9/11 ಅರ್ಜಿ ಶೀಘ್ರ ವಿಲೇಗೆ ಪಿಡಿಒಗಳಿಗೆ ಸೂಚನೆ: ಇಒ

ಬಂಟ್ವಾಳ ತಾಲೂಕು ಪಂಚಾಯತ್‌ ಸಾಮಾನ್ಯ ಸಭೆ

Team Udayavani, Jan 22, 2020, 12:36 AM IST

ಬಂಟ್ವಾಳ: ಗ್ರಾ.ಪಂ.ಗಳಿಗೆ 9/11 ಸಹಿತ ಇತರ ಸೌಲಭ್ಯಕ್ಕಾಗಿ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ನಿರ್ದಿಷ್ಟ ದಿನದೊಳಗೆ ವಿಲೇವಾರಿ ಮಾಡು ವಂತೆ ತಾಲೂಕಿನ ಪ್ರತಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೂ ನೋಟಿಸ್‌ ನೀಡುತ್ತೇನೆ. ಅದಕ್ಕೆ ಸ್ಪಂದನೆ ಸಿಗದೇ ಇದ್ದರೆ ಅವರ ವಿರುದ್ಧ ಕ್ರಮಕ್ಕೆ ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಬಂಟ್ವಾಳ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ತಿಳಿಸಿದ್ದಾರೆ. ಬಿ.ಸಿ. ರೋಡ್‌ನ‌ ತಾ.ಪಂ. ಎಸ್‌ಜಿ ಎಸ್‌ವೈ ಸಭಾಂಗಣದಲ್ಲಿ ಮಂಗಳವಾರ ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಸದಸ್ಯರ ದೂರುಗಳಿಗೆ ಉತ್ತರಿಸಿದರು.

ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸದಸ್ಯ ಪ್ರಭಾಕರ ಪ್ರಭು, ಬಂಟ್ವಾಳ ಸಹಿತ ಇತರ ತಾ|ಗಳಲ್ಲೂ 9/11 ಅರ್ಜಿಗಳ ವಿಲೇವಾರಿಗೆ ಪಿಡಿಒಗಳು ವಿಳಂಬ ಮಾಡುತ್ತಿರುವ ದೂರುಗಳು ಬಂದಿದ್ದು, ಹೀಗಾಗಿ ಅದರ ಶೀಘ್ರ ವಿಲೇ ವಾರಿಗೆ ಸೂಚನೆ ನೀಡುವಂತೆ ಮನವಿ ಮಾಡಿದರು. ಅದಕ್ಕೆ ಇತರ ಸದಸ್ಯರೂ ಧ್ವನಿಗೂಡಿಸಿದರು.

ಜತೆಗೆ ಗ್ರಾ.ಪಂ.ಗಳಿಗೆ ಕೇಂದ್ರ ಸರಕಾರ ದಿಂದ ಮಂಜೂರಾಗಿರುವ ಕೋಟ್ಯಂತರ ರೂ.ಅನುದಾನ ಸದ್ಬಳಕೆಯಾಗದೆ ಇರುವ ಕುರಿತು ಸದಸ್ಯ ಪ್ರಭು ಗಮನಕ್ಕೆ ತಂದರು. ಅಧ್ಯಕ್ಷ ಚಂದ್ರಹಾಸ ಕರ್ಕೇರ ಪ್ರತಿಕ್ರಿ ಯಿಸಿ, ಈಗಾಗಲೇ ಪಿಡಿಒಗಳ ಸಭೆ ನಡೆಸಿ ಸೂಚನೆ ನೀಡಲಾಗಿದೆ ಎಂದರು. ಜತೆಗೆ ಶೀಘ್ರ ವಿಲೇವಾರಿಗೆ ನೋಟಿಸ್‌ ನೀಡುವು ದಾಗಿ ಇಒ ತಿಳಿದರು. ಪಿಡಿಒಗಳು ಅದಕ್ಕೂ ಸ್ಪಂದಿಸದೇ ಇದ್ದರೆ ಮೇಲಧಿಕಾರಿಗಳಿಗೆ ಬರೆಯುವುದಾಗಿ ಸ್ಪಷ್ಟಪಡಿಸಿದರು.

