CONNECT WITH US  

ಸೆಕ್ಸ್ ಆಮೀಷ: ಈಕೆ ಆಘ್ಘಾನ್ ನ ನಟೋರಿಯಸ್ ಸೀರಿಯಲ್ ಕಿಲ್ಲರ್!

ಆಫ್ಘಾನಿಸ್ತಾನ್: ಈಕೆ ಜಲಾಲಾಬಾದ್ ಕಾರಾಗೃಹದ ಕತ್ತಲ ಕೋಣೆಯಲ್ಲಿ ಕಾಲ ಕಳೆಯುತ್ತಿರುವ ಆಫ್ಘಾನಿಸ್ತಾನದ ಮೋಸ್ಟ್ ನಟೋರಿಯಸ್ ಸರಣಿ ಹಂತಕಿ. ಈ ಹಂತಕಿಯ ಕಥೆ ಕಾಲ್ಪನಿಕ ವಸ್ತುವನ್ನೊಳಗೊಂಡ ಸಿನಿಮಾವನ್ನೂ ಮೀರಿಸುವಂತಿದೆ. ಲೈಂಗಿಕ ಕ್ರಿಯೆಯ ಆಮೀಷವೊಡ್ಡಿ ಈಕೆ ಕೊಂದಿರುವ ಜನರೆಷ್ಟು? ಇವಳನ್ನು ಹಂತಕಿಯನ್ನಾಗಿ ಮಾಡಿದ್ಯಾರು ಎಂಬ ಕುತೂಹಲವಿದ್ದರೆ ಮುಂದೆ ಓದಿ...

ಸರಣಿ ಹಂತಕಿ ಶಿರಿನ್ ಗುಲ್:
ಆಫ್ಘಾನಿಸ್ತಾನದ ನಂಗಾರ್ಹರ್ ಮಹಿಳಾ ಕೈದಿಯಾಗಿರುವ ಈಕೆಯ ಹೆಸರು ಶಿರಿನ್ ಗುಲ್. ಜೈಲಿನಲ್ಲಿ ಗುಲ್ ಜೊತೆ ಕಳ್ಳತನ ಆರೋಪದಲ್ಲಿ ಬಂಧಿಯಾಗಿರುವ ಕೈದಿಗಳಿದ್ದಾರೆ. 27 ಗಂಡಸರ ಜೀವ ತೆಗೆದ ಈಕೆಗೆ 20 ವರ್ಷಗಳ ಜೈಲುಶಿಕ್ಷೆಯಾಗಿದೆ. ಅದರಲ್ಲಿ ಈಗಾಗಲೇ 12 ವರ್ಷ ಕಳೆದಿದ್ದಾಳಂತೆ. ಈಕೆ ಜೊತೆ ಜೈಲಿನಲ್ಲೇ ಜನ್ಮ ನೀಡಿದ 7ವರ್ಷದ ಮಗಳು ಕೂಡಾ ಇದ್ದಾಳೆ. ಇವಳ ಸಹ ಕೈದಿಗಳ ಮಕ್ಕಳೂ ಕೂಡ ಜೈಲಿನಲ್ಲಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ಆಫ್ಘಾನಿಸ್ತಾನ್ ಉಗ್ರರ ದಾಳಿ, ಯುದ್ಧದಿಂದ ನಲುಗಿ ಹೋಗಿದೆ. ಹಾಗಾಗಿ ಇಲ್ಲಿ ವಾಸಿಸುವ ಜನರಿಗೆ ಸಾವು ಸಾಮಾನ್ಯವಾಗಿಬಿಟ್ಟಿದೆ. 

ಲೈಂಗಿಕ ಕ್ರಿಯೆ ಆಮೀಷವೊಡ್ಡಿ ಗಂಡಸರನ್ನು ಕರೆತಂದು ಹತ್ಯೆ:
ಹೌದು ತನಿಖೆ ವೇಳೆ ಅಧಿಕಾರಿಗಳಲ್ಲಿ ಒಪ್ಪಿಕೊಂಡಿರುವಂತೆ, ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಲು ಒಪ್ಪಂದ ಮಾಡಿಕೊಂಡ ಗಂಡಸರನ್ನು ಗುಲ್ ಮನೆಗೆ ಕರೆತರುತ್ತಿದ್ದಳು. ನಂತರ ರಹಮತುಲ್ಲಾ, ಆಕೆಯ ಮಗ ಹಾಗೂ ಇನ್ನೂ ಕೆಲವರು ಸೇರಿಕೊಂಡು, ಮನೆಗೆ ಕರೆತಂದ ವ್ಯಕ್ತಿಗೆ ವಿಷ ಕುಡಿಸಿ, ನಂತರ ಕತ್ತುಹಿಸುಕಿ ಹತ್ಯೆ ಮಾಡುತ್ತಿದ್ದರಂತೆ!

