CONNECT WITH US  

ಬೇರೆ ಜಿಲ್ಲೆಗಳಲ್ಲೂ ಹೂಡಿಕೆ ಮಾಡಿ

ಬೆಂಗಳೂರು: ಸಣ್ಣ ಕೈಗಾರಿಕೆಗಳ ಉತ್ಪಾದನೆ ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿದ್ದರೂ ಉತ್ತಮ ಮಾರುಕಟ್ಟೆ ವ್ಯವಸ್ಥೆ ನೀಡಲು ಸಾಧ್ಯವಾಗಿಲ್ಲ ಎಂದು ಸಣ್ಣ ಕೈಗಾರಿಕೆ ಸಚಿವ ಸತೀಶ್‌ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದ್ದಾರೆ.

ಸಂಸ್ಕರಿಸಿದ ಆಹಾರಗಳ ಕೇಂದ್ರ (ಸಿಪಿಎಫ್) ನಿಮ್ಹಾನ್ಸ್‌ನ ಕನ್ವೆನÒನ್‌ ಹಾಲ್‌ನಲ್ಲಿ ಆಯೋಜಿಸಿದ್ದ ಇನ್‌ಸ್ಟಂಟ್‌ ಫ‌ುಡ್‌ ಎಕ್ಸ್‌ಪೋದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಸಹಾಯ ಗುಂಪುಗಳಲ್ಲಿ ಅತ್ಯುತ್ತಮ ಗುಣಮಟ್ಟದ ಆಹಾರ ಪದಾರ್ಥ ತಯಾರಿಸಿ, ಮಾರಾಟ ಮಾಡುತ್ತಿದ್ದಾರೆ. ಇದು ಇತರ ಕಂಪನಿಗಳು ತಯಾರು ಮಾಡುವ ಉತ್ಪನ್ನಗಳಿಗಿಂತ ಶೇ.100ರಷ್ಟು ಗುಣಮಟ್ಟ ಹೊಂದಿರುತ್ತದೆ. ಆದರೆ ಇದಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ(ಕೆಎಸ್‌ಐಡಿಸಿ)ದಲ್ಲಿ ಮಹಿಳೆಯರಿಗೆ ಶೇ.30ರಷ್ಟು ಮೀಸಲಾತಿ ನೀಡಲಾಗುವುದು. ಸಣ್ಣ ಕೈಗಾರಿಕೆ ಅಭಿವೃದ್ಧಿಗಾಗಿ ಅಧಿಕಾರಿಗಳೊಂದಿಗೆ ವಿವಿಧ ದೇಶಗಳ ಪ್ರವಾಸ ಮಾಡಿ, ಅಲ್ಲಿನ ಉತ್ತಮ ವ್ಯವಸ್ಥೆ ಪರಿಶೀಲಿಸಿ, ರಾಜ್ಯದಲ್ಲಿ ಅನುಷ್ಠಾನ ಮಾಡಲು ಶ್ರಮಿಸಲಾಗುವುದು ಎಂದರು.

ಹೊರ ಜಿಲ್ಲೆಗಳಲ್ಲಿ ಹೂಡಿಕೆ ಮಾಡಿ: ಬೆಂಗಳೂರಿನಲ್ಲಿ ಮಿತಿಮೀರಿ ಜನಸಂಖ್ಯೆ ಬೆಳೆದಿದೆ. ಅನೇಕ ಉದ್ದಿಮೆಗಳಿಗೆ ಮೂಲಸೌಕರ್ಯ ಒದಗಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಆದ್ದರಿಂದ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಕೈಗಾರಿಕೋದ್ಯಮಿಗಳು ಮುಂದಾಗಬೇಕು.

ಇದರಿಂದ ಉದ್ಯೋಗಾವಕಾಶಗಳು ಕೂಡ ಹೆಚ್ಚುವುದರ ಜೊತೆಗೆ ಗ್ರಾಮೀಣ ಪ್ರದೇಶದ ಯುವಕರು ವಲಸೆ ಹೋಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯು ಜಿಲ್ಲಾ ಪಂಚಾಯತ್‌ ಮಟ್ಟದಲ್ಲಿ ಸಣ್ಣ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಚಿಂತನೆ ನಡೆಸಿದೆ. ಈಗಾಗಲೇ ಉದ್ಯಮಕ್ಕೆ ಅಗತ್ಯವಾದ ಮೂಲಸೌಕರ್ಯ ಸಿಗುವ ಪ್ರದೇಶಗಳ ಪತ್ತೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಸಿಪಿಎಫ್ ಸಿಇಒ ಎಲ್‌.ಚೇತನ್‌, ಕೆ.ಎಂ.ಹರೀಶ್‌ಕಾಂತ, ಟಿ.ಪಿ.ಸೋಮಯ್ಯ, ಜಾರ್ಜ್‌ ಜಾನ್ಸನ್‌, ಸತೀಶ್‌ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

Trending videos

Back to Top