ಉದ್ಯೋಗ ಖಾತ್ರಿ ಹಣ ಬಂದಿಲ್ಲ
ಉದ್ಯೋಗ ಖಾತ್ರಿ ಹಣ ಬಂದಿಲ್ಲ ಎಂದು ಸದಸ್ಯರೊಬ್ಬರು ದೂರಿದರು. ಈ ಕುರಿತು ನರೇಗಾ ನಿರ್ದೇಶಕರಿಗೆ ಪತ್ರ ಬರೆಯಬೇಕು ಎಂದು ಆಗ್ರಹಿಸಿದರು. ಬಂಟ್ವಾಳದಲ್ಲಿ ಶೇ. 65 ಬಿಡುಗಡೆಯಾಗಿದೆ. ಕೂಲಿ ಭಾಗದ ಹಣ ಬಂದಿಲ್ಲ, ಅನುದಾನಕ್ಕೆ ತಕ್ಕಂತೆ ಸಲಕರಣೆ ಬಿಡುಗಡೆ ಆಗುತ್ತಿಲ್ಲ ಎಂದು ಇಒ ರಾಜಣ್ಣ ತಿಳಿಸಿದರು.

ಸಜೀಪಮೂಡ ಕೊಲ್ಯ ಅಂಗನವಾಡಿ ಕೇಂದ್ರದ ನಿವೇಶನ ಕುರಿತು ಸದಸ್ಯ ಸಂಜೀವ ಪೂಜಾರಿ ಪ್ರಶ್ನಿಸಿದಾಗ, ಅದರ ಫೈಲ್‌ ಎಸಿ ಕಚೇರಿಯಲ್ಲಿದ್ದು, ಪರಿಶೀಲನೆ ನಡೆಸುವುದಾಗಿ ತಹಶೀಲ್ದಾರ್‌ ತಿಳಿಸಿದರು. ಅನಂತಾಡಿ ಗ್ರಾಮ ಕರಣಿಕರ ಬದಲಾವಣೆ ಕುರಿತು ಸದಸ್ಯೆ ಗೀತಾ ತಿಳಿಸಿ ದಾಗ, ಬದಲಾವಣೆ ಪರಿಹಾರವಲ್ಲ. ಅವರ ಕಾರ್ಯವೈಖರಿ ಚೆನ್ನಾಗಿಲ್ಲದಿದ್ದರೆ, ಎಚ್ಚರಿಕೆ ನೀಡುವುದಾಗಿ ತಹಶೀಲ್ದಾರ್‌ ತಿಳಿಸಿದರು.

ಹಣ ಬಿಡುಗಡೆಯಾಗಿಲ್ಲ
ಬಸವ ವಸತಿ ಯೋಜನೆ ಯಲ್ಲಿ ಕರೋಪಾಡಿ ಗ್ರಾಮದ 6 ಕುಟುಂಬಗಳಿಗೆ ಹಣ ಬಿಡು ಗಡೆಯಾಗದಿರುವ ಬಗ್ಗೆ ಸದಸ್ಯ ಉಸ್ಮಾನ್‌ ಕರೋಪಾಡಿ ಪ್ರಸ್ತಾ ವಿಸಿದರು. ಆ ವೇಳೆ ಯೋಜನೆಯ ಕೇಸ್‌ ವರ್ಕರ್‌ ಅದಕ್ಕೆ ವರ್ಕ್‌ ಆರ್ಡರ್‌ ಆಗಿಲ್ಲ ಎಂದು ತಿಳಿಸಿದಾಗ, ಗರಂ ಆಗ ಉಸ್ಮಾನ್‌, ತಾನು ಅಧ್ಯಕ್ಷರ ಬಳಿ ಪ್ರಶ್ನಿಸಿದ್ದೇನೆ. ಮಾಹಿತಿ ತಿಳಿದು ಅವರೇ ಉತ್ತರಿಸಬೇಕು ಎಂದರು. ವರ್ಕ್‌ ಆರ್ಡರ್‌ ಇಲ್ಲದೆ ಇದ್ದರೆ ಜಿಪಿಎಸ್‌, ಇನ್‌ಸ್ಪೆಕ್ಷನ್‌ ಹೇಗೆ ಮಾಡುತ್ತಾರೆ ಎಂದು ಪ್ರಶ್ನಿಸಿ ದರು. ಪ್ರಸ್ತುತ ಅದು ವಿಶ್ವಲ್‌ ಆ್ಯಪ್‌ನ ಮೂಲಕ ನಡೆಯುತ್ತದೆ. ಕರೋಪಾಡಿಯ ಪ್ರಕರಣದ ಕುರಿತು ನಿಗಮದ ಗಮನಕ್ಕೆ ತರಲಾಗಿದೆ ಎಂದು ಇಒ ತಿಳಿಸಿದರು.