ಹೀಗೆ ಸಾವನ್ನಪ್ಪಿದ ವ್ಯಕ್ತಿಗಳ ಶವವನ್ನು ಜಲಾಲಾಬಾದ್ ಮತ್ತು ಕಾಬೂಲ್ ನಲ್ಲಿರುವ ಎರಡು ಮನೆಗಳ ನಡುವೆ ಇರುವ ಖಾಲಿ ಜಾಗದಲ್ಲಿ ಹೂತುಹಾಕುತ್ತಿದ್ದರಂತೆ. ನಂತರ ಸಾವನ್ನಪ್ಪಿದ ವ್ಯಕ್ತಿಯ ಪರ್ಸ್ ನಲ್ಲಿದ್ದ ಹಣ ತೆಗೆದು, ಅವರ ಕಾರುಗಳ ನಂಬರ್ ಪ್ಲೇಟ್ ಗಳನ್ನು ಬದಲಾಯಿಸಿ ಪಾಕಿಸ್ತಾನ ಗಡಿ ಹಾಗೂ ತಾಲಿಬಾನ್ ಹಿಡಿತದಲ್ಲಿದ್ದ ಖೋಸ್ಟ್ ಪ್ರಾಂತ್ಯದಲ್ಲಿ ಮಾರಾಟ ಮಾಡುವುದು ಇವರ ಕಸುಬು.

ಈಕೆಯನ್ನು ಹಂತಕಿಯನ್ನಾಗಿ ಮಾಡಿದ್ಯಾರು?
ಶಿರಿನ್ ಗುಲ್ ಶೇವಾ ಜಿಲ್ಲೆಯ ನಂಗಾರ್ಹರ್ ಪ್ರಾಂತ್ಯದಲ್ಲಿ ಜನಿಸಿದ್ದು. ಆಕೆಯ ಹೇಳಿಕೆ ಪ್ರಕಾರ, ಗುಲ್ 2ವರ್ಷದ ಮಗುವಾಗಿರುವಾಗಲೇ ತಂದೆ, ತಾಯಿ ಸಾವನ್ನಪ್ಪಿದ್ದರಂತೆ. ಬಳಿಕ ಸಂಬಂಧಿಗಳು 11ವರ್ಷದವಳಿದ್ದಾಗಲೇ ಮುದುಕನೊಬ್ಬನ ಜೊತೆ ಮದುವೆ ಮಾಡಿಸಿಬಿಟ್ಟಿದ್ದರಂತೆ. ಆತ ಆಗಿನ ಕಮ್ಯೂನಿಸ್ಟ್ ಸರ್ಕಾರದಲ್ಲಿ ಕರ್ನಲ್ ಆಗಿದ್ದರಂತೆ. ಆದರೆ ಗಂಡ ಗುಲ್ ಗೆ ಹಿಗ್ಗಾಮುಗ್ಗಾ ಹೊಡೆದು, ಚಿತ್ರಹಿಂಸೆ ನೀಡುತ್ತಿದ್ದನಂತೆ. ಈ ಸಂದರ್ಭದಲ್ಲೇ ಇವರ ಕುಟುಂಬದೊಳಕ್ಕೆ ಪ್ರವೇಶಿಸಿದವನು ಗುಲ್ ಸಂಬಂಧಿ ರಹಮತುಲ್ಲಾ. ಈತ ತಾಲಿಬಾನ್ ಉಗ್ರ ಮುಖಂಡನೊಬ್ಬನ ಕಾರಿನ ಚಾಲಕನಾಗಿದ್ದ. 
ಹೀಗೆ ಪರಿಚಿತನಾದ ರಹಮತುಲ್ಲಾ ಗುಲ್ ಮನೆಯ ಖಾಯಂ ಅತಿಥಿಯಾಗಿಬಿಟ್ಟಿದ್ದ. ಈತ ಗುಲ್ ಗೆ ಊಟ, ಗಿಫ್ಟ್ ಗಳನ್ನು ತಂದುಕೊಡುತ್ತಿದ್ದ. ಹೀಗೆ ಒಬ್ಬರನ್ನೊಬ್ಬರು ಪ್ರೀತಿಸತೊಡಗಿದರು. ಈಗ ಗುಲ್ ಗೆ 40ರ ಹರೆಯ. ಆದರೆ ಆಕೆಯ ವರ್ಷದ ಬಗ್ಗೆಯೂ ಗೊಂದಲವಿದೆ ಎಂದು ಜೈಲಿನ ಅಧಿಕಾರಿಗಳು ಹೇಳುತ್ತಾರೆ.

