CONNECT WITH US  

ರೈತರ ಮಡಿಲಿಗೆ ನಾರಿ ಸುವರ್ಣ

ತುಮಕೂರು: ರಾಜ್ಯದಲ್ಲಿಯೇ ಕುರಿ ಸಾಕಾಣಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ತುಮಕೂರು ಜಿಲ್ಲೆ ಸದಾ ಬರಪೀಡಿತ ಜಿಲ್ಲೆಯಾಗಿದೆ. ಶಿರಾ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ತುಮಕೂರು, ತಿಪಟೂರು, ಗುಬ್ಬಿ ಮೊದಲಾದ ತಾಲೂಕುಗಳಲ್ಲಿ ಕುರಿ ಸಾಕಾಣಿಕೆ ಅಧಿಕವಾಗಿದ್ದು, 2001 ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 17 ಲಕ್ಷ ಕುರಿ ಮೇಕೆಗಳಿದ್ದು, ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದ್ದು, ಬೆಳಗಾಂ 2ನೇ ಸ್ಥಾನದಲ್ಲಿದೆ.

ತುಮಕೂರು ಜಿಪಂ ಸಿಇಒ ಗೋವಿಂದರಾಜು, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳ ದೃಢ ನಿರ್ಧಾರದಿಂದ ಜಿಲ್ಲೆಯಲ್ಲಿ ಮಹಾರಾಷ್ಟ್ರದ ಪಲ್ಟಾನದಲ್ಲಿ ನಿಂಬಕರ್‌ ಅಗ್ರಿಕಲ್ಚರ್‌ ರೀಸರ್ಚ್‌ ಸೆಂಟರ್‌ನಲ್ಲಿ ಆವಿಷ್ಕಾರಗೊಂಡಿರುವ ಮಹಾರಾಷ್ಟ್ರದ ಡೆಕ್ಕನಿ ತಳಿ ಮತ್ತು ಪಶ್ಚಿಮ ಬಂಗಾಳದ ಗರೋಳೆ ತಳಿ ನಡುವೆ ಕ್ರಾಸ್‌ ಮಾಡಿದ ಒಂದು ಕುರಿ 2-4 ಮರಿಗಳವರೆಗೆ ಜನ್ಮ ನೀಡಿದೆ. ಈಗಾಗಲೇ ಅದು ಮಹಾರಾಷ್ಟ್ರದಲ್ಲಿ ಚಾಲ್ತಿಯಲ್ಲಿದ್ದು, ಅದನ್ನು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿ ಯಶಸ್ವಿಯಾಗಿದೆ. ಈಗ ರೈತರಿಗೆ ಕುರಿ ನೀಡುವ ಮೂಲಕ ರಾಜ್ಯದಲ್ಲಿ ನಾರಿಸುವರ್ಣ ತಳಿ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ.

ಏನಿದು ನಾರಿ ಸುವರ್ಣ: ಮಹಾರಾಷ್ಟ್ರದ ನಿಂಬಾಲ್ಕರ್‌ ಕೃಷಿ ಸಂಶೋಧನಾ ಕೇಂದ್ರದಲ್ಲಿ ಡೆಕ್ಕನಿ ಕುರಿಗಳು ಮತ್ತು ಪಶ್ಚಿಮ ಬಂಗಾಳದ ಗರೊಳೆ ಕುರಿಗಳನ್ನು 2005 ರಲ್ಲಿ ಸಂತಾನೋತ್ಪತ್ತಿ ಕ್ರಿಯಗೆ ಒಳಪಡಿಸಿ ನಾರಿ ಸುವರ್ಣ ತಳಿ ಕಂಡು ಹಿಡಿಯಲಾಗಿದೆ. ಈ ತಳಿಯಿಂದಾಗಿ ಒಮ್ಮೆಗೆ ಒಂದು ಮರಿ ಹಾಕುವ ಕುರಿ, 2-3 ಮರಿಗಳಿಗೆ ಜನನ ನೀಡುತ್ತವೆ.

