ಅರಣ್ಯಾಧಿಕಾರಿಗಳಿಂದ ಹಲ್ಲೆ ಆರೋಪ: ಕೆಂಜಾಳದಲ್ಲಿ ಪ್ರತಿಭಟನೆ

ಅಮಾನತು ಮಾಡದಿದ್ದರೆ ಉಗ್ರ ಹೋರಾಟ: ಎಚ್ಚರಿಕೆ

Team Udayavani, Sep 22, 2019, 5:00 AM IST

ಕಡಬ: ಕೊಂಬಾರು ಗ್ರಾಮದ ಕಾಪಾರು ನಿವಾಸಿ ಲೋಕೇಶ ಅವರನ್ನು ಮರಗಳ್ಳತನದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯ ಸಿಬಂದಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಶನಿವಾರ ಕೆಂಜಾಳದಲ್ಲಿ ಪ್ರತಿಭಟನೆ ನಡೆಸಿರುವ ಸ್ಥಳೀಯರು ಆರೋಪಿಗಳನ್ನು ಒಂದು ವಾರದೊಳಗೆ ಅಮಾನತು ಮಾಡದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಳಗ್ಗೆ ಕೆಂಜಾಳದಲ್ಲಿ ಅರಣ್ಯ ಇಲಾಖೆಯ ವಸತಿ ಕಟ್ಟಡದ ಎದುರು ನೀತಿ ತಂಡದ ಸಹಕಾರದೊಂದಿಗೆ ಪ್ರತಿಭಟನೆ ಆರಂಭಿಸಿದ ಸ್ಥಳೀಯರು, ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಮಧ್ಯಾಹ್ನದ ತನಕ ನಡೆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ ಆಕ್ರೋಶಗೊಂಡ ಪ್ರತಿಭಟನಕಾರರು ರಸ್ತೆ ತಡೆಯ ಎಚ್ಚರಿಕೆ ನೀಡಿದದರು. ಬಳಿಕ ಸುಬ್ರಹ್ಮಣ್ಯ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ್‌ ಆಗಮಿಸಿ, ಮನವಿ ಸ್ವೀಕರಿಸಿದರು.

ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಹಿಂಸೆ: ಆರೋಪ
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ ಮುಖಂಡ ಆನಂದ ಮಿತ್ತಬೈಲ್‌ ಮಾತನಾಡಿ, ಕೊಂಬಾರು ಮೀಸಲು ಅರಣ್ಯದಲ್ಲಿ ಮರ ಕಳ್ಳತನ ನಡೆಸಿದ ಆರೋಪದಲ್ಲಿ ಕೊಂಬಾರು ಗ್ರಾಮದ ಕಾಪಾರು ನಿವಾಸಿ ಲೋಕೇಶ್‌ ಎಂಬವರಿಗೆ ಅರಣ್ಯ ಇಲಾಖೆಯ ಸುಬ್ರಹ್ಮಣ್ಯ ವಲಯದ ಅರಣ್ಯ ಪಾಲಕ ಅಶೋಕ್‌, ಸಿಬಂದಿ ಪ್ರಕಾಶ್‌ ಹಾಗೂ ಶೀನಪ್ಪ ಎಂಬವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಲೋಕೇಶ್‌ ಕುಟುಂಬಸ್ಥರ ಜತೆಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ಆಗಮಿಸಿದ ಅರಣ್ಯಾಧಿಕಾರಿಗಳು ರಸ್ತೆಯಲ್ಲಿಯೇ ಕಾರಿನಿಂದ ಎಳೆದು ವಶಕ್ಕೆ ತೆಗೆದುಕೊಂಡು ಕೊಲ್ಲಮೊಗ್ರು ಅರಣ್ಯ ಇಲಾಖೆಯ ಕಚೇರಿಯಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅನಾವಶ್ಯಕವಾಗಿ ಪ್ರಕರಣದಲ್ಲಿ ಸಿಲುಕಿಸಿ ಕೇಸು ದಾಖಲಿಸಿ ದಂಡ ವಿಧಿಸಲಾಗಿದೆ. ಅಧಿಕಾರಿಗಳು ತಮ್ಮ ಹಗರಣ ಮುಚ್ಚಿಹಾಕಲು ಈ ಷಡ್ಯಂತ್ರ ರೂಪಿಸಿ, ಲೋಕೇಶ್‌ ಅವರಿಗೆ ಬೆದರಿಕೆ ಒಡ್ಡಿ, ಮರ ಕಳ್ಳತನ ನಡೆಸಿದ್ದಾಗಿ ತಪ್ಪೊಪ್ಪಿಗೆ ಪತ್ರಕ್ಕೆ ಸಹಿ ಪಡೆದಿದ್ದಾರೆ. ಲೋಕೇಶ್‌ ಅವರ ಹೊಟ್ಟೆ ಹಾಗೂ ಕಾಲಿಗೆ ಬಲವಾದ ಏಟುಗಳನ್ನು ನೀಡಲಾಗಿದೆ. ತಪ್ಪಿತಸ್ಥ ಸಿಬಂದಿಯನ್ನು ಅಮಾನತು ಮಾಡದಿದ್ದರೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ನೀತಿ ಟ್ರಸ್ಟ್‌ನ ರಾಜ್ಯಾಧ್ಯಕ್ಷ ಜಯನ್‌ ಟಿ. ಮಾತನಾಡಿ, ಲೋಕೇಶ್‌ ತಪ್ಪು ಮಾಡಿದ್ದರೆ ಅರಣ್ಯಾಧಿಕಾರಿಗಳು ಕಾನೂನು ಪ್ರಕಾರ ವ್ಯವಹರಿಸಬೇಕಿತ್ತು. ಆದರೆ, ಗೂಂಡಾಗಳಂತೆ ವರ್ತಿಸಿದ್ದಾರೆ. ಅರಣ್ಯ ರಕ್ಷಿಸಬೇಕಾದ ಅಧಿಕಾರಿಗಳು ಈ ರೀತಿ ವರ್ತಿಸಿದ್ದನ್ನು ಖಂಡಿಸಿ ಮಾನವ ಹಕ್ಕು ಆಯೋಗಕ್ಕೂ ದೂರು ನೀಡಲಾಗಿದೆ. ಹಲ್ಲೆ ನಡೆಸಿದ ಮೂವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಕೊಂಬಾರು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಶಶಿಧರ ಬೊಟ್ಟಡ್ಕ ಮಾತನಾಡಿ, ಇಡೀ ಪ್ರಕರಣದಲ್ಲಿ ಅರಣ್ಯ ಅಧಿಕಾರಿಗಳು ತಮ್ಮ ಅಕ್ರಮವನ್ನು ಮುಚ್ಚಿ ಹಾಕಲು ನಿರಪರಾಧಿಯನ್ನು ಹಿಂಸಿಸಿ ಸಿಲುಕಿಸುವುದು ಸ್ಪಷ್ಟವಾಗಿದೆ. ಹಲ್ಲೆ ನಡೆಸಿದ ಸಿಬಂದಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ತಾ.ಪಂ. ಗಣೇಶ್‌ ಕೈಕುರೆ, ಗ್ರಾಮಾ ಭಿವೃದ್ಧಿ ಯೋಜನೆಯ ಪರಮೇಶ್ವರ ಗೌಡ ಉರುಂಬಿ ಮಾತ ನಾಡಿದರು. ಪ್ರತಿಭಟನೆಯಲ್ಲಿ ಕಾರ್ತಿಕ್‌ ಕೊಂಬಾರು, ವಿನೋದ್‌ ಹೊಳ್ಳಾರು, ಗೋಪಾಲಕೃಷ್ಣ ಮರುವಂಜಿ, ಚಂದ್ರಶೇಖರ ಕೊಡೆಂಕಿರಿ, ಹರೀಶ್‌ ಗುಡ್ಡೆಕೇರಿ, ವಿಶ್ವನಾಥ ಕಾಪಾರು, ಕೊರಗ್ಗು ಕೊಲ್ಕಜೆ, ಮೋನಪ್ಪ ಸರಪಾಡಿ, ಜನಾರ್ದನ ಕೊಡೆಂಕಿರಿ, ಕಿರಣ ಕೊಡೆಂಕಿರಿ, ವಿಶ್ವನಾಥ ಪೆರುಂದೊಡಿ, ಪ್ರಶಾಂತ್‌ ಹೊಳ್ಳಾರು, ಪ್ರವೀಣ್‌ ಹೊಳ್ಳಾರು, ಹರೀಶ್‌ ಭಾಗ್ಯ, ದಿವಾಕರ ಕೊಡೆಂಕಿರಿ ಭಾಗವಹಿಸಿದ್ದರು. ರಾಮಕೃಷ್ಣ ಹೊಳ್ಳಾರು ಸ್ವಾಗತಿಸಿ, ನಿರೂಪಿಸಿದರು.

ಕಡಬ ಪೊಲೀಸರಿಗೆ ಮನವಿ
ಈ ಮಧ್ಯೆ ಕರ್ನಾಟಕ ಅರಣ್ಯ ವೀಕ್ಷಕರು ಮತ್ತು ರಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್‌ ಕೆ.ಎನ್‌. ಅವರ ನೇತೃತ್ವದಲ್ಲಿ ಸುಮಾರು 35 ಮಂದಿ ಅರಣ್ಯ ವೀಕ್ಷಕರು ಮತ್ತು ರಕ್ಷಕರು ಶನಿವಾರ ಕಡಬ ಪೊಲೀಸ್‌ ಠಾಣೆಗೆ ಭೇಟಿ ನೀಡಿ, ಕೆಲವು ವ್ಯಕ್ತಿಗಳು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಗಳಿದ್ದು, ನಮಗೆ ರಕ್ಷಣೆ ನೀಡಬೇಕೆಂಬ ಮನವಿಯನ್ನು ಪೊಲೀಸರಿಗೆ ಸಲ್ಲಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