ಏತನ್ಮಧ್ಯೆ, ರಹಮತುಲ್ಲಾ ನೇರವಾಗಿಯೇ ಗುಲ್ ಗಂಡನ ಬಳಿ, ತಾನು ಗುಲ್ ಅವಳನ್ನು ಪ್ರೀತಿಸುತ್ತಿದ್ದೇನೆ. ಅಲ್ಲದೇ ಆಕೆಯನ್ನು ಬೇರೆಡೆಗೆ ಕರೆದೊಯ್ಯುವೆ ಎಂದು ಹೇಳಿಬಿಟ್ಟಿದ್ದ. ರಹಮತುಲ್ಲಾನ ಬೇಡಿಕೆಯನ್ನು ಹೆದರಿಕೊಂಡೇ ವಿರೋಧಿಸಿದ್ದ ಗಂಡ. ಕೊನೆಗೆ ಪ್ರಿಯಕರನ ಅಣತಿಯಂತೆ ಇಬ್ಬರೂ ಸೇರಿಕೊಂಡು ಗಂಡನನ್ನು ಮುಗಿಸಿಬಿಟ್ಟಿದ್ದರು.

ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಗುಲ್ ಗೆ ನಿಧಾನಕ್ಕೆ ರಹಮತುಲ್ಲಾನ ಕರಾಳಮುಖದ ಪರಿಚಯವಾಗತೊಡಗಿತು. ಆತ ಜಲಾಲಾಬಾದ್ ಮತ್ತು ಕಾಬೂಲ್ ಪ್ರಾಂತ್ಯದಲ್ಲಿ ಕಾರು ಚಾಲಕರ ಕಿಡ್ನಾಪ್ ಮಾಡಿ ಅವರನ್ನು ಹತ್ಯೆಗೈಯುತ್ತಿದ್ದ. ನಂತರ ಆ ವಾಹನಗಳನ್ನು ಮಾರಾಟ ಮಾಡುತ್ತಿದ್ದನಂತೆ. ಇದನ್ನು ವಿರೋಧಿಸಿದ ಗುಲ್ ಗೆ ಪ್ರಾಣಭಯ ಒಡ್ಡಿದ್ದ. ಹೀಗೆ ಗುಲ್ ಳನ್ನು ತಮ್ಮ ಸರಣಿ ಹತ್ಯೆಯ ಕೆಲಸದಲ್ಲಿ ಪಾಲ್ಗೊಳ್ಳುವಂತೆ ಮಾಡಿಕೊಂಡಿದ್ದ. ಗುಲ್ ನೋಡಲು ಸುಂದರವಾಗಿದ್ದಳು, ಹಾಗಾಗಿ, ಆಕೆಯ ಲೈಂಗಿಕ ಕ್ರಿಯೆ ಆಮೀಷಕ್ಕೆ ಜನ ಸುಲಭವಾಗಿ ಮರುಳಾಗುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಗುಲ್ ಜನರನ್ನು ಕರೆತಂದಾಗ ಎಲ್ಲಾ ಸೇರಿ ಹತ್ಯೆ ಮಾಡುತ್ತಿದ್ದರು.