2014 ಜುಲೈ 6ರಂದು ಶಿರಾ ತಾಲೂಕಿನ ವೀರಾಪುರದ ರೈತ ದೊಡ್ಡರಾಜು ಎನ್ನುವವರು ನಾರಿ ಸುವರ್ಣದ 10 ಹೆಣ್ಣು, 1 ಟಗರನ್ನು ತಂದು ಸಂತಾನೋತ್ಪತ್ತಿ ಮಾಡಲಾಗಿತ್ತು. 4 ಕುರಿಯಿಂದ 12 ಹೆಣ್ಣು, 5 ಕುರಿಯಿಂದ 10 ಕುರಿ, 1 ಕುರಿಯಿಂದ 1 ಕುರಿ ಸೇರಿ ಸಂತಾನೋತ್ಪತ್ತಿಯಾದವು. ಅದರಲ್ಲಿ 9 ಟಗರು ಹುಟ್ಟಿದ್ದರಿಂದ ಅವುಗಳನ್ನು ಮಾರಾಟ ಮಾಡಿದ್ದಾರೆ. ಈ ಟಗರಿನ ಬೆಲೆ ಅದರ ವಯಸ್ಸು ಮತ್ತು ತೂಕದ ಅನುಗುಣವಾಗಿ 30-35 ಸಾವಿರ ರೂ. ಬೆಲೆ ಬಾಳುತ್ತದೆ. ಸುವರ್ಣನಾರಿಯಿಂದ ಮತ್ತೆ ಗರ್ಭ ಧರಿಸಿದ್ದು, 5 ತಿಂಗಳಿಗೊಮ್ಮೆ ಕುರಿ ಮರಿಗಳಿಗೆ ಜನ್ಮ ನೀಡುತ್ತವೆ.

ಅನುಷ್ಠಾನ ಎಲ್ಲೆಲ್ಲಿ?: ಜಿಲ್ಲೆಯ ತುಮಕೂರು, ಮಧುಗಿರಿ ಮತ್ತು ತಿಪಟೂರು ತಾಲೂಕುಗಳ 60 ಮಂದಿಯನ್ನು ಭೂ ಚೇತನ ಪ್ಲಸ್‌ ಕಾರ್ಯಕ್ರಮದಡಿ ಗುರುತಿಸಲಾಗಿದೆ. ಒಂದು ಟಗರು ಬೆಲೆ 25-35 ಸಾವಿರ ಬೆಲೆ ವೆಚ್ಚವಾಗುತ್ತದೆ. ಜೊತೆಗೆ ಪಶು ವೈದ್ಯಕೀಯ ವಿವಿ ಆರ್‌ಕೆವಿವೈ ಯೋಜನೆಯಡಿ ಶಿರಾ ತಾಲೂಕಿನಲ್ಲಿ 10 ಮಂದಿಯನ್ನು ಆಯ್ಕೆ ಮಾಡಿದ್ದು, ಈಗ ಪ್ರಾರಂಭಿಕವಾಗಿ ಆಯ್ದ 5 ಫ‌ಲಾನುಭವಿಗಳಿಗೆ 5 ಹೆಣ್ಣು ಒಂದು ಟಗರನ್ನು ನೀಡಲಾಗಿದೆ. ಈ ತಾಲೂಕಿನ ಇನ್ನೂ 5 ಜನರಿಗೆ ಇದರ ಅವಕಾಶ ಲಭಿಸಲಿದೆ.

ಭೂಚೇತನ ಪ್ಲಸ್‌ ಯೋಜನೆಗೆ 75 ಲಕ್ಷ ರೂ.,
ರಾಜ್ಯದಲ್ಲೇ ಪ್ರಥಮ ಬಾರಿಗೆ ಅನುಷ್ಠಾನಗೊಳ್ಳುತ್ತಿರುವ ಕುರಿಗಳ ಅಭಿವೃದ್ಧಿಗೆ ನಾರಿ ಸುವರ್ಣ ಯೋಜನೆಗೆ ಚಾಲನೆ ದೊರೆತಿದೆ. ಜಿಪಂ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದೊಂದಿಗೆ ನಾರಿಸುವರ್ಣ ಕುರಿ ತಳಿಗಳನ್ನು ಭೂಚೇತನ ಪ್ಲಸ್‌ ಯೋಜನೆಯಡಿ ನೀಡಲಾಗಿದೆ. ಇದಕ್ಕಾಗಿ 75 ಲಕ್ಷ ರೂ.ಮೀಸಲಿಟ್ಟಿದ್ದು, ಈಗ 3 ತಾಲೂಕುಗಳನ್ನು ಗುರುತಿಸಿ ಒಬ್ಬ ರೈತನಿಗೆ 1 ಕುರಿಯಂತೆ ಸುವರ್ಣನಾರಿ ಟಗರು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಫ‌ಲಾನುಭವಿಗಳಿಗೆ ನೀಡಲಾಗುವುದು ಎಂದು ಜಿಪಂ ಸಿಇಒ ಗೋವಿಂದರಾಜು ತಿಳಿಸಿದರು.

