CONNECT WITH US  

ಆಗುಂಬೆ ಬಳಿ ನಕ್ಸಲ್‌ ಬರಹ, ಕರಪತ್ರ ಪತ್ತೆ

ತೀರ್ಥಹಳ್ಳಿ: ಮೂರು ವರ್ಷಗಳ ನಂತರ ಆಗುಂಬೆ ಪ್ರದೇಶದಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷರಾಗಿದ್ದು, ಹೊಸಗದ್ದೆಯ ಸರ್ಕಾರಿ ಶಾಲೆಯೊಂದರ ಗೋಡೆ ಮೇಲೆ ನಕ್ಸಲರ ಬರಹ ಹಾಗೂ ಕರಪತ್ರಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿಯಿಂದಲೇ ಜಿಲ್ಲಾ ಪೊಲೀಸ್‌ ಪಡೆ ಹಾಗೂ ನಕ್ಸಲ್‌ ನಿಗ್ರಹ ದಳದ ಸಿಬ್ಬಂದಿ ಕೂಂಬಿಂಗ್‌ ಆರಂಭಿಸಿದ್ದಾರೆ.

ಕಸ್ತೂರಿ ರಂಗನ್‌ ವರದಿ ಜಾರಿಯಾಗಬಾರದು, ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬಾರದು, ಆಗುಂಬೆ ಭಾಗದ ಜನ ಗ್ರಾ.ಪಂ. ಚುನಾವಣೆ ಬಹಿಷ್ಕರಿಸಬೇಕು, ಕೇಂದ್ರ ಸರ್ಕಾರವು ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಗಳು ಕರಪತ್ರದಲ್ಲಿವೆ ಎಂದು ತಿಳಿದು ಬಂದಿದೆ. ಕರಪತ್ರ ದೊರೆತ ಹೊಸಗದ್ದೆ ಶಾಲೆ, ಸುತ್ತಮುತ್ತಲ ಪ್ರದೇಶಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಗುಂಬೆ ಭಾಗದ ಉಳುಮಡಿ, ಕೆಂದಾಳಬೈಲು, ಕುಂದ, ಹೊಸಗದ್ದೆ, ಹಳ್ಳಿಬಿದರಗೋಡು, ಮಲ್ಲಂದೂರು, ಕೊರ್ನಕೋಟೆ ಹಾಗೂ ಹೊಸನಗರ ಸುತ್ತಲಿನ ಪ್ರದೇಶದಲ್ಲಿ ಕೂಂಬಿಂಗ್‌ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

Trending videos

Back to Top