ಸರಣಿ ಹತ್ಯೆ ಹಂತಕರು ಸಿಕ್ಕಿ ಬಿದ್ದಿದ್ದು ಹೇಗೆ?:
ಮೊಹಮ್ಮದ್ ಅನ್ವರ್ ಎಂಬ ಉದ್ಯಮಿಯೊಬ್ಬ ಕಾಣೆಯಾಗಿದ್ದೇ ಗುಲ್ ಮತ್ತವರ ತಂಡ ಸಿಕ್ಕಿಬೀಳಲು ಕಾರಣವಾಗಿತ್ತು. ಈ ಉದ್ಯಮಿ ತಾನು ರಾತ್ರಿ ಹೋಗುತ್ತಿರುವ ಸ್ಥಳದ ಬಗ್ಗೆ ತನ್ನ ಸಂಬಂಧಿಗಳಿಗೆ ಮಾಹಿತಿ ನೀಡಿಯೇ ಹೋಗಿದ್ದ. ಅವರು ನೀಡಿದ ಸುಳಿವಿನ ಆಧಾರದ ಮೇಲೆ ಅಧಿಕಾರಿಗಳು ಗುಲ್ ಮತ್ತು ಕುಟುಂಬ ಸದಸ್ಯರ ತನಿಖೆ ನಡೆಸಿದ್ದರು. ಆಗ ಸ್ಫೋಟಕ ವಿಷಯ ಹೊರಬಿದ್ದಿತ್ತು. ಕಾಬೂಲ್ ಮನೆಯ ಸಮೀಪದ ಖಾಲಿ ಜಾಗದಲ್ಲಿ ಹೂತಿಟ್ಟ 9 ಶವಗಳು, ಜಲಾಲಾಬಾದ್ ನಲ್ಲಿ 18ಕ್ಕೂ ಹೆಚ್ಚು ಶವಗಳು ದೊರೆಯುವ ಮೂಲಕ ಸರಣಿ ಹಂತಕರು ಸಿಕ್ಕಿಬಿದ್ದಿದ್ದರು.

ಯಾರಿಗೆಲ್ಲಾ ಶಿಕ್ಷೆಯಾಯಿತು?
ಸರಣಿ ಹತ್ಯೆಯ ಘಟನೆಯಲ್ಲಿ ಶಿರಿನ್ ಗುಲ್, ಆಕೆಯ ಮಗ ಸಮೀವುಲ್ಲಾ, ರಹಮತುಲ್ಲಾ ಸೇರಿ ಆರು ಮಂದಿ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಆದೇಶ ನೀಡಿದ್ದ ಕೋರ್ಟ್ ಎಲ್ಲರಿಗೂ ಮರಣದಂಡನೆ ಶಿಕ್ಷೆ ತೀರ್ಪು ನೀಡಿತ್ತು. ಪ್ರಕರಣದಲ್ಲಿ ಐವರು ಆರೋಪಿಗಳನ್ನು ಗಲ್ಲಿಗೇರಿಸಲಾಗಿತ್ತು. ಆದರೆ ಶಿರಿನ್ ಗುಲ್ ಗೆ ಆಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯ್, ಕ್ಷಮಾದಾನ ನೀಡುವ ಮೂಲಕ ಮರಣದಂಡನೆ ಶಿಕ್ಷೆಯನ್ನು ಆಫ್ಘಾನ್ ಕಾಯ್ದೆಯಂತೆ ಜೀವಾವಧಿ(20ವರ್ಷ) ಶಿಕ್ಷೆಗೆ ಇಳಿಸಿದ್ದಾರೆ. 

ಈಕೆಯ ಜೀವನದ ಕಥೆ ಸಿನಿಮಾ ರೀತಿ ಇದೆ. ಆದರೆ ಆಕೆ ಕೆಲವೊಮ್ಮೆ ಕಟ್ಟು ಕಥೆಗಳನ್ನು ಹೇಳುತ್ತಾಳೆ. ಒಂದೊಂದು ಸಲ ಒಂದೊಂದು ರೀತಿ ಕಥೆ ಹೇಳುತ್ತಾಳೆ. ಆಕೆ ತಾನು ಮಾನಸಿಕ ರೋಗಿ ಎಂಬುದನ್ನು ಒಪ್ಪಿಕೊಳ್ಳುತ್ತಾಳೆ ಎಂದು ಅಧಿಕಾರಿ ಸಾಡಾಟಿ ಹೇಳುತ್ತಾರೆ.

Trending videos

Back to Top