ಸರ್ಕಾರದಿಂದ ಕುರಿ ಅಭಿವೃದ್ಧಿಗಾಗಿ ನೀಡಿರುವ ನಾರಿಸುವರ್ಣ ಟಗರು ಮಹರಾಷ್ಟ್ರದ ತಳಿ. ಈ ತಳಿ ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಇದೇನಾದರೂ ಅನುಕೂಲವಾದರೆ ರೈತರ ಬದುಕು ಬಂಗಾರವಾಗುತ್ತದೆ. ಇದಕ್ಕೆ ತನಗೆ ತರಬೇತಿ ನೀಡುತ್ತಿದ್ದಾರೆ. ಇದೊಂದು ಒಳ್ಳೆಯ ಕಾರ್ಯಕ್ರಮ.-ಚಿಕ್ಕತಿಮ್ಮಯ್ಯ, ತುಮಕೂರು ತಾಲೂಕು ರೈತ

ನಾರಿ ಸುವರ್ಣ ಕುರಿ ತಳಿಯ 1 ಕುರಿ ನಮಗೆ ನೀಡಿದ್ದಾರೆ. ನಾವು 50 ಕುರಿಗಳನ್ನು ಸಾಕಿದ್ದೇವೆ. ಇದರಿಂದ ಒಂದು ಕುರಿ 2-3 ಮರಿಗಳಿಗೆ ಜನ್ಮ ನೀಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೊಂದು ಆಶಾದಾಯಕ ಯೋಜನೆಯಾಗಿದ್ದು ರೈತರಿಗೆ ಅನುಕೂಲ.
-ಶೋಭಾ, ತಿಪಟೂರು ತಾಲೂಕು ಬಳವನೇರಳು ಗ್ರಾಪಂ ಅಧ್ಯಕ್ಷೆ

ಪಶು ವಿಶ್ವವಿದ್ಯಾಲಯ ರಾಷ್ಟ್ರೀಯ ಕೃಷಿ ವಿಕಾಸ್‌ ಯೋಜನೆಯಡಿ ಶಿರಾ ತಾಲೂಕಿನ ವೀರಾಪುರ, ಸಿದ್ದರಾಮನಹಳ್ಳಿ, ಗೊಲ್ಲಹಳ್ಳಿ, ಮುದಿಗೆರೆ ಕಾವಲ್‌ನ 5 ಕುರಿಗಾಹಿಗಳಿಗೆ 1 ಟಗರು, 5 ನಾರಿ ಸುವರ್ಣ ಹೆಣ್ಣು ಕುರಿಗಳನ್ನು ಉಚಿತವಾಗಿ ನೀಡಲಾಗಿದೆ. ಇನ್ನೂ 5 ಫ‌ಲಾನುಭವಿಗಳನ್ನು ಗುರುತಿಸಿ ನೀಡಲಾಗುತ್ತದೆ. ಕುರಿ ಸಂತಾನೋತ್ಪತ್ತಿ ಮತ್ತು ಅವುಗಳ ವಿಕಾಸಕ್ಕೆ ಹೆಚ್ಚಿನ ಗಮನ ನೀಡಲು ಚಿಂತನೆ ನಡೆದಿದೆ.
-ಡಾ.ಟಿ.ನಾಗೇಶ್‌ಕುಮಾರ್‌, ಪಶುವೈದ್ಯಾಧಿಕಾರಿ ವಿಸ್ತರಣೆ

Trending videos

Back to Top