ಗೋಳ್ತಮಜಲು ಬೊಮ್ಮರಕೋಡಿ ಅಂಗನವಾಡಿ ಕೇಂದ್ರದ ಕಾಮಗಾರಿ ನಿಂತಿರುವ ಕುರಿತು ಸದಸ್ಯ ಮಹಾಬಲ ಆಳ್ವ ತಿಳಿಸಿದಾಗ, ಉದ್ಯೋಗ ಖಾತರಿಯ 5 ಲಕ್ಷ ರೂ. ಹಾಗೂ 3 ಲಕ್ಷ ರೂ. ಇಲಾಖಾ ಅನುದಾನ ಸೇರಿ ಒಟ್ಟು 8 ಲಕ್ಷ ರೂ. ಕಾಮಗಾರಿ ನಡೆದಿದೆ ಎಂದು ಪ್ರಭಾರ ಸಿಡಿಪಿಒ ಗಾಯತ್ರಿ ತಿಳಿಸಿದರು. ಈ ಕುರಿತು ಗುತ್ತಿಗೆದಾರರು, ಪಿಡಿಒ ಅವರ ಜತೆ ಚರ್ಚಿಸೋಣ ಎಂದು ಇಒ ತಿಳಿಸಿದರು.

ಮೀಸಲು ಭೂಮಿ ಆರ್‌ಟಿಸಿ
ಬಡಗಬೆಳ್ಳೂರಿನಲ್ಲಿ ತಾ.ಪಂ.ನ ನಿವೇಶನ ಮೀಸಲು ಭೂಮಿಯ ಆರ್‌ಟಿಸಿ ಸಮಸ್ಯೆ ಬಗ್ಗೆ ಗ್ರಾ.ಪಂ. ಅಧ್ಯಕ್ಷೆ ಜಯಂತಿ ತಿಳಿಸಿದಾಗ, ಅದನ್ನು ರದ್ದು ಮಾಡಿ ಬಳಿಕ ಕಂದಾಯ ಇಲಾಖೆಗೆ ನೀಡಿ, ಅಲ್ಲಿಂದ 94ಸಿ ಯೋಜನೆ ಮೂಲಕ ಹಕ್ಕುಪತ್ರ ನೀಡುವ ಬಗ್ಗೆ ಕ್ರಮಕೈಗೊಳ್ಳಲು ನಿರ್ಣಯಿಸಲಾಯಿತು.
ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಆಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು.

