CONNECT WITH US  

ಹಾಸ್ಟೆಲ್‌ಗ‌ಳ ಆಹಾರಕ್ಕೆ ಜಿಲ್ಲೆಗಳಲ್ಲೇ ಟೆಂಡರ್‌

ಬೆಂಗಳೂರು: ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗ‌ಳಿಗೆ ಅಗತ್ಯವಿರುವ ಆಹಾರ ಪದಾರ್ಥ ಪೂರೈಕೆ ವ್ಯವಸ್ಥೆ ಸರಿಪಡಿಸಲು ಜಿಲ್ಲಾ ಮಟ್ಟದಲ್ಲೇ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಟೆಂಡರ್‌ ಪ್ರಕ್ರಿಯೆ ಪರಿಷ್ಕರಣೆ ಚಾಲ್ತಿಯಲ್ಲಿದೆ. ಹೊಸ ಟೆಂಡರ್‌ ಪಡೆಯುವವರು ಆಹಾರ ಪದಾರ್ಥವನ್ನು ಗೋದಾಮುಗಳಿಂದ ನೇರವಾಗಿ ಹಾಸ್ಟೆಲ್‌ಗ‌ಳಿಗೆ ತಲುಪಿಸಲಿದ್ದಾರೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸ್ಟೆಲ್‌ಗ‌ಳಿಗೆ ಅಗತ್ಯ ಆಹಾರ ಪದಾರ್ಥ ಪೂರೈಸುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಟೆಂಡರ್‌ ಕರೆಯಲಿದ್ದಾರೆ. ಬಳಿಕ ಆಯ್ಕೆಯಾದ ಸಂಸ್ಥೆಗಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಲಿದ್ದು, ಸರ್ಕಾರ ಒಪ್ಪಿಗೆ ನೀಡಿದ ನಂತರ ಗುತ್ತಿಗೆ ಪಡೆದವರು ನೇರವಾಗಿ ಹಾಸ್ಟೆಲ್‌ಗ‌ಳಿಗೆ ಅದನ್ನು ಪೂರೈಸಬೇಕಾಗುತ್ತದೆ. ಟೆಂಡರ್‌ ಸಂದರ್ಭದಲ್ಲಿ ಷರತ್ತುಗಳನ್ನು ಹಾಕಲಾಗುತ್ತದೆ ಎಂದರು.

ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಅಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಶೀಘ್ರವೇ ಜಿಲ್ಲಾ ಮಟ್ಟದಲ್ಲಿ ಟೆಂಡರ್‌ ಕರೆಯಲಾಗುವುದು. ಹಾಸ್ಟೆಲ್‌ಗ‌ಳಿಗೆ ನಿಗದಿತ ಪ್ರಮಾಣದ ಆಹಾರ ಪದಾರ್ಥ ಪೂರೈಸುವಂತೆ ನೋಡಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಜನ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.

ವರದಿ ಬಂದಿದೆ, ಮಾಹಿತಿ ಇಲ್ಲ: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗ‌ಳಿಗೆ ಹಾಸಿಗೆ ಮತ್ತು ದಿಂಬು ಪೂರೈಕೆಯಲ್ಲಿ ನಡೆದಿದೆ ಎನ್ನಲಾದ ಸುಮಾರು 19 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ತನಿಖೆ ನಡೆದು ವರದಿಯನ್ನು ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ.

ಈ ವರದಿ ಬಗ್ಗೆ ನನಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಆದರೆ, ಹಗರಣ ನಡೆದಿರುವುದು ಸ್ಪಷ್ಟವಾದರೆ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿಯವರು ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ವರದಿ ಸಲ್ಲಿಸುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಎಚ್‌.ಆಂಜನೇಯ, ಹಾಸ್ಟೆಲ್‌ಗ‌ಳ ಸುಧಾರಣೆಗೆ ಸಂಬಂಧಿಸಿದಂತೆ ಯಾರೇ ಸಲಹೆ ನೀಡಿದರೂ ಅದನ್ನು ಸ್ವೀಕರಿಸಲು ತಾವು ಸಿದ್ಧ. ಬಿಜೆಪಿಯವರು ಅವ್ಯವಸ್ಥೆಗಳ ಬಗ್ಗೆ ವರದಿ ನೀಡಿದರೆ ಆ ಕುರಿತು ಪರಿಶೀಲಿಸಿ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಆದರೆ, ಹಾಸ್ಟೆಲ್‌ಗ‌ಳ ಅವ್ಯವಸ್ಥೆ ಬಗ್ಗೆ ಈಗ ಎಚ್ಚೆತ್ತುಕೊಂಡಿರುವ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಎಂಬುದನ್ನು ಯೋಚಿಸಬೇಕು. ಹಾಸ್ಟೆಲ್‌ಗ‌ಳಲ್ಲಿ ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳನ್ನು ಅವರ ಸರ್ಕಾರದಲ್ಲಿ ಒದಗಿಸಿಲ್ಲ. ತಾವು ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಮೇಲೆ ಮೂಲ ಸೌಕರ್ಯಕ್ಕಾಗಿ 100 ಕೋಟಿ ರೂ. ಬಿಡುಗಡೆ ಮಾಡಿದ್ದು, ಬಹುತೇಕ ಕೆಲಸ ಪೂರ್ಣಗೊಂಡಿದೆ ಎಂದು ಸ್ಪಷ್ಟಪಡಿಸಿದರು.

