CONNECT WITH US  

150ರ ಹೊಸ್ತಿಲಲ್ಲಿ ಸಮಾಕಗಂಮ ಶಾಲೆ

ಭಟ್ಕಳ: ಸ್ವಾತಂತ್ರÂ ಪೂರ್ವದಲ್ಲಿಯೇ ವಿದ್ಯಾದಾನ ಮಾಡುತ್ತಾ ಬಂದಿರುವ ತಾಲೂಕಿನ ಅತೀ ಹಿರಿಯ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಇಲ್ಲಿನ "ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ' ಶತಮಾನೋತ್ತರ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಂದ್ರ ಶ್ಯಾನುಭಾಗ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚೆನ್ನಪಟ್ಟಣ ಹನುಮಂತ ದೇವರ ದೇವಸ್ಥಾನದ ಪೌಳಿಯಲ್ಲಿ ಶಾಲೆ ಆರಂಭವಾಗಿದ್ದು, ನಂತರದ ದಿನಗಳಲ್ಲಿ ಶ್ರೀಧರ ಪೈ ಸೇರಿದಂತೆ ಇತರರ ಮನೆಯ ಮಾಳಿಗೆಯಲ್ಲಿ ಸಹ ತರಗತಿ ನಡೆಸಲಾಗುತ್ತಿತ್ತು. ನಂತರ ಈಗಿರುವ ಕಟ್ಟಡಕ್ಕೆ ಶಾಲೆ ಸ್ಥಳಾಂತರವಾಯಿತು. ಶಾಲೆಯ ಹಳೆ ವಿದ್ಯಾರ್ಥಿ ಶ್ರೀಧರ ಆಚಾರ್ಯ ನೆಲಕ್ಕೆ ಟೈಲ್ಸ್‌ಗಳನ್ನು ಹಾಕಿಕೊಟ್ಟಿರುವರು. ಎಸ್‌ಡಿಎಂಸಿಯವರ ಕ್ರಿಯಾಶೀಲ ಕಾರ್ಯಗಳಿಂದ ಕುಮಟಾ ವಿಭಾಗದಲ್ಲಿಯೇ ಇಲ್ಲಿನ ಎಸ್‌ಡಿಎಂಸಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು.

ಶಾಲೆಗೆ 150 ವರ್ಷ ಪೂರೈಸುತ್ತಿದ್ದು, ಹಳೇ ವಿದ್ಯಾರ್ಥಿಗಳ ಸಹಕಾರದಿಂದ ಶತಮಾನೋತ್ತರ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏ.18 ಮತ್ತು 19 ರಂದು ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ. ಸಭಾ ಕಾರ್ಯಕ್ರಮವನ್ನು ಏ. 18ರಂದು ಸಂಜೆ 5:30 ಗಂಟೆಗೆ ಸಾಹಿತಿ ಜಯಂತ ಕಾಯ್ಕಿಣಿ ಉದ್ಘಾಟಿಸುವರು. ಅಧ್ಯಕ್ಷತೆ ವಹಿಸುವ ಶಾಸಕ ಮಂಕಾಳ ವೈದ್ಯ ಹಳೆ ವಿದ್ಯಾರ್ಥಿ ಸಂಘದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು ಎಂದು ತಿಳಿಸಿದರು.

ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮವಿದೆ. ಈಗಾಗಲೇ 30-35 ಶಿಕ್ಷಕರನ್ನು ಸಂಪರ್ಕಿಸಲಾಗಿದ್ದು, ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿದ್ದಲ್ಲಿ ವಿವರ ನೀಡುವಂತೆ ಕೋರಿದರು. ಭಟ್ಕಳದ ಸಿಂಡಿಕೇಟ್‌ ಬ್ಯಾಂಕ್‌ ಶಾಖೆ ಈ ಶಾಲೆಯನ್ನು ದತ್ತು ತೆಗೆದುಕೊಂಡಿದ್ದು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತಿದೆ. ಶಾಲೆಯನ್ನು ಇನ್ನೂ ಅಭಿವೃದ್ಧಿ ಪಡಿಸಲು ಶಾಶ್ವತ ನಿಧಿಧಿ ಸ್ಥಾಪಿಸುವ ಗುರಿಯನ್ನು ಹಳೆ ವಿದ್ಯಾರ್ಥಿ ಸಂಘ ಇಟ್ಟುಕೊಂಡಿದೆ ಎಂದರು.

ಶಾಲೆ ಅಭಿವೃದ್ಧಿಯಲ್ಲಿ ಎಸ್‌ಡಿಎಂಸಿಯವರ ಪಾತ್ರ ಶ್ಲಾಘನೀಯ. ಶಾಲಾ ಶಿಕ್ಷಕರ ಸೇವೆಯೂ ಸ್ಮರಣೀಯ. ಶಾಲೆಗೆ ಸರಕಾರದ ಎಲ್ಲಾ ಸೌಲಭ್ಯಗಳೂ ದೊರೆಯುತ್ತಿದ್ದು ಯಾವುದೇ ಸೌಲಭ್ಯ ದೊರೆಯದೇ ಇದ್ದಲ್ಲಿ ಅಥವಾ ವಿಳಂಬವಾದಲ್ಲಿ ತಕ್ಷಣ ಶಾಶ್ವತ ನಿಧಿಯಿಂದ ಖರ್ಚು ಮಾಡಲಾಗುವುದು. ಹೆಚ್ಚುವರಿ ನುರಿತ ಶಿಕ್ಷಕರ ಅಗತ್ಯವಿದ್ದಲ್ಲಿ, ಇಲ್ಲವೇ ಪೀಠೊಪಕರಣ, ಪಾಠೊಪಕರಣದ ಅಗತ್ಯವಿದ್ದಲ್ಲಿ ಒದಗಿಸಲು ಕೂಡಾ ನಿಧಿ ಸಹಕಾರಿಯಾಗುವುದು ಎಂದರು.

ಸಮಿತಿಯ ಉಪಾಧ್ಯಕ್ಷ ಶಾಂತಾರಾಮ ಭಟ್ಕಳ, ಕಾರ್ಯದರ್ಶಿ ಸಂಜಯ ಗುಡಿಗಾರ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಎಂ.ಆರ್‌. ನಾಯ್ಕ, ಕಾರ್ಯದರ್ಶಿ ಎಸ್‌.ಎಸ್‌. ಕಲಗಲ್‌, ಯಶೋಧರ ನಾಯ್ಕ, ವಿನಯ ಪಡಿಯಾರ್‌, ಕಿರಣ ಶ್ಯಾನುಭಾಗ, ಗಣಪತಿ ಆಚಾರ್ಯ, ಗಂಗಾಧರ ನಾಯ್ಕ, ಸ್ಮರಣ ಸಂಚಿಕೆ ಸಂಪಾದಕ ಜಯಂತ ಬಡಾಳ್‌, ಎಸ್‌ಡಿಎಂಸಿ ಅಧ್ಯಕ್ಷೆ ಕುಮುದಾ, ಮುಖ್ಯಾಧ್ಯಾಪಕಿ ಸಾವಿತ್ರಿ ಮಿಂಚಿ ಮುಂತಾದವರಿದ್ದರು.

Trending videos

Back to Top