CONNECT WITH US  

ಕಾರ್ನಾಡ್‌, ಮರುಳಸಿದ್ದಪ್ಪ ವಿರುದ್ಧ ಪ್ರಕರಣ

ಬೆಂಗಳೂರು: ಪುರಭವನ ಮುಂದೆ ಗೋಮಾಂಸ ಹಂಚುವ ಮೂಲಕ ಹಿಂದೂ ಭಾವನೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂಬ ಆರೋಪದಡಿ ಸಾಹಿತಿ ಗಿರೀಶ್‌ ಕಾರ್ನಾಡ್‌ ಸೇರಿದಂತೆ ಆರು ಜನರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ 6ನೇ ಎಸಿಎಂಎಂ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿದೆ.

ನ್ಯಾಯಾಲಯದ ಸೂಚನೆ ಮೇರೆಗೆ ಎಸ್‌.ಜೆ.ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಸಾಹಿತಿಗಳಾದ ಗಿರೀಶ್‌ ಕಾರ್ನಾಡ್‌, ಕೆ. ಮರುಳಸಿದ್ದಪ್ಪ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್‌, ಲಕ್ಷ್ಮಿನಾರಾಯಣ್‌ ನಾಗವಾರ, ಕೆ.ಎಸ್‌.ವಿಮಲಾ, ರುದ್ರಪ್ಪ ಹನಗನವಾಡಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶ್ರೀರಾಮಸೇನೆಯ ಬೆಂಗಳೂರು ನಗರ ಘಟಕದ ಅಧ್ಯಕ್ಷ ಕೆ.ಶಿವಕುಮಾರ ರೆಡ್ಡಿ ಮತ್ತು ಅಖೀಲ ಭಾರತ ಹಿಂದೂ ಮಹಾಸಭಾದ ಎಂ.ವಾಸುದೇವರಾವ್‌ ಕಶ್ಯಪ್‌ ಅವರು ನೀಡಿದ ದೂರಿನ ಮೇರೆಗೆ ನ್ಯಾಯಾಲಯ ಈ ಸೂಚನೆ ನೀಡಿದೆ. ಗುರುವಾರ ಪುರಭವನ ಮುಂಭಾಗ ಡಿವೈಎಫ್ಐ ಕಾರ್ಯಕರ್ತರು "ವೈವಿಧ್ಯಮಯ ಆಹಾರ ಪದ್ಧತಿ ಎತ್ತಿ ಹಿಡಿಯೋಣ ಬನ್ನಿ' ಎಂಬ ಕಾರ್ಯಕ್ರಮ ಏರ್ಪಡಿಸಿದ್ದರು. ಸಮಾರಂಭಕ್ಕೆ ಬಂದವರಿಗೆ ಗೋಮಾಂಸ ವಿತರಿಸುವುದಾಗಿ ಉಲ್ಲೇಖೀಸಿದ್ದ ಕರಪತ್ರಗಳನ್ನು ಸಾರ್ವಜನಿಕ ಸ್ಥಳದಲ್ಲಿ ಹಂಚಿದ್ದಾರೆ. ಇದರಿಂದ ಗೋಮಾತೆಯನ್ನು ಪೂಜಿಸುವ ಹಿಂದು, ಜೈನ ಮತ್ತು ಬೌದ್ಧ ಧರ್ಮಿಯರ ಭಾವನೆಗೆ ಧಕ್ಕೆ ಉಂಟಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ದೂರಿನಲ್ಲಿ ತಿಳಿಸಿದ್ದರು.

Trending videos

Back to Top