ನರೇಂದ್ರ ಸ್ವಾಮಿ ವಿರುದ್ಧ ಕಿಡಿ

ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್‌ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ ಅವರು ಸಮಾಜ ಕಲ್ಯಾಣ ಇಲಾಖೆ ಮತ್ತು ತಮ್ಮ ಕಾರ್ಯ ವೈಖರಿ ಬಗ್ಗೆ ಮಾಡಿದ್ದ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಚಿವ ಎಚ್‌.ಆಂಜನೇಯ, ನನ್ನ ಬದ್ಧತೆ ಬಗ್ಗೆ ಪ್ರಶ್ನಿಸುವ ಅವರಿಗೆ ಇರುವ ಬದ್ಧತೆಯಾದರೂ ಏನು ಎಂದು ತಿರುಗೇಟು ನೀಡಿದರು.

ನರೇಂದ್ರ ಸ್ವಾಮಿ ಅವರು ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಯಾವುದೇ ಸಮಸ್ಯೆ ಬಂದರೂ ಅಧಿಕಾರಿಗಳನ್ನು ಕರೆಸಿ ಅದನ್ನು ಸರಿಪಡಿಸುವ ಅಧಿಕಾರ ಹೊಂದಿದ್ದಾರೆ. ಹೀಗಿದ್ದರೂ ಸಮಸ್ಯೆ ಸರಿಪಡಿಸಿಲ್ಲ. ಅದನ್ನು ಬಿಟ್ಟು ಅವಕಾಶ ಸಿಕ್ಕಿದೆ ಎಂದು ವಿಧಾನಸಭೆಯಲ್ಲಿ ಆರೋಪ ಮಾಡಿದರೆ ಹೇಗೆ? ನನಗೆ ಉತ್ತರ ನೀಡಲು ಅವಕಾಶ ಸಿಕ್ಕಿದ್ದರೆ ಸದನದಲ್ಲೇ ಎಲ್ಲವನ್ನೂ ಹೇಳುತ್ತಿದ್ದೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ಹಾಸ್ಟೆಲ್‌ ಅವ್ಯವಸ್ಥೆಗೆ ಸಂಬಂಧಿಸಿದಂತೆ ನರೇಂದ್ರಸ್ವಾಮಿ ಮಾಡಿದ್ದ ಟೀಕೆಗೆ ಪ್ರತಿಕ್ರಿಯಿಸಿ, ಬೆಂಗಳೂರು ವಿವಿ ಆ ಹಾಸ್ಟೆಲ್‌ ನಡೆಸುತ್ತಿದೆ. ಅನುದಾನ ಒದಗಿಸುವುದು ಮಾತ್ರ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ. ಹಾಸ್ಟೆಲ್‌ನಲ್ಲಿ ಹಾವುಗಳ ಸಮಸ್ಯೆ, ರೌಡಿಗಳ ಸಮಸ್ಯೆ ಇದೆ ಎಂದಾಗಿದ್ದರೆ ತಕ್ಷಣವೇ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಬಗೆಹರಿಸುವ ಅಧಿಕಾರ ನರೇಂದ್ರಸ್ವಾಮಿ ಹೊಂದಿದ್ದರು. ಆದರೆ, ಅಲ್ಲಿ ಏನೂ ಮಾಡಲಿಲ್ಲ. ವಿಧಾನಸಭೆಯಲ್ಲಿ ಬಂದು ಇಲಾಖೆಯ ಬಗ್ಗೆ ವ್ಯಂಗ್ಯದ ಮಾತುಗಳನ್ನು ಆಡಿದ್ದಾರೆ. ಇಂತಹ ಟೀಕೆಗಳಿಗೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ನರೇಂದ್ರ ಸ್ವಾಮಿ ಏನು ಮಾಡಿದ್ದಾರೆ? ಸಮಸ್ಯೆಗಳನ್ನು ಬಗೆಹರಿಸುವ ಅಧಿಕಾರ ಹೊಂದಿದ್ದರೂ ಏನೂ ಮಾಡದೆ ವಿಧಾನಸಭೆಯಲ್ಲಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ.
ಎಚ್‌.ಆಂಜನೇಯ

Trending videos

Back to Top