ್ತಿದೆ. ಅಲ್ಲದೆ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ.
-ಸ್ಥಳೀಯರು,

ಅನಧಿಕೃತ ಫ್ಲೆಕ್ಸ್‌ ತೆರವುಗೊಳಿಸಿ
ಕೆಲವು ದಿನಗಳ ಹಿಂದೆ ಚೆನ್ನೈಯಲ್ಲಿ ಫ್ಲೆಕ್ಸ್‌ ಹೋರ್ಡಿಂಗ್‌ ಬಿದ್ದು ಮಹಿಳೆ ಸಾವು ಸುದ್ದಿ ಇನ್ನೂ ಮರೆತಿಲ್ಲ. ಈ ನಡುವೆ ನಗರದಲ್ಲಿ ಫ್ಲೆಕ್ಸ್‌ ಹಾವಳಿ ಹೆಚ್ಚಾಗತೊಡಗಿದೆ. ಒಂದರ ಮೇಲೊಂದರಂತೆ ಸಾಲಿನಲ್ಲಿ ಹಲವು ಫ್ಲೆಕ್ಸ್‌ಗಳು ನಗರದ ವಿವಿಧ ಭಾಗಗಳಲ್ಲಿ ಹಾಕಲಾಗಿದ್ದು, ಏನಾದರೂ ಅಪಾಯ ಸಂಭವಿಸುವ ಮುನ್ನ ಮನಪಾ ಅಧಿಕಾರಿಗಳಿಗೆ ಎಚ್ಚೆತ್ತು ಕೊಳ್ಳುವುದು ಉತ್ತಮ. ಕೆಲವು ಫ್ಲೆಕ್ಸ್‌ಗಳು ಅಧಿಕೃತವಾಗಿ ಹಾಕಿದ್ದರೆ ಇನ್ನು ಕೆಲವು ಫ್ಲೆಕ್ಸ್‌ಗಳನ್ನು ಅನಧಿಕೃತವಾಗಿ ಹಾಕಲಾಗಿದೆ. ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಜರಗಿಸುವುದು ಉತ್ತಮ.
– ಮಂಜು ನಿರೇಶ್ವಾಲ್ಯ, ಕಾರ್‌ಸ್ಟ್ರೀಟ್‌

ಹಾಲಿನ ತ್ಯಾಜ್ಯದಿಂದ ರೋಗ ಭೀತಿ
ಕುಲಶೇಖರ ಹಾಲಿನ ಡೈರಿಯಿಂದ ತ್ಯಾಜ್ಯಗಳನ್ನು ಹೊರಭಾಗಕ್ಕೆ ಬಿಡುತ್ತಿರುವುದರಿಂದ ಸಮೀಪದ ಜನರು ರೋಗಭೀತಿಯಿಂದ ದಿನದೂಡುವ ಸ್ಥಿತಿ ನಿರ್ಮಾಣವಾಗಿದೆ. ಕುಲಶೇಖರ ಕೋಟಿಮುರ ಭಾಗದಲ್ಲಿ ಕೆಎಂಎಫ್‌ನ ಹಾಲಿನ ತ್ಯಾಜ್ಯಗಳನ್ನು ಲಾರಿಗಳಲ್ಲಿ ತಂದು ಸುರಿಯಲಾಗುತ್ತಿದೆ. ಇದು ಸಮೀಪದ ಚರಂಡಿಯಲ್ಲಿ ಹರಿದು ದುರ್ವಾಸನೆ ಬರುತ್ತಿದೆ. ಈ ಭಾಗದಲ್ಲಿ ಸುಮಾರು 250ಕ್ಕೂ ಅಧಿಕ ಮನೆಗಳಿದ್ದು, ಈ ಬಗ್ಗೆ ಹಲವು ಬಾರಿ ದೂರಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲೇ ಸಮೀಪದಲ್ಲಿದ್ದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ಬರಲು ಹಿಂದೇಟು ಹಾಕುವ ಕಾರಣದಿಂದ ಮುಚ್ಚುವ ಸ್ಥಿತಿಗೆ ಬಂದಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ.
– ಅಜಯ್‌, ಕುಲಶೇಖರ

ಇಲ್ಲಿಗೆ ಕಳುಸಿ
“ಸುದಿನ-ಜನದನಿ’ ವಿಭಾಗ, ಉದಯವಾಣಿ, ಮಾನಸ ಟವರ್‌, ಮೊದಲ ಮಹಡಿ, ಎಂಜಿ ರಸ್ತೆ, ಪಿವಿಎಸ್‌ ವೃತ್ತ ಸಮೀಪ, ಕೊಡಿಯಾಲಬೈಲ್‌, ಮಂಗಳೂರು-575003. ವಾಟ್ಸಪ್‌ ನಂಬರ್‌-9900567000. ಇ-ಮೇಲ್‌: mlr.sudina@udayavani.com

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