ಸರಕಾರಕ್ಕೆ ಪತ್ರ ಬರೆಯಲು ನಿರ್ಣಯ
ಸರ್ವರ್‌ ಸಮಸ್ಯೆಯಿಂದ ಪಡಿತರಕ್ಕೆ ಜನರು ಅಲೆದಾಡ ಬೇಕಾದ ಸ್ಥಿತಿ ಇದೆ. ಅದಕ್ಕೆ ಶಾಶ್ವತ ಪರಿಹಾರವಿಲ್ಲವೇ ಎಂದು ಸದಸ್ಯರು ಪ್ರಶ್ನಿಸಿದರು. ಅದಕ್ಕೆ ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌. ಪ್ರತಿಕ್ರಿಯಿಸಿ, ಈ ಕುರಿತು ಜ. 20ರಂದು ನಡೆದ ಸಭೆಯಲ್ಲೂ ಪ್ರಸ್ತಾವವಾಗಿದ್ದು, ಸರಕಾರ ಜಿಲ್ಲಾ ಕಾರ್ಯದರ್ಶಿ, ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ ಎಂದರು. ಈ ಸಮಸ್ಯೆ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲು ನಿರ್ಣಯಿಸುವ ಕುರಿತು ಅಧ್ಯಕ್ಷರು ತಿಳಿಸಿದರು.

15 ದಿನಗಳಿಗೆ ಆಧಾರ್‌ ಕಿಟ್‌
ಗ್ರಾಮ ಮಟ್ಟದಲ್ಲಿ ಆಧಾರ್‌ ತಿದ್ದುಪಡಿ ಕೇಂದ್ರಗಳ ತೆರವಿನ ಕುರಿತು ಸದಸ್ಯ ಉಸ್ಮಾನ್‌ ಕರೋಪಾಡಿ ಪ್ರಸ್ತಾವಿಸಿದಾಗ, ಈ ಹಿಂದೆ 15 ದಿನಗಳ ಕಾಲ ತಾಲೂಕಿಗೆ ಆಧಾರ್‌ ಕಿಟ್‌ ನೀಡಿದ್ದರು. ಅದರ ಮೂಲಕ ಗ್ರಾಮೀಣ ಭಾಗಗಳಲ್ಲಿ ತಿದ್ದುಪಡಿ ಕಾರ್ಯ ನಡೆಸಲಾಗಿದೆ. ಇನ್ನೂ ಒಂದಷ್ಟು ದಿನಗಳ ಕಾಲ ನೀಡಲು ಬೇಡಿಕೆ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್‌ ತಿಳಿಸಿದರು.

ಅಗತ್ಯಕಡೆಗೆ ಟಿಸಿ ಇಲ್ಲ
ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ, ಟಿಸಿಗಾಗಿ ಮೆಸ್ಕಾಂಗೆ ಬೇಡಿಕೆ ಸಲ್ಲಿಸಿ ಹಲವು ಸಮಯ ಕಳೆದಿದ್ದು, ಪ್ರಸ್ತುತ ಬಜೆಟ್‌ ಇಲ್ಲ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಪ್ರಭಾಕರ ಪ್ರಭು, ಅಗತ್ಯವಿಲ್ಲದ ಕಡೆ ಟಿಸಿ ಹಾಕುತ್ತಾರೆ, ಅಗತ್ಯ ಇರುವ ಕಡೆ ಟಿಸಿ ಇಲ್ಲ. ಇದೊಂದು ಹಣ ಮಾಡುವ ದಂಧೆಯಾಗಿದೆ ಎಂದು ಆರೋಪಿಸಿದರು.

ಅರ್ಧಕ್ಕೆ ನಿಂತ ಚರಂಡಿ
ಪುದು ಗ್ರಾ.ಪಂ. ವ್ಯಾಪ್ತಿಯಲ್ಲಿ ರಾ.ಹೆ. ಇಲಾಖೆಯವರು ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವುದರಿಂದ ಸಾಕಷ್ಟು ತೊಂದರೆಯಾಗಿದೆ. ಸಾಕಷ್ಟು ಅಪಘಾತಗಳೂ ಸಂಭವಿಸುತ್ತಿವೆ ಎಂದು ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್‌ ಮಾರಿಪಳ್ಳ ಸಭೆಯ ಗಮನಕ್ಕೆ ತಂದರು. ಈ ಕುರಿತು
ಎನ್‌ಎಚ್‌ಎಐಗೆ ಬರೆಯಲು ನಿರ್ಣಯಿಸಲಾಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